ಉಪ್ಪಿನಂಗಡಿ: ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅದನ್ನು ತಡೆಗಟ್ಟುವ ಮುಂಜಾಗ್ರತಾ ಸಲುವಾಗಿ ಮುಂದಿನ 4 ಭಾನುವಾರ ಲಾಕ್ಡೌನ್ಗೆ ಸರ್ಕಾರ ಆದೇಶಿಸಿದ್ದು, ಅದರಂತೆ ಪ್ರಥಮ ಭಾನುವಾರ ಜುಲೈ 5ರಂದು ಉಪ್ಪಿನಂಗಡಿಯಲ್ಲಿ ಅಂಗಡಿ ಮುಂಗಟ್ಟುಗಳು ಬಂದ್ ಆಗಿ ಸಂಪೂರ್ಣ ಲಾಕ್ಡೌನ್ ಆದೇಶ ಪಾಲನೆ ಆಗಿರುವುದು ಕಂಡು ಬಂತು.
ಪೇಟಯಲ್ಲಿ ದಿನಸಿ, ತರಕಾರಿ ಅಂಗಡಿ, ಹೊಟೇಲ್ಗಳು ಸಹ ಬಂದ್ ಆಗಿದ್ದವು, ಪತ್ರಿಕೆ ಮತ್ತು ಹಾಲು ಮಾರಾಟದ ಒಂದೆರಡು ಅಂಗಡಿಗಳವರು ಬಾಗಿಲು ತೆರೆದಿದ್ದು, ಬೆಳಿಗ್ಗೆ 10 ಗಂಟೆಯ ಬಳಿಕ ಅಂಗಡಿ ಮಾಲಕರು ಬಾಗಿಲು ಹಾಕಿದರ. ಮೆಡಿಕಲ್ ಸ್ಟೋರ್ ಮಾತ್ರ ಮಧ್ಯಾಹ್ನ ತನಕ ಬಾಗಿಲು ತೆರೆದುಕೊಂಡಿದ್ದುದು ಗ್ರಾಹಕರು ಇಲ್ಲದ ಕಾರಣ ಅದೂ ಆ ಬಳಿಕ ಬಂದ್ ಆಗಿದ್ದವು.
ರಾಷ್ಟ್ರೀಯ ಹೆದ್ದಾರಿ ಬಿಕೋ:
ಉಪ್ಪಿನಂಗಡಿ ಪೇಟೆಯಲ್ಲಿ ವಾಹನಗಳು ರಸ್ತೆಗೆ ಇಳಿಯದೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-೭೫ರಲ್ಲಿ ಕೆಲವೊಂದು ಗ್ಯಾಸ್ ಸಾಗಾಟದ ಬುಲೆಟ್ ಟ್ಯಾಂಕರ್ ಮತ್ತು ಸರಕು ಸಾಗಾಟದ ವಾಹನ ಹೊರತು ಪಡಿಸಿ ಇತರೇ ಯಾವುದೇ ವಾಹನಗಳ ಓಡಾಟ ಇರಲಿಲ್ಲ, ಹೆದ್ದಾರಿ ಬಿಕೋ ಎನ್ನುವಂತಿತ್ತು.