ಕೋಟಿ ಚೆನ್ನಯರ ಮೂಲಸ್ಥಾನ ಗೆಜ್ಜೆಗಿರಿಯ ಪ್ರಾಚೀನ ಗದ್ದೆಗೆ ಮರುಹುಟ್ಟು

Puttur_Advt_NewsUnder_1
Puttur_Advt_NewsUnder_1

ಗೆಜ್ಜೆಗಿರಿ ಈಗ ಮತ್ತಷ್ಟು ಸುಂದರ

ತುಳುನಾಡಿನ ಕಾರಣಿಕ ಪುರುಷರಾದ ಕೋಟಿ ಚೆನ್ನಯರ ಮೂಲಸ್ಥಾನ ಗೆಜ್ಜೆಗಿರಿ ನಂದನ ಬಿತ್ತ್‌ಲ್ ಈಗ ಮತ್ತಷ್ಟು ಸುಂದರವಾಗಿ ಕಂಗೊಳಿಸುತ್ತಿದೆ. ಕ್ಷೇತ್ರದ ಎದುರು ಭಾಗದಲ್ಲಿ ವಿಶಾಲವಾದ ಬಾಕಿಮಾರು ಗದ್ದೆಯಲ್ಲಿ ನಳನಳಿಸುವ ಹಸಿರ ಭತ್ತದ ಪೈರು ನಮ್ಮನ್ನು ಹಸಿರಲೋಕಕ್ಕೆ ಕೊಂಡೋಯ್ಯುತ್ತದೆ. ಒಟ್ಟಿನಲ್ಲಿ ಕ್ಷೇತ್ರ ಈಗ ಮತ್ತಷ್ಟು ಸುಂದರವಾಗಿ ಕಂಗೊಳಿಸುತ್ತಿದೆ. ಬನ್ನಿ ಒಂದ್ಸಲ ನೋಡಿಕೊಂಡು ಬರೋಣ…

ಪುತ್ತೂರು : ಅವಳಿ ವೀರರಾದ ಕೋಟಿ ಚೆನ್ನಯರು ಬಾಳಿ ಬೆಳಗಿದ್ದ ಮಣ್ಣಲ್ಲಿ 500 ವರ್ಷಗಳ ಹಿಂದಿನ ಗದ್ದೆಗೆ ಹೊಸ ರೂಪ ನೀಡಲಾಗಿದೆ. ದೇಯಿ ಬೈದ್ಯೆತಿ ಕೋಟಿ ಚೆನ್ನಯರ ಮೂಲಕ್ಷೇತ್ರವಾದ ಗೆಜ್ಜೆಗಿರಿ ನಂದನ ಬಿತ್ತ್‌ಲ್ ಜೀರ್ಣೋದ್ಧಾರಗೊಂಡ ಬೆನ್ನಲ್ಲೇ ಪ್ರಾಚೀನ ಗದ್ದೆಯೂ ಇಲ್ಲಿ ಹೊಸ ರೂಪದಲ್ಲಿ ಮರುಹುಟ್ಟು ಪಡೆದಿದೆ.

ಅದರಲ್ಲೂ ವಿಶೇಷವಾಗಿ, ಸ್ವತಃ ಕೋಟಿಚೆನ್ನಯರು ಮೂಲಕ್ಷೇತ್ರದಲ್ಲಿ ನಡೆದ ಮೊದಲ ನೇಮೋತ್ಸವದಲ್ಲಿ ನರ್ತನ ಸೇವಾ ರೂಪದಲ್ಲಿ ಕಂಗೊಳಿಸಿದ ರಂಗಸ್ಥಳದಲ್ಲೂ ಭತ್ತದ ಪೈರು ನಳನಳಿಸಲಾರಂಭಿಸಿದ್ದು, ತುಳುನಾಡಿನ ಕೃಷಿ

ಮತ್ತು ದೈವಾರಾಧನಾ ಪರಂಪರೆಗಿರುವ ಸಂಬಂಧಕ್ಕೆ ಹೊಸ ಬಾಷ್ಯ ಬರೆಯಲಾಗಿದೆ. ಮೂಲಸ್ಥಾನ ಗೆಜ್ಜೆಗಿರಿಯಲ್ಲಿ ಬಾಲ್ಯಾವಸ್ಥೆಯಿಂದ ಯೌವನಾವಸ್ಥೆಯವರೆಗಿನ ೨೮ ವರ್ಷಗಳ ಬದುಕನ್ನು ಕಳೆದಿದ್ದ ಕೋಟಿ ಚೆನ್ನಯರು ಕೃಷಿ ಪ್ರಧಾನ ಕುಟುಂಬದಲ್ಲೇ ಬೆಳಗಿದವರು. ಏರಾಕೆ ಬರ್ಕೆ ಮನೆತನವಾಗಿದ್ದ ಗೆಜ್ಜೆಗಿರಿಯಲ್ಲಿ ಕೋಟಿ ಚೆನ್ನಯರ ಮಾವ ಸಾಯನ ಬೈದ್ಯರು ತಮ್ಮ ಹಿರಿಯರ ಬಳುವಳಿಯಾದ ಕೃಷಿಯನ್ನು ಮುನ್ನಡೆಸಿ ಕಾಯಕ ಯೋಗಿ ಎನಿಸಿಕೊಂಡವರು.

ಏರಾಜೆ ಬರ್ಕೆಯ ಬಾಕಿಮಾರ್ ಕೋಟಿ ಚೆನ್ನಯರ ಬದುಕಿನಲ್ಲಿ ಪ್ರಭಾವ ಬೀರಿತ್ತು. ಈ ಗದ್ದೆ ಮಾತ್ರವಲ್ಲದೆ, ಪಡುಮಲೆ ಬಲ್ಲಾಳರು ನೀಡಿದ ಪ್ರತ್ಯೇಕ ಗದ್ದೆಯಲ್ಲೂ ಅವಳಿ ವೀರರು ಕೃಷಿ ಕಾಯಕ ನಡೆಸಿದ್ದರು. ಬಳ್ಳಾಲರು ನೀಡಿದ ಗದ್ದೆ ಮಂತ್ರಿ ಮಲ್ಲಯ್ಯ ಬುದ್ದಿವಂತನ ವಧೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಲ್ಲದೆ, ಇತಿಹಾಸದ ಕಾಲಗರ್ಭದಲ್ಲಿ ಆ ಗದ್ದೆ ಕಣ್ಮರೆಯಾಗುತ್ತಾ ಬಂದು ಇತ್ತೀಚಿನ ದಶಕದಲ್ಲಿ ತೋಟವಾಗಿ ಮಾರ್ಪಟ್ಟಿತ್ತು.

ವಿಶೇಷವೆಂದರೆ ಕೋಟಿ ಚೆನ್ನಯರ ಮೂಲಸ್ಥಾನದ ಗದ್ದೆ ಈಗ ಹೊಸ ರೂಪದೊಂದಿಗೆ ಎದ್ದು ನಿಂತಿದೆ. ಗೆಜ್ಜೆಗಿರಿಯಲ್ಲಿ ಪ್ರಾಚೀನ ಗದ್ದೆ ಅವಶೇಷ ರೂಪದಲ್ಲಿ ಇತ್ತೀಚಿನ ವರ್ಷಗಳವರೆಗೂ ಉಳಿದಿತ್ತು. ಕ್ಷೇತ್ರ ನವೀಕರಣ ಸಂದರ್ಭ ಗದ್ದೆಯ ಬಹುಭಾಗ ನಶಿಸಿ ಹೋಗಿದ್ದು, ಇದೀಗ ಹಳೆಯ ಗದ್ದೆಯ ಸ್ಥಳಕ್ಕೆ ಹೊಸದಾಗಿ ಒಂದಷ್ಟು ಸೇರಿಸಿ ನೂತನವಾಗಿ ವಿಶಾಲ ಬಾಕಿಮಾರ್ ಮರು ನಿರ್ಮಿಸಲಾಗಿದೆ.

ಪರಂಪರೆ ಉಳಿಸುವ ಯತ್ನ…
ಗೆಜ್ಜೆಗಿರಿಯ ಏರಾಕೆ ಬರ್ಕೆ ಮನೆತನ ಕೃಷಿ ಮತ್ತು ಬೈದ್ಯ ವೃತ್ತಿಗೆ ಹೆಸರಾಗಿತ್ತು. ಅಂದಿನ ಗದ್ದೆ ಸಂಪೂರ್ಣ ಮರೆಗೆ ಸಂದುವ ಅಪಾಯದಲ್ಲಿತ್ತು. ಇದನ್ನು ಮನಗಂಡು ಪರಂಪರೆಯ ಉಳಿವಿಗೆ ಮುಂದಾಗಿದ್ದೇವೆ. ಈ ವರ್ಷ ಗೆಜ್ಜೆಗಿರಿ ಮೂಲಸ್ಥಾನದ ಪ್ರತಿಷ್ಠಾ ಬ್ರಹ್ಮಕಲಶೋತ್ಸವವೂ ನಡೆದಿದ್ದು, ಪ್ರಾಚೀನ ಗದ್ದೆ ಸಂರಕ್ಷಣೆಗೆ ಇದೇ ಸಕಾಲ ಎಂದು `ಭಾವಿಸಿ ಹಳೆಯ ಗದ್ದೆಯ ಜಾಗಕ್ಕೆ ಒಂದಷ್ಟು ಸೇರಿಸಿ ಹೊಸದಾಗಿ ವಿಶಾಲ ಗದ್ದೆ ಮಾಡಿದ್ದೇವೆ. ಇದು ಸಾಯನ ಗುರುಗಳು ಮತ್ತು ಕೋಟಿ ಚೆನ್ನಯರ ಮಣ್ಣಿಗೆ ಸಲ್ಲಿಸುವ ಗೌರವ. ಕಳೆದ ಮಾರ್ಚ್ ೧ರಂದು ನಡೆದ ಗೆಜ್ಜೆಗಿರಿಯ ಮೊದಲ ನೇಮೋತ್ಸವದಲ್ಲಿ ಕೋಟಿ ಚೆನ್ನಯರು ನೇಮೋತ್ಸವದಲ್ಲಿ ನರ್ತನ ಸೇವೆ ನಡೆಸಿದ ರಂಗಸ್ಥಳದಲ್ಲೂ ಗದ್ದೆ ಮಾಡುವ ಮೂಲಕ ಸತ್ಯದ ಬೆಳೆಗೆ ಪ್ರಾರ್ಥಿಸಿದ್ದೇವೆ ಎಂದು ಕ್ಷೇತ್ರದ ಯಜಮಾನರಾದ ಶ್ರೀಧರ ಪೂಜಾರಿ ಹೇಳುತ್ತಾರೆ.

ಗದ್ದೆ ಜತೆಗಿನ ಬೆಸುಗೆ
ಕೋಟಿ ಚೆನ್ನಯರಿಗೂ ಭತ್ತದ ಗದ್ದೆಗೂ ಎಲ್ಲಿಲ್ಲದ ನಂಟು. ಸ್ವತಃ ವೀರರು ತಮ್ಮ ಮೂಲ ಮನೆಯಾದ ಗೆಜ್ಜೆಗಿರಿಯಲ್ಲಿ ಬೇಸಾಯ ಮಾಡಿದ್ದರು. ಪಡುಮಲೆ ಬಳ್ಳಾಲರು ನೀಡಿದ ಪ್ರತ್ಯೇಕ ಗದ್ದೆಯಲ್ಲಿ ಸಾಗುವಳಿ ಮಾಡಿದ್ದರು. ಎಣ್ಮೂರು ಬೀಡಿಗೆ ಹೋದ ಮೇಲೆ ಅಲ್ಲೂ ಬೇಸಾಯ ಮಾಡಿದ್ದರು. ಸಮೃದ್ಧ ಬೇಸಾಯಕ್ಕೆ ಕೋಟಿ ಚೆನ್ನಯರ ಅನುಗ್ರಹ ಬೇಡುವ ಪರಂಪರೆ ಈಗಲೂ ಇದೆ. ಬೈದೇರುಗಳ ನೇಮೋತ್ಸವದಲ್ಲಿ ಭತ್ತದ ಕುರುಂಟು ಒಪ್ಪಿಸುವ ನಂಬಿಕೆ ಇದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.