✍🏻 ಯೂಸುಫ್ ರೆಂಜಲಾಡಿ
ಪುತ್ತೂರು: ಕೊರೋನಾ ವೈರಸ್ ದಿನೇ ದಿನೇ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಣ್ಣ ಪುಟ್ಟ ರೋಗಗಳಿಗೆ ಆಸ್ಪತ್ರೆಗೆ ತೆರಳಿ ಔಷಧಿ ಪಡೆಯಲೂ ಜನ ಸಾಮಾನ್ಯರು ಹಿಂದೇಟು ಹಾಕುತ್ತಿದ್ದಾರೆ. ಅದರಲ್ಲೂ ಗ್ರಾಮಾಂತರ ಪ್ರದೇಶದ ಜನರು ಹೆಚ್ಚು ಆತಂಕಗೊಂಡಿದ್ದು ಅತೀ ಅಗತ್ಯ ಸಂದರ್ಭ ಹೊರತುಪಡಿಸಿ ಆಸ್ಪತ್ರೆಗಳಿಗೆ ತೆರಳಲು ಹಿಂದೇಟು ಹಾಕುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಜಿಲ್ಲೆಯ ನಾನಾ ಕಡೆಗಳಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜನರು ಭಯಭೀತಗೊಂಡಿದ್ದು ಅದರಿಂದಾಗಿ ಸಾಧಾರಣ ಮಟ್ಟದ ಅನಾರೋಗ್ಯಗಳಿಗೆ ಆಸ್ಪತ್ರೆಗೆ ತೆರಳಲೂ ಹಿಂದೇಟು ಹಾಕುತ್ತಿದ್ದಾರೆ. ಕೊರೋನಾ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಗಳಿಗೆ ತೆರಳಿದರೆ ಗಂಟಲ ದ್ರವ ಸಂಗ್ರಹಿಸಿ ಕೊರೋನಾ ಟೆಸ್ಟ್ಗೆ ಕಳುಹಿಸಲಾಗುತ್ತದೆ ಎಂದು ಆತಂಕ ಜನರಲ್ಲಿ ಕಾಡುತ್ತಿದ್ದು ಅದಕ್ಕಾಗಿ ಆಸ್ಪತ್ರೆಗಳಿಗೆ ಹೋಗದೇ ಹಳ್ಳಿ ಮದ್ದಿನ ಮೊರೆ ಹೋಗುತ್ತಿರುವ ವಿದ್ಯಾಮಾನ ಹೆಚ್ಚಿನ ಕಡೆಗಳಲ್ಲಿ ಕಂಡು ಬರುತ್ತಿದೆ.
ಕೊರೋನಾ ಟೆಸ್ಟ್ ಕಡ್ಡಾಯ-ವದಂತಿ, ಭಯ: ಸರಕಾರಿ ಅಥವಾ ಖಾಸಗಿ ಆಸ್ಪತ್ರೆಗಳಿಗೆ ಔಷಧಿಗೆ ಹೋದರೆ ಅದರಲ್ಲೂ ಒಳ ರೋಗಿಗಳಾಗಿ ಚಿಕಿತ್ಸೆ ಪಡೆಯಬೇಕಾದರೆ `ಕೊರೋನಾ ಟೆಸ್ಟ್ ಕಡ್ಡಾಯ’ ಎನ್ನುವ ವದಂತಿ ಹಬ್ಬಿದ್ದು ಅದರಿಂದಾಗಿ ಜನತೆ ಇನ್ನಷ್ಟು ಆತಂಕಕ್ಕೆ ಒಳಗಾಗಿದ್ದಾರೆ. ಕೊರೋನಾ ಲಕ್ಷಣಗಳೇ ಇಲ್ಲದ ಹಲವರಿಗೆ ಪಾಸಿಟಿವ್ ಬಂದಿರುವುದೂ ಗ್ರಾಮೀಣ ಪ್ರದೇಶದವರ ಭಯಕ್ಕೆ ಇನ್ನೊಂದು ಕಾರಣ. ಆದರೆ ಅಂತಹ ವದಂತಿಯನ್ನು ತಾಲೂಕು ಆರೋಗ್ಯಾಧಿಕಾರಿ ಡಾ. ಅಶೋಕ್ ಕುಮಾರ್ ರೈ ಅಲ್ಲಗಳೆದಿದ್ದು ಇತರ ರೋಗಗಳಿಗೆ ಔಷಧಿಗಳಿಗೆ ಆಸ್ಪತ್ರೆಗೆ ಬರುವವರಿಗೆ ಕೊರೋನಾ ಟೆಸ್ಟ್ ಕಡ್ಡಾಯವಲ್ಲ, ಕೊರೋನಾ ಲಕ್ಷಣಗಳು ಇದ್ದಲ್ಲಿ ಮಾತ್ರ ಟೆಸ್ಟ್ ಕಡ್ಡಾಯ ಎಂದು ತಿಳಿಸಿದ್ದಾರೆ.
ಪಾಸಿಟಿವ್, ನೆಗೆಟಿವ್ ಗೊಂದಲ: ಕೊರೋನಾ ಪರೀಕ್ಷಾ ವರದಿ ಮೊದಲು ಪಾಸಿಟಿವ್ ಬಂದರೆ ನಂತರ ನೆಗೆಟಿವ್ ಬರುತ್ತದೆ, ನೆಗೆಟಿವ್ ಬಂದವರಿಗೆ ನಂತರದ ಪರೀಕ್ಷೆಯಲ್ಲಿ ಪಾಸಿಟಿವ್ ಬಂದದ್ದೂ ಇದೆ. ಕಾಣಲು ಆರೋಗ್ಯವಂತರಾಗಿರುವ ಹಾಗೂ ಯಾವುದೇ ರೋಗ ಲಕ್ಷಣಗಳೇ ಇಲ್ಲದವರಿಗೂ ಕೊರೋನಾ ಪಾಸಿಟಿವ್ ಬಂದಿದೆ. ಕೊರೋನಾ ಸೋಂಕಿತರನ್ನು ಸಂಪರ್ಕಿಸದ, ಹೊರರಾಜ್ಯ, ಹೊರಜಿಲ್ಲೆಗೆ ಹೋಗದವರಿಗೂ ಪಾಸಿಟಿವ್ ಬಂದಿದೆ. ಇಂತಹ ಬೆಳವಣಿಗೆಯಿಂದ ಜನತೆ ಸಾಕಷ್ಟು ಆತಂಕ ಪಡುತ್ತಿದ್ದಾರೆ. ಸರಕಾರ, ಆರೋಗ್ಯ ಇಲಾಖೆ `ಭಯ ಬೇಡ, ಜಾಗೃತರಾಗಿರಿ’ ಎಂದು ಎಷ್ಟೇ ಹೇಳಿದರೂ ಇದೀಗ ಕೊರೋನಾ ವ್ಯಾಪಕವಾಗಿ ಹರಡಿದ ಹಿನ್ನೆಲೆಯಲ್ಲಿ ಜನತೆ ಭಯಪಡುತ್ತಿದ್ದಾರೆ. ನೆಗೆಟಿವ್, ಪಾಸಿಟಿವ್ ಗೊಂದಲವೂ ಜನರ ಸಮಸ್ಯೆಗೆ ಇನ್ನೊಂದು ಕಾರಣವಾಗಿದೆ.
ಅವಶ್ಯವಿದ್ದರೆ ಮಾತ್ರ ಕೊರೋನಾ ಟೆಸ್ಟ್
ಆಸ್ಪತ್ರೆಗಳಿಗೆ ಬರುವ ಎಲ್ಲ ರೋಗಿಗಳಿಗೆ ಕೊರೋನಾ ಪರೀಕ್ಷೆ ನಡೆಸುವುದಿಲ್ಲ. ಹೊರ ದೇಶದಿಂದ ಬಂದವರು ಅಥವಾ ಪ್ರಾಥಮಿಕ ಸಂಪರ್ಕ ಸಾಧಿಸಿದವರು ಮತ್ತು ಜ್ವರ, ಶೀತ, ಕೆಮ್ಮು, ಉಸಿರಾಟದ ತೊಂದರೆಯಿರುವವರನ್ನು ಕೊರೋನಾ ಟೆಸ್ಟ್ಗೆ ಒಳಪಡಿಸಬೇಕಾಗುತ್ತದೆ. ರೋಗದ ಲಕ್ಷಣಗಳಿರುವವರನ್ನು ಮೊದಲೇ ಪರೀಕ್ಷೆ ಮಾಡಿಸಿ ಕೊರೋನಾ ಸೋಂಕು ದೃಢಪಟ್ಟಲ್ಲಿ ನಂತರದ ಚಿಕಿತ್ಸೆಯಲ್ಲಿ ಅವರು ಬೇಗನೇ ಗುಣಮುಖರಾಗಲು ಸಹಕಾರಿಯಾಗುತ್ತದೆ. ಇಲ್ಲದಿದ್ದಲ್ಲಿ ರೋಗ ನಿರೋಧಕ ಶಕ್ತಿ ರೋಗಿಯ ದೇಹದಲ್ಲಿ ಕಡಿಮೆ ಇದ್ದಲ್ಲಿ ತೊಂದರೆಯಾಗುತ್ತದೆ. ಕೊರೋನಾ ಹಿನ್ನೆಲೆಯಲ್ಲಿ ಆಸ್ಪತ್ರೆಗಳಿಗೆ ಬರಲು ಯಾರೂ ಹಿಂದೇಟು ಹಾಕಬೇಡಿ, ಅವಶ್ಯವಿದ್ದರೆ ಮಾತ್ರ ಕೊರೋನಾ ಟೆಸ್ಟ್ ಮಾಡಿಸಲಾಗುತ್ತದೆ –ಡಾ.ಅಶೋಕ್ ಕುಮಾರ್ ರೈ, ತಾಲೂಕು ಆರೋಗ್ಯಾಧಿಕಾರಿಗಳು ಪುತ್ತೂರು
ಸಾಮಾನ್ಯ ಶೀತ, ಜ್ವರಕ್ಕೂ ಕೊರೋನಾ ಟೆಸ್ಟ್…!
ಮಳೆಗಾಲ ಪ್ರಾರಂಭವಾಯಿತೆಂದರೆ ಶೀತ, ಜ್ವರ ಸಾಮಾನ್ಯ. ಅದರಲ್ಲೂ ತೋಟದಲ್ಲಿ, ಗದ್ದೆಯಲ್ಲಿ ಕೆಲಸ ಮಾಡುವವರಿಗೆ, ಕೂಲಿ ಕಾರ್ಮಿಕರಿಗೆ ದ್ವಿಚಕ್ರ ವಾಹನಗಳಲ್ಲಿ ಹೋಗುವವರಿಗೆ ಅಥವಾ ಮಳೆಯಲ್ಲಿ ಹೆಚ್ಚು ನೆನೆಯುವವರಿಗೆ ಶೀತ, ಜ್ವರ ಸಹಜವಾಗಿ ಬರುತ್ತದೆ. ಅದಕ್ಕೆ ಸ್ಥಳೀಯ ಕ್ಲಿನಿಕ್ಗಳಿಂದ ಅಥವಾ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳಿ ಚಿಕಿತ್ಸೆ ಪಡೆದು ಗುಣಮುಖರಾಗುತ್ತಿದ್ದರು. ಇದೀಗ ಕೊರೋನಾ ವ್ಯಾಪಕಗೊಂಡಿರುವ ಹಿನ್ನೆಲೆಯಲ್ಲಿ ಶೀತ, ಜ್ವರ, ಕೆಮ್ಮು ಇದ್ದಲ್ಲಿ ಕೊರೋನಾ ಪರೀಕ್ಷೆ ನಡೆಸಬೇಕಾಗುತ್ತದೆ. ಇದು ಅನಿವಾರ್ಯವಾದರೂ, ಸಾಮಾನ್ಯ ಶೀತ, ಜ್ವರ ಅಥವಾ ಗಂಟಲು ನೋವಿಗೆ ಕೊರೋನಾ ಟೆಸ್ಟ್ ಯಾಕೆ ಎಂಬುವುದು ಹಲವರ ಪ್ರಶ್ನೆಯೂ ಆಗಿದೆ. ಮಾತ್ರವಲ್ಲದೇ ಕೊರೋನಾ ಪರೀಕ್ಷೆಗೆ ಇಂತಿಷ್ಟು ಹಣವೂ ಬೇಕಾಗಿರುವುದರಿಂದ ಜನತೆ ಚಿಂತೆಗೆ ಒಳಗಾಗಿದ್ದಾರೆ. ಒಟ್ಟಾರೆಯಾಗಿ ಕೊರೋನಾ ವೈರಸ್ನಿಂದಾಗಿ ಜನತೆ ಭಯಗೊಂಡಿರುವುದರ ಜೊತೆಗೆ ಗೊಂದಲಕ್ಕೂ ಒಳಗಾಗುತ್ತಿರುವುದು ಕಂಡು ಬರುತ್ತಿದೆ.