ಪುತ್ತೂರು: ಉತ್ತರ ಪ್ರದೇಶದ ಕಾರ್ಮಿಕನೋರ್ವ ತನ್ನ ತಲೆಯನ್ನು ಕಲ್ಲಿಗೆ ಜಜ್ಜಿಕೊಂಡು ತೀವ್ರ ಸ್ವರೂಪದಲ್ಲಿ ಗಾಯಗೊಳಿಸಿಕೊಂಡಿರುವ ಘಟನೆ ಜು.9ರಂದು ದರ್ಬೆ ಸಮೀಪ ನಡೆದಿದೆ.
ಪುತ್ತೂರಿನಲ್ಲಿ ಪ್ಲೈವುಡ್ ಸಂಸ್ಥೆಯೊಂದರಲ್ಲಿ ಕಾರ್ಮಿಕನಾಗಿರುವ ಆತನು ದರ್ಬೆ ಫಿಲೋಮಿನಾ ಶಾಲಾ ಮುಂಭಾಗದ ರಸ್ತೆಯ ಬದಿಯಲ್ಲಿ ಕಲ್ಲಿನಿಂದ ಜಜ್ಜಿಕೊಂಡು ತಿರುಗಾಡುತ್ತಿದ್ದ. ಕಲ್ಲಿನಿಂದ ತಲೆ ಹೊಡೆದುಕೊಂಡು ರಕ್ತ ಸುರಿಸುತ್ತಾ ರಸ್ತೆಯಲ್ಲಿ ತಿರುಗಾಡುತ್ತಿದ್ದ ವ್ಯಕ್ತಿಯನ್ನು ದರ್ಬೆ ನಿರೀಕ್ಷನಾ ಮಂದಿರದ ಮುಂಭಾಗದಲ್ಲಿರುವ ಗೂಡ್ಸ್ ಲಾರಿ ಪಾರ್ಕಿಂಗ್ ಬಳಿ ಬರುತ್ತಿದ್ದಾಗ ಅಲ್ಲಿದ್ದ ಚಾಲಕರು ಹಾಗೂ ಸಾರ್ವಜನಿಕರು ಆತನನ್ನು ತಡೆದು ವಿಚಾರಿಸಿದ್ದಾಗ ತಾನು ಪುತ್ತೂರಿನಲ್ಲಿ ಪ್ಲೈವುಡ್ ಸಂಸ್ಥೆಯೊಂದರಲ್ಲಿ ಕಾರ್ಮಿಕನಾಗಿದ್ದು ಉತ್ತರಪ್ರದೇಶದ ರಾಜೇಶ್ ಎಂದು ಹೇಳಿಕೊಂಡಿದ್ದಾನೆ. ತಾನು ಕೆಲಸ ಮಾಡುತ್ತಿರುವ ಸಂಸ್ಥೆಯವರು ಮೊಬೈಲ್ ಹಾಗೂ ಹಣ ಕದ್ದಿರುವ ಬಗ್ಗೆ ನನ್ನ ಮೇಲೆ ಸುಳ್ಳು ಆರೋಪ ಮಾಡಿದ್ದಾರೆ. ಇದರಿಂದ ಮನನೊಂದು ತಾನು ಸಾಯುವುದಕ್ಕಾಗಿ ಈ ರೀತಿ ಮಾಡುತ್ತಿರುವುದಾಗಿ ತಿಳಿಸಿದ್ದಾನೆ. ಸ್ಥಳದಲ್ಲಿದ್ದವರು ಪೊಲೀಸರಿಗೆ ಮಾಹಿತಿ ನೀಡಿದ್ದು ಅವರು ಸ್ಥಳಕ್ಕಾಗಮಿಸಿ ಆತನನ್ನು ತಡೆದು 108 ಆಂಬ್ಯುಲೆನ್ಸ್ನಲ್ಲಿ ಆಸ್ಪತ್ರೆಗೆ ಕರೆತರಲಾಗಿದೆ ಎಂದು ತಿಳಿದು ಬಂದಿದೆ.