ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಸ್ವರ್ಣ ಹಾಗೂ ದರ್ಬೆ ಲಿಟ್ಲ್ ಫ್ಲವರ್ ಹಿರಿಯ ಪ್ರಾಥಮಿಕ ಶಾಲೆಯ ಸ್ಕೌಟ್ಸ್, ಗೈಡ್ಸ್, ಕಬ್ಸ್ ಮತ್ತು ಬುಲ್ಬುಲ್ ಘಟಕದ ಆಶ್ರಯದಲ್ಲಿ ದರ್ಬೆ ಸರ್ಕಲ್ನ ಡಿವೈಡರ್ನಿಂದ ಕಾವೇರಿಕಟ್ಟೆ ಬಳಿಯ ಡಿವೈಡರ್ ತನಕ ವಿವಿಧ ತಳಿಗಳ ಹೂಗಿಡಗಳನ್ನು ನೆಡುವ ಕಾರ್ಯಕ್ರಮ ಜು.೧೧ ರಂದು ನಡೆಯಿತು.
ಶಾಸಕರಾದ ಸಂಜೀವ ಮಠಂದೂರುರವರು ಗಿಡ ನೆಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಪರಿಸರ ಸಂರಕ್ಷಣೆ ನಮ್ಮೆಲ್ಲರ ಗುರುತರ ಹೊಣೆಯಾಗಿದೆ. ಮಹಾಮಾರಿ ಕೊರೋನಾ ಹೋಗಲಾಡಿಸಲು ಸಮೃದ್ಧ ಪರಿಸರವೇ ಕಾರಣವಾಗಬಲ್ಲುದು. ಮಾನವನಿಗೆ ಬೇಕಾದ ಪರಿಶುದ್ಧ ಗಾಳಿ, ಬೆಳಕು, ನೀರು ಇವುಗಳು ಪರಿಸರದಿಂದಲೇ ನಮಗೆ ದೊರಕುತ್ತದೆ. ಹೆಚ್ಚೆಚ್ಚು ಗಿಡ ಮರಗಳನ್ನು ನೆಟ್ಟಾಗ ನಗರದ ಸೌಂದರೀಕರಣ ಹೆಚ್ಚುತ್ತದೆ ಮಾತ್ರವಲ್ಲದೆ ಮುಂದಿನ ಪೀಳಿಗೆಗೆ ಪರಿಸರವನ್ನು ಕಾಯ್ದಿಟ್ಟುಕೊಳ್ಳಲು ನೆರವಾಗುತ್ತದೆ. ವಿದ್ಯಾವಂತರು, ಬುದ್ಧಿವಂತರು, ಪ್ರಜ್ಞಾವಂತರು ಎನಿಸಿಕೊಂಡ ಜನತೆ ಪರಿಸರವನ್ನು ಕಾಯ್ದಿಟ್ಟುಕೊಳ್ಳುವಲ್ಲಿ ಪ್ರತಿಜ್ಞೆಗೈಯಬೇಕಾಗಿದೆ. ಪ್ರಕೃತಿಯನ್ನು ಉಳಿಸಿ-ಬೆಳೆಸುವ ನಿಟ್ಟಿನಲ್ಲಿ ಕಾಯಕ ಮಾಡಿದಂತಹ ಸಾಲು ಮರದ ತಿಮ್ಮಕ್ಕನಂತೆ ನಾವೂ ಕೂಡ ಗಿಡಮರಗಳನ್ನು ನೆಡುವ ಕಾಯಕವನ್ನು ಹಮ್ಮಿಕೊಳ್ಳಬೇಕಾಗಿದೆ ಎಂದರು.
ರೋಟರಿ ಕ್ಲಬ್ ಪುತ್ತೂರು ಸ್ವರ್ಣ ಅಧ್ಯಕ್ಷೆ ಸೆನೋರಿಟ ಆನಂದ್ರವರು ಮಾತನಾಡಿ, ಪ್ರಕೃತಿಯೇ ನಮ್ಮ ಉಸಿರು, ಪ್ರಕೃತಿಯೇ ನಮ್ಮ ದೇವರು. ಪ್ರಕೃತಿಗೆ ಮಾನವ ಯಾವಾಗ ವಿರುದ್ಧ ನಿಂತಾಗ ಪ್ರಕೃತಿ ಮುನಿಸಿಕೊಂಡು ಸಾಕಷ್ಟು ಜೀವ-ಹಾನಿಗಳನ್ನು ಮಾಡಿರುವ ಘಟನೆಗಳು ನಮ್ಮ ಮುಂದಿವೆ. ಪ್ರಕೃತಿ ಮುಂದೆ ಮಾನವ ಏನೂ ಅಲ್ಲ ಎಂಬುದನ್ನು ರೂಪಿಸಿಕೊಟ್ಟಿದೆ ಕೂಡ. ಆದ್ದರಿಂದ ಈಗಿಂದಿಗ್ಲೆ ಪ್ರಜ್ಞಾವಂತ ನಾಗರಿಕರಾದ ನಾವುಗಳು ಸಾಕಷ್ಟು ಗಿಡಮರಗಳನ್ನು ನೆಡುವ ಮೂಲಕ ಪ್ರಕೃತಿ ಸೊಂಪಾಗಿ ಬೆಳೆಯುತ್ತಾ ನಮಗೆ ಕಾಲಕಾಲಕ್ಕೆ ಉತ್ತಮ ಗಾಳಿ,ನೀರು, ಬೆಳಕನ್ನು ಕರುಣಿಸಲಿ ಎಂಬುದೇ ನಮ್ಮ ಹಾರೈಕೆಯಾಗಿದೆ ಎಂದರು.
ತಾಲೂಕು ಪಂಚಾಯತ್ ಸ್ಥಾಯಿ ಸಮಿತಿಯ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ನಗರಸಭಾ ಸದಸ್ಯರಾದ ಬಾಲಚಂದ್ರ ಕೆ, ಶಶಿಕಲಾ ಸಿ.ಎಸ್, ನಗರಸಭೆಯ ಹಿರಿಯ ಆರೋಗ್ಯ ನಿರೀಕ್ಷಕಿ ಶ್ವೇತಾಕಿರಣ್, ರೋಟರಿ ಜಿಲ್ಲೆ ೩೧೮೧, ವಲಯ ನಾಲ್ಕರ ವಲಯ ಸೇನಾನಿ ಮನೋಹರ್ ಕುಮಾರ್, ಮಾಜಿ ವಲಯ ಸೇನಾನಿ ಸುರೇಶ್ ಎಂ, ರೋಟರಿ ಡಿಸ್ಟ್ರಿಕ್ಟ್ ಪ್ರಾಜೆಕ್ಟ್ ಜಿಲ್ಲಾ ಕಾರ್ಯದರ್ಶಿ ಆಸ್ಕರ್ ಆನಂದ್, ರೋಟರಿ ಸ್ವರ್ಣದ ನಿಕಟಪೂರ್ವ ಅಧ್ಯಕ್ಷ ಜಯಂತ್ ಶೆಟ್ಟಿ, ಲಿಟ್ಲ್ ಫ್ಲವರ್ ಶಾಲೆಯ ಶಿಕ್ಷಕರು, ಧರ್ಮಭಗಿನಿಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಲಿಟ್ಲ್ ಫ್ಲವರ್ ಶಾಲೆಯ ಮುಖ್ಯ ಶಿಕ್ಷಕಿ ಸಿಸ್ಟರ್ ಪ್ರಶಾಂತಿ ಸ್ವಾಗತಿಸಿ, ರೋಟರಿ ಕ್ಲಬ್ ಪುತ್ತೂರು ಸ್ವರ್ಣ ಕಾರ್ಯದರ್ಶಿ ಆಶಾ ರೆಬೆಲ್ಲೋ ವಂದಿಸಿದರು. ಲಿಟ್ಲ್ ಫ್ಲವರ್ ಶಾಲೆಯ ಶಿಕ್ಷಕ ಬಾಲಕೃಷ್ಣ ರೈ ಪೊರ್ದಾಲ್ ಕಾರ್ಯಕ್ರಮ ನಿರೂಪಿಸಿದರು.