ವಿಟ್ಲ: ಕೊರೋನ ನಿಯಂತ್ರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ರಾಜ್ಯದಾದ್ಯಂತ ಭಾನುವಾರ ಲಾಕ್ ಡೌನ್ ಘೋಷಣೆ ಮಾಡಿದ್ದು ಈ ಹಿನ್ನೆಲೆಯಲ್ಲಿ ಜು.5ರಂದು ವಿಟ್ಲ ಸಹಿತ ಸುತ್ತಮುತ್ತಲ ಪ್ರದೇಶದಲ್ಲಿ ಲಾಕ್ ಡೌನ್ ಸಂಪೂರ್ಣ ಯಶಸ್ವಿಯಾಗಿದೆ.
ವಿಟ್ಲ ಪೇಟೆಯಲ್ಲಿ ಬೆರಳೆಣೆಕೆಯ ಹಾಲು ಹಾಗೂ ಪತ್ರಿಕೆ ಅಂಗಡಿಗಳು ಬೆಳಗ್ಗಿನ ವೇಳೆ ತೆರೆದಿತ್ತಾದರೂ ಜನಸಂಖ್ಯೆ ಇಲ್ಲದ ಹಿನ್ನೆಲೆಯಲ್ಲಿ ಆ ಬಳಿಕ ಅಂಗಡಿ ಮುಚ್ಚಲ್ಪಟ್ಟಿತ್ತು. ಉಳಿದಂತೆ ದಿನಬಳಕೆ ವಸ್ತುಗಳ ಅಂಗಡಿ ಸಹಿತ ಮೆಡಿಕಲ್ ಗಳು ಮುಚ್ಚಿತ್ತು. ಅತೀ ಅವಶ್ಯ ಇರುವ ವಾಹನಗಳು ಸಂಚಾರ ನಡೆಸಿರುವುದು ಬಿಟ್ಟರೆ ಉಳಿದಂತೆ ವಾಹನ ಸಂಚಾರವಿರಲಿಲ್ಲ. ಜನರು ರಸ್ತೆಗಿಳಿಯದೆ ಲಾಕ್ ಡೌನ್ ಗೆ ಸಂಪೂರ್ಣ ಬೆಂಬಲ ಸೂಚಿಸಿದ್ದಾರೆ.
ಎಲ್ಲೆಡೆ ಪೊಲೀಸರಿಂದ ಬಿಗಿ ಬಂದೋಬಸ್ತ್…..
ಲಾಕ್ ಡೌನ್ ಹಿನ್ನೆಲೆಯಲ್ಲಿ ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ಬಂಟ್ವಾಳ ಸಂಚಾರಿ ಠಾಣಾ ಎಸ್.ಐ. ರಾಜೇಶ್ ಕೆ.ವಿ.ರವರ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಬೆಳಿಗ್ಗೆಯಿಂದ ವಿಟ್ಲದ ನಾಲ್ಕು ಮಾರ್ಗ ಜಂಕ್ಷನ್ ನಲ್ಲಿ ಕಾರ್ಯಾಚರಣೆಗಿಳಿದಿರುವ ಪೊಲೀಸರು ಅನಗತ್ಯ ಸಂಚಾರ ನಡೆಸುತ್ತಿದ್ದ ವಾಹನ ಸವಾರರಿಗೆ ಬಿಸಿ ಮುಟ್ಟಿಸಿದ್ದಾರೆ. ಅನಗತ್ಯ ತಿರುಗಾಟ ನಡೆಸುತ್ತಿದ್ದ ಕೆಲ ವಾಹನವನ್ನು ವಶಕ್ಕೆ ಪಡೆದಿದ್ದು, ಕೆಲವರಿಗೆ ಬುದ್ದಿವಾದ ಹೇಳಿ ಬಿಟ್ಟಿರುವುದಾಗಿ ತಿಳಿದು ಬಂದಿದೆ.