ಬೆಂಗಳೂರು: ಕೊರೋನಾ ಸೋಂಕಿನ ಹಿನ್ನೆಲೆಯಲ್ಲಿ ಪುತ್ತೂರಿನ ಡಾ. ಗಿರಿಧರ್ ಕಜೆ ಅವರು ರಾಜ್ಯ ಸರಕಾರಕ್ಕೆ ಸೂಚಿಸಿದ್ದ ಆಯುರ್ವೇದ ಔಷಧಿ ಯಶಸ್ವಿಯಾಗಿದೆ. ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದವರೂ ಸೇರಿದಂತೆ 10 ಮಂದಿ ಕೊರೋನಾ ಸೋಂಕಿತರು ಆಯುರ್ವೇದ ಮಾತ್ರೆಗಳನ್ನು ಸೇವಿಸಿ ಗುಣಮುಖರಾಗಿದ್ದಾರೆ ಎಂದು ಹೇಳಲಾಗಿದೆ.
ವಿಶ್ವಾದ್ಯಂತ ಹಲವಾರು ಸಂಸ್ಥೆಗಳು ಕೊರೋನಾಗೆ ಔಷಧಿ, ಲಸಿಕೆ ಕಂಡುಹಿಡಿಯಲು ಶತಪ್ರಯತ್ನ ನಡೆಸುತ್ತಿರುವ ನಡುವೆಯೇ ಗಿರಿಧರ್ ಕಜೆ ಅವರು ನೀಡಿರುವ ಔಷಧಿ ಯಶಸ್ವಿಯಾಗಿದೆ. ಇದು ಕರ್ನಾಟಕ ಮಾತ್ರವಲ್ಲ ದೇಶಕ್ಕೆ ಹೆಮ್ಮೆಯ ವಿಚಾರ ಎನ್ನಬಹುದು.

ಪ್ರಯೋಗ ಯಶಸ್ವಿಯಾದ ಹಿನ್ನೆಲೆಯಲ್ಲಿ ಈ ಆಯುರ್ವೇದ ಚಿಕಿತ್ಸಾ ವಿಧಾನವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ವಿಧಾನ ಕುರಿತು ರಾಜೀವ್ ಗಾಂಧಿ ಆರೋಗ್ಯ ವಿವಿ ಕುಲಪತಿಗೆ ವರದಿ ನೀಡಲು ಸೂಚಿಸಲಾಗಿದೆ. ಈ ಬಗ್ಗೆ ಮಾಹಿತಿ ನೀಡಿದ ಡಾ. ಗಿರಿಧರ್ ಕಜೆ, ವಿಕ್ಟೋರಿಯಾ ಆಸ್ಪತ್ರೆಯಲ್ಲಿ 23ರಿಂದ 65 ವರ್ಷದೊಳಗಿನ 10 ಮಂದಿ ಕೊರೋನಾ ಸೋಂಕಿತರನ್ನು ಆಯುರ್ವೇದ ಚಿಕಿತ್ಸೆಗೆ ಒಳಪಡಿಸಲಾಗಿತ್ತು. ಇವರಲ್ಲಿ ಮಧುಮೇಹ, ರಕ್ತದೊತ್ತಡ, ಕ್ಷಯರೋಗ ಸಮಸ್ಯೆಯಿಂದ ಬಳಲುತ್ತಿದ್ದವರೂ ಇದ್ದರು. ಜತೆಗೆ ಎಲ್ಲರಿಗೂ ಸೋಂಕು ಲಕ್ಷಣಗಳಿದ್ದವು. ನಿತ್ಯ ಸೋಂಕಿತರಿಗೆ ನೀಡುವ ಔಷಧಗಳ ಜತೆಗೆ ಇಂತಿಷ್ಟು ಆಯುರ್ವೇದ ಮಾತ್ರೆಗಳನ್ನು ನೀಡಲಾಗಿತ್ತು. 2 ರಿಂದ 4 ದಿನಗಳಲ್ಲಿ ಸೋಂಕು ಲಕ್ಷಣ ಕಡಿಮೆಯಾಯಿತು. 9 ದಿನದಲ್ಲಿ ಎಲ್ಲರೂ ಗುಣಮುಖರಾದರು. ಒಬ್ಬರಿಗೆ ನೀಡುವ ಮಾತ್ರೆಗೆ ಕನಿಷ್ಠ 60 ರೂ. ನಿಂದ ಗರಿಷ್ಠ 180 ರೂ.ನಷ್ಟು ಖರ್ಚಾಗುತ್ತದೆ ಎಂದರು.
ಇನ್ನು ಮುಂದಿನ ಹಂತದಲ್ಲಿ ಹೆಚ್ಚಿನ ಸೋಂಕಿತರಿಗೆ ಮತ್ತು ಮುಂಜಾಗ್ರತಾ ದೃಷ್ಟಿಯಿಂದ ಸೋಂಕಿತ ಪ್ರಾಥಮಿಕ, ದ್ವಿತೀಯ ಸಂಪರ್ಕಿತರಿಗೆ ಈ ಔಷಧ ನೀಡಬಹುದು. ಈ ಕುರಿತು ಸರ್ಕಾರ ತೀರ್ಮಾನಕೈಗೊಳ್ಳಲಿದೆ ಎಂದರು.
ಜೂ.7 ರಿಂದ 25 ರವರೆಗೂ ಈ ಪ್ರಯೋಗ ನಡೆದಿದೆ. 3 ರಿಂದ 9 ದಿನಗಳಲ್ಲಿ ಎಲ್ಲಾ 10 ಸೋಂಕಿತರು ಗುಣ ಮುಖರಾಗಿದ್ದು, ಅಂತಿಮವಾಗಿ ನಡೆಸಿದ ಸೋಂಕು ಪರೀಕ್ಷೆಯಲ್ಲಿ ವರದಿ ನೆಗೆಟಿವ್ ಬಂದಿದೆ.