- ಕಂಟೈನ್ಮೆಂಟ್ ಝೋನ್ಗಳಲ್ಲಿ ಜುಲೈ 31ರ ತನಕ ಲಾಕ್ಡೌನ್
- 4 ಭಾನುವಾರ ದೇವಾಲಯಗಳು ಬಂದ್
ಪುತ್ತೂರು: ಕೊರೋನಾ ಅಟ್ಟಹಾಸ ದಿನೇ ದಿನೇ ಹೆಚ್ಚಳವಾಗುತ್ತಿದ್ದು ಪುತ್ತೂರು, ಕಡಬ ಸೇರಿದಂತೆ ರಾಜ್ಯದೆಲ್ಲೆಡೆ ಸೋಂಕಿತರ ಸಂಖ್ಯೆ ದಿನೇ ದಿನೇ ಏರುತ್ತಿದೆ. ಕೊರೋನಾ ವೈರಸ್ ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ಈಗಾಗಲೇ ಜಾರಿಯಲ್ಲಿದ್ದ ಲಾಕ್ಡೌನ್ ನಿಯಮಗಳನ್ನು ಸಡಿಲಿಕೆ ಮಾಡಲಾಗಿದ್ದರೂ ಜು.5ರಿಂದ ಮುಂದಿನ ನಾಲ್ಕು ಭಾನುವಾರ ಕಾಲ ಪ್ರತಿ ಆದಿತ್ಯವಾರ ಸಂಪೂರ್ಣ ಲಾಕ್ಡೌನ್ಗೆ ಸರಕಾರ ಆದೇಶಿಸಿದೆ.ಜು.೪ರ ರಾತ್ರಿ ೮ ಗಂಟೆಯಿಂದಲೇ ಇದು ಜಾರಿಗೆ ಬಂದಿದ್ದು ಜು.೬ರ ಬೆಳಿಗ್ಗೆ ೫ ಗಂಟೆ ತನಕ ಸಂಪೂರ್ಣ ಲಾಕ್ಡೌನ್ ಜಾರಿಯಲ್ಲಿರುತ್ತದೆ.ಈ ಮಧ್ಯೆ, ಕೊರೋನಾರ್ಭಟ ಮುಂದುವರಿದಿರುವ ಹಿನ್ನಲೆಯಲ್ಲಿ ಕಂಟೈನ್ಮೆಂಟ್ ಝೋನ್ಗಳಲ್ಲಿ ಜುಲೈ ೩೧ರ ತನಕ ಸಂಪೂರ್ಣ ಲಾಕ್ಡೌನ್ ವಿಸ್ತರಣೆಗೊಳಿಸಲಾಗಿದೆ.
ಜು.೫ರಂದು ಜಿಲ್ಲೆಯಲ್ಲಿ ಸಂಪೂರ್ಣ ಲಾಕ್ಡೌನ್ ಇರುತ್ತದೆ.ಅಗತ್ಯ ವಸ್ತುಗಳಾದ ಹಾಲು, ದಿನಪತ್ರಿಕೆ, ಔಷಧಾಲಯ ಮತ್ತು ಆಸ್ಪತ್ರೆಗಳನ್ನು ಹೊರತುಪಡಿಸಿ ಉಳಿದೆಲ್ಲಾ ಸೇವೆಗಳು ಲಭ್ಯವಿರುವುದಿಲ್ಲ.ಜಿಲ್ಲೆಯಲ್ಲಿ ಕಳೆದ ವಾರದಿಂದ ಕೋವಿಡ್ ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಜನರು ಆತಂಕಕ್ಕೆ ಒಳಗಾಗದೇ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ಮನವಿ ಮಾಡಿದ್ದಾರೆ.
ಭಾನುವಾರ ಲಾಕ್ಡೌನ್ ಸಂದರ್ಭದಲ್ಲಿ ಅಗತ್ಯ ಸರಕು,ಸರಂಜಾಮುಗಳ ಸಾಗಾಣಿಕೆಗೆ ಯಾವುದೇ ನಿರ್ಬಂಧವಿರುವುದಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.ರಾಜ್ಯಾದ್ಯಂತ ರಾತ್ರಿ ೮ರಿಂದ ಬೆಳಿಗ್ಗೆ ೫ರವರೆಗೆ ರಾತ್ರಿ ಕರ್ಫ್ಯೂಜಾರಿಯಲ್ಲಿರುತ್ತದೆ.ಈ ಅವಧಿಯಲ್ಲಿ ಅತ್ಯಗತ್ಯ ಚಟುವಟಿಕೆಗಳನ್ನು ಹೊರತುಪಡಿಸಿ ಉಳಿದಂತೆ ವ್ಯಕ್ತಿಗಳ ಚಲನೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಎಂದು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ ಭಾಸ್ಕರ್ ಅವರು ಆದೇಶದಲ್ಲಿ ತಿಳಿಸಿದ್ದಾರೆ.
ರಾಜ್ಯ ಸರಕಾರದ ಎಲ್ಲಾ ಇಲಾಖೆಗಳು,ಕಚೇರಿಗಳು, ಬೋರ್ಡ್ಗಳು ಮತ್ತು ಕಾರ್ಪೊರೇಷನ್ಗಳು(ತುರ್ತು ಮತ್ತು ಅಗತ್ಯ ಸೇವೆಗಳನ್ನು ಒದಗಿಸುವಂತಹ ಇಲಾಖೆಗಳು,ಕಚೇರಿಗಳು, ಬೋರ್ಡ್ಗಳು, ಕಾರ್ಪೊರೇಷನ್ಗಳನ್ನು ಹೊರತುಪಡಿಸಿ)ಈಗಿರುವ ಎರಡನೇ ಶನಿವಾರ ಮತ್ತು ನಾಲ್ಕನೇ ಶನಿವಾರಗಳನ್ನು ಸೇರಿಸಿಕೊಂಡಂತೆ ಜುಲೈ ೧೦ರಿಂದ ಆಗಸ್ಟ್ ೮ರ ತನಕ ಎಲ್ಲಾ ಶನಿವಾರಗಳಂದು ಮುಚ್ಚಲ್ಪಡುತ್ತವೆ ಎಂದು ರಾಜ್ಯ ಸರಕಾರದ ಆದೇಶದಲ್ಲಿ ತಿಳಿಸಲಾಗಿದೆ.
ಕೇಂದ್ರ ಗೃಹ ಮಂತ್ರಾಲಯ ಮೇ.30ರಂದು ಹೊರಡಿಸಿರುವ ಆದೇಶದಲ್ಲಿ, ಕಂಟೈನ್ಮೆಂಟ್ ವಲಯಗಳಲ್ಲಿ ಲಾಕ್ಡೌನ್ನ್ನು ಜೂ.೩೦ರ ತನಕ ವಿಸ್ತರಿಸಿ ಮತ್ತು ಕಂಟೈನ್ಮೆಂಟ್ ವಲಯಗಳನ್ನು ಹೊರತುಪಡಿಸಿದ ಪ್ರದೇಶಗಳಲ್ಲಿ ಹಂತ ಹಂತವಾಗಿ ನಿಷೇಧಿತ ಚಟುವಟಿಕೆಗಳನ್ನು ತೆರೆಯಲು ಲಾಕ್ ಡೌನ್ ಸಡಿಲಿಕೆ ಬಗ್ಗೆ ಹೊಸ ಮಾರ್ಗಸೂಚಿ ಹೊರರಿಸಿದೆ.ರಾಜ್ಯದಲ್ಲಿಯೂ ಕೋವಿಡ್-೧೯ ಸೋಂಕು ಪ್ರಕರಣಗಳು ಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಪ್ರಸ್ತುತ ಪರಿಸ್ಥಿತಿಯನ್ನು ಪರಾಮರ್ಶಿಸಿ ಸರಕಾರವು ಈ ಸೋಂಕನ್ನು ಪರಿಣಾಮವಾಗಿ ನಿಯಂತ್ರಿಸುವ ನಿಟ್ಟಿನಲ್ಲಿ ಹಾಗೂ ಹೆಚ್ಚಿನ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವ ಸಂಬಂಧ ಹಾಲಿ ಚಾಲ್ತಿಯಲ್ಲಿರುವ ಮುಂಜಾಗ್ರತಾ ಕ್ರಮಗಳ ಜೊತೆಗೆ ಇನ್ನೂ ಹೆಚ್ಚಿನ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವುದು ಅತ್ಯವಶ್ಯವೆಂದು ನಿರ್ಧರಿಸಿ ಹೊಸ ಮಾರ್ಗಸೂಚಿ ಹೊರಡಿಸಿ ಜುಲೈ ೫ರಿಂದ ಮುಂದಿನ ನಾಲ್ಕು ಭಾನುವಾರಗಳಂದು ಸಂಪೂರ್ಣ ಲಾಕ್ಡೌನ್ ಜಾರಿಗೆ ಆದೇಶಿಸಿದೆ.
ಕಂಟೈನ್ಮೆಂಟ್ ಝೋನ್ಗಳಲ್ಲಿ ಜು.31ರವರೆಗೆ ಲಾಕ್ಡೌನ್ ವಿಸ್ತರಣೆ: ಕೋವಿಡ್-೧೯ ಅನ್ಲಾಕ್ ಹಂತ ೨ಕ್ಕೆ ಸಂಬಂಧಿಸಿದಂತೆ ಕೇಂದ್ರ ಸರಕಾರದ ಗೃಹ ಸಚಿವಾಲಯವು ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಈ ಬಗ್ಗೆ ರಾಜ್ಯ ಸರಕಾರದ ಮುಖ್ಯಕಾರ್ಯದರ್ಶಿ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಮುಖ್ಯಸ್ಥ ಟಿ.ಎಂ.ವಿಜಯಭಾಸ್ಕರ್ ಆದೇಶ ಹೊರಡಿಸಿದ್ದು, ಕಂಟೈನ್ಮೆಂಟ್ ಝೋನ್ಗಳಲ್ಲಿ ಜು.೩೧ ರವರೆಗೆ ಲಾಕ್ಡೌನ್ ವಿಸ್ತರಣೆ ಮಾಡಲಾಗಿದೆ. ನೂತನ ಮಾರ್ಗಸೂಚಿಗಳು ತಕ್ಷಣದಿಂದ ಜಾರಿಗೆ ಬಂದಿದೆ.ಬಿಬಿಎಂಪಿ ಆಯುಕ್ತರು, ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿಗಳು, ನಗರ ಪೊಲೀಸ್ ಆಯುಕ್ತರು ಹಾಗೂ ಇತರ ಇಲಾಖಾ ಮುಖ್ಯಸ್ಥರು ಇವುಗಳ ಅನುಷ್ಠಾನಕ್ಕೆ ಶ್ರಮಿಸುವಂತೆ ಅವರು ಸೂಚಿಸಿದ್ದಾರೆ.
ಜು.೩೧ರ ತನಕ ಶಾಲಾ,ಕಾಲೇಜು ತೆರೆಯುವಂತಿಲ್ಲ: ಅನ್ಲಾಕ್-೨ ಕಂಟೈನ್ಮೆಂಟ್ ಝೋನ್ಗಳ ಹೊರಗೆ ಎಲ್ಲ ಬಗೆಯ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಲಾಗಿದೆ. ಜು.೩೧ರವರೆಗೆ ಶಾಲೆಗಳು, ಕಾಲೇಜುಗಳು, ಶೈಕ್ಷಣಿಕ ಸಂಸ್ಥೆಗಳು, ತರಬೇತಿ ಕೇಂದ್ರಗಳು ಮುಚ್ಚಲ್ಪಟ್ಟಿರುತ್ತವೆ.ಆನ್ಲೈನ್ ಹಾಗೂ ದೂರಶಿಕ್ಷಣ ಮುಂದುವರೆಯಲಿದೆ. ರಾಜ್ಯ ಹಾಗೂ ಕೇಂದ್ರ ಸರಕಾರದ ತರಬೇತಿ ಸಂಸ್ಥೆಗಳು ಡಿಓಪಿಟಿ ಹಾಗೂ ಡಿಪಿಎಆರ್ ಸೂಚನೆಗಳನ್ವಯ ಜು.೧೫ರಿಂದ ಕಾರ್ಯಾರಂಭ ಮಾಡಬಹುದಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಭಕ್ತರಿಗೆ ದರ್ಶನಾವಕಾಶವಿಲ್ಲ:
ಪುತ್ತೂರು:ಕೋವಿಡ್-೧೯ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಜು.೫ರಿಂದ ಮುಂದಿನ ನಾಲ್ಕು ಭಾನುವಾರ ಸಂಪೂರ್ಣ ಲಾಕ್ಡೌನ್ ಜಾರಿಯಲ್ಲಿರುವುದರಿಂದ ಧಾರ್ಮಿಕ ದತ್ತಿ ಇಲಾಖಾ ವ್ಯಾಪ್ತಿಗೆ ಒಳಪಡುವ ದೇವಾಲಯಗಳಲ್ಲಿಯೂ ಜು.೫ರಿಂದ ಆ.೨ರ ತನಕ ೪ ಭಾನುವಾರಗಳಂದು ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶವಿಲ್ಲ.ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲೂ ಭಕ್ತರಿಗೆ ದರ್ಶನ ಅವಕಾಶವಿಲ್ಲ.ಭಕ್ತರಿಗೆ ದರ್ಶನ ನಿಷೇಧಿಸಲಾಗಿದೆ ಎಂದು ದೇವಳದ ಆಡಳಿತಾಧಿಕಾರಿ ಡಾ|ಯತೀಶ್ ಉಳ್ಳಾಲ್ ಮತ್ತು ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ತಿಳಿಸಿದ್ದಾರೆ.
ಕೆಎಸ್ಆರ್ಟಿಸಿ ಬಸ್ ಸಂಚಾರ ಸ್ಥಗಿತ:
ಜು.೫ರ ಭಾನುವಾರದಂದು ಪೂರ್ಣ ಲಾಕ್ಡೌನ್ ಇರುವುದರಿಂದ ಬೆಳಗ್ಗಿನಿಂದ ಜು.6ರ ಬೆಳಗ್ಗಿನ ತನಕ ಕೆ.ಎಸ್.ಆರ್.ಟಿ.ಸಿ ಬಸ್ಗಳು ಕಾರ್ಯಾಚರಿಸುವುದಿಲ್ಲ ಎಂದು ಕೆ.ಎಸ್.ಆರ್.ಟಿ.ಸಿ ಪುತ್ತೂರು ವಿಭಾಗೀಯ ನಿಯಂತ್ರಣಾಧಿಕಾರಿ ನಾಗೇಂದ್ರ ಅವರು ತಿಳಿಸಿದ್ದಾರೆ.