ವಿಟ್ಲ: ಮೂರು ತಿಂಗಳ ಹಿಂದೆ ವಿದೇಶದಿಂದ ಆಗಮಿಸಿದ್ದ ವಿಟ್ಲ ಸಮೀಪದ ಒಕ್ಕೆತ್ತೂರು ನಿವಾಸಿ, 31 ವರ್ಷದ ಯುವಕನಿಗೆ ಕೊರೋನ ಸೋಂಕು ಪತ್ತೆಯಾದ ಬೆನ್ನಲ್ಲೆ ಇದೀಗ ಆತನ ಪತ್ನಿಗೂ ಸೋಂಕು ತಗುಲಿರುವುದು ದೃಡಪಟ್ಟಿದೆ.
ವಿದೇಶದಿಂದ ಆಗಮಿಸಿ ಮೂರು ತಿಂಗಳ ಬಳಿಕ ಯುವಕನಿಗೆ ಜ್ವರ, ಕೆಮ್ಮು ಉಂಟಾದ ಹಿನ್ನೆಲೆಯಲ್ಲಿ ಜೂ.೨೯ರಂದು ವಿಟ್ಲ ಸಮುದಾಯ ಆರೋಗ್ಯ ಕೇಂದ್ರಕ್ಕೆ ತೆರಳಿದ್ದು, ಅಲ್ಲಿ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, ಯುವಕನನ್ನು ಮನೆಯಲ್ಲಿ ಇರುವಂತೆ ಸೂಚಿಸಲಾಗಿತ್ತು. ಜೂ.೩೦ರಂದು ಬಂದ ವರದಿಯಲ್ಲಿ ಆ ಯುವಕನಿಗೆ ಕೊರೊನಾ ಸೋಂಕು ತಗುಲಿರುವುದು ದೃಡಪಟ್ಟಿತ್ತು. ಬಳಿಕ ಆರೋಗ್ಯ ಇಲಾಖೆ ನೇತೃತ್ವದಲ್ಲಿ ಆ ಯುವಕನನ್ನು ವೆನ್ಲಾಕ್ ಆಸ್ಪತ್ರೆಗೆ ಶಿಫ್ಟ್ ಮಾಡಿ ಅಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆ ಬಳಿಕದ ಬೆಳವಣಿಗೆಯಲ್ಲಿ ಒಕ್ಕೆತ್ತೂರಿನಲ್ಲಿರುವ ಆತನ ಮನೆಯನ್ನು ಸೀಲ್ ಡೌನ್ ಮಾಡಿ ಕುಟುಂಬದ ಸದಸ್ಯರ ಗಂಟಲ ದ್ರವವನ್ನು ಕೋವಿಡ್ ಪರೀಕ್ಷೆಗಾಗಿ ಕಳುಹಿಸಿಕೊಡಲಾಗಿತ್ತು. ಜು.5ರಂದು ಬಂದ ವರದಿಯಲ್ಲಿ ಆ ಯುವಕನ ಪತ್ನಿಗೂ ಸೋಂಕು ತಗುಲಿರುವುದು ದೃಡಪಟ್ಟಿದ್ದು ಅವರನ್ನು ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ ಎಂದು ತಿಳಿದುಬಂದಿದೆ. ಇದೀಗ ಒಂದೇ ಕುಟುಂಬದ ಮೂವರಿಗೆ ಸೋಂಕು ತಗುಲಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಯುವಕನ ಸಹೋದರನ ಮನೆ ಸೀಲ್ ಡೌನ್: ಒಕ್ಕೆತ್ತೂರಿನ ಯುವಕನಿಗೆ ಕೊರೋನ ಸೋಂಕು ದೃಡಪಟ್ಟ ಬೆನ್ನಲ್ಲೆ ಆತನ ಮನೆಯನ್ನು ಸೀಲ್ ಡೌನ್ ಮಾಡಿ ಮನೆಮಂದಿಯ ಗಂಟಲ ದ್ರವವನ್ನು ಪರೀಕ್ಷೆಗಾಗಿ ಕಳುಹಿಸಿಕೊಡಲಾಗಿತ್ತು ಈ ಪೈಕಿ ಆ ಯುವಕನ 50 ವರ್ಷದ ಸಹೋದರ ಒಕ್ಕೆತ್ತೂರು, ಕೊಡಂಗೆ ಉರ್ದಂಗಡಿ ನಿವಾಸಿಯಗೆ ಜು.೪ರಂದು ಸೋಂಕು ತಗುಲಿರುವುದು ದೃಡಪಟ್ಟ ಹಿನ್ನೆಲೆಯಲ್ಲಿ ಆತನ ಮನೆಯನ್ನು ವಿಟ್ಲ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಮಾಲಿನಿಯವರ ನೇತೃತ್ವದ ಅಧಿಕಾರಿಗಳ ತಂಡ ಜು.5ರಂದು ಸೀಲ್ ಡೌನ್ ಮಾಡಿದೆ.