- ಕೊರೊನಾದಿಂದಾಗಿ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಸಮಯವಕಾಶ ಕೊಡಿ
- ಬೀದಿ ಬದಿ ವ್ಯಾಪಾರಿಗಳ ನಿಯೋಗ ಶಾಸಕರ ಭೇಟಿ, ಮನವಿ ಸಲ್ಲಿಕೆ
- ಕುಟುಂಬಗಳು ಬೀದಿಗೆ ಬೀಳುವಂತೆ ಮಾಡಬೇಡಿ-ಅಹವಾಲು ಸಲ್ಲಿಕೆ
- ಲೈಸನ್ಸ್ ಪಡೆದಿರುವ ವರ್ತಕರು ಸಾರ್ವಜನಿಕರಿಗೆ ತೊಂದರೆ ಆಗುವ ರೀತಿಯಲ್ಲಿ ವಿಸ್ತರಣೆ ಮಾಡಿಲ್ಲ-ಅಗ್ನಾಡಿ ಹಾರೂನ್ ರಶೀದ್
- ೩೧ ವರ್ಷದಿಂದ ಇದ್ದ ಲೈಸನ್ಸ್ ನವೀಕರಣ ಮಾಡಿಲ್ಲ-ಜಯಪ್ರಕಾಶ್ ಯಾದವ್
- ನಾವು ಈಗ ಈ ಸಂಕಷ್ಟ ಸ್ಥಿತಿಯಲ್ಲಿ ಎಲ್ಲಿಗೆ ಹೋಗಲಿ-ಲೋಕಯ್ಯ
- ಸಮಸ್ಯೆ, ಬೇಡಿಕೆ ಬಗ್ಗೆ ಪರಿಶೀಲನೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ-ಸಂಜೀವ ಮಠಂದೂರು
ಉಪ್ಪಿನಂಗಡಿ: ಇಲ್ಲಿನ ಪಂಚಾಯಿತಿ ವ್ಯಾಪ್ತಿಯಲ್ಲಿ ಇರುವ ಅನಧಿಕೃತ ಅಂಗಡಿಗಳನ್ನು ಮತ್ತು ಪೇಟೆಯ ಒಳಗಡೆ ಲೈಸನ್ಸ್ ಪಡೆದು ಅದರ ನಿಯಮ ಉಲ್ಲಂಘಿಸಿ ವಿಸ್ತರಣೆ ಮಾಡಿರುವುದರ ತೆರವು ಕಾರ್ಯಾಚರಣೆಗೆ ಗ್ರಾಮ ಪಂಚಾಯಿತಿ ಮುಂದಾಗಿದ್ದು, ಇದಕ್ಕೆ ಸಾರ್ವಜನಿಕ ವಲಯದಲ್ಲಿ ಮತ್ತು ಬೀದಿ ಬದಿ ವ್ಯಾಪಾರಿಗಳು ಮತ್ತು ವರ್ತಕರಿಂದ ವ್ಯಾಪಕ ವಿರೋಧ ವ್ಯಕ್ತವಾಗಿದೆ.
ಉಪ್ಪಿನಂಗಡಿ ಬೀದಿ ಬದಿ ವ್ಯಾಪಾರಿಗಳ ಪ್ರತ್ಯೇಕ ೩ ನಿಯೋಗ ಶಾಸಕ ಸಂಜೀವ ಮಠಂದೂರು ಅವರನ್ನು ಭೇಟಿ ಮಾಡಿ ಗ್ರಾಮ ಪಂಚಾಯಿತಿ ತಳೆದಿರುವ ನಿರ್ಧಾರದ ಬಗ್ಗೆ
ಪುನರ್ ಪರಿಶೀಲನೆ ನಡೆಸುವಂತೆ ಮತ್ತು ಕೊರೊನಾ ಸಂಕಷ್ಟದಿಂದಾಗಿ ಪ್ರತಿಯೋರ್ವರೂ ಆರ್ಥಿಕವಾಗಿ ಜರ್ಜರಿತವಾಗಿರುವ ಹಿನ್ನೆಲೆಯಲ್ಲಿ ಮತ್ತು ಮಳೆಗಾಲ ಆಗಿರುವ ಸಲುವಾಗಿ ಪಂಚಾಯಿತಿ ಆಡಳಿತಾಧಿಕಾರಿ ಮತ್ತು ಅಭಿವೃದ್ಧಿ ಅಧಿಕಾರಿಗೆ ತೆರವು ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವಂತೆ ಸೂಚನೆ ನೀಡಬೇಕು ಎಂದು ಆಗ್ರಹಿಸಿ ಮನವಿ
ಸಲ್ಲಿಸಿದ್ದಾರೆ.
“ಪಂಚಾಯಿತಿ ಕ್ರಮದಿಂದಾಗಿ ಏಕಾಏಕಿ ವ್ಯಾಪಾರವನ್ನು ಸ್ಥಗಿತಗೊಳಿಸಿದರೆ ನಾವು ನಮ್ಮ ಕುಟುಂಬದವರು ಬೀದಿಗೆ ಬೀಳಬೇಕಾಗುತ್ತದೆ, ನಾವುಗಳು ವಾಸಿಸಲು ಮನೆಯೂ ಇಲ್ಲದೆ, ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದು, ಅಂಗಡಿಗಳನ್ನು ತೆರವುಗೊಳಿಸಿದರೆ ಮನೆಯ ಬಾಡಿಗೆ ಕಟ್ಟಲು ಮತ್ತು ಜೀವವ ನಿರ್ವಹಣೆಗೂ ಆರ್ಥಿಕವಾಗಿ ಕಷ್ಟ ಅನುಭವಿಸಬೇಕಾಗುತ್ತದೆ, ಅದಾಗ್ಯೂ ಈಗ ಕೋವಿಡ್-೧೯ರ ಬಳಿಕ ವ್ಯಾಪಾರ ತೀರಾ ಕಡಿಮೆಯಾಗಿ ನಮ್ಮ ಮಕ್ಕಳ ವಿದ್ಯಾಭ್ಯಾಸ ನಿರ್ವಹಣೆಗೂ ತುಂಬಾ ಕಷ್ಟ ಪಡಬೇಕಾಗುತ್ತದೆ” ಎಂದು ಶಾಸಕರಿಗೆ ನೀಡಿರುವ ಮನವಿಯಲ್ಲಿ ತಿಳಿಸಲಾಗಿದೆ.
ಕುಟುಂಬಗಳು ಬೀದಿಗೆ ಬೀಳುವಂತೆ ಮಾಡಬೇಡಿ:
“ಕೊರೊನಾ ಮಹಾಮಾರಿ ವಕ್ಕರಿಸಿದ ಬಳಿಕ ರಾಜ್ಯದಲ್ಲಿ ಬಹಳಷ್ಟು ಹೊಟೇಲ್ ಉದ್ದಿಮೆ, ಕಾರ್ಖಾನೆಗಳು, ಬಟ್ಟೆ ಮಳಿಗೆ ಮೊದಲಾದ ವಾಣಿಜ್ಯ ವ್ಯವಹಾರ ಬಂದ್ ಆಗಿದೆ, ಹೀಗಾಗಿ ಅಸಂಖ್ಯ ಕಾರ್ಮಿಕರು ಕೆಲಸ ಇಲ್ಲದೆ, ರಸ್ತೆ ಬದಿಯಲ್ಲಿ ತಳ್ಳುಗಾಡಿ ಇಟ್ಟುಕೊಂಡು ತರಕಾರಿ, ಹಣ್ಣು, ಸಣ್ಣಪುಟ್ಟ ಕ್ಯಾಂಟೀನ್, ಪಾನಿಪೂರಿ, ಬೇಲ್ಪೂರಿ ವ್ಯಾಪಾರ ನಡೆಸಿ ತೀರಾ ಕಷ್ಟದಲ್ಲಿ ಜೀವನ ನಿರ್ವಹಿಸುತ್ತಿದ್ದಾರೆ, ಇದೀಗ ಅದೆಲ್ಲವನ್ನೂ ತೆರವು ಮಾಡಿದರೆ ಈ ಎಲ್ಲಾ ಮಂದಿ ಕೆಲಸ ಇಲ್ಲದೆ ಕುಟುಂಬಗಳು ಬೀದಿಗೆ ಬೀಳುವ ಪರಿಸ್ಥಿತಿ ಎದುರಾಗಲಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಆದ ಕಾರಣ ಸಮಸ್ಯೆಯ ಗಂಭೀರತೆ ಅರಿತು ಪರಿಶೀಲನೆ ನಡೆಸಿ, ಪಂಚಾಯಿತಿ ಏಕಾಏಕಿ ತೆಗೆದುಕೊಂಡಿರುವ ನಿರ್ಧಾರವನ್ನು ಹಿಂಪಡೆಯುವಂತೆ ಸೂಚಿಸಿ ಬೀದಿ ಬದಿಯ
ವ್ಯಾಪಾರವನ್ನು ಮುಂದುವರಿಸಿಕೊಂಡು ಹೋಗಲು ಅನುವು ಮಾಡಿಕೊಡಬೇಕೆಂದು ಕಳಕಳಿಯಿಂದ ವಿನಂತಿಸುವುದಾಗಿ” ಶಾಸಕರಿಗೆ ನೀಡಿರುವ ಮನವಿ ಪತ್ರದಲ್ಲಿ ತಿಳಿಸಲಾಗಿದೆ. ಶಾಸಕರನ್ನು ಭೇಟಿ ಮಾಡಿ ಮನವಿ ಸಲ್ಲಿಸಿರುವ ನಿಯೋಗದಲ್ಲಿ ೩೦ ಮಂದಿ ಇದ್ದು, ಮನವಿ ಪತ್ರಕ್ಕೆ ಸಹಿ ಮಾಡಿದ್ದಾರೆ.
ವರ್ತಕರು ಸಾರ್ವಜನಿಕರಿಗೆ ತೊಂದರೆ ಆಗುವ ರೀತಿಯಲ್ಲಿ ವಿಸ್ತರಣೆ ಮಾಡಿಲ್ಲ-ಅಗ್ನಾಡಿ
ಗ್ರಾಮ ಪಂಚಾಯಿತಿ ಲೈಸನ್ಸ್ ಪಡೆದಿರುವ ಅಂಗಡಿಗಳವರು ಅಂಗಡಿಗಳನ್ನು ನಿಯಮ ಉಲ್ಲಂಘಿಸಿ ವಿಸ್ತರಣೆ ಮಾಡಿದ್ದಾರೆ, ಅದನ್ನು ತೆರವು ಮಾಡಬೇಕು ಎಂದು ತಿಳಿಸಿದೆ, ಆದರೆ ಸುಮಾರು ೩ ವರ್ಷಗಳ ಹಿಂದೆ ಕೆಲವೊಂದು ಅಂಗಡಿ, ಕಟ್ಟಡಗಳು ಆ ರೀತಿ ಇತ್ತು. ಕಳೆದ ಸಾಲಿನ ಪಂಚಾಯಿತಿ ಆಡಳಿತ ಮಂಡಳಿ ಅಂತಹ ಅಕ್ರಮಗಳನ್ನು ತೆರವು ಮಾಡಿದೆ. ಅದಾಗ್ಯೂ ಇದೀಗ ಕೆಲವೊಂದು ಅಂಗಡಿಗಳ ಮುಂದೆ ಗಾಳಿ, ಮಳೆ ಸಂದರ್ಭದಲ್ಲಿ ಮಳೆ ನೀರು ಒಳಗೆ ಬರುವುದನ್ನು ತಪ್ಪಿಸಿ, ವಸ್ತುಗಳನ್ನು ರಕ್ಷಿಸಿಕೊಳ್ಳುವ ಸಲುವಾಗಿ ಅಂಗಡಿಗಳ ಮುಂದೆ ಶೀಟ್ಗಳು ಒಂದೆರಡು ಅಡಿಯಷ್ಟು ಮುಂದೆ ಬಂದಿರಬಹುದು ಹೊರತು ಅದರಿಂದಾಗಿ ಯಾವುದೇ ರೀತಿಯಲ್ಲಿ ಸಾರ್ವಜನಿಕರಿಗೆ ತೊಂದರೆ ಆಗುವ ರೀತಿಯಲ್ಲಿ ಇರುವುದಿಲ್ಲ. ಅಂತದ್ದೇನಾದರೂ ಇದ್ದರೂ ಕೊರೊನಾ ಸಂಕಷ್ಟದಿಂದಾಗಿ ಪೇಟೆಯಲ್ಲಿ ಜನ ಇಲ್ಲ ಮತ್ತು ವ್ಯಾಪಾರವೂ ಇಲ್ಲ, ಹೀಗಿರುವಾಗ ಇದೀಗ ಏಕಾಏಕಿ ಮಳೆ ಬೀಳುವ ಸಂದರ್ಭದಲ್ಲಿ ಅದನ್ನು ತೆರವು ಮಾಡಲು ಹೇಳುವುದರಿಂದ ವರ್ತಕರ ಸದ್ಯದ ಪರಿಸ್ಥಿತಿಯಲ್ಲಿ ಗಾಯದ ಮೇಲೆ ಬರೆ ಎಳೆದಂತಾಗುತ್ತದೆ, ಆದ ಕಾರಣ ಗ್ರಾಮ ಪಂಚಾಯಿತಿ ತಮ್ಮ ನಿರ್ಧಾರವನ್ನು ಪುನರ್ ಪರಿಶೀಲಿಸಿ, ತಮ್ಮ ನಿರ್ಧಾರದಿಂದ ಹಿಂದೆ ಸರಿಯುವುದು ಸೂಕ್ತ ಎಂದು ಉಪ್ಪಿನಂಗಡಿ ಛೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಅಗ್ನಾಡಿ ಹಾರೂನ್ ರಶೀದ್ ಪ್ರತಿಕ್ರಿಯಿಸಿದ್ದಾರೆ.
೩೧ ವರ್ಷದಿಂದ ಇದ್ದ ಲೈಸನ್ಸ್ ನವೀಕರಣ ಮಾಡಿಲ್ಲ-ಜಯಪ್ರಾಶ್ ಯಾದವ್
೩೧ ವರ್ಷದ ಹಿಂದೆ ಉತ್ತರ ಪ್ರದೇಶದಿಂದ ಬಂದು ಇಲ್ಲಿನ ಬಸ್ ನಿಲ್ದಾಣದ ಬಳಿ ಬೀಡ ಮಾರಾಟ ಮಾಡುತ್ತಿದ್ದೇನೆ. ಅಂದಿನಿಂದಲೂ ನನ್ನ ಗೂಡಂಗಡಿಯ ಅಡಿಸ್ಥಳಕ್ಕೆ ಲೈಸನ್ ಹೊಂದಿ ವ್ಯಾಪಾರ ಮಾಡುತ್ತಿದ್ದೇನೆ, ಕಳೆದ ಸಾಲಿನಲ್ಲಿ ಪಂಚಾಯಿತಿ ಕೊಠಡಿಯನ್ನು ಏಲಂನಲ್ಲಿ ಪಡೆದು ಲೈಸನ್ಸ್ ಪಡೆದು ವ್ಯಾಪಾರ ಮಾಡುತ್ತಿದ್ದೇನೆ, ಆದರ ಲೈಸನ್ಸ್
ನವೀಕರಣಕ್ಕೆ ಕೊಟ್ಟಿರುತ್ತೇನೆ, ಆದರೆ ಅದರ ನವೀಕರಣ ಮಾಡದೆ ಇದ್ದು, ಇದೀಗ ಅಂಗಡಿ ತೆಗೆಯುವಂತೆ ಸೂಚನೆ ನೀಡಿದ್ದಾರೆ, ನನಗೆ ಅನ್ಯಾಯ ಆಗುತ್ತದೆ ಎಂದು ಜಯಪ್ರಾಶ್ ಯಾದವ್ ಎಂಬವರು ತನ್ನ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ನಾವು ಈಗ ಈ ಸಂಕಷ್ಟ ಸ್ಥಿತಿಯಲ್ಲಿ ಎಲ್ಲಿಗೆ ಹೋಗಲಿ-ಲೋಕಯ್ಯ
ಕಳೆದ ಹಲವಾರು ವರ್ಷಗಳಿಂದ ಬೇಲ್ಪೂರಿ ಅಂಗಡಿ ಇಟ್ಟು ವ್ಯಾಪಾರ ಮಾಡಿ ದಿನದ ಸಂಪಾದನೆಯಿಂದ ಹೆಂಡತಿ ಮಕ್ಕಳನ್ನು ಸಾಕುತ್ತಿದ್ದೇನೆ, ಲಾಕ್ಡೌನ್ ಸಂದರ್ಭದಲ್ಲಿ ಯಾರೋ ಕೊಟ್ಟ ಅಕ್ಕಿಯಿಂದ ಊಟ ಮಾಡಿದ್ದೆವು. ಇದೀಗ ಏಕಾಏಕಿ ತೆರವು ಮಡಬೇಕು ಎಂದರೆ ಇಂದಿನ ಕೊರೊನಾ ಸಂಕಷ್ಟದೊಂದಿಗೆ ಎಲ್ಲಿಗೆ ಹೋಗಬೇಕು ಎಂದು ಲೋಕಯ್ಯ ಎಂಬವರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಪರಿಶೀಲನೆ ನಡೆಸುವಂತೆ ಸೂಚಿಸಿದ್ದೇನೆ-ಸಂಜೀವ ಮಠಂದೂರು
ಅನಧಿಕೃತ ಅಂಗಡಿಗಳಿಂದ ಸಾರ್ವಜನಿಕರಿಗೆ ತೊಂದರೆ ಆಗುವ ಬಗ್ಗೆ, ಅದರಲ್ಲೂ ಲಾಕ್ಡೌನ್ ಸಂದರ್ಭದಲ್ಲಿ ಅವರಿಂದಾಗಿ ಬಹಳಷ್ಟು ಸಮಸ್ಯೆಗಳು ಎದುರಾಗಿರುವ ಬಗ್ಗೆ ದೂರುಗಳು ಬಂದಿತ್ತು. ಆದ ಕಾರಣ ಈಚೆಗೆ ತಾಲ್ಲೂಕು ಪಂಚಾಯಿತಿ ಸಭೆಯಲ್ಲಿ ಅನಧಿಕೃತ ಅಂಗಡಿಗಳ ತೆರವು ಮಾಡುವ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೆ, ಈ ನಿಟ್ಟಿನಲ್ಲಿ ಅಧಿಕಾರಿಗಳು ತೆರವು ಕಾರ್ಯಾಚರಣೆಗೆ ಮುಂದಾಗಿದ್ದಾರೆ. ಈ ಮಧ್ಯೆ ಇದೀಗ ಬೀದಿ ಬದಿ ವ್ಯಾಪಾರಿಗಳು ತಮ್ಮ ಸಮಸ್ಯೆ ಹೇಳಿಕೊಂಡಿದ್ದಾರೆ, ಅವರುಗಳ ಸಮಸ್ಯೆ, ಬೇಡಿಕೆಗಳ ಬಗ್ಗೆ ಪರಿಶೀಲನೆ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಶಾಸಕ ಸಂಜೀವ ಮಠಂದೂರು ಪ್ರತಿಕ್ರಿಯಿಸಿದ್ದಾರೆ.