ಪುತ್ತೂರು: ಕೋಲಾರ ಜಿಲ್ಲೆಯ ಬಂಗಾರಪೇಟೆ ತಹಶೀಲ್ದಾರ್ ಹತ್ಯೆ ಖಂಡಿಸಿ, ಹತ್ಯೆ ಅರೋಪಿ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ಆಗ್ರಹಿಸಿ ಮತ್ತು ಸರಕಾರಿ ನೌಕರರಿಗೆ ಅಗತ್ಯ ರಕ್ಷಣೆ ನೀಡುವ ಕುರಿತು ತಾಲೂಕು ಸರಕಾರಿ ನೌಕರರ ಸಂಘದಿಂದ ಶಾಂತಿಯುತ ಪ್ರತಿಭಟನೆ ಮತ್ತು ಸಹಾಯಕ ಆಯುಕ್ತರಿಗೆ ಮನವಿ ಹಸ್ತಾಂತರ ಕಾರ್ಯಕ್ರಮವು ಜು.೧೦ ರಂದು ಮಿನಿ ವಿಧಾನಸೌಧದ ಎದುರು ಹಮ್ಮಿಕೊಳ್ಳಲಾಗಿತ್ತು.
ಜುಲೈ ೯ ರಂದು ತಹಶೀಲ್ದಾರ್ ಬಿ.ಕೆ ಚಂದ್ರಮೌಳೇಶ್ವರರವರು ಬಂಗಾರಪೇಟೆ ತಾಲೂಕಿನ ಕಾಮಸಮುದ್ರ ಹೋಬಳಿ, ತೊಪ್ಪನಹಳ್ಳಿ ಗ್ರಾಮದ ರಾಮಮೂರ್ತಿ ಹಾಗೂ ವೆಂಕಟಪತಿ ಜಮೀನಿನ ವ್ಯಾಜ್ಯದ ಸಂಬಂಧ ಪೋಲಿಸ್ ರಕ್ಷಣೆಯಲ್ಲಿ ಜಂಟಿ ಸರ್ವೆ ಕಾರ್ಯನಿರತರಾಗಿದ್ದ ಸಂದರ್ಭದಲ್ಲಿ ಆರೋಪಿ ವೆಂಕಟಪತಿರವರು ಪೊಲೀಸರ ಸಮ್ಮುಖದಲ್ಲಿ ಏಕಾಏಕಿ ಚಾಕುವಿನಿಂದ ಇರಿದು ಹತ್ಯೆಯಾಗಿರುವ ಕೃತ್ಯವನ್ನು ಸಮಸ್ತ ರಾಜ್ಯ ಸರಕಾರಿ ನೌಕರರು ಹಾಗೂ ಕರ್ನಾಟಕ ಸರಕಾರಿ ನೌಕರರ ಸಂಘವು ತೀವೃವಾಗಿ ಖಂಡಿಸುತ್ತದೆ ಎಂದು ಮನವಿಯಲ್ಲಿ ವಿವರಿಸಿದ್ದಾರೆ.
ರಾಜ್ಯಾದ್ಯಂತ ಸರಕಾರಿ ಅಧಿಕಾರಿಗಳು ಕರ್ತವ್ಯ ನಿರ್ವಹಿಸುವ ಸಂದರ್ಭಗಳಲ್ಲಿ ಇಂತಹ ಘಟನೆಗಳು ಆಗಿಂದಾಗ್ಗೆ ಸಂಭವಿಸುತ್ತಿದ್ದು, ಅದರಲ್ಲೂ ಕ್ಷೇತ್ರ ಇಲಾಖೆಗಳಾದ ಕಂದಾಯ, ಭೂಮಾಪನ, ಗ್ರಾಮೀಣಾಭಿವೃದ್ಧಿ, ಪಂಚಾಯತ್ರಾಜ್ ಇಲಾಖೆ ಮತ್ತು ಆರೋಗ್ಯ ಇಲಾಖೆ ಸೇರಿದಂತೆ ಹಲವು ಇಲಾಖೆಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳ ಮೇಲೆ ಹಲ್ಲೆ ಹಾಗೂ ದೌರ್ಜನ್ಯಗಳು ನಡೆಯುತ್ತಿವೆ. ಮುಂದುವರೆದು ರಾಜ್ಯ ಸರಕಾರದ ಯೋಜನೆ ಹಾಗೂ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ಕಾರ್ಯಾಂಗ ಕ್ಷೇತ್ರದ ಅಧಿಕಾರಿ, ನೌಕರರ ವರ್ಗ ಆತಂಕ ಹಾಗೂ ಭಯದಿಂದ ಕರ್ತವ್ಯ ನಿರ್ವಹಿಸುವ ವಾತಾವರಣ ಸೃಷ್ಟಿಯಾಗುತ್ತಿವೆ. ರಾಜ್ಯದಲ್ಲಿ ಕಠಿಣ ಕಾನೂನುಗಳು ಜಾರಿಯಲ್ಲಿರದ ಕಾರಣ ಇಂತಹ ಕೃತ್ಯಗಳು ಮರುಕಳಿಸುತ್ತಿದ್ದು, ಇಂತಹ ಪರಿಸ್ಥಿತಿಗಳು ಮರುಕಳಿಸದಂತೆ ಕಠಿಣ ಕಾನೂನುಗಳನ್ನು ರಾಜ್ಯ ಸರಕಾರ ರೂಪಿಸುವುದು ಅತೀ ಅವಶ್ಯಕವಾಗಿದೆ ಎಂದು ಸಹಾಯಕ ಆಯುಕ್ತರಿಗೆ ಹಸ್ತಾಂತರಿಸಿದ ಮನವಿಯಲ್ಲಿ ವಿವರಿಸಿದೆ.
ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ಮೌರಿಸ್ ಮಸ್ಕರೇನ್ಹಸ್ರವರು ಮಾತನಾಡಿ, ಬಂಗಾರಪೇಟೆ ತಹಶೀಲ್ದಾರ್ ಚಂದ್ರಮೌಲೇಶ್ವರವರು ಕರ್ತವ್ಯ ನಿರ್ವಹಿಸಿದ್ದ ಸಂದರ್ಭದಲ್ಲಿ ಅವರ ಹತ್ಯೆಯಾಗಿರುವುದು ವಿಷಾದನೀಯ. ತಹಶೀಲ್ದಾರ್ರವರ ಹತ್ಯೆ ಖಂಡಿಸುತ್ತದೆ ಮಾತ್ರವಲ್ಲ ಶೀಘ್ರ ಆರೋಪಿಗಳ ಪತ್ತೆ ಮಾಡಿ ಅವರಿಗೆ ಕಠಿಣ ಶಿಕ್ಷೆ ಕೊಡುವ ಕುರಿತಾಗಿ ಸರಕಾರಿ ನೌಕರರ ಸಂಘದಿಂದ ಸಲ್ಲಿಸುವ ಈ ಮನವಿಯು ಸರಕಾರ ಪರಿಗಣಿಸುವಂತೆ ಶಿಫಾರಸ್ಸು ಮಾಡುವಂತಾಗಬೇಕು ಎಂದರು.
ಮನವಿ ಸ್ವೀಕರಿಸಿ ಮಾತನಾಡಿದ ಸಹಾಯಕ ಆಯುಕ್ತ ಡಾ|ಯತೀಶ್ ಉಳ್ಳಾಲ್ರವರು, ಕರ್ತವ್ಯದಲ್ಲಿರುವಾಗಲೇ ತಹಶೀಲ್ದಾರ್ ಚಂದ್ರಮೌಲೇಶ್ವರವರ ಹತ್ಯೆಯಾಗಿರುವುದು ಬೇಸರದ ಸಂಗತಿ. ರಾಜ್ಯಾದ್ಯಾಂತ ಎಲ್ಲಾ ಸರಕಾರಿ ನೌಕರರ ಶಾಖೆಗಳು ಪ್ರತಿಭಟನೆ ಮಾಡುವ ಮೂಲಕ ಮೃತ ತಹಶೀಲ್ದಾರ್ರವರ ಹತ್ಯೆಗೆ ಸಂಬಂಧಿಸಿದ ಆರೋಪಿಗೆ ಕಠಿಣ ಶಿಕ್ಷೆ ವಿಧಿಸುವಂತಾದಾಗ ಸರಕಾರಿ ನೌಕರರಿಗೆ ರಕ್ಷಣೆ ಸಿಗುವಂತಾಗುತ್ತದೆ ಎಂದು ಹೇಳಿದ ಅವರು ಮನವಿಯನ್ನು ಶೀಘ್ರ ಸರಕಾರದ ಗಮನಕ್ಕೆ ತರುತ್ತೇವೆ ಎಂದರು.
ತಾಲೂಕು ಸರಕಾರಿ ನೌಕರರ ಸಂಘದ ಸಂಘಟನಾ ಕಾರ್ಯದರ್ಶಿ ಅಬ್ರಹಾಂ ಎಸ್.ಎ ಮನವಿಯನ್ನು ಓದಿದರು. ಸಂಘದ ಕಾರ್ಯದರ್ಶಿ ರಾಮಚಂದ್ರ ವಂದಿಸಿದರು. ಕೋಶಾಧಿಕಾರಿ ನಾಗೇಶ್ ಕೆ, ಜಿಲ್ಲಾ ಪ್ರತಿನಿಧಿ ಮಾಮಚ್ಚನ್ ಎಂ ಸೇರಿದಂತೆ ಆಯಾ ಇಲಾಖೆಯ ಸರಕಾರಿ ನೌಕರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಪ್ರತಿಭಟನೆ ಮುನ್ನ ಮೃತರಾದ ತಹಶೀಲ್ದಾರ್ ಚಂದ್ರಮೌಳೇಶ್ವರವರ ಆತ್ಮಕ್ಕೆ ಚಿರಶಾಂತಿ ಕೋರಿ ಒಂದು ನಿಮಿಷದ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.
ಆಗ್ರಹಗಳು…
-ಕರ್ನಾಟಕ ರಾಜ್ಯ ಸರಕಾರಿ ನೌಕರರ ಮೇಲೆ ಇಂತಹ ಕೃತ್ಯ ಎಸಗಿದ ಅಪರಾಧಿಯನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸುವುದು.
-ರಾಜ್ಯದ ಸರಕಾರಿ ನೌಕರರು ನಿರ್ಭೀತಿಯಿಂದ ಕಾರ್ಯನಿರ್ವಹಿಸುವ ವಾತಾವರಣ ನಿರ್ಮಾಣ ಮಾಡಲು ಅಗತ್ಯ ರಕ್ಷಣಾ ಕ್ರಮಗಳನ್ನು ಕೈಗೊಳ್ಳುವುದು.
-ಮೃತರ ಕುಟುಂಬಕ್ಕೆ ಸರಕಾರದಿಂದ ಗರಿಷ್ಟ ಮಟ್ಟದ ಪರಿಹಾರವನ್ನು ನೀಡುವುದು.
-ಮೃತರ ಕುಟುಂಬದ ಸದಸ್ಯರೊಬ್ಬರಿಗೆ ಅನುಕಂಪದ ಆಧಾರದ ಮೇಲೆ ನೇಮಕಾತಿ ನೀಡುವುದು.
-ಮೃತರ ಕುಟುಂಬಕ್ಕೆ ಸರಕಾರದಿಂದ ದೊರೆಯಬೇಕಾಗಿರುವ ಎಲ್ಲಾ ಆರ್ಥಿಕ ಸೌಲಭ್ಯಗಳನ್ನು ಶೀಘ್ರವಾಗಿ ಬಿಡುಗಡೆ ಮಾಡುವುದು.