- ಮೇಲ್ವಿಚಾರಕಿ ಪಾವನ, ಸಮನ್ವಯಾಧಿಕಾರಿ ಸುಜಾತ ಪ್ರಥಮ, ಆಂತರಿಕ ಲೆಕ್ಕಪರಿಶೋಧಕಿ ದ್ವಿತೀಯ
ಪುತ್ತೂರು: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ೨೦೧೯-೨೦ಸಾಲಿನಲ್ಲಿ ಸಂಘ ರಚನೆ, ಪ್ರಗತಿನಿಧಿ ವಿತರಣೆ, ಪ್ರಗತಿನಿಧಿ ಹೊರಬಾಕಿ ಮೊತ್ತ, ಕಂತು ಬಾಕಿ, ಮೈಕ್ರೋ ಬಜ್ಜತ್ ಹಾಗೂ ಯೋಜನೆಯ ಇತರ ಕಾರ್ಯಕ್ರಮಗಳ ಗುರಿಗಳಲ್ಲಿ ಸಾಧನೆಗೈದಿರುವುದನ್ನು ಗುರುತಿಸಿ ಜಿಲ್ಲಾ ಅತ್ಯುತ್ತಮ ಯೋಜನಾಧಿಕಾರಿ ಕಚೇರಿ ಪುರಸ್ಕಾರ ಪಡೆದುಕೊಂಡಿದೆ. ಪುತ್ತೂರು ವಲಯದ ಮೇಲ್ವಿಚಾರಕಿ ಪಾವನ ಮತ್ತು ಮಹಿಳಾ ಜ್ಞಾನ ವಿಕಾಸ ಸಮನ್ವಯಾಧಿಕಾರಿ ಸುಜಾತ ಪ್ರಥಮ ಹಾಗೂ ಹಾಗೂ ಆಂತರಿಕ ಲೆಕ್ಕಪರಿಶೋಧಕಿ ಶಾಲಿನಿ ದ್ವಿತೀಯ ಪುರಸ್ಕಾರವನ್ನು ಪಡೆದುಕೊಂಡಿರುತ್ತಾರೆ.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಗೆ ಸಂಬಂಧಿಸಿದಂತೆ ದ.ಕ ಜಿಲ್ಲೆಯಲ್ಲಿ ಒಟ್ಟು ೯ ಯೋಜನಾಧಿಕಾರಿ ಕಚೇರಿಗಳು ಕಾರ್ಯನಿರ್ವಹಿಸುತ್ತಿದ್ದು ಈ ಪೈಕಿ ಪುತ್ತೂರು ಯೋಜನಾಧಿಕಾರಿ ಕಚೇರಿಯು ಜಿಲ್ಲೆಯಲ್ಲಿ ಅತ್ಯುತ್ತಮ ಯೋಜನಾಧಿಕಾರಿ ಪುರಸ್ಕಾರವನ್ನು ಪಡೆದುಕೊಂಡಿದೆ. ಜೂ.೨೭ರಂದು ಬಂಟ್ವಾಳದಲ್ಲಿರುವ ಜಿಲ್ಲಾ ಕಚೇರಿ ಉನ್ನತೀ ಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪುರಸ್ಕಾರವನ್ನು ಪಡೆದುಕೊಂಡಿರುತ್ತಾರೆ.ಯೋಜನೆಯ ಪ್ರಾದೇಶಿಕ ನಿರ್ದೇಶಕ ಹಾಗೂ ದ.ಕ ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿಯವರು ಗೌರವ ಪುರಸ್ಕಾರ ನೀಡಿ ಗೌರವಿಸಿರುತ್ತಾರೆ. ತಾಲೂಕು ಯೋಜನಾಧಿಕಾರಿ ಜನಾರ್ದನ ಎಸ್ರವರು ಗೌರವ ಪುರಸ್ಕಾರವನ್ನು ಸ್ವೀಕರಿಸಿದರು. ವಲಯ ಮೇಲ್ವಿಚಾರಕರಾದ ರೋಹಿಣಿ, ಅಶ್ವಿನಿ, ಪಾವನ, ಕವಿತಾ ವಸಂತ್, ಧರ್ಣಪ್ಪ, ರವಿ, ಬಾಬು ಹಾಗೂ ಸಂದೇಶ ಈ ಸಂದರ್ಭಲ್ಲಿ ಉಪಸ್ಥಿತರಿದ್ದರು.
ಸಂಘ ರಚನೆ, ಪ್ರಗತಿನಿಧಿ ವಿತರಣೆ, ಪ್ರಗತಿನಿಧಿ ಹೊರಬಾಕಿ ಮೊತ್ತ, ಕಂತು ಬಾಕಿ, ಮೈಕ್ರೋ ಬಜ್ಜತ್ ಹಾಗೂ ಯೋಜನೆಯ ಇತರ ಕಾರ್ಯಕ್ರಮಗಳ ಗುರಿಗಳಲ್ಲಿ ಸಾಧನೆಗೈದಿರುವ ಮೇಲ್ವಿಚಾರಕಿ ಪಾವನರವರು ತಾಲೂಕು ಹಾಗೂ ಜಿಲ್ಲೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿರುತ್ತಾರೆ. ಮಂಜೇಶ್ವರ ತಾಲೂಕಿನ ಚಿಪ್ಪಾರು ಪೈವಳಿಕೆ ನಿವಾಸಿಯಾಗಿರುವ ಪಾವನರವರು ೨೦೦೭ರಲ್ಲಿ ಸೇವಾ ನಿರತೆಯಾಗಿ ಯೋಜನೆಗೆ ನೇಮಕಗೊಂಡು ಬೆಳ್ತಂಗಡಿ, ಬಂಟ್ವಾಳ ಹಾಗೂ ಎಚ್.ಡಿ ಕೋಟೆಗಳಲ್ಲಿ ಕರ್ತವ್ಯ ನಿರ್ವಹಿಸಿರುತ್ತಾರೆ. ಬಳಿಕ ವಲಯ ಮೇಲ್ವಿಚಾರಕಿಯಾಗಿ ಮುಂಭಡ್ತಿ ಪಡೆದು ಮೈಸೂರು ಹಾಗೂ ಎಚ್.ಡಿ ಕೋಟೆಯಲ್ಲಿ ಕರ್ತವ್ಯ ನಿರ್ವಹಿಸಿರುವ ಇವರು ಕಳೆದ ೮ ವರ್ಷಗಳಿಂದ ಪುತ್ತೂರು ವಲಯದ ಮೇಲ್ಚಿಚಾರಕಿಯಾಗಿ ಕರ್ತವ್ಯ ನಿರ್ವಹಿಸಿರುತ್ತಾರೆ.
ಸುಜಾತ, ಅತ್ಯುತ್ತಮ ಸಮನ್ವಯಾಧಿಕಾರಿ:
ಯೋಜನೆಯ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮಗಳ ಅನುಷ್ಠಾನ, ಅನುದಾನ ಬಳಕೆ ಹಾಗೂ ಟಾಸ್ಕ್ ಎಂಟ್ರಿಯಲ್ಲಿ ನೀಡಿರುವ ಸಾಧನೆಯನ್ನು ಗುರುತಿಸಿ ಸಮನ್ವಯಾಧಿಕಾರಿ ಸುಜಾತರವರು ಪ್ರಥಮ ಸ್ಥಾನವನ್ನು ಪಡೆದುಕೊಂಡಿರುತ್ತಾರೆ. ಬೆಳ್ತಂಗಡಿ ತಾಲೂಕಿನ ಕರಾಯ ನಿವಾಸಿಯಾಗಿರುವ ಸುಜಾತರವರು ಕಳೆದ ೧೧ ವರ್ಷಗಳಿಂದ ಸಮನ್ವಯಾಧಿಕಾರಿಯಾಗಿ ಉಡುಪಿ, ಮೂಡಿಗೆರೆ, ಕುಣಿಗಲ್ಗಳಲ್ಲಿ ಕರ್ತವ್ಯ ನಿರ್ವಹಿಸಿರುತ್ತಾರೆ. ಕಳೆದ ಮೂರು ವರ್ಷಗಳಿಂದ ಪುತ್ತೂರು ಕಚೇರಿಯಲ್ಲಿ ಸಮನ್ವಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿರುತ್ತಾರೆ.
ಆಂತರಿಕ ಲೆಕ್ಕಪರಿಶೋಧಕ ಶಾಲಿನಿ ದ್ವಿತೀಯ:
ಗುಂಪು ಲೆಕ್ಕ ಪರಿಶೋಧನೆ, ತಾಂತ್ರಿಕ ತರಬೇತಿ ಹಾಗೂ ಟಾಸ್ಕ್ ಎಂಟ್ರಿಯಲ್ಲಿ ವಾರ್ಷಿಕ ಕ್ರಿಯಾಯೋಜನೆಯಲ್ಲಿ ನೀಡಿರುವ ಅತ್ಯುತ್ತಮ ಸಾಧನೆಗೆ ಜಿಲ್ಲೆಯಲ್ಲಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾರೆ. ಸಾಮೆತ್ತಡ್ಕ ನಿವಾಸಿಯಾಗಿರುವ ಇವರು ಯೋಜನೆಯಲ್ಲಿ ಆಂತರಿಕ ಲೆಕ್ಕಪರಿಶೋಧಕಿಯಾಗಿ ಕಳೆದ ೨೦ ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದು ಪುತ್ತೂರು ಹಾಗೂ ಚಿಕ್ಕಮಗಳೂರುಗಳಲ್ಲಿ ಕರ್ತವ್ಯ ನಿರ್ವಹಿಸಿರುತ್ತಾರೆ.