ಪುತ್ತೂರು: ೩೪ನೇ ನೆಕ್ಕಿಲಾಡಿ ಹಿರಿಯ ಪ್ರಾಥಮಿಕ ಹಿರಿಯ ಪ್ರಾಥಮಿಕ ಶಾಲಾ ಮುಖ್ಯಗುರು ರಂಜಿನಿ ಎಸ್.ರಾವ್ರವರಿಗೆ ಬೀಳ್ಕೊಡುಗೆ ಕರ್ಯಕ್ರಮ ಶಾಲೆಯಲ್ಲಿ ನಡೆಯಿತು.
೨೪-೦೯-೧೯೯೦ರಂದು ಶಿಕ್ಷಕ ವೃತ್ತಿಗೆ ನೇಮಕಗೊಂಡು ಸಹಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸಿ ೦೭-೧೦-೨೦೧೪ರಲ್ಲಿ ಮುಖ್ಯ ಶಿಕ್ಷಕಿಯಾಗಿ ಭಡ್ತಿಗೊಂಡು ೩೪ನೇ ನೆಕ್ಕಿಲಾಡಿ ಹಿ.ಪ್ರಾ. ಶಾಲೆಯಲ್ಲಿ ಮುಖ್ಯ ಗುರುಗಳಾಗಿ ಕಾರ್ಯ ನಿರ್ವಹಿಸಿ ಶಿಕ್ಷಣ ಇಲಾಖೆಯಲ್ಲಿ ಸುಧೀರ್ಘ ೪೦ ವರ್ಷಗಳ ಸೇವೆ ಸಲ್ಲಿಸಿ ಜೂನ್ ೩೦ರಂದು ನಿವೃತ್ತರಾದ ರಂಜಿನಿ ಎಸ್. ರಾವ್ರವರನ್ನು ಬೀಳ್ಕೊಡುವ ಸಮಾರಂಭ ಗೌರವ ಶಿಕ್ಷಕಿಯರಾದ ಚಿತ್ರ ಹಾಗೂ ಪೂರ್ಣಿಮಾರವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ಬಳಿಕ ಸಹಶಿಕ್ಷಕಿ ಸೆವ್ರಿನ್ ಮಾರ್ಟಿಸ್ರವರು ಸ್ವಾಗತಿಸಿ ಮುಖ್ಯಗುರುಗಳ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿ ಶುಭ ಹಾರೈಸಿದರು.
ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿಯವರು ಹಾಗೂ ಅಧ್ಯಾಪಕ ವೃಂದದವರು ರಂಜಿನಿ ಎಸ್.ರಾವ್ರವರಿಗೆ ಜನುಮ ದಿನದ ಶುಭಾಶಯ ಕೋರಿ ಕೇಕ್ ಕತ್ತರಿಸಿ ಜನುಮ ದಿನವನ್ನು ಆಚರಿಸಿದರು. ಎಸ್ಡಿಎಂಸಿ ಅಧ್ಯಕ್ಷ ಧರ್ಣಪ್ಪ ಗೌಡ ಹಾಗೂ ಶಿಕ್ಷಕ ವೃಂದದವರು ರಂಜಿನಿ ರಾವ್ರವರಿಗೆ ಶಾಲು ಹೊದಿಸಿ ಫಲಪುಷ್ಪ ನೀಡಿ ಸನ್ಮಾನಿಸಿದರು. ಕೃತಜ್ಞತೆ ಸೂಚಿಸಿ ಮಾತನಾಡಿದ ಮುಖ್ಯಗುರುಗಳು ಶಾಲೆಯಲ್ಲಿ ಸಲ್ಲಿಸಿದ ಸೇವಾವಧಿಯಲ್ಲಿನ ನೆನಪುಗಳನ್ನು ಸ್ಮರಿಸಿಕೊಂಡು ಶಾಲೆಗೆ ರೂ. ೧೦,೦೦೦/-ಗಳನ್ನು ಶಾಶ್ವತ ದತ್ತಿನಿಧಿಯಾಗಿ ನೀಡಿದರು.
ರಂಜಿನಿ ರಾವ್ರವರ ಪತಿಯಾಗಿರುವ ವಿಠಲ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲ ರಾಧಾಕೃಷ್ಣ ಭಟ್ರವರು ಮಾತನಾಡಿ ಶಿಕ್ಷಕರ ಜವಾಬ್ದಾರಿ, ಸಂಸ್ಕಾರ, ಉಪಕಾರ ಸ್ಮರಣೆ ಬಗ್ಗೆ ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ಎಸ್ಡಿಎಂಸಿ ಅಧ್ಯಕ್ಷ ಧರ್ಣಪ್ಪ ಗೌಡರವರು ಮಾತನಾಡಿ, ಮುಖ್ಯಗುರುಗಳ ನಿವೃತ್ತಿ ಜೀವನವು ಸುಖಮಯವಾಗಿರಲಿ ಎಂದು ಶುಭ ಹಾರೈಸಿದರು. ವೇದಿಕೆಯಲ್ಲಿ ಮುಖ್ಯಗುರುಗಳ ಪುತ್ರ, ಇನ್ಫೋಸಿಸ್ನಲ್ಲಿ ಇಂಜಿನಿಯರ್ ಆಗಿರುವ ಸ್ವಸ್ತಿಕ್ ಹಾಗೂ ಎಸ್ಡಿಎಂಸಿ ಉಪಾಧ್ಯಕ್ಷೆ ವಸಂತಿ ಉಪಸ್ಥಿತರಿದ್ದರು. ಎಸ್ಡಿಎಂಸಿ ಮಾಜಿ ಅಧ್ಯಕ್ಷ ಪ್ರಭಾಕರ್ ನಾಯಕ್ ರವರು ಲಘು ಉಪಹಾರದ ವ್ಯವಸ್ಥೆ ಮಾಡಿದ್ದರು. ಮುಖ್ಯ ಗುರುಗಳ ವತಿಯಿಂದ ಸಿಹಿ ತಿಂಡಿಗಳನ್ನು ಮಾಡಿದ್ದರು. ಸಹಶಿಕ್ಷಕಿ ಸೆವರಿನ್ ಮಾರ್ಟಿಸ್ ವಂದಿಸಿದರು. ಸಹಶಿಕ್ಷಕಿ ಕಾವೇರಿ ಸಿ. ಕಾರ್ಯಕ್ರಮ ನಿರೂಪಿಸಿದರು.
ಇಲಾಖಾ ವತಿಯಿಂದ ಮುಖ್ಯಗುರುಗಳಿಗೆ ಸ್ಮರಣಿಕೆ ನೀಡಿ, ಶಾಲು ಹೊದಿಸಿ ಹಾರ ಹಾಕಿ ಫಲ ಪುಷ್ಪ ನೀಡಿ ಗೌರವಿಸಲಾಯಿತು. ಕೊಡಿಪ್ಪಾಡಿ ಶಾಲಾ ಶಿಕ್ಷಕ ಸ್ಟ್ಯಾನಿ ಮಸ್ಕರೇಂಞಸ್ರವರು ನಿವೃತ್ತರಾಗಲಿರುವ ಮುಖ್ಯಗುರುಗಳ ಬಗ್ಗೆ ಅನಿಸಿಕೆ ಹೇಳಿ ಶುಭ ಹಾರೈಸಿದರು. ಕೋಡಿಂಬಾಡಿ ಕ್ಲಸ್ಟರ್ ವ್ಯಾಪ್ತಿಯ ೯ ಶಾಲೆಗಳ ಮುಖ್ಯಗುರುಗಳು ಸಭೆಯಲ್ಲಿ ಹಾಜರಿದ್ದರು.ಬೆಳ್ಳಿಪ್ಪಾಡಿ ಶಾಲಾ ಮುಖ್ಯಗುರು ಯಶೋದಾ ಮತ್ತು ಜಿಡೆಕಲ್ಲು ಶಾಲೆಯ ಪ್ರಭಾರ ಮುಖ್ಯಗುರು ತಾರಾನಾಥರವರು ತಮ್ಮ ಅನಿಸಿಕೆ ಹೇಳಿ ಶುಭ ಹಾರೈಸಿದರು. ಇಲಾಖೆಯ ಪರವಾಗಿ ಸಮನ್ವಯ ಅಧಿಕಾರಿ ಮೋನಪ್ಪ ಪೂಜಾರಿ, ಇಸಿಓ ಹರಿಪ್ರಸಾದ್, ಬಿಆರ್ಪಿ ಓಬಲೇಶ್ವರ್ ಐಇಆರ್ಟಿಗಳಾದ ತನುಜ, ಸೀತಮ್ಮ ಶುಭ ಹಾರೈಸಿದರು. ಬಿಆರ್ಪಿ ಯಶೋದ ಕಾರ್ಯಕ್ರಮ ನಿರೂಪಿಸಿದರು. ಸಹ ಶಿಕ್ಷಕಿ ಸೆವ್ರಿನ್ ಮಾರ್ಟಿಸ್ ವಂದಿಸಿದರು. ಉಡುಪಿ ತಾಲೂಕು ಎರ್ಮಾಳ್ ಸಂಜೀವ ರಾವ ಮತ್ತು ವಸಂತಿಯವರ ಪುತ್ರಿಯಾಗಿರುವ ರಂಜಿನಿ ರಾವ್ರವರು ಪ್ರಸ್ತುತ ಕೊಡಿಪಾಡಿ ನಿವಸಿಯಾಗಿದ್ದಾರೆ.