ಬೆಂಗಳೂರು: ದಿವಂಗತ ಮುತ್ತಪ್ಪ ರೈ ಅವರ ಆಸ್ತಿಯಲ್ಲಿ ಮೂರನೇ ಒಂದು ಭಾಗದಷ್ಟು ಪಾಲು ತನಗೆ ನೀಡಬೇಕು ಎಂದು ಎರಡನೇ ಪತ್ನಿ ಅನುರಾಧಾ ಅವರು ಬೆಂಗಳೂರು ಸಿಟಿ ಸಿವಿಲ್ ಕೋರ್ಟ್ನಲ್ಲಿ ದಾವೆ ಹೂಡಿದ್ದಾರೆ.
ಮುತ್ತಪ್ಪ ರೈ ಅವರ ಒಟ್ಟು ಆಸ್ತಿಯ ಮೂರನೇ ಒಂದು ಭಾಗ ತನಗೆ ಸೇರಬೇಕಿದೆ. ತನಗೆ ಬರಬೇಕಾದ ಆಸ್ತಿಯನ್ನು ಹಂಚಿಕೆ ಮಾಡಿಕೊಡಲು ಸೂಚನೆ ನೀಡಬೇಕು ಎಂದು ಅನುರಾಧ ಅವರು ಅರ್ಜಿಯಲ್ಲಿ ಕೇಳಿಕೊಂಡಿದ್ದಾರೆ. ಮುತ್ತಪ್ಪ ರೈ ಅವರ ಮೊದಲ ಪತ್ನಿಯ ಮಕ್ಕಳಾದ ರಾಕಿ ರೈ ಹಾಗೂ ರಿಕ್ಕಿ ರೈ ಸೇರಿದಂತೆ ಒಟ್ಟು 17 ಮಂದಿಯನ್ನು ಪ್ರತಿವಾದಿಗಳನ್ನಾಗಿ ಮಾಡಿ, ದಾವೆ ಹೂಡಲಾಗಿದೆ. ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಲಯ, ಆಗಸ್ಟ್ ೪ಕ್ಕೆ ವಿಚಾರಣೆಯನ್ನು ಮುಂದೂಡಿದೆ.
ಪತಿ – ಪತ್ನಿ ವಿರಸ:
ಮುತ್ತಪ್ಪ ರೈ ಹಾಗೂ ಅವರ ಎರಡನೇ ಪತ್ನಿ ಅನುರಾಧಾ ಅವರ ನಡುವೆ ವಿರಸ ಏರ್ಪಟ್ಟಿದ್ದು ನಿಜ ಎಂದು ಮುತ್ತಪ್ಪ ರೈ ಅವರ ಆಪ್ತ ಮೂಲಗಳು ಒಪ್ಪಿಕೊಂಡಿವೆ. ಮುತ್ತಪ್ಪ ರೈ ಅವರು ಕ್ಯಾನ್ಸರ್ ರೋಗಕ್ಕೆ ತುತ್ತಾಗಿದ್ದಾರೆ. ಇನ್ನು ಹೆಚ್ಚು ದಿನ ಬದುಕುಳಿಯುವುದಿಲ್ಲ ಎಂದು ವೈದ್ಯರು ಹೇಳಿದ ಬಳಿಕ ಅನುರಾಧಾ ಅವರು ಗಲಾಟೆ ಮಾಡುತ್ತಿದ್ದರು. ತನ್ನನ್ನು ನಿರ್ಲಕ್ಷಿಸಲಾಗುತ್ತಿದೆ ಎಂದು ಹೇಳಿಕೊಂಡು ಜಗಳಕ್ಕೆ ಮುಂದಾಗುತ್ತಿದ್ದರು. ಆದರೂ ಮುತ್ತಪ್ಪ ರೈ ಅವರು ತನ್ನ ಎರಡನೇ ಪತ್ನಿಗೆ 55 ಲಕ್ಷ ರೂ.ನ ಬೆಂಜ್ ಕಾರ್, ಮನೆ ನಿರ್ಮಾಣಕ್ಕಾಗಿ ೨ ಕೋಟಿ ರೂ., ೧ ಕೋಟಿ ರೂ.ನಷ್ಟು ಒಡವೆ, ೨ ಎಕರೆಯಷ್ಟು ಜಾಗ, 60-70 ಲಕ್ಷ ರೂ.ನಷ್ಟು ನಗದು ಹಣವನ್ನು ನೀಡಿದ್ದರು. ಆದರೂ ಅನಾರೋಗ್ಯ ಹೆಚ್ಚಾಗುತ್ತಿದ್ದಂತೆ ಪತಿಯ ಜತೆ ಜಗಳ ಮಾಡಿ ತೆರಳಿದ್ದರು. ಇದೀಗ ಕೋರ್ಟ್ನಲ್ಲಿ ದಾವೆ ಹೂಡಿದ್ದಾರೆ. ಹಾಗಾದರೆ ಇದರ ಹಿಂದಿನ ಅರ್ಥ ಏನು ಎಂದು ಆಪ್ತ ಮೂಲಗಳು ಪ್ರಶ್ನಿಸಿವೆ.
ಮುತ್ತಪ್ಪ ರೈ ಅವರು ಅನಾರೋಗ್ಯಕ್ಕೆ ತುತ್ತಾಗಿರುವುದು ೨೦೧೯ರ ಮೇನಲ್ಲಿ ಬೆಳಕಿಗೆ ಬಂದಿತ್ತು. ಮುಂದಿನ ವರ್ಷ ಅಂದರೆ 2020ರ ಮೇ.15ರಂದು ನಿಧನರಾದರು. ಇದರ ನಡುವೆ ಅಂದರೆ ಡಿಸೆಂಬರ್ ಮೊದಲ ವಾರದಲ್ಲಿ ಮುತ್ತಪ್ಪ ರೈ ಅವರ ಆರೋಗ್ಯ ಸ್ಥಿತಿ ತೀರಾ ಹದಗೆಟ್ಟಿದ್ದು, ಆಸ್ಪತ್ರೆಗೆ ದಾಖಲಾಗಿದ್ದರು. ಈ ಸಂದರ್ಭ ತನ್ನ ಪಾಲುದಾರರಿಗೆ ಹಂಚಿಕೆ ಮಾಡಬೇಕಾದ ಆಸ್ತಿಯ ಬಗ್ಗೆ ಮಕ್ಕಳ ಜೊತೆ ಮಾತುಕತೆ ನಡೆಸಿದ್ದರು. ಆಸ್ಪತ್ರೆಗೆ ದಾಖಲಾಗಿದ್ದ ಮುತ್ತಪ್ಪ ರೈ ಅವರನ್ನು ಅವರ ಮಗ ನೋಡಿಕೊಂಡಿದ್ದರು. ಇದರ ನಡುವೆ ತಾನು ಬರುತ್ತೇನೆ ಎಂದು ಫೋನಾಯಿಸಿ ಅನುರಾಧಾ ಅವರು ಕೇಳಿಕೊಂಡಿದ್ದರು. ೨ ದಿನದಲ್ಲಿ ಮಗ ಹೋಗುತ್ತಾನೆ, ಆಮೇಲೆ ನೀನು ಬಾ ಎಂದು ಮುತ್ತಪ್ಪ ರೈ ಅವರು ಹೇಳಿದ್ದರು. ಆಸ್ಪತ್ರೆಯಿಂದ ಮನೆಗೆ ಹಿಂದಿರುಗಿದ ದಿನ ಮುತ್ತಪ್ಪ ರೈ ಅವರು ಅನುರಾಧಾ ಅವರಿಗೆ ಫೋನ್ ಮಾಡಿ, ಮನೆಗೆ ಬರುವಂತೆ ತಿಳಿಸಿದ್ದರು. ಆದರೆ ಅನುರಾಧಾ ಅವರು ರಾತ್ರಿ ಹೊತ್ತು ಕರೆ ಮಾಡಿ, ನೀವು ನನ್ನನ್ನು ನಿರ್ಲಕ್ಷ್ಯ ಮಾಡುತ್ತಿದ್ದೀರಿ. ನಿಮ್ಮ ಮೇಲೆ ಪ್ರಕರಣ ಹೂಡಲಾಗುವುದು ಎಂದು ಹೇಳಿದ್ದರು ಎಂದು ಮುತ್ತಪ್ಪ ರೈ ಅವರ ಆಪ್ತಮೂಲಗಳು ವಿವರಿಸಿವೆ.
ಒಂದು ವೇಳೆ ತಾನು ಮೃತಪಟ್ಟಾಗ ಅನುರಾಧಾ ಅವರು ಬಂದರೆ ಯಾವುದೇ ರೀತಿಯಲ್ಲಿ ಅಡ್ಡಿ ಮಾಡಬೇಡಿ ಎಂದು ಮುತ್ತಪ್ಪ ರೈ ಅವರು ಕೇಳಿಕೊಂಡಿದ್ದರು. ಅದರಂತೆ ಮುತ್ತಪ್ಪ ರೈ ಮೃತಪಡುವ ಎರಡು ದಿನದ ಹಿಂದೆ ಕೋಮಾಗೆ ಹೋಗಿದ್ದು, ಆಗ ಅನುರಾಧಾ ಅವರು ಆಸ್ಪತ್ರೆಗೆ ಬಂದಿದ್ದರು. ಬಳಿಕ ಮೃತಪಟ್ಟಾಗಲೂ ಬಂದಿದ್ದರು. ೨೦೧೯ರ ಮೇನಿಂದ ಡಿಸೆಂಬರ್ವರೆಗೆ ಒಟ್ಟಾಗಿ ಇದ್ದರೂ, ಗಂಡನ ಬಗ್ಗೆ ಕಾಳಜಿ ವಹಿಸಿಲ್ಲ ಎಂದು ಮೂಲಗಳು ಆರೋಪಿಸಿವೆ.