HomePage_Banner
HomePage_Banner
HomePage_Banner
HomePage_Banner

ಕೊರೋನಾ ಎಫೆಕ್ಟ್: ಪದವಿ ಪರೀಕ್ಷೆಗಳು ರದ್ದು | ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಮಾತ್ರ ಪರೀಕ್ಷೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕೊರೋನಾ ವೈರಸ್ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಎಲ್ಲ ಪದವಿ ಪರೀಕ್ಷೆಗಳನ್ನು ರದ್ದು ಮಾಡಿದೆ. ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಮಾತ್ರ ಪರೀಕ್ಷೆ ನಡೆಸಲು ಸರಕಾರ ತೀರ್ಮಾನಿಸಿದೆ.

ಮಾರಕ ಕೋವಿಡ್-೧೯ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ರಾಜ್ಯ ಸರ್ಕಾರ ಈ ಮಹತ್ವದ ನಿರ್ಧಾರ ಕೈಕೊಂಡಿದೆ. ೨೦೧೯-೨೦ನೇ ಸಾಲಿನಲ್ಲಿ ಎಂಜಿನಿಯರಿಂಗ್ ಸೇರಿ ಇತರ ಪದವಿ,ಸ್ನಾತಕೋತ್ತರ, ಡಿಪ್ಲೊಮಾ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಧ್ಯಂತರ ಸೆಮಿಸ್ಟರ್ ವಿದ್ಯಾರ್ಥಿಗಳನ್ನು ಅಂತಿಮ ಪರೀಕ್ಷೆ ಇಲ್ಲದೆಯೇ ಮುಂದಿನ ಹಂತಕ್ಕೆ ಉತ್ತೀರ್ಣಗೊಳಿಸುವುದಾಗಿ ಉಪ ಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ್ ಬೆಂಗಳೂರಿನಲ್ಲಿ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸಕ್ತ ಶೈಕ್ಷಣಿಕ ವರ್ಷದ ಅಂತಿಮ ಸೆಮಿಸ್ಟರ್ ಅಥವಾ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಯುಜಿಸಿ ಮಾರ್ಗಸೂಚಿ ಅನ್ವಯ ಸೆಪ್ಟೆಂಬರ್ ಅಂತ್ಯದೊಳಗೆ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ ಎಂದರು. ವಿದ್ಯಾರ್ಥಿಗಳ ಆರೋಗ್ಯ ಮತ್ತು ಭವಿಷ್ಯವನ್ನು ಗಣನೆಗೆ ತೆಗೆದುಕೊಂಡು ಶಿಕ್ಷಣ ತಜ್ಞರು, ವಿವಿಗಳ ಕುಲಪತಿಗಳ ಜತೆ ನಿರಂತರ ಸಮಾಲೋಚನೆ ನಡೆಸಿ ಮಹತ್ವದ ನಿರ್ಧಾರ ಕೈಕೊಳ್ಳಲಾಗಿದೆ. ತೀರ್ಮಾನವನ್ನು ಕೈಗೊಳ್ಳುವ ಮುನ್ನ ಯುಜಿಸಿ ಮಾಡಿರುವ ಶಿಫಾರಸುಗಳು ಹಾಗೂ ಅದರ ನಿಯಮಾವಳಿಗಳನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ. ಈ ನಿರ್ಧಾರ ಪ್ರಸಕ್ತ ಶೈಕ್ಷಣಿಕ ವರ್ಷಕ್ಕೆ (೨೦೧೯-೨೦) ಮಾತ್ರ ಸೀಮಿತವಾಗಿರುತ್ತದೆ. ಸರ್ಕಾರದ ತೀರ್ಮಾನಕ್ಕೆ ಕುಲಾಧಿಪತಿಯೂ ಆಗಿರುವ ರಾಜ್ಯಪಾಲ ವಜೂಭಾಯಿ ವಾಲರವರು ಹಸಿರು ನಿಶಾನೆ ತೋರಿಸಿದ್ದಾರೆ ಎಂದು ಉನ್ನತ ಶಿಕ್ಷಣ ಖಾತೆ ಸಚಿವರೂ ಆಗಿರುವ ಅಶ್ವಥ್ ನಾರಾಯಣ ಅವರು ತಿಳಿಸಿದರು. ಕೋವಿಡ್ ಇಡೀ ಶೈಕ್ಷಣಿಕ ವ್ಯವಸ್ಥೆಯನ್ನು ಬುಡಮೇಲು ಮಾಡಿದೆ. ಸಕಾಲಕ್ಕೆ ತರಗತಿಗಳು ನಡೆಸಲು ಸಾಧ್ಯವಾಗಲಿಲ್ಲ. ಲಾಕ್‌ಡೌನ್ ಸಂದರ್ಭದಲ್ಲಿ ಆನ್‌ಲೈನ್ ಮೂಲಕ ಶಿಕ್ಷಣ ನೀಡಿದ್ದು, ಒಳ್ಳೆಯ ಪ್ರತಿಕ್ರಿಯೆ ಬಂದಿದೆ. ಸಾಧ್ಯವಾದಷ್ಟು ಎಲ್ಲರನ್ನೂ ತಲುಪಲು ಪ್ರಾಮಾಣಿಕ ಪ್ರಯತ್ನ ನಡೆಸಲಾಯಿತು. ಇದರ ನಡುವೆ ಕೆಲವು ದಿನಗಳು ತರಗತಿಗಳನ್ನು ನಡೆಸಿ, ಪರೀಕ್ಷೆ ಮಾಡುವ ಚಿಂತನೆಯೂ ಇತ್ತು. ಆದರೆ, ಕೋವಿಡ್ ವ್ಯಾಪಕವಾಗಿ ಹಬ್ಬುತ್ತಿರುವ ಕಾರಣಕ್ಕೆ ಅವೆಲ್ಲವನ್ನೂ ಕೈಬಿಟ್ಟು ಮಧ್ಯಂತರ ಸೆಮಿಸ್ಟರ್/ವರ್ಷದ ವಿದ್ಯಾರ್ಥಿಗಳನ್ನು ಉತ್ತೀರ್ಣಗೊಳಿಸಲು ನಿರ್ಧರಿಸಲಾಯಿತು. ಅಂತಿಮ ವರ್ಷ/ ಸೆಮಿಸ್ಟರ್‌ನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ, ಸೆಪ್ಟೆಂಬರ್ ತಿಂಗಳ ಅಂತ್ಯದೊಳಗೆ ಪರೀಕ್ಷೆಗಳನ್ನು (ಆನ್‌ಲೈನ್/ಆಫ್ ಲೈನ್) ನಡೆಸಲು ಆಯಾ ವಿಶ್ವವಿದ್ಯಾಲಯಗಳಿಗೇ ಸೂಚಿಸಲಾಗಿದೆ ಎಂದು ಅವರು ವಿವರಿಸಿದರು.

ಮಧ್ಯಂತರ ಸೆಮಿಸ್ಟರ್/ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾ ರ್ಥಿಗಳನ್ನು ಆಂತರಿಕ ಮೌಲ್ಯಮಾಪನ ಮತ್ತು ಹಿಂದಿನ ಸೆಮಿಸ್ಟರ್/ವರ್ಷದ ಅಂಕಗಳ (೫೦:೫೦) ಸಮಗ್ರ ಮೌಲ್ಯಮಾಪನದ ಆಧಾರದ ಮೇಲೆ ತೇರ್ಗಡೆ ಮಾಡಲಾಗುತ್ತದೆ. ಹಿಂದಿನ ವರ್ಷದ ಅಂಕಗಳು ಇಲ್ಲದ ವಿದ್ಯಾರ್ಥಿಗಳನ್ನು (ಉದಾ: ಮೊದಲ ಸೆಮಿಸ್ಟರ್ ವಿದ್ಯಾರ್ಥಿಗಳು) ಪೂರ್ಣ ಅಂತರಿಕ ಮೌಲ್ಯಮಾಪನದ ಮೂಲಕವೇ ಉತ್ತೀರ್ಣಗೊಳಿಸಲಾಗುವುದು ಎಂದು ಮಾಹಿತಿ ನೀಡಿದ ಅಶ್ವತ್ಥ ನಾರಾಯಣರವರು ತಮ್ಮ ಅಂಕಗಳನ್ನು ಉತ್ತಮಗೊಳಿಸಿಕೊಳ್ಳಬೇಕೆನ್ನುವ ವಿದ್ಯಾರ್ಥಿಗಳು ಸೆಮಿಸ್ಟರ್‌ನಲ್ಲಿ ಪ್ರತ್ಯೇಕವಾಗಿ ಪರೀಕ್ಷೆಗಳನ್ನು ಬರೆಯಲು ಅವಕಾಶ ನೀಡಲಾಗುವುದು. ಬ್ಯಾಕ್‌ಲಾಗ್ ವಿಷಯಗಳ ಕ್ಯಾರಿ ಓವರ್‌ಗೂ ಅವಕಾಶ ಇರುತ್ತದೆ.ಈ ಸಂಬಂಧ ಯಾವುದೇ ಅನುಮಾನಗಳು ಇದ್ದರೂ ದೂರವಾಣಿ ಸಂಖ್ಯೆ- ೦೮೦ ೨೨೩೪೧೩೯೪ಗೆ ಕರೆ ಮಾಡಬಹುದು ಎಂದು ಹೇಳಿದರು.

ವಿದ್ಯಾರ್ಥಿಗಳ ಶೈಕ್ಷಣಿಕ ಮೌಲ್ಯಮಾಪನ ಮತ್ತು ಅವರ ಉದ್ಯೋಗ- ಮತ್ತಿತರ ಭವಿಷ್ಯಕ್ಕೆ ಧಕ್ಕೆಯಾಗದಂತೆ ಅಂತಿಮ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲಾಗುತ್ತಿದೆ. ಉನ್ನತ ಶಿಕ್ಷಣ ಪದ್ಧತಿಯಲ್ಲಿ ಶೈಕ್ಷಣಿಕ ಮೌಲ್ಯಮಾಪನ ಅಗತ್ಯ. ಆದ್ದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಕ್ಷಮತೆಯನ್ನು ಗಣನೆಗೆ ತೆಗೆದುಕೊಳ್ಳಲೇಬೇಕಾಗುತ್ತದೆ. ಉದ್ಯೋಗದಾತ ಕಂಪನಿಗಳು ಕೂಡ ಉದ್ಯೋಗಾ ಕಾಂಕ್ಷಿಗಳ ಶೈಕ್ಷಣಿಕ ಗುಣಮಟ್ಟ ಹಾಗೂ ಅವರು ಗಳಿಸಿರುವ ಶ್ರೇಣಿಯನ್ನು ಗುರುತಿಸುತ್ತವೆ. ಇವರಿಗೆ ಪರೀಕ್ಷೆ ನಡೆಸದಿದ್ದರೆ ಭದಲ್ಲಿ ತೊಂದರೆಯಾಗುವುದು ಖಚಿತ. ಹೀಗಾಗಿ ಈ ಪರೀಕ್ಷೆಗೆ ಬೇಕಾದ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಎಲ್ಲ ವಿವಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದ ಅವರು, ೨೦೨೦-೨೧ರ ಶೈಕ್ಷಣಿಕ ಸಾಲಿನ ಮೊದಲ ಸೆಮಿಸ್ಟರ್‌ಗೆ ಸೆಪ್ಟೆಂಬರ್ ೧ರಿಂದಲೇ ಆನ್‌ಲೈನ್ ತರಗತಿಗಳು ಹಾಗೂ ಅಕ್ಟೋಬರ್ ೧ರಿಂದ ಆಫ್‌ಲೈನ್ ತರಗತಿಗಳು ಆರಂಭವಾಗುತ್ತವೆ. ಅದಕ್ಕೆ ಬೇಕಾದ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ವಿವಿಗಳು, ಕಾಲೇಜುಗಳಿಗೆ ಸೂಚಿಸಲಾಗಿದೆ ಎಂದರು. ಕೋವಿಡ್- ೧೯ ಇಡೀ ಶೈಕ್ಷಣಿಕ ವ್ಯವಸ್ಥೆಗೆ ದೊಡ್ಡ ಪೆಟ್ಟು ನೀಡಿದೆ. ವಿದ್ಯಾರ್ಥಿಗಳ ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಜತೆಗೆ ಅವರ ಭವಿಷ್ಯದ ಬಗ್ಗೆಯೂ ನಿರ್ಧರಿಸುವ ಸವಾಲು ಸರಕಾರದ ಮುಂದಿತ್ತು. ಶಿಕ್ಷಣ ತಜ್ಞರು, ವಿವಿಗಳ ಕುಲಪತಿಗಳ ಜತೆ ಸಮಾಲೋಚನೆ ನಡೆಸಿದ ನಂತರ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದ ಅವರು ಸಿಇಟಿ ಪರೀಕ್ಷೆಗಳು, ಕೆ-ಸೆಟ್ ಪರೀಕ್ಷೆಗಳು ನಿಗದಿಯಂತೆ ಇದೇ ತಿಂಗಳ ೩೦ ಮತ್ತು ೩೧ ರಂದು ನಡೆಯಲಿವೆ ಎಂಬುದನ್ನು ಸ್ಪಷ್ಟಪಡಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.