- ಸೋಂಕಿತರ ಸಂಖ್ಯೆ 923
- ಗುಣಮುಖರಾದವರು 477
- ಸಾವಿಗೀಡಾದವರು 18
- ಚಿಕಿತ್ಸೆಯಲ್ಲಿರುವವರು 428
ಪುತ್ತೂರು: ದ.ಕ.ಜಿಲ್ಲೆಯಲ್ಲಿ ಕೊರೋನಾರ್ಭಟ ಮುಂದುವರಿದಿದ್ದು ಗಣನೀಯವಾಗಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಜು.೨ರಂದು ೧೦ ಮಕ್ಕಳು, ವೃದ್ಧರು ಸೇರಿದಂತೆ ಬರೋಬ್ಬರಿ ೯೦ ಮಂದಿಯಲ್ಲಿ ಸೋಂಕು ಇರುವುದು ಪತ್ತೆಯಾಗಿದ್ದು ಜನತೆಯ ಆತಂಕ ಹೆಚ್ಚಿಸಿದೆ. ಜಿಲ್ಲೆಯಲ್ಲಿ ಈಗ ಸೋಂಕಿತರ ಒಟ್ಟು ಸಂಖ್ಯೆ ೯೨೩ಕ್ಕೆ ಏರಿಕೆಯಾಗಿದ್ದು ಈ ಪೈಕಿ ೪೭೭ ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದು ೪೨೮ ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಜು.೨ರಂದು ಪತ್ತೆಯಾಗಿರುವ ೯೦ ಮಂದಿಯ ಪೈಕಿ ೧೫ ಮಂದಿ ಕುವೈತ್, ಸೌದಿ ಅರೇಬಿಯ, ದುಬೈಯಿಂದ ಬಂದವರಾಗಿದ್ದಾರೆ. ಐಎಲ್ಐ ೧೬, ಎಸ್ಎಆರ್ಐ ಎಂಟು, ಮೂಲ ಪತ್ತೆಯಾಗದ ೧೭, ಪ್ರಾಥಮಿಕ ಸಂಪರ್ಕ ಹೊಂದಿದ ೩೧ ಮಂದಿಗೆ ಸೋಂಕು ತಗುಲಿದೆ. ಜು.೨ರಂದು ೩೩ ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ತಿಳಿಸಿದ್ದಾರೆ.
೯೨೩ ಪಾಸಿಟಿವ್: ದ.ಕ.ಜಿಲ್ಲೆಯಲ್ಲಿ ಈ ತನಕ ಒಟ್ಟು ೯೨೩ ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದ್ದು ಈ ಪೈಕಿ ೪೭೭ ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಜು.೨ರಂದು ೨೯೩ ಸೇರಿದಂತೆ ಈ ತನಕ ಒಟ್ಟು ೧೪೪೩೦ ಮಂದಿಯ ಗಂಟಲು ದ್ರವದ ಮಾದರಿಯನ್ನು ಕೋವಿಡ್ ಪರೀಕ್ಷೆಗೆ ಕಳುಹಿಸಲಾಗಿದೆ. ೧೪೦೦೩ ಪ್ರಕರಣಗಳ ವರದಿ ಬಂದಿದ್ದು ಇದರಲ್ಲಿ ೧೩೦೮೦ ನೆಗೆಟಿವ್ ಆಗಿದ್ದು ೯೨೩ ಪಾಸಿಟಿವ್ ಆಗಿದೆ. ಜು.೨ರಂದು ವರದಿ ಬಂದಿರುವ ೧೩೦ ಪ್ರಕರಣಗಳಲ್ಲಿ ೯೦ ಪಾಸಿಟಿವ್ ಆಗಿದ್ದು ೪೦ ನೆಗೆಟಿವ್ ಆಗಿದೆ. ೪೨೭ ಮಂದಿಯ ವರದಿಗಾಗಿ ಕಾಯಲಾಗುತ್ತಿದೆ.
೪೭೭ ಮಂದಿ ಬಿಡುಗಡೆ: ಜು.೨ರಂದು ೩೩ ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದು ಈ ತನಕ ಒಟ್ಟು ೪೭೭ ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಸೋಂಕಿತರ ಪೈಕಿ ೪೨೮ ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ೫೭ ವರ್ಷದ ಹೆಂಗಸು ಲಿವರ್ ಕಾಯಿಲೆ, ಡಯಾಬಿಟಿಸ್, ಹೃದಯರೋಗ ಹಾಗೂ ನ್ಯುಮೋನಿಯದಿಂದ
ಬಳಲುತ್ತಿದ್ದಾರೆ. ಇನ್ನು ೭೮ ವರ್ಷದ ವೃದ್ಧ ಡಯಾಬಿಟಿಸ್, ಅಧಿಕ ರಕ್ತದೊತ್ತಡ, ಪಾರ್ಕಿನ್ಸನ್ ಕಾಯಿಲೆ ಮತ್ತು ನ್ಯುಮೋನಿಯದಿಂದ ಬಳಲುತ್ತಿದ್ದಾರೆ. ೫೨ ವರ್ಷದ ಮಹಿಳೆಯು ಮಧುಮೇಹ ಹಾಗೂ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದಾರೆ. ೩೮ ವರ್ಷದ ಪುರುಷ ಅಸ್ತಮಾದಿಂದ ಬಳಲುತ್ತಿದ್ದು, ಇವರನ್ನೂ ಐಸಿಯುನಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಬಂಟ್ವಾಳ ನಿವಾಸಿ ಸಾವು: ಬಂಟ್ವಾಳ ತಾಲೂಕಿನ ೪೮ವರ್ಷ ವಯಸ್ಸಿನ ವ್ಯಕ್ತಿಯೋರ್ವರು ಜೂ.೨೭ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆಗೆ ಸ್ಪಂದಿಸದೆ ಜು.೧ರಂದು ಮೃತಪಟ್ಟಿದ್ದಾರೆ. ಇವರ ಗಂಟಲ ದ್ರವ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಿದ್ದು ವರದಿಯಲ್ಲಿ ಕೋವಿಡ್ ಪಾಸಿಟಿವ್ ಆಗಿದೆ ಎಂದು ವರದಿಯಾಗಿದೆ.
ಖಾಸಗಿ ಆಸ್ಪತ್ರೆಗೆ ಸೀಲ್ಡೌನ್:
ಇಬ್ಬರು ರೋಗಿಗಳಿಗೆ ಹಾಗೂ ಓರ್ವ ನರ್ಸ್ಗೆ ಕೋವಿಡ್-೧೯ (ಕೊರೋನ) ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ತುಂಬೆಯ ಖಾಸಗಿ ಆಸ್ಪತ್ರೆಯೊಂದನ್ನು ಸೀಲ್ ಡೌನ್ ಮಾಡಲಾಗಿದೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ. ಕೆಲವು ದಿನಗಳ ಹಿಂದೆ ಜ್ವರದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾದ ಇಬ್ಬರು ರೋಗಿಗಳ ಗಂಟಲ ದ್ರವದ ಮಾದರಿಯನ್ನು ಕೋವಿಡ್ ಪರೀಕ್ಷೆಗೆ ಕಳುಹಿಸಲಾಗಿತ್ತು. ಆ ಇಬ್ಬರು ರೋಗಿಗಳ ವರದಿಯೂ ಪಾಸಿಟಿವ್ ಬಂದಿದೆ. ಅಲ್ಲದೆ ಆಸ್ಪತ್ರೆಯ ನರ್ಸ್ ಒಬ್ಬರ ಕೋವಿಡ್ ಪರೀಕ್ಷೆಯ ವರದಿಯೂ ಪಾಸಿಟಿವ್ ಬಂದಿದ್ದು ಮೂವರನ್ನೂ ಮಂಗಳೂರು ಕೋವಿಡ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಆಸ್ಪತ್ರೆಯನ್ನು ಎರಡು ದಿನಗಳ ಕಾಲ ಸೀಲ್ ಡೌನ್ ಮಾಡಲಾಗಿದ್ದು ತುರ್ತು ಸೇವೆಯನ್ನು ಹೊರೆತು ಪಡಿಸಿ ಬಾಕಿ ಎಲ್ಲಾ ಹೊರ, ಒಳ ರೋಗಿಗಳ ಸೇವೆಯನ್ನು ನಿಲ್ಲಿಸಲಾಗಿದೆ. ಆಸ್ಪತ್ರೆಯಲ್ಲಿದ್ದ ಹೆಚ್ಚಿನ ರೋಗಿಗಳನ್ನು ಮಂಗಳೂರಿನ ಆಸ್ಪತ್ರೆಯೊಂದಕ್ಕೆ ಸ್ಥಳಾಂತರಿಸಿದ್ದು ಉಳಿದ ರೋಗಿಗಳಿಗೆ ಚಿಕಿತ್ಸೆ ಮುಂದುವರಿಸಲಾಗಿದೆ ಎಂದು ವರದಿಯಾಗಿದೆ.
ಶಾಸಕರಿಗೂ ಕೊರೋನಾ
ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಶಾಸಕ ಡಾ. ಭರತ್ ಶೆಟ್ಟಿ ಅವರಿಗೂ ಕೋವಿಡ್ ಸೋಂಕು ದೃಢಪಟ್ಟಿದೆ. ಈ ಕುರಿತು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಕೋವಿಡ್ ಸೋಂಕು ದೃಢ ಪಟ್ಟ ವಿಚಾರವನ್ನು ಹಂಚಿಕೊಂಡಿದ್ದು, ಸಾರ್ವಜನಿಕರಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ, ಮಾಸ್ಕ್ ಧರಿಸಿ ಹಾಗೂ ಕೈಗಳನ್ನು ತೊಳೆಯುವಂತೆ ಮನವಿ ಮಾಡಿಕೊಂಡಿದ್ದಾರೆ. ಶಾಸಕರಿಗೆ ಸೋಂಕಿತರ ಸಂಪರ್ಕದಿಂದ ಸೋಂಕು ತಗುಲಿರುವ ಸಾಧ್ಯತೆ ಇದ್ದು, ಅವರು ಸ್ವಯಂ ಪ್ರೇರಿತವಾಗಿ ತಪಾಸಣೆ ನಡೆಸಿದ ವೇಳೆ ದೃಢಪಟ್ಟಿದೆ. ಶಾಸಕರು ಮಂಗಳೂರು ನಗರದಲ್ಲಿ ಹಲವಾರು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದು ಈ ಕುರಿತು ಅಧಿಕಾರಿಗಳು ಶಾಸಕರ ಪ್ರಾಥಮಿಕ ಸಂಪರ್ಕದಲ್ಲಿ ಇದ್ದವರ ಬಗ್ಗೆ ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾರೆ.