ಪುತ್ತೂರು: ಮಹಾಮಾರಿ ಕೊರೋನಾ ದಿನದಿಂದ ದಿನಕ್ಕೆ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿರುವುದರಿಂದ ಇದರ ನಿಯಂತ್ರಣಕ್ಕೆ ರಾಜ್ಯ ಸರಕಾರವು ರಾತ್ರಿ ಎಂಟರಿಂದ ಬೆಳಿಗ್ಗೆ ಐದರ ತನಕ ಸಂಪೂರ್ಣ ಕರ್ಫ್ಯೂ ವಿಧಿಸಲಾಗಿದ್ದು ಅಲ್ಲದೆ ಪ್ರತೀ ಆದಿತ್ಯವಾರ ಇಡೀ ದಿನ ಸಂಪೂರ್ಣ ಲಾಕ್ಡೌನ್ ಘೋಷಿಸಿದ್ದು ಕ್ರಿಶ್ಚಿಯನ್ ಸಮುದಾಯದ ಚರ್ಚ್ಗಳಲ್ಲಿ ಆದಿತ್ಯವಾರ ನಡೆಯುವ ಬಲಿಪೂಜೆಗಳಿಗೆ ಬಿಸಿ ತಟ್ಟಿದೆ.
ಪ್ರತೀ ಆದಿತ್ಯವಾರ ಸಂಪೂರ್ಣ ಲಾಕ್ಡೌನ್ ಘೋಷಿಸಿದ್ದರಿಂದ ಕ್ರಿಶ್ಚಿಯನ್ ಸಮುದಾಯದ ಬಾಂಧವರಿಗೆ ಇದರ ಬಿಸಿ ತಟ್ಟಲಿದೆ. ಯಾಕೆಂದರೆ ಅಂದು ನಿತ್ಯ ಬಲಿಪೂಜೆಗಳು ನಡೆಯದೇ ಇರೋದ್ರಿಂದ ಭಕ್ತರಿಗೆ ನಿರಾಶೆ ತಂದೊಡ್ಡಿದೆ. ದೇವರ ದರ್ಶನಕ್ಕೂ ಈ ಕೊರೋನಾ ಮಹಾಮಾರಿಯು ತಡೆಯೊಡ್ಡಿದೆ ಎಂದು ಭಕ್ತರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಆದರೆ ಇದರಿಂದ ಭಕ್ತರು ನಿರಾಶಾರಾಗಬೇಕಿಲ್ಲ. ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ವಂ|ಡಾ|ಪೀಟರ್ ಪಾವ್ಲ್ ಸಲ್ದಾನ್ಹಾರವರು ಆದಿತ್ಯವಾರ ನಡೆಯುವ ಪೂಜಾವಿಧಿಗಳನ್ನು ಶುಕ್ರವಾರ ಮತ್ತು ಶನಿವಾರದಂದು ನೆರವೇರಿಸಬಹುದು ಎಂದು ಈಗಾಗಲೇ ಪ್ರತೀ ಚರ್ಚ್ಗಳಿಗೆ ಆದೇಶ ಹೊರಡಿಸಿದರನ್ವಯ ಪ್ರತೀ ಚರ್ಚ್ಗಳಲ್ಲಿ ಆಯಾ ಚರ್ಚ್ಗಳ ಪ್ರಧಾನ ಧರ್ಮಗುರುಗಳ ನಿರ್ದೇಶನದಂತೆ ಪೂಜಾವಿಧಿಗಳು ನಡೆಯುತ್ತದೆ ಎನ್ನಲಾಗಿದೆ.
೪ ಚರ್ಚ್ಗಳ ವಿವರ ಹೀಗಿದೆ:
ಮಾಯಿದೆ ದೇವುಸ್ ಚರ್ಚ್ನಲ್ಲಿ ಶುಕ್ರವಾರ ಸಂಜೆ ೪.೩೦ ಗಂಟೆಗೆ ಮತ್ತು ಶನಿವಾರ ಸಂಜೆ ೪,೫,೬ ಗಂಟೆಗೆ ಬಲಿಪೂಜೆಗಳು ನಡೆಯಲಿರುವುದು. ವಾರದ(ಶುಕ್ರವಾರ ಬಿಟ್ಟು) ನಡುವೆ ಬೆಳಿಗ್ಗೆ ೬.೩೦ ಗಂಟೆಗೆ ಬಲಿಪೂಜೆ ನಡೆಯಲಿರುವುದು ಎಂದು ಪ್ರಧಾನ ಧರ್ಮಗುರು ವಂ|ಆಲ್ಫ್ರೆಡ್ ಜಾನ್ ಪಿಂಟೋರವರು ತಿಳಿಸಿದ್ದಾರೆ. ಬನ್ನೂರು ಸಂತ ಅಂತೋನಿ ಚರ್ಚ್ನಲ್ಲಿ ಶುಕ್ರವಾರ ಹತ್ತಿರದ ಪೆರ್ನೆ ಚಾಪೆಲ್ನಲ್ಲಿ ಸಂಜೆ ೪.೩೦ ಗಂಟೆಗೆ, ಶನಿವಾರ ಬನ್ನೂರು ಚರ್ಚ್ನಲ್ಲಿ ಬೆಳಿಗ್ಗೆ ೭ ಗಂಟೆಗೆ ಮತ್ತು ಸಂಜೆ ೪.೩೦, ೬ ಗಂಟೆಗೆ ನಡೆಯಲಿರುವುದು ಎಂದು ಚರ್ಚ್ನ ಧರ್ಮಗುರು ವಂ|ಪ್ರಶಾಂತ್ ಫೆರ್ನಾಂಡೀಸ್ರವರು ತಿಳಿಸಿದ್ದಾರೆ. ಮರೀಲು ಸೆಕ್ರೇಡ್ ಹಾರ್ಟ್ ಚರ್ಚ್ನಲ್ಲಿ ಎಂದಿನಂತೆ ಶನಿವಾರ ೫ ಗಂಟೆಗೆ ಬಲಿಪೂಜೆ ನಡೆಯಲಿರುವುದು. ಎಷ್ಟು ಬಲಿಪೂಜೆಗಳು ಯಾವ ದಿನಂದು ನಡೆಸಬೇಕು ಎನ್ನುವುದನ್ನು ಜು.೬ರಂದು ನಡೆಯುವ ಚರ್ಚ್ ಪಾಲನಾ ಸಮಿತಿಯ ಸಭೆಯಲ್ಲಿ ತೀರ್ಮಾನಗೊಳ್ಳಲಿದೆ ಎಂದು ಚರ್ಚ್ನ ಧರ್ಮಗುರು ವಂ|ವಲೇರಿಯನ್ ಫ್ರ್ಯಾಂಕ್ರವರು ಹೇಳಿದ್ದಾರೆ. ಉಪ್ಪಿನಂಗಡಿ ದೀನರ ಕನ್ಯಾಮಾತಾ ದೇವಾಲಯದಲ್ಲಿ ಶನಿವಾರ ೪ ಗಂಟೆಗೆ ಮತ್ತು ೫.೧೫ ಗಂಟೆಗೆ ಬಲಿಪೂಜೆಗಳು ನಡೆಯಲಿರುವುದು ಎಂದು ಚರ್ಚ್ನ ಧರ್ಮಗುರು ವಂ|ಅಬೆಲ್ ಲೋಬೋರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸರಕಾರದ ನಿಯಮದಂತೆ ಭಕ್ತರು ಮಾಸ್ಕ್ ಧರಿಸಿ ಚರ್ಚ್ಗೆ ಆಗಮಿಸುವುದು, ಬೆಂಚೊಂದರಲ್ಲಿ ಸಾಮಾಜಿಕ ಆಂತರ ಕಾಯ್ದುಕೊಂಡು ಈರ್ವರೇ ಕುಳಿತುಕೊಳ್ಳುವುದು, ಪ್ರವೇಶ ದ್ವಾರದಲ್ಲಿ ಇರಿಸಲಾದ ಸ್ಯಾನಿಟೈಸರ್ ಬಳಸುವುದು ಅಥವಾ ಭಕ್ತರೇ ಆಗಮಿಸುವಾಗ ಸ್ಯಾನಿಟೈಸರ್ ಬಳಸಿ ಚರ್ಚ್ ಪ್ರವೇಶಿಸುವುದು, ಚರ್ಚ್ನಲ್ಲಿನ ದೇವರ ಪ್ರತಿಮೆಗಳನ್ನು ಬಾಯಿ ಅಥವಾ ಕೈಯಿಂದ ಸ್ಪರ್ಶಿಸದೆ ಸುರಕ್ಷತೆಯನ್ನು ಕಾಪಾಡುವುದು ಕಡ್ಡಾಯವಾಗಿದೆ.