ಸವಣೂರು : ಬೆಳಂದೂರು ಜಿ.ಪಂ.ಕ್ಷೇತ್ರ ವ್ಯಾಪ್ತಿಯ ಪಾಲ್ತಾಡು -ಚೆನ್ನಾವರ ರಸ್ತೆ ಹಾಗೂ ಬೆಳ್ಳಾರೆ ಜಿ.ಪಂ.ವ್ಯಾಪ್ತಿಯ ಚೆನ್ನಾವರ ಮಸೀದಿ ಬಳಿಯಿಂದ ಕುಂಡಡ್ಕ ವರೆಗಿನ ರಸ್ತೆಯೂ ಮಳೆಯಿಂದ ತೀರಾ ಹಾನಿಯಾಗಿದ್ದು ಜನಸಂಚಾರಕ್ಕೆ ಸಮಸ್ಯೆಯಾಗುತ್ತಿದೆ.
ಈ ರಸ್ತೆಯು ಮಳೆಯಿಂದಾಗಿ ಡಾಮರು ಎದ್ದುಹೋಗಿ ಸಂಪೂರ್ಣ ಹದಗೆಟ್ಟಿದೆ.ಈ ರಸ್ತೆಯ ಮೂಲಕ ನಿತ್ಯ ಹಲವು ವಾಹನಗಳು ಹೋಗುತ್ತಿದ್ದು,ರಸ್ತೆ ಹಾಳಾಗಿರುವುದರಿಂದ ಎಲ್ಲರಿಗೂ ಸಂಕಷ್ಟ ಎದುರಾಗಿದೆ.ಈ ರಸ್ತೆಯಲ್ಲಿ ದ್ವಿಚಕ್ರ ವಾಹನ ಸವಾರರಂತೂ ಎದ್ದು ಬಿದ್ದು ಹೋಗಬೇಕಾದ ಪರಿಸ್ಥಿತಿ.ಈ ರಸ್ತೆಯ ಮೂಲಕ ಪಾಲ್ತಾಡಿ ಭಾಗದ ಜನರಿಗೆ ತಾಲೂಕು ಕೇಂದ್ರ ಕಡಬಕ್ಕೆ ಸಂಪರ್ಕ ಮಾಡಲು ಈ ರಸ್ತೆಯ ಮೂಲಕ ಸಾಗಿ ಸವಣೂರು ಮೂಲಕ ಕಡಬಕ್ಕೆ ಹೋಗ ಬೇಕಿದೆ.ಅಲ್ಲದೆ ಪ್ರಮುಖ ಪೇಟೆಯಾಗಿರುವ ಸವಣೂರು,ಬೆಳ್ಳಾರೆ,ಪುತ್ತೂರಿಗೆ ಹೋಗಲು ಇದೇ ರಸ್ತೆಯ ಮೂಲಕವೇ ಹೋಗಬೇಕಿದೆ. ರಸ್ತೆಯ ಅವ್ಯವಸ್ಥೆಯಿಂದ ಪಾದಚಾರಿಗಳಂತೂ ಇಲ್ಲಿ ಸಾಗುವಾಗ ಜಾರಿ ಬೀಳುವುದು ಸಾಮಾನ್ಯವಾಗಿ ಬಿಟ್ಟಿದೆ.ರಸ್ತೆಯ ಡಾಮರು ಎದ್ದುಹೋಗಿ ಕೆಸರುಮಯವಾಗಿದೆ.
ಪೊದೆ ತೆರವು,ಚರಂಡಿ ನಿರ್ಮಾಣ
ಈ ರಸ್ತೆಯ ಎರಡೂ ಬದಿಗಳಲ್ಲಿಯೂ ಆವರಿಸಿದ್ದ ಪೊದೆಗಳನ್ನು ಚೆನ್ನಾವರದ ಎಸ್ಸೆಸ್ಸೆಫ್ ಸಂಘಟನೆಯ ಸದಸ್ಯರಯ 3 ದಿನ ಶ್ರಮದಾನದ ಮೂಲಕ ತೆರವು ಮಾಡಿದ್ದಾರೆ. ಚರಂಡಿ ದುರಸ್ತಿಯನ್ನು ಸವಣೂರು ಗ್ರಾ.ಪಂ.ಅಧ್ಯಕ್ಷೆ ಇಂದಿರಾ ಬಿ.ಕೆ ಅವರ ನೇತೃತ್ವದಲ್ಲಿ ಗ್ರಾ.ಪಂ.ವತಿಯಿಂದ ಮಾಡಲಾಗಿದೆ. ಈ ರಸ್ತೆಯ ಸಮಸ್ಯೆ ದೂರಮಾಡುವ ನಿಟ್ಟಿನಲ್ಲಿ ಸಂಬಂಧಪಟ್ಟವರು ಕೂಡಲೇ ಸ್ಪಂದಿಸಬೇಕೆಂದು ಚೆನ್ನಾವರ ಅಭ್ಯುದಯ ಯುವಕ ಮಂಡಲ ಜನಪ್ರತಿನಿಧಿಗಳಿಗೆ ಮನವಿ ಮಾಡಿದೆ.