ಪುತ್ತೂರು:ಕೊರೋನಾ ಸೋಂಕಿನ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿರುವ ಪರಿಣಾಮ ಕೊರೋನಾ ಪ್ರಕರಣಗಳನ್ನು ಅತೀ ತ್ವರಿಗತಿಯಲ್ಲಿ ಪತ್ತೆ ಮಾಡಲು ರ್ಯಾಪಿಡ್ ಆಂಟಿಜನ್ ಪರೀಕ್ಷೆ ಕಿಟ್ ಪುತ್ತೂರಿಗೂ ಬರಲಿದೆ.
ಇತ್ತೀಚೆಗೆ ಬೆಂಗಳೂರಿನಲ್ಲಿ ಗೃಹ ಮತ್ತು ಆರೋಗ್ಯ ಸಚಿವರ ಕಾರ್ಯಪಡೆ ಎಲ್ಲಾ ಆಸ್ಪತ್ರೆಗಳಲ್ಲಿ ಈ ಕಿಟ್ನ್ನು ಉಪಯೋಗಿಸುವಂತೆ ತೀರ್ಮಾನಿಸಿತ್ತು. ರ್ಯಾಪಿಡ್ ಆಂಟಿಜನ್ ಪರೀಕ್ಷೆಯಿಂದ ಗಂಟಲು ದ್ರವದಲ್ಲಿ ವೈರಸ್ ಇದೆಯೇ ಎಂಬುದನ್ನು ಬೇಗನೆ ಪತ್ತೆ ಮಾಡಬಹುದಾಗಿದ್ದು ಈ ಮೂಲಕ ಕೋವಿಡ್ ಪರೀಕ್ಷೆಯ ಪ್ರಕ್ರಿಯೆಗೆ ವೇಗ ನೀಡಲು ಸಾಧ್ಯವಿದೆ ಎಂಬ ಮಾಹಿತಿ ಇದೆ.ಆಂಟಿಜನ್ ಕಿಟ್ನಿಂದ ಕೊರೋನಾ ವೈರಸ್ ಅನ್ನು ಕೇವಲ 30 ನಿಮಿಷಗಳಲ್ಲಿ ಪತ್ತೆ ಮಾಡಬಹುದಾಗಿದೆ.ಈ ಹಿಂದೆ ಶಂಕಿತ ವ್ಯಕ್ತಿಗಳನ್ನು ಕೊರೋನಾ ಪರೀಕ್ಷೆಗೆ ಒಳಪಡಿಸಿದರೆ ಅದರ ವರದಿಗಾಗಿ 24ರಿಂದ 48 ಗಂಟೆಗಳ ಕಾಲ ಕಾಯಬೇಕಾಗಿತ್ತು.ಇದರಿಂದ ವ್ಯಕ್ತಿಯ ಆರೋಗ್ಯದಲ್ಲಿ ಏರುಪೇರಾಗುತ್ತಿತ್ತು. ಈಗ ಅತಿ ಬೇಗನೆ ಪರೀಕ್ಷಾ ವರದಿ ಸಿಗುವುದರಿಂದ ತಕ್ಷಣವೇ ಚಿಕಿತ್ಸೆ ಆರಂಭಿಸಬಹುದು.ಮರಣ ಪ್ರಮಾಣವನ್ನೂ ತಗ್ಗಿಸಬಹುದು.ಈ ಕಿಟ್ಗಳನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗಳಲ್ಲಿ ಉಪಯೋಗಿಸುವ ಸಿದ್ದತೆ ನಡೆಸಲಾಗಿದ್ದು, ಕೋವಿಡ್ ಪ್ರಕರಣ ಪತ್ತೆಯಾದ ತಕ್ಷಣ ಸರಕಾರಿ ಅಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ನೀಡುವ ಕುರಿತು ಪುತ್ತೂರು ಖಾಸಗಿ ಆಸ್ಪತ್ರೆಗಳು ಚಿಂತನೆ ನಡೆಸಿವೆ.
ರೂ. 600-700 ಪರೀಕ್ಷಾ ಶುಲ್ಕ?
ರ್ಯಾಪಿಡ್ ಆಂಟಿಜನ್ ಕಿಟ್ ಮೂಲಕ ಕೊರೋನಾ ಪರೀಕ್ಷೆಗೆ ಪ್ರಕರಣವೊಂದಕ್ಕೆ ರೂ. ೬೦೦ರಿಂದ ೭೦೦ ಶುಲ್ಕ ತಗಲುವ ಸಾಧ್ಯತೆ ಇದೆ. ಕ್ರಮೇಣ ಇದರ ಶುಲ್ಕದಲ್ಲಿ ಇಳಿಕೆಯಾಗುವ ಸಾಧ್ಯತೆ ಇದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಅತಿ ಶೀಘ್ರ ಖಾಸಗಿ ಅಸ್ಪತ್ರೆಗಳಲ್ಲಿ ರ್ಯಾಪಿಡ್ ಟೆಸ್ಟ್
ಈಗಾಗಲೇ ಪುತ್ತೂರಿನ ಖಾಸಗಿ ಆಸ್ಪತ್ರೆಗಳಲ್ಲಿ ಸಿಂಗಲ್ ಎಂಟ್ರಿ, ಸಿಂಗಲ್ ಬಿಲ್ಡಿಂಗ್, ಸಿಂಗಲ್ ಸ್ಪೆಷಲಿಸ್ಟ್ ಇರುವುದರಿಂದ ಕೋವಿಡ್ ಒಂದು ಕೇಸ್ ದಾಖಲಾದರೆ ಬೇರೆಲ್ಲಾ ಕೇಸ್ಗಳಿಗೆ ಹರಡುವ ಸಾಧ್ಯತೆ ಹೆಚ್ಚು. ಇದನ್ನು ಆದಷ್ಟು ಕಡಿಮೆ ಮಾಡಲು ಸರಕಾರಿ ಆಸ್ಪತ್ರೆಗೆ ಕೋವಿಡ್-೧೯ ಪೇಷೆಂಟ್ನ್ನು ದಾಖಲಿಸಬೇಕು.ಎ ಮತ್ತು ಬಿ ಕೆಟಗರಿಯನ್ನು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲು ಮಾಡಿ ಚಿಕಿತ್ಸೆ ಕೊಡಿಸಬಹುದು.ಸಿಕೆಟಗರಿಯನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಬೇಕಾಗುತ್ತದೆ. ಈ ನಡುವೆ ಹೊಸದಾಗಿ ರ್ಯಾಪಿಡ್ ಟೆಸ್ಟ್ ಬಂದಿದ್ದು, ಇದರಿಂದ ಕೋವಿಡ್ ಪ್ರಕರಣ ಶೀಘ್ರ ಪತ್ತೆ ಮಾಡಲಾಗುತ್ತದೆ. ಸ್ಥಳದಲ್ಲೇ ಪ್ರಕರಣ ಪತ್ತೆ ಮಾಡುವ ಈ ಸಾಧನ ಪುತ್ತೂರಿನ ಎಲ್ಲಾ ಖಾಸಗಿ ಆಸ್ಪತ್ರೆಗೆ ಅತಿ ಶೀಘ್ರ ಬರಲಿದೆ. ಸೋಂಕಿತರಿಗೆ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುವ ಕೆಲಸ ಆದರೆ ಎಲ್ಲಾ ಜನರ ಆತಂಕ ಕಡಿಮೆ ಆಗುತ್ತದೆ – ಡಾ.ಶ್ರೀಪತಿ ರಾವ್, ಅಧ್ಯಕ್ಷರು ಪುತ್ತೂರು ಹಾಸ್ಪಿಟಲ್ ಮಾಲಕರ ಅಸೋಸಿಯೇಶನ್