- ಕೊರೋನಾ ಸೋಂಕು ನಿಯಂತ್ರಣಕ್ಕೆ ಕ್ರಮ
ಪುತ್ತೂರು : ಕೊರೋನಾ ತಡೆಗಟ್ಟುವ ಸಲುವಾಗಿ ರಾಜ್ಯ ಸರಕಾರವು ಸರಕಾರಿ ನೌಕರರಿಗೆ ಪ್ರತಿ ಶನಿವಾರ ರಜೆ ಘೋಷಣೆ ಮಾಡಿ ಹೊರಡಿಸಿದ ಆದೇಶ ಜಾರಿಯಾಗಿದೆ. ಜು.11ರಂದು ತಿಂಗಳ 2 ನೇ ಶನಿವಾರವಾಗಿದ್ದರಿಂದ ಸರಕಾರಿ ರಜೆ ಇದೆ. ಇನ್ನು ಮುಂದೆ ಪ್ರತಿ ಶನಿವಾರವೂ ರಜೆಯಾಗಿರುತ್ತದೆ. ಅನಿವಾರ್ಯತೆ ಹೊರತುಪಡಿಸಿ ಸರಕಾರದ ಯಾವುದೇ ಚಟುವಟಿಕೆಗಳು ಕಾರ್ಯನಿರ್ವಹಿಸುವುದಿಲ್ಲ.
ಪ್ರಸ್ತುತ ತಿಂಗಳ 2ನೇ ಶನಿವಾರ ಮತ್ತು 4ನೇ ಶನಿವಾರ ಸರಕಾರಿ ರಜೆಯಾಗಿತ್ತು. ಇದೀಗ ಎಲ್ಲ ಶನಿವಾರಗಳನ್ನೂ ಸರಕಾರಿ ರಜೆ ಎಂದು ಘೋಷಿಸಲಾಗಿದೆ. ಕೊರೋನಾ ನಿಯಂತ್ರಿಸಿರುವ ನಿಟ್ಟಿನಲ್ಲಿ ಜನಸಂಚಾರ ಕಡಿಮೆ ಮಾಡಬೇಕು ಎಂಬ ಉದ್ಧೇಶದಿಂದ ಪ್ರತಿ ಶನಿವಾರ ಸರಕಾರಿ ರಜೆ ಘೋಷಿಸುವುದು ಸೂಕ್ತ ಎಂಬ ಸಲಹೆ ಮೇರೆಗೆ ನಿರ್ಣಯ ತೆಗೆದುಕೊಳ್ಳಲಾಗಿದೆ.
ಶಿಕ್ಷಣ ಇಲಾಖೆಗೂ ಶನಿವಾರ ರಜೆ : ಶಿಕ್ಷಣ ಇಲಾಖೆಯ ಎಲ್ಲಾ ಕಚೇರಿಗಳಿಗೆ, ಶಿಕ್ಷಕರು, ಅಧಿಕಾರಿಗಳು ಹಾಗೂ ಸಿಬ್ಬಂದಿಗೆ 2ನೇ ಶನಿವಾರ ಮತ್ತು 4ನೇ ಶನಿವಾರ ಸೇರಿದಂತೆ ಜು.10ರಿಂದ ಆ.8ರವರೆಗೆ ಎಲ್ಲಾ ಶನಿವಾರಗಳಂದು ರಜೆ ಘೋಷಿಸಿ ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ರಾಜ್ಯಾದ್ಯಂತ ವ್ಯಾಪಕವಾಗಿ ಹರಡುತ್ತಿರುವ ಕೋವಿಡ್-19 ರ ಸೋಂಕು ನಿಯಂತ್ರಿಸುವ ಸಲುವಾಗಿ 2005ರ ವಿಪತ್ತು ನಿರ್ವಹಣಾ ಕಾಯ್ದೆಯ ಆದೇಶಗಳ ಅನುಸಾರ ಈ ರಜೆ ನೀಡಲಾಗಿದೆ. ಆದರೆ ಎಸ್ಎಸ್ಎಲ್ಸಿ ಮೌಲ್ಯಮಾಪನ ಮತ್ತು ಕೋವಿಡ್19 ಕಾರ್ಯಕ್ಕೆ ನಿಯೋಜನೆಗೊಂಡಿರುವ ಶಿಕ್ಷಕರು, ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಈ ರಜೆ ಅನ್ವಯವಾಗುವುದಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ.