ಪುತ್ತೂರು: ಕೊರೊನಾ ಸೋಂಕು ಹರಡುವುದನ್ನು ತಡೆಯುವ ಸಲುವಾಗಿ ರಾಜ್ಯ ಸರಕಾರದ ಭಾನುವಾರ ಸಂಪೂರ್ಣ ಲಾಕ್ಡೌನ್ ಘೋಷಣೆ 2ನೇ ದಿನವೂ ಪುತ್ತೂರಿನಲ್ಲಿ ಪರಿಣಾಮಕಾರಿಯಾಗಿದ್ದರೂ ನಗರಸಭೆ ವ್ಯಾಪ್ತಿಯಲ್ಲಿ ಅಲ್ಲಲ್ಲಿ ದ್ವಿಚಕ್ರ ವಾಹನಗಳ ಓಡಾಟ ಕಂಡು ಬಂದಿದೆ.
ತಾಲೂಕಿನಲ್ಲಿ ಸೋಂಕಿತರ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಹಾಲು, ಪತ್ರಿಕೆ ಅಂಗಡಿಗಳ ಮತ್ತು ಔಷಧ ಅಂಗಡಿಗಳ ಮುಂದೆ ಕೆಲ ಜನ ಕಂಡಿದ್ದು ಬಿಟ್ಟರೆ, ಬೇರೆ ಎಲ್ಲಿಯೂ ಹೆಚ್ಚು ಜನರು ಕಂಡುಬರಲಿಲ್ಲ. ರಸ್ತೆಗಳು ಬಿಕೋ ಎನ್ನುತ್ತಿದ್ದಾರೂ ಅಲ್ಲಲ್ಲಿ ದ್ವಿಚಕ್ರ ವಾಹನಗಳ ಓಡಾಟ ಕಂಡು ಬರುತ್ತಿತ್ತು. ಜು.11ರಂದು ರಾತ್ರಿ ಇದ್ದ ವಾಹನಗಳ ಓಡಾಟಕ್ಕೆ ಬೆಳಗ್ಗೆ ಕೊಂಚ ಬ್ರೇಕ್ ಹಾಕಿದ್ದರೂ ದ್ವಿಚಕ್ರ ವಾಹನಗಳ ಓಡಾಟ ನಡೆದಿದೆ. ಪೇಟೆಯಲ್ಲಿ ಕೆಲವೊಂದು ಅಂಗಡಿಗಳ ನವೀಕರಣ ಕಾಮಗಾರಿಗಳು, ಫರ್ನಿಚರ್ ಕಾಮಗಾರಿಗಳು, ಕಟ್ಟಡದ ಕೆಲಸಗಳು ನಡೆಯುತ್ತಿತ್ತು.
ಪೊಲೀಸರ ಪ್ರಶ್ನೆ – ಸವಾರರಿಂದ ಮೆಡಿಕಲ್, ಆಸ್ಪತ್ರೆ ಉತ್ತರ:
ದ್ವಿಚಕ್ರ ವಾಹನ ಸೇರಿದಂತೆ ಇತರ ವಾಹನ ಸವಾರರನ್ನು ಪೊಲೀಸರು ಪ್ರಶ್ನಿಸಿದ ವೇಳೆ ವಾಹನ ಸವಾರರಿಂದ ಮೆಡಿಕಲ್ ಅಥವಾ ಆಸ್ಪತ್ರೆ ಎಂಬ ಉತ್ತರ ಬರುತ್ತಿತ್ತು. ತೀರಾ ಅಗತ್ಯದ ವಿಚಾರಕ್ಕೆ ಸಂಬಂಧಿಸಿ ಪೊಲೀಸರು ಅವರಿಗೆ ರಿಯಾಯಿತಿ ನೀಡುತ್ತಿದ್ದರು. ಪುತ್ತೂರಿನ ದರ್ಬೆ, ಬೊಳುವಾರು, ಹಾರಾಡಿ, ಕೂರ್ನಡ್ಕ, ಕೆಮ್ಮಾಯಿ, ನೆಹರುನಗರ, ಪರ್ಲಡ್ಕ ಪರಿಸರದಲ್ಲಿ ಪೊಲೀಸರು ಬ್ಯಾರಿಕೇಟ್ ಅಳವಡಿಸಿ ಅಗತ್ಯ ಓಡಾಟದ ವಾಹನಕ್ಕೆ ಮಾತ್ರ ಅನುಮತಿ ಕೊಡುತ್ತಿದ್ದರು.