ಪುತ್ತೂರು: ಗ್ರಾ.ಪಂಗಳಲ್ಲಿ ಈ ಹಿಂದೆ ಅಧ್ಯಕ್ಷರ, ಉಪಾಧ್ಯಕ್ಷರ ಸದಸ್ಯರ ಎಂಬೆಲ್ಲಾ ಒತ್ತಡದ ನೆಪವಿತ್ತು. ಇವತ್ತು ಅಧಿಕಾರಿಗಳ ಕೈಯಲ್ಲಿ ಆಡಳಿತವಿದೆ. ನೀವೇ ನಿರ್ಧಾರ ಕೈಗೊಂಡು ರಸ್ತೆ ಬದಿಯಲ್ಲಿನ ಅನಧಿಕೃತ ಅಂಗಡಿಗಳನ್ನು ತೆರವು ಮಾಡಿ. ಆಗ ಪೇಟೆಯು ಕೂಡಾ ಒಂದು ಉತ್ತಮ ವ್ಯವಸ್ಥೆಯಾಗಿ ಬೆಳೆಯುತ್ತದೆ. ನೊಟೀಸ್ ರಹಿತ ಕಾರ್ಯಾಚರಣೆ ನಡೆಸಿ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.
ತಾ.ಪಂ ಸಾಮಾನ್ಯ ಸಭೆಯು ಜು.4ರಂದು ತಾಲೂಕು ಪಂಚಾಯತ್ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ಅವರ ಅಧ್ಯಕ್ಷತೆಯಲ್ಲಿ ತಾ.ಪಂ ಸಭಾಂಗಣದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಸಭೆಗೆ ಆಗಮಿಸಿದ ಶಾಸಕರು ಸದಸ್ಯರು ಸಭೆಯಲ್ಲಿ ಪ್ರಸ್ತಾಪಿಸಿದ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದರು. ಸದಸ್ಯ ಶಿವರಂಜನ್ ಅವರು ಮಾತನಾಡಿ ಪ್ರಸ್ತುತ ದಿನಗಳಲ್ಲಿ ಕೆಲವೊಂದು ವಿಚಾರಕ್ಕೆ ಸಂಬಂಧಿಸಿ ಬೀದಿ ಬದಿ ವ್ಯಾಪಾರ ನಡೆಸುವ ಸಂದರ್ಭ ಅಧಿಕಾರಿಗಳು ಅದನ್ನು ತೆರವು ಮಾಡಲು ಹೊರಟ್ಟಿದ್ದರು. ಆದರೆ ರಸ್ತೆ ಬದಿಯ ಅನಧಿಕೃತ ಅಂಗಡಿಗಳ ತೆರವಿಗೆ ಸಂಬಂಧಿಸಿ ಈ ಹಿಂದೆ ಸಭೆಯಲ್ಲಿ ಪ್ರಸ್ತಾಪಿಯೂ ಯಾವುದೇ ಕ್ರಮಕೈಗೊಳ್ಳದ ಅಧಿಕಾರಿಗಳು ಇದೀಗ ಹಠತ್ ಆಗಿ ಬೀದಿ ಬದಿ ವ್ಯಾಪಾರಿಗಳ ತೆರವಿಗೆ ಕಾರಣವೇನು. ಬೀದಿ ಬದಿ ವ್ಯಾಪಾರಿಗಳನ್ನು ತೆರವು ಮಾಡುವುದಾದರೆ ಈ ಹಿಂದೆ ಅನಧಿಕೃತ ಅಂಗಡಿಗಳನ್ನು ತೆರವುಗೊಳಿಸದೆ ಇರಲು ಕಾರಣವೇನು ಎಂದು ಸಭೆಯಲ್ಲಿ ಪ್ರಸ್ತಾಪಿಸಿದರು. ಧ್ವನಿಗೂಡಿಸಿದ ಶಾಸಕರು ರಸ್ತೆ ಬದಿಯಲ್ಲಿ ರಾತ್ರಿ ಬೆಳಗಾಗುವುದರೊಳಗೆ ಅಂಗಡಿಗಳು ಎದ್ದು ನಿಲ್ಲುತ್ತವೆ. ನಾನೆ ಅಕ್ರಮ ಕಟ್ಟಡವೊಂದಕ್ಕೆ ಸಂಬಂಧಿಸಿ ಎಂದು ದೂರು ನೀಡಿದ್ದೆ. ತಾಲೂಕಿನ ವಿವಿಧ ಕಡೆಗಳಲ್ಲಿ ಎನ್.ಒ.ಸಿ ಪಡೆದು ಕೊಳ್ಳದೆ ಅನಧಿಕೃತ ಅಂಗಡಿಗಳು ನಿರ್ಮಾಣ ಆಗುತ್ತಿದೆ. ನಮ್ಮ ಪಿಡಿಒಗಳ ಮತ್ತು ನಮ್ಮ ಅಲ್ಲಿನ ಅಧಿಕಾರಿಗಳ ಎಜೆಸ್ಟ್ಮೆಂಟ್ನಿಂದಾಗಿ ಇವತ್ತು ರಸ್ತೆ ಅಗಲೀಕರಣ ಮಾಡಲು ಆಗುವುದಿಲ್ಲ. ಯಾವುದೇ ಸಾರ್ವಜನಿಕ ಕೆಲಸ ಕಾರ್ಯ ಮಾಡಲು ಜಾಗ ಸಾಕಾಗುವುದಿಲ್ಲ. ಜಿ.ಪಂ, ಪಿಎನ್ಜಿಎಸ್ವೈ, ಪಿಡಬ್ಲ್ಯೂಡಿ ರಸ್ತೆಗಳು ಈ ರೀತಿ ಆಗಲು ಬಹುಶ ಅಲ್ಲಿಯ ಸ್ಥಳೀಯ ಆಡಳಿತ ಕಾರಣ ಎಂದ ಅವರು ಅಕ್ರಮ ಕಟ್ಟಡಗಳನ್ನು ಯಾವುದೇ ನೋಟೀಸ್ ನೀಡದೆ ತೆರವು ಮಾಡಬೆಕೆಂದು ಸೂಚಿಸಿದರು.
ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಭಂಡಾರಿ ಅವರು ಮಾತನಾಡಿ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಪರ್ಪುಂಜ ಬಳಿ ರಸ್ತೆ ಬದಿಯಲ್ಲಿ ಕಟ್ಟಡ ನಿರ್ಮಾಣ ಆಗುತ್ತಿದೆ. ಮಾಣಿ ಮೈಸೂರು ರಸ್ತೆ ರಾಷ್ಟ್ರೀಯ ಹೆದ್ದಾರಿ ಮೇಲ್ದರ್ಜೆಗೆ ಸೇರುವ ಮುಂದೆ ಅದಕ್ಕೆ ಅನುಮತಿ ಕೊಡಲಾಗಿತ್ತು. ಇದೀಗ ರಾಷ್ಟ್ರೀಯ ಹೆದ್ದಾರಿ ಆದ್ದರಿಂದ ರಸ್ತೆ ಮಾರ್ಜಿನ್ ಬಿಟ್ಟು ಕಟ್ಟಡ ನಿರ್ಮಾಣ ಮಾಡಬೇಕಾಗಿದೆ. ಹಾಗಾಗಿ ಕಟ್ಟಡಕ್ಕೆ ಸಂಬಂಧಪಟ್ಟವರಿಗೆ ನೋಟೀಸ್ ಮಾಡಲಾಗಿದೆ ಎಂದರು.
ಸದಸ್ಯೆ ದಿವ್ಯಾ ಪುರುಷೋತ್ತಮ ಅವರು ಮಾತನಾಡಿ ಕಬಕದಲ್ಲಿ ಈ ಹಿಂದೆ ಅಕ್ರಮ ಅಂಗಡಿಗಳ ತೆರವು ಕಾರ್ಯಾಚರಣೆ ನಡೆದಿತ್ತು. ಇದೀಗ ಲಾಕ್ಡೌನ್ ಸಮಯದಲ್ಲಿ ಮತ್ತೆ ಕೆಲವೊಂದು ಅಂಗಡಿಗಳು ತಲೆ ಎತ್ತಿವೆ ಎಂದು ಸಭೆಯಲ್ಲಿ ಪ್ರಸ್ತಾಪಿಸಿದರು. ತಾ.ಪಂ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಸ್ಥಾಯಿ ಸಮಿತಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ತಹಸೀಲ್ದಾರ್ ರಮೇಶ್ ಬಾಬು, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಭಂಡಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಭೆಯಲ್ಲಿ ಸದಸ್ಯರು ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.