HomePage_Banner
HomePage_Banner
HomePage_Banner
HomePage_Banner

ರೋಟರಿ ಕ್ಲಬ್ ಪುತ್ತೂರು ಸಿಟಿ ಪದಪ್ರದಾನ

Puttur_Advt_NewsUnder_1
Puttur_Advt_NewsUnder_1
  • ಭ್ರಾತ್ವತ್ವ, ಸೇವೆ, ಮಾನವೀಯ ಮೌಲ್ಯಗಳೇ ರೋಟರಿಯ ಶಕ್ತಿ-ಪ್ರತಾಪ್‌ಸಿಂಹ ನಾಯಕ್

ಪುತ್ತೂರು: ನಾವು ಬದುಕಬೇಕು, ಸಮಾಜದಲ್ಲಿ ಗೌರವಯುತವಾದ ಬದುಕನ್ನು ಸಾಗಿಸಬೇಕು ಎನ್ನುವುದನ್ನು ರೋಟರಿ ಸಂಸ್ಥೆಯಲ್ಲಿ ಕಂಡಿದ್ದೇವೆ. ರೋಟರಿ ಸಂಸ್ಥೆಯಲ್ಲಿ ಭ್ರಾತ್ವತ್ವ, ಸೇವೆ ಮತ್ತು ಮಾನವೀಯ ಮೌಲ್ಯಗಳೇ ನಿಜವಾದ ಶಕ್ತಿಯಾಗಿದೆ ಎಂದು ರಾಜ್ಯ ಸರಕಾರದ ವಿಧಾನಪರಿಷತ್ ಸದಸ್ಯರೂ ಮತ್ತು ರೋಟರಿ ಜಿಲ್ಲೆ, ವಲಯ ನಾಲ್ಕರ ಅಸಿಸ್ಟೆಂಟ್ ಗವರ್ನರ್‌ರಾದ ಪ್ರತಾಪ್ ಸಿಂಹ ನಾಯಕ್‌ರವರು ಹೇಳಿದರು.

ಅವರು ಜು.೭ ರಂದು ಬಪ್ಪಳಿಗೆ-ಪುತ್ತೂರು ರೋಟರಿ ಮನೀಶಾ ಸಭಾಂಗಣದಲ್ಲಿ ಜರಗಿದ ರೋಟರಿ ಕ್ಲಬ್ ಪುತ್ತೂರು ಸಿಟಿಯ ಪದಪ್ರದಾನ ಸರಳ ಸಮಾರಂಭದಲ್ಲಿ ೨೦೨೦-೨೧ನೇ ಸಾಲಿನ ನೂತನ ಪದಾಧಿಕಾರಿಗಳಿಗೆ ಪದಪ್ರದಾನ ನೆರವೇರಿಸಿ ಮಾತನಾಡಿದರು. ರಾಜಕೀಯ ವಲಯವಾಗಲಿ ಇತರ ಯಾವುದೇ ವಲಯಗಳಲ್ಲಿ ಸಿಗದಂತಹ ಕುಟುಂಬ ವಾತಾವರಣ ರೋಟರಿ ಸಂಸ್ಥೆಯಲ್ಲಿ ಕಾಣಲ್ಪಡುತ್ತದೆ. ನಮ್ಮಲ್ಲಿ ಉತ್ತಮ ಧ್ಯೇಯ, ಕಲ್ಪನೆಗಳು, ಕನಸುಗಳು ಬೇರೂರಿದಾಗ ಕೆಲಸ-ಕಾರ್ಯಗಳು ಯಶಸ್ವಿ ಎನಿಸಲ್ಪಡುವುದು. ರೋಟರಿಯಲ್ಲಿ ವ್ಯಕ್ತಿತ್ವ ವಿಕಸನಕ್ಕೆ ದಾರಿ ಮಾಡಿಕೊಡುತ್ತದೆ, ಸಮಾಜಮುಖಿ ಕಾರ್ಯಗಳಿಗೆ ಕೊಡುಗೆಗಳನ್ನು ನೀಡಲು ತುಡಿತ ಮನೆಮಾಡುತ್ತದೆ. ಇದರಿಂದ ರೋಟರಿಯಲ್ಲಿ ಮಿತೃತ್ವ ವೃದ್ಧಿಯಾಗುತ್ತದೆ ಮಾತ್ರವಲ್ಲದೆ ರೋಟರಿ ಸಂಸ್ಥೆ ಬೆಳಗಲು ಕಾರಣವಾಗುತ್ತದೆ ಎಂದ ಅವರು ಸಾಂಕ್ರಾಮಿಕ ರೋಗಗಳು ಬಂದಂತಹ ಸಂದರ್ಭದಲ್ಲಿ ರೋಟರಿಯ ಕೊಡುಗೆಗಳನ್ನು ಸ್ಮರಿಸಬೇಕಾಗುತ್ತದೆ. ಮಹಾಮಾರಿ ಕೊರೋನಾ ವೈರಸ್ ರೋಗವನ್ನು ನಿಯಂತ್ರಣಕ್ಕೆ ಪ್ರಧಾನ ಮಂತ್ರಿ ನಿಧಿಗೆ ರೋಟರಿಯು ಸಹಾಯಹಸ್ತ ನೀಡಿರುವುದು ಶ್ಲಾಘನೀಯವಾಗಿದೆ ಎಂದು ಅವರು ಹೇಳಿದರು.

ಮತ್ತೋರ್ವ ಅಸಿಸ್ಟೆಂಟ್ ಗವರ್ನರ್ ಯತಿ ಕುಮಾರ್ ಸ್ವಾಮಿ ಗೌಡರವರು ಕ್ಲಬ್ ಬುಲೆಟಿನ್ `ರೋಟ ವಿಕಾಸ’ ಅನಾವರಣಗೊಳಿಸಿ ಮಾತನಾಡಿ, ನಮಗೆ ಎಷ್ಟು ಪ್ರಶಸ್ತಿ-ಪುರಸ್ಕಾರಗಳು ಸಿಕ್ಕಿವೆ ಎಂಬುದು ಮುಖ್ಯವಲ್ಲ, ಸಮಾಜಕ್ಕೆ ಏನನ್ನು ನೀಡಿದ್ದೇವೆ ಎಂಬುದು ಮುಖ್ಯವಾಗುತ್ತದೆ. ಅಂತರ್ರಾಷ್ಟ್ರೀಯ ಸೇವಾಸಂಸ್ಥೆಯಾಗಿರುವ ರೋಟರಿಗೆ ವಿಶ್ವದೆಲ್ಲೆಡೆ ಮನ್ನಣೆಯಿದೆ ಎಂಬುದು ಸತ್ಯ. ಪ್ರಸ್ತುತ ಜಿಲ್ಲಾ ಗವರ್ನರ್‌ರವರ ಜಿಲ್ಲಾ ಪ್ರಾಜೆಕ್ಟ್‌ಗಳೇನಿದೆಯೋ ಅವುಗಳ ನಿರ್ವಹಣೆಗೆ ಪ್ರತಿಯೋರ್ವ ರೊಟೇರಿಯನ್ಸ್ ಸಹಕಾರ ನೀಡಬೇಕು ಜೊತೆಗೆ ರೋಟರಿಯಲ್ಲಿ ಸೇವಾ ಪ್ರಾಜೆಕ್ಟ್‌ಗಳನ್ನು ಹೆಚ್ಚೆಚ್ಚು ಹಮ್ಮಿಕೊಳ್ಳುವಂತಾಗಲಿ ಎಂದರು.

ವಲಯ ಸೇನಾನಿ ಜೆರೋಮಿಯಸ್ ಪಾಸ್‌ರವರು ಮಾತನಾಡಿ, ಕಳೆದ ವರ್ಷ ರೋಟರಿ ಸಂಸ್ಥೆಯ ಧ್ಯೇಯ ರೋಟರಿ ಕನೆಕ್ಟ್ಸ್ ದ ವರ್ಲ್ಡ್ ಮುಖೇನ ಉತ್ತಮವಾದ ಸಮಾಜಮುಖಿ ಕಾರ್ಯಗಳನ್ನು ಮಾಡುವ ಮುಖೇನ ವಿಶ್ವಕ್ಕೆ ಹತ್ತಿರವಾಗಿದ್ದೇವೆ. ಪ್ರಸ್ತುತ ವರ್ಷ ರೋಟರಿ ಅವಕಾಶಗಳನ್ನು ತೆರೆದುಕೊಡುತ್ತದೆ ಎಂಬ ಧ್ಯೇಯದಂತೆ ತಮಗೆ ಸಿಕ್ಕಂತಹ ಅವಕಾಶಗಳ ಸದ್ಭಳಕೆ ಮಾಡುವಂತಾಗಬೇಕು. ರೋಟರಿ ಸಿಟಿಗೆ ೧೭ ವರ್ಷಗಳ ಇತಿಹಾಸವಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಅನೇಕ ಸಮಾಜಮುಖಿ ಕಾರ್ಯಗಳನ್ನು ಮಾಡುವ ಮೂಲಕ ಕ್ಲಬ್‌ಗೆ ಮತ್ತೊಂದು ಗರಿ ಎನಿಸಿಕೊಳ್ಳುವಂತಾಗಲಿ ಎಂದರು.

ಮಾತೃಸಂಸ್ಥೆ ರೋಟರಿ ಕ್ಲಬ್ ಪುತ್ತೂರು ಈಸ್ಟ್‌ನ ಅಧ್ಯಕ್ಷ ಕೃಷ್ಣನಾರಾಯಣ ಮುಳಿಯರವರು ಮಾತನಾಡಿ, ರೋಟರಿ ಸಿಟಿ ಹಾಗೂ ರೋಟರಿ ಈಸ್ಟ್‌ನ ಸದಸ್ಯರಲ್ಲಿ ಪರಸ್ಪರ ಆತ್ಮೀಯತೆ ಅಧಿಕ ಮಟ್ಟದಲ್ಲಿದೆ. ತಾನೂ ಕೂಡ ಈ ಹಿಂದೆ ಜೇಸಿಐನಲ್ಲಿ ಕರ್ತವ್ಯ ನಿರ್ವಹಿಸಿದ ಅನುಭವವಿದ್ದುದರಿಂದ ಇಂದು ರೋಟರಿ ಈಸ್ಟ್‌ನಲ್ಲಿ ಅಧ್ಯಕ್ಷನಾಗಿದ್ದೇನೆ. ಅಲ್ಲದೆ ಪ್ರಸಕ್ತ ವರ್ಷ ಜೇಸಿಐನ ಸುಮಾರು ಐವರು ಪ್ರತಿಷ್ಠಿತ ರೋಟರಿಯಲ್ಲಿ ಅಧ್ಯಕ್ಷರಾಗಿರುವುದು ವಿಶೇಷವಾಗಿದೆ ಎಂದರು.

ನಿರ್ಗಮನ ಅಧ್ಯಕ್ಷ ಧರಣಪ್ಪ ಗೌಡರವರು ಮಾತನಾಡಿ, ರೋಟರಿ ಕ್ಲಬ್‌ನಲ್ಲಿ ಅಧ್ಯಕ್ಷನಾಗಿರುವುದು ನನಗೆ ಬಯಸದೇ ಬಂದ ಭಾಗ್ಯವಾಗಿದ್ದು, ಅಳುಕಿನಿಂದಲೇ ಹುದ್ದೆಯನ್ನು ಸ್ವೀಕರಿಸಿದ್ದೆ. ರೋಟರಿ ಸಿಟಿ ಹಲವು ಸಮಾಜಮುಖಿ ಕಾರ್ಯಗಳನ್ನು ಸಮಾಜಕ್ಕೆ ಪರಿಚಯಿಸುವ ಮೂಲಕ ತನ್ನದೇ ಆದ ಇಮೇಜ್ ಹೊಂದಿದೆ. ಕ್ಲಬ್‌ನ ಇಮೇಜ್‌ಗೆ ಯಾವುದೇ ಧಕ್ಕೆ ಬಾರದ ರೀತಿಯಲ್ಲಿ ಕರ್ತವ್ಯ ನಿರ್ವಹಿಸಿದ ನಂಬಿಕೆಯೊಂದಿಗೆ ಸಮಾಜಮುಖಿ ಕಾರ್ಯಗಳನ್ನು ಮಾಡಿದ್ದೇವೆ ಎಂಬ ಆತ್ಮತೃಪ್ತಿಯೂ ನನಗಿದೆ ಎಂದು ಹೇಳಿ ಮುಂದಿನ ತಂಡಕ್ಕೆ ಶುಭಹಾರೈಸಿದರು.

ನೂತನ ಸದಸ್ಯರ ಸೇರ್ಪಡೆ:
ಈ ಹಿಂದೆ ರೋಟರಿ ಸಿಟಿಯಲ್ಲಿ ಸದಸ್ಯನಾಗಿದ್ದು, ಅನಿವಾರ್ಯ ಕಾರಣಗಳಿಂದ ಹೊರಗುಳಿದು ಪ್ರಸ್ತುತ ಮತ್ತೊಮ್ಮೆ ಸದಸ್ಯನಾಗಿರುವ ಆಕರ್ಷಣ್ ಇಂಡಸ್ಟ್ರೀಸ್‌ನ ಮೊಹಮ್ಮದ್ ಸಾದಿಕ್, ಸಾಂದೀಪನಿ ವಿದ್ಯಾಸಂಸ್ಥೆಯ ಸಂಚಾಲಕ ಭಾಸ್ಕರ ಆಚಾರ್ ಹಿಂದಾರುರವರ ಪುತ್ರ ಜಯಗುರು ಆಚಾರ್ ಹಿಂದಾರುರವರನ್ನು ಈ ಸಂದರ್ಭದಲ್ಲಿ ಅಸಿಸ್ಟೆಂಟ್ ಗವರ್ನರ್ ಪ್ರತಾಪ್ ಸಿಂಹ ನಾಯಕ್‌ರವರು ರೋಟರಿ ಪಿನ್ ತೊಡಿಸಿ, ಪ್ರಮಾಣಪತ್ರ ನೀಡಿ ಕ್ಲಬ್‌ಗೆ ಸೇರ್ಪಡೆಗೊಳಿಸಿದರು. ಕ್ಲಬ್ ಸರ್ವಿಸ್ ನಿರ್ದೇಶಕ ಪ್ರಮೋದ್ ಮಲ್ಲಾರರವರು ನೂತನ ಸದಸ್ಯರನ್ನು ಪರಿಚಯಿಸಿದರು.

ಸನ್ಮಾನ:
ರೋಟರಿ ಜಿಲ್ಲೆ, ವಲಯ ನಾಲ್ಕರ ಅಸಿಸ್ಟೆಂಟ್ ಗವರ್ನರ್‌ರಾದ ಪ್ರತಾಪ್ ಸಿಂಹ ನಾಯಕ್‌ರವರು ಪ್ರಸ್ತುತ ರಾಜ್ಯ ಸರಕಾರದ ವಿಧಾನಪರಿಷತ್ ಸದಸ್ಯರಾಗಿರುವ ಹಿನ್ನೆಲೆಯಲ್ಲಿ ಅವರನ್ನು ಗುರುತಿಸಿ ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು. ಅಲ್ಲದೆ ಕಳೆದ ವರ್ಷ ಅತ್ತ್ಯುತ್ತಮ ಕಾರ್ಯ ನಿರ್ವಹಿಸಿದ ನಿರ್ಗಮನ ಅಧ್ಯಕ್ಷ ಧರಣಪ್ಪ ಗೌಡ ಹಗೂ ನಿರ್ಗಮನ ಕಾರ್ಯದರ್ಶಿ ಸ್ವಾತಿ ಮಲ್ಲಾರವರ ಸೇವೆಯನ್ನು ಗುರುತಿಸಿ ಅವರುಗಳನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು. ರೋಟರಿ ಫೌಂಡೇಶನ್‌ಗೆ ರೂ.೨.೫೦ಲಕ್ಷ ಯುಎಸ್ ಡಾಲರ್ ದೇಣಿಗೆ ನೀಡಿದ ಪಿಡಿಜಿ ವಿನಾಯಕ್ ಕುಡ್ವರವರ ಪರವಾಗಿ ಅವರ ಸೋದರಳಿಯ ಕೆ.ವಿಶ್ವಾಸ್ ಶೆಣೈ(ಆರ್ಚ್ ಕ್ಲಬ್ ಸೊಸೈಟಿ)ಯವರಿಗೆ ಈ ಸಂದರ್ಭದಲ್ಲಿ ಗುರುತಿಸಿ ಶಾಲು ಹೊದಿಸಿ ಸನ್ಮಾನಿಸಲಾಯಿತು.

ಫೇಸ್ ಶೀಲ್ಡ್ ವಿತರಣೆ:
ಪಡೀಲ್‌ನಲ್ಲಿ ಕಾರ್ಯನಿರ್ವಹಿಸುವ ಏಷಿಯನ್ ಪೈಂಟ್ ಡೀಲರ್ ಜೊತೆಗೆ ಕ್ಲಬ್‌ನ ಸಾರ್ಜಂಟ್ ಎಟ್ ಆರ್ಮ್ಸ್ ಆಗಿರುವ ಪ್ರಶಾಂತ್ ಎಂಟರ್‌ಪ್ರೈಸಸ್‌ನ ಮಾಲಕ ಪ್ರಶಾಂತ್ ಶೆಣೈಯವರು ಕ್ಲಬ್ ಮುಖಾಂತರ ತಾಲೂಕು ಆರೋಗ್ಯಾಧಿಕಾರಿ ಕಛೇರಿ ಸಿಬ್ಬಂದಿಗಳಿಗೆ ಕೊರೋನಾ ವೈರಸ್ ರಕ್ಷಣಾ ಕವಚ `ಫೇಸ್ ಶೀಲ್ಡ್’ನ್ನು ಅಸಿಸ್ಟೆಂಟ್ ಗವರ್ನರ್ ಪ್ರತಾಪ್‌ಸಿಂಹ ನಾಯಕ್‌ರವರ ಮುಖೇನ ಹಸ್ತಾಂತರಿಸಲಾಯಿತು.

ಶಿಕ್ಷಕಿ ಶ್ಯಾಮಲಾ ಶೆಟ್ಟಿ ಪ್ರಾರ್ಥಿಸಿದರು. ನಿರ್ಗಮನ ಕಾರ್ಯದರ್ಶಿ ಸ್ವಾತಿ ಮಲ್ಲಾರ ವರದಿ ವಾಚಿಸಿದರು. ಸಾರ್ಜಂಟ್ ಎಟ್ ಆರ್ಮ್ಸ್ ಪ್ರಶಾಂತ್ ಶೆಣೈ ಎಂಎಲ್‌ಸಿ ಪ್ರತಾಪ್‌ಸಿಂಹ ನಾಯಕ್‌ರವರ ಪರಿಚಯ ಮಾಡಿದರು. ಜ್ಯೋ ಡಿ’ಸೋಜ, ಸುಧಾಕರ್ ಶೆಟ್ಟಿ, ಉದಯ ಶೆಟ್ಟಿ, ಆನಂದ ಉಡುಪರವರು ಅತಿಥಿಗಳಿಗೆ ಹೂಗುಚ್ಛ ನೀಡಿ ಸ್ವಾಗತಿಸಿದರು. ಮಾಜಿ ಅಧ್ಯಕ್ಷ ಡಾ.ಶಶಿಧರ್ ಕಜೆ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಮುನ್ನ ದೇಹದ ಉಷ್ಣತೆ ಪರೀಕ್ಷಿಸುವ ಥರ್ಮಾಮೀಟರ್‌ನಂದ ಪರೀಕ್ಷಿಸಿ ರೊಟೇರಿಯನ್ಸ್‌ಗಳನ್ನು ಒಳಬಿಡಲಾಗಿತ್ತು. ಜೊತೆಗೆ ಸ್ಯಾನಿಟೈಸರ್ ಬಳಕೆ, ಮಾಸ್ಕ್ ಕಡ್ಡಾಯ ಧರಿಸುವಿಕೆ, ಸಾಮಾಜಿಕ ಅಂತರ ಕಾಪಾಡುವಿಕೆಯನ್ನು ಈ ಸರಳ ಸಮಾರಂಭದಲ್ಲಿ ನಿಯಮಗಳನ್ನು ಪಾಲಿಸಲಾಗಿತ್ತು.

ರೋಟರಿ ಬಯಲು ವಿಶ್ವವಿದ್ಯಾನಿಲಯ ಇದ್ದಾಗೆ…
ಇಡೀ ವಿಶ್ವಕ್ಕೆ ಅಧ್ಯಕ್ಷರು ಒಬ್ಬರೇ ಇರುವುದು ಅಲ್ಲದೆ ಒಂದೇ ವ್ಯವಸ್ಥೆ ಮತ್ತು ಒಂದೇ ಧ್ಯೇಯವಾಕ್ಯವಿರುವುದು ಅದು ರೋಟರಿಯಲ್ಲಿ ಮಾತ್ರ. ಅಂತರ್ರಾಷ್ಟ್ರೀಯ ಅಧ್ಯಕ್ಷರ ಧ್ಯೇಯವಾಕ್ಯದಂತೆ ಪ್ರತೀ ರೋಟರಿ ಕ್ಲಬ್‌ಗಳು ನಡೆದುಕೊಳ್ಳಬೇಕಾಗುತ್ತದೆ. ನಾನು ಅಧ್ಯಕ್ಷನಾಗಿರುವುದು ನನ್ನ ಧೈರ್ಯದಿಂದಲ್ಲ ಬದಲಾಗಿ ಕ್ಲಬ್‌ನ ಮೇಲಿನ ಧೈರ್ಯದಿಂದ. ರೋಟರಿಯಲ್ಲಿ ಕುಟುಂಬ ವಾತಾವರಣ, ಬಂಧುತ್ವದ ಬೆಸುಗೆ ಮತ್ತು ಪರಸ್ಪರ ಬಾಂಧವ್ಯ ಎಂಬ ಶಕ್ತಿಗಳು ಎಲ್ಲರನ್ನು ಒಗ್ಗೂಡಿಸಲು ಸಾಧ್ಯವಿದೆ. ರೋಟರಿ ಎಂದರೆ ಅದು ಬಯಲು ವಿಶ್ವವಿದ್ಯಾನಿಲಯ ಇದ್ದಾಗೆ. ಇಲ್ಲಿ ಯಾರಿಗೆ ಅಗತ್ಯ ನೆರವು ಬೇಕೋ ಅವರಿಗೆ ನಾವು ನೆರವಿನ ಹಸ್ತ ಚಾಚಬೇಕಾಗುತ್ತದೆ. ಮನುಷ್ಯ ಸಂಘಜೀವಿಯಾಗಿದ್ದು, ನಮ್ಮಿಂದಾದ ಸೇವೆಯನ್ನು ಸಮಾಜಕ್ಕೆ ನೀಡುವಾಗ ಯಾವುದೇ ಸರಹದ್ದು ಇರಬಾರದು ಎಂಬುದು ನನ್ನ ಅನಿಸಿಕೆಯಾಗಿದೆ.

ಕಮ್ಯೂನಿಟಿ ಸರ್ವಿಸ್ ವತಿಯಿಂದ ಪ್ರತೀ ವರ್ಷ ಕ್ಲಬ್‌ನ ಮಾಜಿ ಅಧ್ಯಕ್ಷ ಜಯಕುಮಾರ್ ರೈ ಎಂ.ಆರ್‌ರವರ ಪ್ರಾಯೋಜಕತ್ವದಲ್ಲಿ ಅರ್ಹ ಫಲಾನುಭವಿಗೆ ವೀಲ್‌ಚೇರ್ ನೀಡುವ ವಾಡಿಕೆಯಿದ್ದು, ಅದರಂತೆ ಈ ವರ್ಷವೂ ಕೂರ್ನಡ್ಕ-ಮದಕ ನಿವಾಸಿ ಪಾರ್ಶ್ವವಾಯು ಪೀಡಿತೆ ಲಕ್ಷ್ಮೀ ಎಂಬವರಿಗೆ ವೀಲ್‌ಚೇರ್‌ನ್ನು ನೀಡಲಾಯಿತು. ಫಲಾನುಭವಿ ಲಕ್ಷ್ಮೀರವರ ಪುತ್ರ ವಿಶ್ವನಾಥ ಮೂಲ್ಯರವರು ಕೊಡುಗೆಯನ್ನು ಸ್ವೀಕರಿಸಿದರು.

 

ನೂತನ ಪದಾಧಿಕಾರಿಗಳಿಗೆ ಪದಪ್ರದಾನ…
ನೂತನ ಅಧ್ಯಕ್ಷ ಕೃಷ್ಣ ಮೋಹನ್ ಪಿ.ಎಸ್, ಕಾರ್ಯದರ್ಶಿ ಪದ್ಮನಾಭ ಶೆಟ್ಟಿ ಬಿ, ಕೋಶಾಧಿಕಾರಿ ಮನೋಹರ್ ಕೆ., ನಿಯೋಜಿತ ಅಧ್ಯಕ್ಷ ಉದಯ ಶೆಟ್ಟಿ, ಕ್ಲಬ್ ಸರ್ವಿಸ್ ನಿರ್ದೇಶಕ ಪ್ರಮೋದ್ ಮಲ್ಲಾರ, ಕಮ್ಯೂನಿಟಿ ಸರ್ವಿಸ್ ನಿರ್ದೇಶಕ ವಿಕ್ಟರ್ ಮಾರ್ಟಿಸ್, ವೊಕೇಶನಲ್ ಸರ್ವಿಸ್ ನಿರ್ದೇಶಕ ಡಾ|ಪೊಡಿಯ, ಇಂಟರ್‌ನ್ಯಾಷನಲ್ ಸರ್ವಿಸ್ ನಿರ್ದೇಶಕ ಆನಂದ ಉಡುಪ, ಯೂತ್ ಸರ್ವಿಸ್ ನಿರ್ದೇಶಕ ಮಹಾಬಲ, ಪೋಲಿಯೋ ಚೇರ್‌ಮ್ಯಾನ್ ರಾಜೇಶ್ ಯು.ಪಿ, ಟಿಆರ್‌ಎಫ್ ಚೇರ್‌ಮ್ಯಾನ್ ಲಾರೆನ್ಸ್ ಗೊನ್ಸಾಲ್ವಿಸ್, ಮೆಂಬರ್‌ಶಿಪ್ ಡೆವಲಪ್‌ಮೆಂಟ್ ಚೇರ್‌ಮ್ಯಾನ್ ಜಯಕುಮಾರ್ ರೈ ಎಂ.ಆರ್, ಸಿಎಲ್‌ಸಿಸಿ ಚೇರ್‌ಮ್ಯಾನ್ ಡಾ.ಹರಿಕೃಷ್ಣ ಪಾಣಾಜೆ, ವಿನ್ಸ್ ಚೇರ್‌ಮ್ಯಾನ್ ಜೆರೋಮಿಯಸ್ ಪಾಸ್, ವಾಟರ್ ಮತ್ತು ಸ್ಯಾನಿಟೇಶನ್ ಚೇರ್‌ಮ್ಯಾನ್ ಡಾ.ಶಶಿಧರ್ ಕಜೆ, ಡಿಸ್ಟ್ರಿಕ್ಟ್ ಪ್ರಾಜೆಕ್ಟ್ ಚೇರ್‌ಮ್ಯಾನ್ ನಟೇಶ್ ಉಡುಪ, ಸಾರ್ಜಂಟ್ ಎಟ್ ಆರ್ಮ್ಸ್ ಪ್ರಶಾಂತ್ ಶೆಣೈ, ಕ್ರೀಡಾ ಚೇರ್‌ಮ್ಯಾನ್ ಕಾರ್ತಿಕ್ ರೈ, ಬುಲೆಟಿನ್ ಎಡಿಟರ್ ಸುರೇಂದ್ರ ಕಿಣಿರವರಿಗೆ ಅಸಿಸ್ಟೆಂಟ್ ಗವರ್ನರ್ ಪ್ರತಾಪ್‌ಸಿಂಹ ನಾಯಕ್‌ರವರರು ಈ ಸಂದರ್ಭದಲ್ಲಿ ಪದಪ್ರದಾನ ಮಾಡಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.