HomePage_Banner
HomePage_Banner
HomePage_Banner
HomePage_Banner

ವಿದ್ಯಾರ್ಥಿಗಳ ಉತ್ಸಾಹ, ಶಿಕ್ಷಕರ, ಜನಪ್ರತಿನಿಧಿಗಳ, ಸಂಘ ಸಂಸ್ಥೆಗಳ ಪರಿಶ್ರಮ | ಕೋವಿಡ್-19 ನಡುವೆ ಯಶಸ್ವಿಯಾಗಿ ಮುಗಿದ ಎಸ್‌ಎಸ್‌ಎಲ್‌ಸಿ ಪರೀಕ್ಷೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕೊರೋನಾ ಲಾಕ್‌ಡೌನ್‌ನಿಂದಾಗಿ ಮುಂದೂಡಲ್ಪಟ್ಟ ೨೦೧೯-೨೦ನೇ ಶೈಕ್ಷಣಿಕ ಸಾಲಿನ ಬಹುನಿರೀಕ್ಷೆಯ ಎಸ್ಸೆಸ್ಸೆಲ್ಸಿ ಪರೀಕ್ಷೆ ತಾಲೂಕಿನ ೧೨ ಕೇಂದ್ರಗಳಲ್ಲಿ ಬಹಳ ಯಶಸ್ವಿಯಾಗಿ ಜು.೩ಕ್ಕೆ ಮುಕ್ತಾಯಗೊಂಡಿದೆ. ವಿದ್ಯಾರ್ಥಿಗಳು, ಮುಖಗವಸು, ಸಾಮಾಜಿಕ ಅಂತರ ಕಾಯ್ದು ಕೊಂಡು ಪರೀಕ್ಷೆ ಬರೆಯುವಲ್ಲಿ ಯಶಸ್ವಿಯಾಗಿದ್ದಾರೆ. ಪರೀಕ್ಷೆ ಆರಂಭದ ದಿನದಿಂದ ಹಿಡಿದು ಕೊನೆಯ ತನಕವೂ ಯಾವುದೇ ಆತಂಕವಿಲ್ಲದೆ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಪೋಷಕರಲ್ಲಿದ್ದ ಕೊರೋನಾ ಸೋಂಕಿನ ಭಯ ಪರೀಕ್ಷೆ ಮುಗಿಯುವ ಮೂಲಕ ಆತಂಕ ದೂರ ಆಗಿದೆ.

ವಿದ್ಯಾರ್ಥಿಗಳು ಮುಖಗವಸು ತೊಟ್ಟು, ಸಾಮಾಜಿಕ ಅಂತರ ಕಾಪಾಡಿಕೊಂಡು ಪರೀಕ್ಷಾ ಕೇಂದ್ರಗಳಿಗೆ ಬಂದು ಪರೀಕ್ಷೆ ಬರೆದಿದ್ದು. ಯಾವುದೆ ಸಮಸ್ಯೆ ಇಲ್ಲದೆ ಪರೀಕ್ಷೆಗಳು ಯಶಸ್ವಿಯಾಗಿ ಮುಗಿದಿದೆ. ಪ್ರತಿ ಪರೀಕ್ಷಾ ಕೇಂದ್ರಗಳಲ್ಲೂ ಅಂತರ ಕಾಯ್ದುಕೊಳ್ಳಲು ಬಹುತೇಕ ಎಲ್ಲ ಕಡೆ ಕಟ್ಟು ನಿಟ್ಟಿನ ವ್ಯವಸ್ಥೆ, ಧ್ವನಿವರ್ಧಕ ಮೂಲಕ ವಿದ್ಯಾರ್ಥಿ ಗಳಿಗೆ ಮನವರಿಕೆ, ಪರೀಕ್ಷಾ ಕೇಂದ್ರಗಳ ಪ್ರವೇಶ ದ್ವಾರದಲ್ಲೇ ಪರೀಕ್ಷಾರ್ಥಿಗಳನ್ನು ಥರ್ಮಲ್ ಸ್ಕ್ಯಾನಿಂಗ್ ಗೊಳಪಡಿಸಿ ಕೈಗಳಿಗೆ ಸ್ಯಾನಿಟೈಸರ್ ನೀಡಿ ವಿದ್ಯಾರ್ಥಿಗಳನ್ನು ಒಳ ಕಳುಹಿಸುವ ಮೂಲಕ ವಿದ್ಯಾರ್ಥಿಗಳಿಗೆ ಯಾವುದೇ ಸಮಸ್ಯೆ ಬಾರದಂತೆ ಕಾಪಾಡಿಕೊಳ್ಳಲಾಗಿತ್ತು. ಒಟ್ಟಿನಲ್ಲಿ ಯಾವುದೆ ಆತಂಕವಿಲ್ಲದೆ ಪರೀಕ್ಷೆಗಳು ಪೂರ್ಣಗೊಂಡಿವೆ. ಪರೀಕ್ಷೆಯೂ ಮಧ್ಯಾಹ್ನ ಗಂಟೆ ೧.೩೦ಕ್ಕೆ ಮುಗಿದ ಬಳಿಕ ವಿದ್ಯಾರ್ಥಿಗಳು ಒಮ್ಮೆಲೆ ಕೊಠಡಿಯಿಂದ ಹೊರ ಹೋಗದಂತೆ ಶಾಲೆಯ ಕೊಠಡಿಗಳಲ್ಲಿ ಒಂದೊಂದೆ ಕೊಠಡಿಯ ವಿದ್ಯಾರ್ಥಿಗಳಿಗೆ ಕ್ರಮ ಪ್ರಕಾರವಾಗಿ ಹೊರ ಹೋಗಲು ಅವಕಾಶ ಮಾಡಿ ಕೊಡಲಾಯಿತು. ಹಾಗಾಗಿ ಎಲ್ಲೂ ವಿದ್ಯಾರ್ಥಿಗಳು ಗುಂಪು ಸೇರುವುದು ಕಂಡು ಬರಲಿಲ್ಲ.

ಪರೀಕ್ಷೆಗೆ ಗೈರಾ ವಿದ್ಯಾರ್ಥಿಗಳು:
ಪರೀಕ್ಷೆ ಆರಂಭದಿಂದ ಹಿಡಿದು ಕೊನೆಯ ತನಕ ವಿವಿಧ ಕಾರಣಗಳಿಂದ ಕೆಲವೊಂದಷ್ಟು ವಿದ್ಯಾರ್ಥಿಗಳು ಗೈರಾಗಿದ್ದಾರೆ. ಒಟ್ಟು ೬ ದಿನಗಳ ಪರೀಕ್ಷೆಯಲ್ಲಿ ೬ ವಿಷಯಗಳ ಪರೀಕ್ಷೆಯಲ್ಲಿ ೫೦೦೭ ಮಂದಿ ಹಾಜರಾಗಬೇಕಾಗಿದ್ದರೂ ಅಂಕಿ ಅಂಶಗಳ ಪ್ರಕಾರ ೨೫೨ ಮಂದಿ ಔಟ್ ಮೈಗ್ರೇಟ್ ವಿದ್ಯಾರ್ಥಿಗಳಾಗಿದ್ದರಿಂದ ಅವರೆಲ್ಲ ಹೊರ ಜಿಲ್ಲೆಯಲ್ಲೇ ಪರೀಕ್ಷೆ ಬರೆದಿದ್ದು, ೩೭ ಮಂದಿ ಇನ್ ಮೈಗ್ರೇಟ್ ವಿದ್ಯಾರ್ಥಿಗಳು ಒಟ್ಟು ಲೆಕ್ಕಾಚಾರದಲ್ಲಿ ಸೇರಿಕೊಂಡಿದ್ದರು. ಪುತ್ತೂರು, ಕಡಬ ತಾಲೂಕಿನ ೧೨ ಪರೀಕ್ಷಾ ಕೇಂದ್ರಕ್ಕೆ ಸಂಬಂಧಿಸಿ ಜೂ. ೨೫ರಂದು ದ್ವಿತೀಯ ಭಾಷೆ ಪರೀಕ್ಷೆಗೆ ೪೮೫೩ ವಿದ್ಯಾರ್ಥಿಗಳ ಪೈಕಿ ೬೨ ಗೈರಾಗಿದ್ದರು. ಜೂ.೨೭ರಂದು ಗಣಿತ ಪರೀಕ್ಷೆ ಬರೆಯಬೇಕಾಗಿದ್ದ ೪,೯೧೨ ಮಂದಿಯಲ್ಲಿ ೬೩ ಮಂದಿ ಗೈರಾಗಿದ್ದರು. ಜೂ.೨೯ರಂದು ವಿಜ್ಞಾನ ಪರೀಕ್ಷೆ ಬರೆಯಬೇಕಾಗಿದ್ದ ೪,೪೪೩ ಮಂದಿ ವಿದ್ಯಾರ್ಥಿಗಳ ಪೈಕಿ ೬೬ ಮಂದಿ ಗೈರಾಗಿದ್ದರು. ಜು.೧ ರಂದು ಸಮಾಜ ವಿಜ್ಞಾನ ಪರೀಕ್ಷೆಗೆ ೪,೯೦೭ ವಿದ್ಯಾರ್ಥಿಗಳ ಪೈಕಿ ೬೫ ಮಂದಿ ಗೈರಾಗಿದ್ದರು. ಜು.೨ರಂದು ೪,೮೩೦ ವಿದ್ಯಾರ್ಥಿಗಳ ಪೈಕಿ ೬೨ ಮಂದಿ ವಿದ್ಯಾರ್ಥಿಗಳು ಗೈರಾಗಿದ್ದರು. ಮತ್ತು ಜು.೩ರಂದು ತೃತೀಯ ಭಾಷೆ ಪರೀಕ್ಷೆಗೆ ೪,೮೨೧ ವಿದ್ಯಾರ್ಥಿಗಳ ಪೈಕಿ ೬೨ ವಿದ್ಯಾರ್ಥಿಗಳು ಗೈರಾಗಿದ್ದರು. ಆದರೆ ಗಡಿ ಭಾಗದಿಂದ ಬರುವ ಎಲ್ಲಾ ವಿದ್ಯಾರ್ಥಿಗಳು ಎಲ್ಲಾ ದಿನವೂ ಪರೀಕ್ಷೆಗೆ ಹಾಜರಾಗಿದ್ದರು.

೧೨ ಕೇಂದ್ರಗಳಲ್ಲಿ ಪರೀಕ್ಷೆ : ಪುತ್ತೂರು ಕಡಬ ಉಭಯ ತಾಲೂಕಿನ ೧೨ ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆದಿದ್ದು, ಕೊಂಬೆಟ್ಟು ಸರಕಾರಿ ಪದವಿ ಪೂರ್ವ ಕಾಲೇಜು, ಸಂತ ಫಿಲೋಮಿನಾ ಪ್ರೌಢ ಶಾಲೆ ದರ್ಬೆ, ಸರಕಾರಿ ಪದವಿ ಪೂರ್ವ ಕಾಲೇಜು ಉಪ್ಪಿನಂಗಡಿ, ಸೈಂಟ್ ವಿಕ್ಟರ್‍ಸ್ ಪುತ್ತೂರು, ಸರಕಾರಿ ಪ್ರೌಢ ಶಾಲೆ ಕಡಬ, ಸೈಂಟ್ ಜಾರ್ಜ್ ಪ್ರೌಢ ಶಾಲೆ ನೆಲ್ಯಾಡಿ, ರಾಮಕುಂಜೇಶ್ವರ ಪ್ರೌಢ ಶಾಲೆ ರಾಮಕುಂಜ, ಕರ್ನಾಟಕ ಪಬ್ಲಿಕ್ ಸ್ಕೂಲ್ ಕುಂಬ್ರ, ಕ್ನಾನಾಯ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆ ಕಡಬ, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲ, ವಿದ್ಯಾರಶ್ಮಿ ಆಂಗ್ಲ ಮಾಧ್ಯಮ ಶಾಲೆ ಸವಣೂರು, ಶ್ರೀ ಗಜಾನನ ಆಂಗ್ಲ ಮಾಧ್ಯಮ ಶಾಲೆ ಈಶ್ವರಮಂಗಲ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆದಿತ್ತು. ಜೊತೆಗೆ ಉಪ್ಪಿನಂಗಡಿ ಸೈಂಟ್ ಮೇರಿಸ್ ಆಂಗ್ಲ ಮಾಧ್ಯಮ ಶಾಲೆಯನ್ನು ಉಪಕೇಂದ್ರ ಹಾಗೂ ಸುದಾನ ವಸತಿಯುತ ಶಾಲೆ ನೆಹರುನಗರ, ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ತೆಂಕಿಲ ಹಾಗೂ ಕಡಬ ಸೈಂಟ್ ಆನ್ಸ್ ಆಂಗ್ಲ ಮಾಧ್ಯಮ ಶಾಲೆಯನ್ನು ಹೆಚ್ಚುವರಿ ಕೇಂದ್ರಗಳಾಗಿ ಕಾಯ್ದಿರಿಸಲಾಗಿತ್ತು. ಪ್ರತಿ ಪರೀಕ್ಷಾ ಕೇಂದ್ರಗಳಲ್ಲಿಯೂ ಒಂದು ವಿಶ್ರಾಂತಿ ಕೊಠಡಿ. ಶಾರೀರಿಕ ತೊಂದರೆಗೆ ಒಳಗಾದ ವಿದ್ಯಾರ್ಥಿಗಳಿಗೆ ಆವಶ್ಯ ಬಿದ್ದರೆ ಪ್ರತ್ಯೇಕವಾಗಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿತ್ತು. ಪರೀಕ್ಷಾ ಕೇಂದ್ರಕ್ಕೆ ನಿಯೋಜಿಸಲ್ಪಟ್ಟ ೩೫೬ ಸಿಬಂದಿಗಳು ಮತ್ತು ಸ್ಕೌಟ್ಸ್ ಮತ್ತು ಗೈಡ್ಸ್‌ನವು ಹಾಜರಾತಿ ಪಡೆದಿದ್ದರು.

ಪೊಲೀಸ್ ಬಂದೋಬಸ್ತ್:
ಪರೀಕ್ಷೆಯನ್ನು ಸುಸೂತ್ರವಾಗಿ ನಡೆಸುವ ನಿಟ್ಟಿನಲ್ಲಿ ಪರೀಕ್ಷಾ ಕೇಂದ್ರದ 200 ಮೀಟರ್ ಆವರಣದಲ್ಲಿ ೧೪೪ ಸೆಕ್ಷನ್ ಜಾರಿಯಲ್ಲಿದ್ದು, ೨೦೦ಮೀಟರ್ ವ್ಯಾಪ್ತಿಯಲ್ಲಿ ಜೆರಾಕ್ಸ್ ಅಂಗಡಿಗಳು ಇರಲಿಲ್ಲ. ಪೊಲೀಸ್ ಇಲಾಖೆ ಬ್ಯಾರಿಕೇಡ್ ಅಳವಡಿಸಿ ಭದ್ರತೆ ಒದಗಿಸಾಗಿತ್ತು. ಇವರೊಂದಿಗೆ ಸ್ಕೌಟ್ಸ್ ಮತ್ತು ಗೈಡ್ಸ್‌ನವರು ಸಹಕರಿಸಿದರು. ಅವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ವಿದ್ಯಾರ್ಥಿಗಳ ಪೋಷಕರು, ಹೆತ್ತವರು ಬಂದಲ್ಲಿ ಪರೀಕ್ಷಾ ಕೇಂದ್ರಕ್ಕೆ ಅವಕಾಶವಿರಲ್ಲಿಲ್ಲ.

ಗಡಿ ಭಾಗದಿಂದ ವಿದ್ಯಾರ್ಥಿಗಳು ಶೇ.೧೦೦ ಹಾಜರಾತಿ
ಗಡಿ ಭಾಗದಿಂದ ೧೨ ಶಾಲೆಗಳ ೭೦ ವಿದ್ಯಾರ್ಥಿಗಳು ಪರೀಕ್ಷೆ ಬರೆಯಬೇಕಾಗಿದ್ದು ಈ ಪೈಕಿ ೨ ಮಂದಿ ವಿದ್ಯಾರ್ಥಿಗಳು ಔಟ್‌ಮೈಗ್ರೇಟ್ ಆಗಿದ್ದು, ಉಳಿದ ೬೮ ಮಂದಿ ವಿದ್ಯಾರ್ಥಿಗಳು ಎಲ್ಲಾ ಪರೀಕ್ಷೆಗಳಿಗೂ ಹಾಜರಾಗಿದ್ದು, ಶೇ.೧೦೦ ಹಾಜರಾತಿಯಾಗಿದೆ. ಜು.೩ಕ್ಕೆ ತೃತೀಯ ಭಾಷೆ ಹಿಂದಿ/ಕನ್ನಡ/ ಇಂಗ್ಲಿಷ್ ಪರೀಕ್ಷೆಗೆ ೭೬ ಮಂದಿ ಹಾಜರಾಗಿದ್ದರು.

ಯಾವುದೇ ಒತ್ತಡ ಇಲ್ಲದೆ ಪರೀಕ್ಷೆ ಬರೆದಿದ್ದೇನೆ. ಕೊರೋನಾ ಭಯವನ್ನೇ ಹೋಗಲಾಡಿಸಿ ನಮ್ಮ ಸುರಕ್ಷತೆಗಾಗಿ ಸ್ಯಾನಿಟೈಸರ್, ಅಂತರ ಕಾಯ್ದು ಕೊಳ್ಳುವ ನಿಟ್ಟಿನಲ್ಲಿ ಶಿಕ್ಷಕರು ಸಹಕಾರ ನೀಡಿದ್ದಾರೆ. ಪರೀಕ್ಷೆಯೂ ಸುಲಭವಿತ್ತು. ಮಾಸ್ಕ್ ಧರಿಸಿ ಯಾವುದೇ ಸಮಸ್ಯೆಯೂ ಆಗಿಲ್ಲ – ಜಾನ್ನವಿ ಕೊಂಬೆಟ್ಟು ಕೇಂದ್ರದಲ್ಲಿ ಪರೀಕ್ಷೆ ಬರೆದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿನಿ

ಧನಾತ್ಮಕವಾಗಿ ನಡೆದ ಪರೀಕ್ಷೆ
ಆರಂಭದಿಂದ ಕೊನೆಯ ತನಕವೂ ಒಂದು ಸವಾಲಾಗಿದ್ದ ಪರೀಕ್ಷೆಗಳು ಉತ್ತಮವಾಗಿ ನಡೆದಿದೆ. ಎಲ್ಲೂ ಸಮಸ್ಯೆ ಬಂದಿಲ್ಲ. ಅತ್ಯಂತ ಯಶಸ್ವಿಯಾಗಿ ಪರೀಕ್ಷೆ ಮುಗಿದಿರುವುದು ಖುಷಿಯ ವಿಚಾರ. ಅದಕ್ಕೆ ಪೂರಕವಾಗಿ ಎಲ್ಲಾ ಕಡೆ ಅಚ್ಚುಕಟ್ಟಾದ ವ್ಯವಸ್ಥೆ ಮಾಡಲಾಗಿತ್ತು. ಇದಕ್ಕೆ ಸಾಕಷ್ಟು ಬೆಂಬಲವೂ ಸಿಕ್ಕಿದೆ. ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳು ಆರಂಭದಿಂದ ನಮ್ಮ ಜೊತೆ ಸಹಕಾರ ನೀಡಿದ್ದಾರೆ. ಪರೀಕ್ಷೆ ಆರಂಭದಿಂದ ಕೊನೆಯ ತನಕ ಯಾರೊಬ್ಬ ಪೋಷಕರು ಪರೀಕ್ಷಾ ಕೇಂದ್ರದ ಆವರಣಕ್ಕೆ ಬಾರದೆ ಸಹಕಾರ ನೀಡಿದ್ದಾರೆ. ಇದರ ಜೊತೆಗೆ ಶಿಕ್ಷಕರು ತಮ್ಮ ಸಮಯಪ್ರಜ್ಞೆಯಿಂದ ಉತ್ತಮ ರೀತಿಯಲ್ಲಿ ಪರೀಕ್ಷಾ ಸಿದ್ದತೆ ನಡೆಸಿದ್ದಾರೆ. ಸ್ಕೌಟ್ಸ್ ಮತ್ತು ಗೈಡ್ಸ್, ಆರಕ್ಷಕರು, ಆರೋಗ್ಯ ಇಲಾಖೆಯವರು, ಮಾಧ್ಯಮದವರು ಉತ್ತಮ ಸಹಕಾರ ನೀಡುವ ಮೂಲಕ ಧನಾತ್ಮವಾಗಿ ಪರೀಕ್ಷೆ ನಡೆದಿದೆ – ಸಿ.ಲೋಕೇಶ್ ಶಿಕ್ಷಣಾಧಿಕಾರಿ ಪುತ್ತೂರು

ಶಿಕ್ಷಣ ಇಲಾಖೆಯಿಂದ ಉತ್ತಮ ವ್ಯವಸ್ಥೆ:
ಹೆತ್ತವರಿಗೆ ಮತ್ತು ಮಕ್ಕಳಿಗೆ ಗೊಂದಲದಲ್ಲಿದ್ದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಇವತ್ತು ಯಶಸ್ವಿಯಾಗಿ ಪೂರ್ಣಗೊಂಡಿದೆ. ಇದಕ್ಕೆ ಶಿಕ್ಷಣ ಇಲಾಖೆ ತುಂಬಾ ಮುತುವರ್ಜಿ ವಹಿಸಿ ಉತ್ತಮ ವ್ಯವಸ್ಥೆ ಕಲ್ಪಿಸಲಾಗಿತ್ತು. ನನ್ನ ಮಗ ಬೆಟ್ಟಂಪಾಡಿ ಪ್ರಿಯದರ್ಶಿನಿ ಶಾಲೆಯಲ್ಲಿ ಓದುತ್ತಿದ್ದು, ಆತನಿಗೆ ಪರೀಕ್ಷಾ ಕೇಂದ್ರವಾಗಿ ಕೊಂಬೆಟ್ಟು ಜ್ಯೂನಿಯರ್ ಕಾಲೇಜಿಗೆ ಬರಬೇಕಾಗಿದ್ದು, ನಾನು ಪ್ರತಿ ದಿನ ಮಗನನ್ನು ಪರೀಕ್ಷಾ ಕೇಂದ್ರಕ್ಕೆ ಕರೆದುಕೊಂಡು ಬಂದು ಹೋಗುತ್ತಿದ್ದೆ. ಇಲ್ಲಿಯ ವ್ಯವಸ್ಥೆ ನೋಡಿ ತುಂಬಾ ಸಂತೋಷ ಆಗಿದೆ. ಯಾವ ವಿದ್ಯಾರ್ಥಿ ಬಂದಿದ್ದಾನೆ ಮತ್ತು ಬಾರದ ವಿದ್ಯಾರ್ಥಿಗಳನ್ನು ಗಮನ ಹರಿಸಿದ್ದಾರೆ. ಕೊಠಡಿಯಲ್ಲಿ ಆಗಾಗ ಸ್ಯಾನಿಟೈಸರ್ ಮಕ್ಕಳ ಆರೋಗ್ಯದ ಬಗ್ಗೆ ತುಂಬಾ ಕಾಳಜಿ ವಹಿಸಿದ್ದಾರೆ – ಕೃಪಾ ಶಂಕರ್, ನ್ಯಾಯವಾದಿ ಪುತ್ತೂರು

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.