Breaking News

ಎಂ. ಫ್ರೆಂಡ್ಸ್‌ನ `ಕಾರುಣ್ಯ’ದ ನೋಟ | 166 ಅನಿವಾಸಿಗಳಿಗೆ ಚಾರ್ಟರ್ ವಿಮಾನದಲ್ಲಿ ತಾಯ್ನಾಡಿಗೆ ಬರಲು ವ್ಯವಸ್ಥೆ

Puttur_Advt_NewsUnder_1
Puttur_Advt_NewsUnder_1

✍️ಇಬ್ರಾಹಿಂ ಖಲೀಲ್ ಪುತ್ತೂರು

ಕೋವಿಡ್ ವಾರಿಯರ್ಸ್ ಗ್ರೂಪ್: ದುಬೈಯಲ್ಲಿ ಹನೀಫ್ ಪುತ್ತೂರಿನವರ ಮೇಲುಸ್ತುವಾರಿ
  • ಕಳೆದ 7 ವರ್ಷಗಳಿಂದ ಜನರಿಗೋಸ್ಕರ ಮಿಡಿದ ಸಾಮಾಜಿಕ ಸಂಘಟನೆ
  • ವಿವಿಧ ಕ್ಷೇತ್ರದಲ್ಲಿರುವವರ ಸಮಾಜಕ್ಕಾಗಿ ನಿಸ್ವಾರ್ಥ ಸೇವೆ
  • ಲಾಕ್‌ಡೌನ್‌ನಿಂದ ದೇಶ ವಿದೇಶದಲ್ಲಿ ಸಿಲುಕಿಕೊಂಡವರಿಗೆ ನೆರವು

ಪುತ್ತೂರು: ಜಿಲ್ಲೆಯ ಸಮಾನ ಮನಸ್ಕರಿಂದ ಕಟ್ಟಿದ ಎಂ. ಫ್ರೆಂಡ್ಸ್ ಕಳೆದ ೭ ವರ್ಷಗಳಿಂದ ಸಂಕಷ್ಟದಲ್ಲಿರುವ ಅರ್ಹರನ್ನು ಗುರುತಿಸಿ ಅವರ ಕಣ್ಣೀರನ್ನು ಒರೆಸುತ್ತಾ ಸಾಗಿ ಬಂದಿದೆ. ಎಂ. ಫ್ರೆಂಡ್ಸ್ ಅಂದರೆ `ಮರ್ಸಿ ಫ್ರೆಂಡ್ಸ್’ (ಕಾರುಣ್ಯದ ಗೆಳೆಯರು) ಎಂದರ್ಥ. ಈ ಸಂಘಟನೆಯಲ್ಲಿ 18 ಅನಿವಾಸಿ ಭಾರತೀಯರನ್ನೊಳಗೊಂಡ ಒಟ್ಟು 55 ಮಂದಿ ಸದಸ್ಯರಿದ್ದು, ಸಮಾಜದ ಬಗ್ಗೆ ಕಾಳಜಿಯುಳ್ಳ ಬಡಜನರ ಸೇವೆಗಾಗಿ ಪಣತೊಟ್ಟಿರುವ ಈ ತಂಡ ಕಿರಿಯರಿಂದ ಹಿಡಿದು ಹಿರಿಯವರೆಗೆ ಎಲ್ಲಾ ವಯೋಮಾನದವರನ್ನು ಒಳಗೊಂಡ ವೈದ್ಯರು, ಇಂಜಿನಿಯರ್‌ಗಳು, ವಕೀಲರು, ಪತ್ರಕರ್ತರು, ಉದ್ಯಮಿಗಳು, ಪೊಲೀಸ್ ಅಧಿಕಾರಿಗಳು, ಸಮಾಜ ಸೇವಕರು ಹೀಗೆ ವಿವಿಧ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವವರು ತನ್ನ ಸಮಯವನ್ನು ಕಾರುಣ್ಯ ಸೇವೆಗೆ ಮೀಸಲಿಟ್ಟಿದ್ದಾರೆ. 2013ರ ಜನವರಿ 23ರಂದು ವಾಟ್ಸಾಪ್ ತಾಣದಲ್ಲಿ ಸ್ಥಾಪನೆಗೊಂಡ ಎಂ.ಫ್ರೆಂಡ್ಸ್ ಬಡರೋಗಿಗಳ ಉಪಚಾರ, ಆಸ್ಪತ್ರೆ ಚಿಕಿತ್ಸೆ ಶುಲ್ಕ ಪಾವತಿ, ವಿಧವೆಯರಿಗೆ ಮಾಸಿಕ ಆಹಾರ ಸಾಮಾಗ್ರಿ ವಿತರಣೆ, ಟಾಯ್ಲೆಟ್ ನಿರ್ಮಾಣ, ಮನೆ ರಿಪೇರಿ, ಹೆಲ್ತ್ ಕ್ಯಾಂಪ್, ಬ್ಲಡ್ ಡೋನರ್‍ಸ್ ಗ್ರೂಪ್ ಮುಂತಾದ ಹಲವು ಸಮಾಜ ಸೇವೆಯನ್ನು ಪ್ರಸ್ತುತ ಮಾಡುತ್ತಲೇ ಬರುತ್ತಿದೆ. ಇದೀಗ ಗಲ್ಫ್ ರಾಷ್ಟ್ರ ದುಬೈಯಿಂದ ಅನಿವಾಸಿ ಭಾರತೀಯರಿಗೆ ಬಾಡಿಗೆ ವಿಮಾನದಲ್ಲಿ ತಾಯ್ನಾಡಿಗೆ ತೆರಳಲು ಮೈ ಕಮ್ಯೂನಿಟಿ ಫೌಂಡೇಶನ್ ಜೊತೆಗೂಡಿ ವ್ಯವಸ್ಥೆ ಮಾಡುವುದರೊಂದಿಗೆ ಸಂಕಷ್ಟದಲ್ಲಿ ಸಿಲುಕಿದ ಭಾರತೀಯ ಅನಿವಾಸಿಗಳಿಗೆ ಅಪತ್ಬಾಂದವರಾಗಿ ಟ್ರಸ್ಟ್ ಆಸರೆಯಾಗಿದೆ.

ಮಂಗಳೂರಿಗೆ ಬಂದು ಇಳಿದ ಬಾಡಿಗೆ ವಿಮಾನ

ದುಬೈಯಿಂದ ಬಾಡಿಗೆ ಫ್ಲೈಟ್- 166 ಮಂದಿ ಅಂತತ್ರ ಪ್ರಯಾಣಿಕರು ಮಂಗಳೂರಿಗೆ: ಮಂಗಳೂರಿನ ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಮತ್ತು ಮೈ ಕಮ್ಯೂನಿಟಿ ಫೌಂಡೇಶನ್‌ನ ನೇತೃತ್ವದಲ್ಲಿ ಅನಿವಾಸಿಗಳನ್ನು ಚಾರ್ಟರ್ ವಿಮಾನದ ಮೂಲಕ ತಾಯ್ನಾಡಿಗೆ ಕರೆ ತರುವ ವ್ಯವಸ್ಥೆಯ ಮಹತ್ವದ ಕಾರ್ಯಕ್ಕೆ ಸಾರ್ವಜನಿಕ ಮಟ್ಟದಲ್ಲಿ ಮೆಚ್ಚುಗೆಯನ್ನು ಗಿಟ್ಟಿಸಿಕೊಂಡಿದೆ. ಜೂ.23ರಂದು ಮಧ್ಯಾಹ್ನ 2 ಗಂಟೆಗೆ ದುಬೈ ವಿಮಾನ ನಿಲ್ದಾಣ ಟರ್ಮಿನಲ್ 2ರಿಂದ ಮಂಗಳೂರಿಗೆ ಹೊರಟ ‘ಫ್ಲೈ ದುಬೈ’ ಎಫ್ ಝೆಡ್ 4617 ವಿಮಾನವು ಜೂ.23ರಂದು ಸಂಜೆ 7.22ಕ್ಕೆ ಮಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಲುಪಿತ್ತು. 191 ಪ್ರಯಾಣಿಕರನ್ನು ಹೊತ್ತುಕೊಂಡು ಬರಬೇಕಾಗಿದ್ದ ವಿಮಾನವು ದುಬೈ ನಿಲ್ದಾಣದಲ್ಲಿ ತಾಂತ್ರಿಕ ಆಡಚಣೆಯಿಂದಾಗಿ 25 ಸದಸ್ಯರನ್ನು ಕೈಬಿಡಲಾಯಿತು. ಇದರಲ್ಲಿ ಪುರುಷರು 128 ಮಂದಿ ಹಾಗೂ 38 ಮಹಿಳೆಯರಿದ್ದರು, ಒಟ್ಟು 166 ಸದಸ್ಯರು ಮಂಗಳೂರು ತಲುಪಿದ್ದಾರೆ. ವಿಮಾನದಲ್ಲಿ ಗರ್ಭಿಣಿಯರು, ವಯಸ್ಕರು, ಮಕ್ಕಳು, ಆನಾರೋಗ್ಯ ಪೀಡಿತರು, ಅತಂತ್ರ ಕಾರ್ಮಿಕರು ಇದ್ದರು. ಮಂಗಳೂರಿನಲ್ಲಿ ಅಂತರಾಷ್ಟ್ರೀಯ ಪ್ರಯಾಣಿಕರ ನೋಡೆಲ್ ಆಧಿಕಾರಿ ಡಾ. ಯತೀಶ್ ಉಳ್ಳಾಲ್ ಸಹಿತ ಎಂ.ಫ್ರೆಂಡ್ಸ್, ಮೈ ಕಮ್ಯೂನಿಟಿ ಫೌಂಡೇಶನ್ ಸದಸ್ಯರು ಬರಮಾಡಿಕೊಂಡರು. ಅಲ್ಲದೇ ಖಾಸಗಿ ಹೊಟೇಲ್‌ವೊಂದರಲ್ಲಿ ಕ್ವಾರೆಂಟೈನ್ ವ್ಯವಸ್ಥೆ ಮಾಡಲಾಗಿದ್ದು, ಎಲ್ಲಾ ರೀತಿಯ ಸೂಕ್ತ ಚಿಕಿತ್ಸೆ, ಆಹಾರದ ಖರ್ಚನ್ನು ಕೂಡ ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಮತ್ತು ಮೈ ಕಮ್ಯೂನಿಟಿ ಫೌಂಡೇಶನ್ ಭರಿಸಿದೆ ಎಂದು ಮಂಗಳೂರು ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ರಶೀದ್ ವಿಟ್ಲ ಹಾಗೂ ಮೈ ಕಮ್ಯೂನಿಟಿ ಫೌಂಡೇಶನ್ ಮುಖ್ಯಸ್ಥರಾದ ಅಶ್ರಫ್ ಅಬ್ಬಾಸ್ ತಿಳಿಸಿದರು. ವಿಮಾನಸೇವೆಗಾಗಿ ವಿಶೇಷವಾಗಿ ಹನೀಫ್ ಪುತ್ತೂರು, ನವಾಝ್ ಕಾನತ್ತಡ್ಕ, ಹನೀಫ್ ಕುದ್ದುಪದವು, ಆಶಿಕ್ ಕುಕ್ಕಾಜೆ, ಮಹಮ್ಮದ್ ಟೋಪ್ಕೋ, ತುಫೈಲ್ ಅಹ್ಮದ್ ಹಗಲಿರುಳು ಶ್ರಮಿಸಿದ್ದಾರೆ.

ಸುದ್ದಿ ಸಮೂಹ ಸಂಸ್ಥೆಯ ತಾಂತ್ರಿಕ ವಿಭಾಗದ ಮುಖ್ಯ ಸ್ಥರಾಗಿ ಕಳೆದ ಹದಿನೈದು ವರ್ಷದಿಂದ ಸೇವೆ ಸಲ್ಲಿಸುತ್ತಿರುವ ಹನೀಫ್ ಪುತ್ತೂರು ರವರು ಸದ್ಯ ದುಬೈ ಮಹಮ್ಮದ್ ಬಿನ್ ರಾಶಿದ್ ಬಾಹ್ಯಾಕಾಶ ಕೇಂದ್ರದಲ್ಲಿ ಹಿರಿಯ ಸಾಫ್ಟ್‌ವೇರ್‌ಇಂಜಿನಿಯರ್ ಆಗಿದ್ದಾರೆ

ಲಾಕ್‌ಡೌನ್‌ನಲ್ಲೂ `ಮರ್ಸಿ ಫ್ರೆಂಡ್ಸ್’ ಗಳ ಜನರೊಂದಿಗೆ ಮಿಡಿತ: ಕೋವಿಡ್ 19 ಮಹಾಮಾರಿಯನ್ನು ಹೋಗಲಾಡಿಸಲು ಸರಕಾರ ಲಾಕ್‌ಡೌನ್‌ನಿಂದಾಗಿ ಬಡವರಿಗೆ ಸಂಕಷ್ಟ ಸಿಲುಕಿಕೊಂಡವರಿಗೆ ಹಲವು ರೀತಿಯಲ್ಲಿ ಸಹಾಯಹಸ್ತವನ್ನು ಎಂ.ಫ್ರೆಂಡ್ಸ್ ನೀಡಿದೆ. ದ.ಕ. ಜಿಲ್ಲೆ ಮತ್ತು ಹಾಸನ ಜಿಲ್ಲೆಗಳಲ್ಲಿ ಸುಮಾರು ೮೦೦ಕ್ಕೂ ಹೆಚ್ಚು ಕುಟುಂಬಗಳಿಗೆ ಕೊರೋನಾ ರೇಷನ್ ಪೂರೈಕೆ, ತೀರಾ ಬಡ ಕುಟುಂಬದ 75 ಕುಟುಂಬಕ್ಕೆ ಮಾಸಿಕ ಔಷಧಿ ವಿತರಣೆ, ಸುಮಾರು ೭೫೦ಕ್ಕೂ ಮಿಕ್ಕಿ ಕುಟುಂಬಗಳಿಗೆ ರಂಝ್ಹಾನ್ ಕಿಟ್ ಪೂರೈಕೆ, ಆರಕ್ಷಕ ಸಿಬ್ಬಂದಿಗಳಿಗೆ, ವೆನ್ಲಾಕ್ ಆಸ್ಪತ್ರೆಗೆ, ಲೇಡಿಗೋಶನ್ ಆಸ್ಪತ್ರೆಗೆ ಸುರಕ್ಷಿತ ನಿಟ್ಟಿನಲ್ಲಿ ಮಾಸ್ಕ್, ಸ್ಯಾನಿಟೈಸರ್ ವಿತರಿಸಲಾಗಿದೆ. ಅಲ್ಲದೇ ಈ ವರ್ಷದ ಈದುಲ್ ಫಿತರ್ ಹಬ್ಬಕ್ಕೆ ಹೊಸ ವಸ್ತ್ರ ಖರೀದಿ ಮಾಡದೇ ಅದರ ಮೊತ್ತವನ್ನು ಬಡ/ ಅಶಕ್ತ ರೋಗಿಗಳಿಗೆ ಬೇಕಾದ ಔಷಧಿಯನ್ನು ಪೊರೈಸಲು ಟ್ರಸ್ಟ್ ಸದಸ್ಯರ ನಿರ್ಣಯ ಜಿಲ್ಲೆಯಲ್ಲೊಂದು ಮಾನವೀಯತೆ ಸಂದೇಶಕ್ಕೆ ಸಾಕ್ಷಿಯಾಯಿತು ಎಂದು ಎಂ.ಫ್ರೆಂಡ್ಸ್ ಅಧ್ಯಕ್ಷರಾದ ಮಹಮ್ಮದ್ ಹನೀಫ್ ಹಾಜಿ ಗೋಳ್ತಮಜಲು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ವೆನ್‌ ಲಾಕ್‌ ನಲ್ಲಿ ಆಹಾರದ ಪೂರೈಕೆ

ವೆನ್ಲಾಕ್‌ನಲ್ಲಿ ದಿನನಿತ್ಯ ಆಹಾರದ ಪೂರೈಕೆ: ಮಂಗಳೂರಿನ 172 ವರ್ಷಗಳ ಇತಿಹಾಸವಿರುವ ಸರಕಾರಿ ವೆನ್ಲಾಕ್ ಆಸ್ಪತ್ರೆಯ ಒಳರೋಗಿಗಳ ಜೊತೆಗಾರರಿಗೆ ಪ್ರತಿ ದಿನ ರಾತ್ರಿ ಕಾರುಣ್ಯ ಯೋಜನೆಯಡಿ ಊಟ ಉಪಹಾರ ಒದಗಿಸುವುದು ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್‌ನ ಮಹತ್ವಾಕಾಂಕ್ಷಿ ಯೋಜನೆಯಗಳಲ್ಲೊಂದಾಗಿದೆ. ದ.ಕ ಜಿಲ್ಲೆಯಲ್ಲದೇ ಸಮೀಪದ ಜಿಲ್ಲೆಗಳಾದ ಉಡುಪಿ, ಚಿತ್ರದುರ್ಗ, ಹಾಸನ, ಚಿಕ್ಕಮಗಳೂರು, ಕೊಡಗು, ಉತ್ತರ ಕನ್ನಡ, ದಾವಣಗೆರೆ ಬಿಜಾಪುರ, ಬಾಗಲಕೋಟೆ ಹಾಗೂ ಕೇರಳದ ಕಾಸರಗೋಡು ಮತ್ತಿತರ ಜಿಲ್ಲೆಗಳಿಂದ ವಾರ್ಷಿಕ ಮೂರು ಲಕ್ಷ ಹೊರ ರೋಗಿಗಳು, 30 ಸಾವಿರ ಒಳ ರೋಗಿಗಳು ಇಲ್ಲಿಗೆ ಬಂದು ಚಿಕಿತ್ಸೆ ಪಡೆಯುತ್ತಿದ್ದರು, ಆದರೆ ರೋಗಿಗಳ ಆರೈಕೆಯನ್ನು ನೋಡಿಕೊಳ್ಳುವವರಿಗೆ ಆಹಾರದ ವ್ಯವಸ್ಥೆವಿಲ್ಲದ ಕಾರಣ ರೋಗಿಗಳಿಗೆ ನೀಡುವ ಆಹಾರವನ್ನೇ ಹಂಚಿ ತಿಂದು, ಅರ್ಧ ಹೊಟ್ಟೆಯಲ್ಲಿ ಮಲಗಬೇಕಾದ ಪರಿಸ್ಥಿತಿಯಾಗಿತ್ತು. ಇದನ್ನು ಮನಗಂಡ ಎಂ.ಫ್ರೆಂಡ್ಸ್ ಸದಸ್ಯರು ಕಳೆದ 3 ವರ್ಷಗಳಿಂದ ಪ್ರತಿದಿನ ಸಂಜೆ ೬ಗಂಟೆಯ ಹೊತ್ತಿಗೆ ಉಚಿತ ಆಹಾರ ವಿತರಣೆ ಮಾಡುತ್ತಿದ್ದಾರೆ. ಪ್ರತಿದಿನ ಸುಮಾರು 500ಕ್ಕೂ ಮಿಕ್ಕಿ ಮಂದಿಯ ಹಸಿವು ನೀಗಿಸುವ ಕೆಲಸ ಕಾರುಣ್ಯ ಯೋಜನೆ ಮೂಲಕ ನಡೆಯುತ್ತಿದೆ.

ಸಾಂತ್ವನ ಸೇವೆ- ವಿವಿಧ ಕಾರ್ಯಕ್ರಮ: ಎಂ. ಫ್ರೆಂಡ್ಸ್ ಪ್ರಾರಂಭದಿಂದ ಈ ತನಕ ಬಡವರ ಪಾಲಿಗೆ ಆಶಾಕಿರಣವಾಗಿ ಮೂಡಿದೆ. ಜಿಲ್ಲೆಯ ಮನೆಮನೆಗಳಿಗೆ ಭೇಟಿ ಕೊಟ್ಟು ಮೆಡಿಕಲ್ ಸರ್ವೇ ನಡೆಸಿ ಔಷಧಿ ಪೂರೈಕೆ, ಮೂಲಭೂತ ಸೌಕರ್ಯ ಮಾಡಲಾಗುತಿತ್ತು, ಅಲ್ಲದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಿಲ್ಲು ಕಟ್ಟಲು ಪ್ರಯಾಸಪಟ್ಟು ಡಿಸ್ಚಾರ್ಜ್ ಆದರೂ ಆಸ್ಪತ್ರೆಯಲ್ಲೇ ಬಾಕಿಯಾದ ನೂರಾರು ರೋಗಿಗಳಿಗೆ ಟ್ರಸ್ಟ್ ಅಭಯ ನೀಡಿದೆ. ಎಂಡೋಪೀಡಿತ ಸಂತ್ರಸ್ತರ ತುರ್ತು ಅಗತ್ಯದ ಸಹಾಯ, ವಿವಿಧೆಡೆ ಅನಾಥಾಲಯಗಳು, ನಿರಾಶ್ರಿತ ಕೇಂದ್ರಗಳಲ್ಲಿ ಈದ್ ಹಬ್ಬ, ಇಫ್ತಾರ್ ಕೂಟ ಮತ್ತು ಮಕ್ಕಳ ದತ್ತು ಸ್ವೀಕಾರ, ಮೆಡಿಕಲ್ ಕ್ಯಾಂಪ್, ಪುತ್ತೂರಿನಲ್ಲಿ ಕಿಡ್ನಿ ತಪಾಸಣೆ, ಕಿಡ್ನಿ ರೋಗದ ಕುರಿತು ಜನಜಾಗೃತಿ ಜಾಥಾ ಮತ್ತು ಮೆಗಾ ಕ್ಯಾಂಪ್, ನೇತ್ರ ತಪಾಸಣೆ ಶಿಬಿರ, ಭ್ರಷ್ಟಾಚಾರ ವಿರೋಧಿ ಆಂದೋಲನ ಕಾರ್ಯಕ್ರಮ, 25 ಬಡವರ ಮನೆಗಳಿಗೆ ನಿರಂತರ ಮಾಸಿಕ ರೇಶನ್, 3 ಮನೆಗಳ ನಿರ್ಮಾಣ, ಹಲವು ಮನೆಗಳ ದುರಸ್ತಿ, 3 ಬೊರ್‌ವೆಲ್, 32 ಶೌಚಾಲಯಗಳನ್ನು ನಿರ್ಮಿಸಿಕೊಟ್ಟಿದೆ. ಆರೋಗ್ಯದ ಬಗೆಗಿನ ಜಾಗೃತಿ ಮತ್ತು ಬಡ ರೋಗಿಗಳಿಗೆ ನೀಡುವ ಧನ ಸಹಾಯ, ಸೂಕ್ತ ಚಿಕಿತ್ಸೆಯನ್ನು ಕಲ್ಪಿಸುವುದೇ ಕಾರುಣ್ಯ ಯೋಜನೆಯ ಪ್ರಮುಖ ಉದ್ದೇಶ. ಬಡವರ ಅಶಕ್ತರ ಇತರ ಮೂಲಭೂತ ಸಮಸ್ಯೆಗಳಿಗೆ ಕೂಡಾ ಎಂ.ಫ್ರೆಂಡ್ಸ್‌ನ ಎಲ್ಲಾ ಸದಸ್ಯರು ಸ್ಪಂದಿಸುವ ಮೂಲಕ ಸೈ ಎನಿಸಿಕೊಂಡಿದ್ದಾರೆ.

ರಶೀದ್ ವಿಟ್ಲ

ಎಂ.ಫ್ರೆಂಡ್ಸ್ ತಂಡವನ್ನು 2013ರಲ್ಲಿ ವಾಟ್ಸಪ್ ಗ್ರೂಪ್ ಮೂಲಕ ಹುಟ್ಟು ಹಾಕುವಾಗ ಸಮಾಜಕ್ಕೆ ಈ ತಂಡ ಗಣನೀಯ ಸೇವೆ ಸಲ್ಲಿಸಬಹುದೆಂಬ ಕಲ್ಪನೆ ಇರಲಿಲ್ಲ. ಆದರೆ ತಂಡದ ೫೫ ಸಮಾನ ಮನಸ್ಕ ಸದಸ್ಯರ ಸಂಪೂರ್ಣ ಸಹಕಾರದಿಂದ ಕಳೆದ 7 ವರ್ಷಗಳಿಂದ ಸುಮಾರು 2 ಕೋಟಿ ರೂ.ಗಳ ಯೋಜನೆಯನ್ನು ಕಾರ್ಯಗತಗೊಳಿಸಿದ ಸಂತೃಪ್ತಿ ಇದೆ. ಕೊರೋನಾ ಸಂದರ್ಭ ಸಮಾಜಮುಖಿ ಕೆಲಸ ಮಾಡುವಾಗ ಹಲವಾರು ಎಡರು ತೊಡರುಗಳು ಎದುರಾಗಿವೆ. ಅದನ್ನೆಲ್ಲಾ ಸವಾಲಾಗಿ ಸ್ವೀಕರಿಸಿ ಎಂ.ಫ್ರೆಂಡ್ಸ್ ತಂಡದ ಸದಸ್ಯರು ಕೆಲಸ ಮಾಡಿದ್ದಾರೆ. ಕೋವಿಡ್ ಸಂದರ್ಭ ಮಂಗಳೂರಿನ ವೆನ್ಲಾಕ್ ಕೋವಿಡ್ ಆಸ್ಪತ್ರೆಗೆ ದಿನನಿತ್ಯ ರಾತ್ರಿಯ ಉಪಹಾರ, ಜೊತೆಗೆ ಲೇಡಿಗೋಶನ್, ಕೆಎಂಸಿ ಅತ್ತಾವರ ಮತ್ತು ಸ್ನೇಹದೀಪ್ ಸಂಸ್ಥೆಗೆ ನಿರಂತರ ಊಟದ ಪೂರೈಕೆ, ಸಾವಿರಾರು ಬಡ/ಅಶಕ್ತರ ಮನೆ ಮನೆ ಭೇಟಿ, ಸಾಂತ್ವಾನ, ರೇಶನ್, ಔಷಧಿ ವಿತರಣೆ, ಆಸ್ಪತ್ರೆಯ ಬಡರೋಗಿಗಳ ಬಿಲ್ ಗೆ ಸಹಾಯ, ದೇಶ-ವಿದೇಶದಲ್ಲಿ ಸಿಲುಕಿರುವ ಕರಾವಳಿಯ ಜನರಿಗಾಗಿ ಕೋವಿಡ್ ವಾರಿಯರ್ಸ್ ತಂಡದ ಮೂಲಕ ಕೆಲಸ, ಮೈ ಕಮ್ಯೂನಿಟಿ ಫೌಂಡೇಶನ್ ಜೊತೆಗೂಡಿ ದುಬೈಯಿಂದ ಮಂಗಳೂರಿಗೆ ವಿಶೇಷ ವಿಮಾನದ ವ್ಯವಸ್ಥೆ ಮೊದಲಾದವನ್ನು ಮಾಡಿರುವ ಆತ್ಮತೃಪ್ತಿ ಎಂ.ಫ್ರೆಂಡ್ಸ್ ತಂಡಕ್ಕಿದೆ. ಅತ್ಯಂತ ರಿಸ್ಕ್ ತೆಗೆದುಕೊಂಡು ಜಾಗರೂಕತೆಯಿಂದ ಕೆಲಸ ಮಾಡಿದ್ದೇವೆ. ಕೊರೋನಾ ಆದಷ್ಟು ಬೇಗ ಅಳಿಯಲಿ ಎಂಬ ಆಶಯ ನಮ್ಮದು ರಶೀದ್ ವಿಟ್ಲ, ಸ್ಥಾಪಕ ಹಾಗೂ ಪ್ರ.ಕಾರ್ಯದರ್ಶಿ ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು.   

ಹನೀಫ್ ಪುತ್ತೂರು

ದೂರದ ದುಬೈಯಲ್ಲಿದ್ದುಕೊಂಡು ಎಂ.ಫ್ರೆಂಡ್ಸ್ ತಂಡದೊಂದಿಗೆ ಕೆಲಸ ಮಾಡಿದ್ದೇನೆ. ಆನ್ಲೈನ್ ಮೂಲಕ ಸಮಸ್ಯೆಯಲ್ಲಿ ಸಿಲುಕಿದವರನ್ನು ಸಂಪರ್ಕಿಸಿ ಆಯಾಯ ಪ್ರದೇಶದ ಸ್ನೇಹಿತರು/ಸಮಾಜಸೇವಕರನ್ನು ಕಂಡು ಹಿಡಿದು ಪರಿಹಾರ ಒದಗಿಸಿದ್ದೇವೆ. ಚಾರ್ಟರ್ ವಿಮಾನ ಒದಗಿಸುವುದು ನಮಗೆ ದೊಡ್ಡ ಸವಾಲಾಗಿತ್ತು. ಮೈ ಕಮ್ಯೂನಿಟಿ ಫೌಂಡೇಶನ್ ಮುಖ್ಯಸ್ಥರು, ಎಂ.ಫ್ರೆಂಡ್ಸ್ ಸದಸ್ಯರಾದ ಅಶ್ರಫ್ ಅಬ್ಬಾಸ್ ಅವರ ಮುಂದಾಳತ್ವದಲ್ಲಿ ಸಮಸ್ಯೆಯಲ್ಲಿ ಸಿಲುಕಿರುವ ಅನಿವಾಸಿ ಕನ್ನಡಿಗರನ್ನು ತಾಯ್ನಾಡಿಗೆ ಮರಳಿಸಿದ್ದೇವೆ. ಎಂ.ಫ್ರೆಂಡ್ಸ್ ಕೋವಿಡ್ ವಾರಿಯರ್ಸ್ ತಂಡ ರಚಿಸಿ ಹನೀಫ್ ಹಾಜಿ, ರಶೀದ್ ವಿಟ್ಲ, ಹಾರಿಸ್ ಕಾನತ್ತಡ್ಕ, ಝುಬೈರ್ ವಿಟ್ಲ, ಆಶಿಕ್ ಕುಕ್ಕಾಜೆ, ಮುಸ್ತಫಾ ಇರುವೈಲು, ಹನೀಫ್ ಕುದ್ದುಪದವು ಅವರ ಮೂಲಕ ಬಹಳಷ್ಟು ಕೆಲಸ ಮಾಡಿದ್ದೇವೆ ಹನೀಫ್ ಪುತ್ತೂರು, ದುಬೈ ಎಂ.ಫ್ರೆಂಡ್ಸ್ ಎನ್ನಾರೈ ಟ್ರಸ್ಟಿ

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.