- ಲೆಕ್ಕ ತೋರಿಸುವ ತನಕ ಪ್ರತಿಭಟನೆ ನಿಲ್ಲದು – ಅಬೂಬಕ್ಕರ್ ಸಿದ್ದೀಕ್
- ಹಗರಣ ಬಯಲಿಗೆಳೆಯಲು ಎಸ್ಡಿಪಿಐ ಒಂದು ಅಂಕುಶ ಸಾಕು – ಅಬ್ದುಲ್ ಮಜೀದ್ಖಾನ್
- ನಮ್ಮ ಪ್ರತಿಭಟನೆ ಮುಚ್ಚಿಹಾಕಲು ಲಾಕ್ಡೌನ್ – ಜಾಬೀರ್ ಅರಿಯಡ್ಕ
ಪುತ್ತೂರು: ಕೋವಿಡ್ ೧೯ ನಿಯಂತ್ರಣದ ಹೆಸರಿನಲ್ಲಿ ರಾಜ್ಯ ಸರಕಾರವು ಲೂಟಿ ಆರಂಭಿಸಿದೆ. ಕೋಟ್ಯಂತರ ರೂಪಾಯಿ ಖರ್ಚು ಮಾಡಿದೆ ಎಂದು ಹೇಳಿ ಕೊಂಡಿದೆಯಾದರೂ ಯಾವ್ಯಾವುದಕ್ಕೆ ಖರ್ಚು ಮಾಡಲಾಗಿದೆ ಎಂಬುದರ ಬಗ್ಗೆ ಸ್ಪಷ್ಪ ಮಾಹಿತಿ ಕೊಡದೆ ಕೊರೋನ ರೋಗದಂತಹ ಈ ಸಂದರ್ಭದಲ್ಲಿ ಜನಸಾಮಾನ್ಯರಿಗೆ ನೆರವು ನೀಡಬೇಕಾದ ಸರಕಾರ ಹಗರಣದಲ್ಲಿ ಭಾಗಿಯಾಗಿವೆ ಎಂದು ಆರೋಪಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ಪುತ್ತೂರು ವಿಧಾನ ಸಭಾ ಕ್ಷೇತ್ರದ ವತಿಯಿಂದ ಜು.೧೪ರಂದು ಪುತ್ತೂರು ಮಿನಿ ವಿಧಾನ ಸೌಧದ ಬಳಿ ಪ್ರತಿಭಟನೆ ನಡೆಯಿತು.
ಲೆಕ್ಕ ತೋರಿಸುವ ತನಕ ಪ್ರತಿಭಟನೆ ನಿಲ್ಲದು
ಎಸ್.ಡಿ.ಪಿ.ಐ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಅಬೂಬಕ್ಕರ್ ಸಿದ್ದಿಕ್ ಅವರು ಮಾತನಾಡಿ ಈ ಹಿಂದೆ ಭ್ರಷ್ಟಾಚಾರದಲ್ಲಿ ಜೈಲಿಗೆ ಹೋಗಿ ಮತ್ತೆ ಮುಖ್ಯಮಂತ್ರಿಯಾಗಿರುವ ಯಡಿಯೂರಪ್ಪನವರು ಇದೀಗ ಕೊರೋನಾದಲ್ಲೂ ಕೊಲ್ಲೆ ಹೊಡೆಯುತ್ತಿದ್ದಾರೆ. ಸ್ಯಾನಿಟೈಸರ್, ಥರ್ಮಲ್ಸ್ಕ್ಯಾನರ್ ಸೇರಿದಂತೆ ಕೊರೋನಾ ಪರೀಕ್ಷೆಯಲ್ಲೂ ಹಗರಣ ಮಾಡಿದ್ದಾರೆ. ಇಂತಹ ಭ್ರಷ್ಟತೆಯನ್ನು ಬಯಲಿಗೆಳೆಯಲು ಎಸ್ಡಿಪಿಐ ಹೋರಾಟ ನಡೆಸುತ್ತಿದೆ. ಕೋವಿಡ್-೧೯ ನಿರ್ವಹಣೆಗಾಗಿ ಎಷ್ಟು ಖರ್ಚು ಮಾಡಿರುವ ಕುರಿತು ಮಾಹಿತಿ ಹಕ್ಕಿನಲ್ಲಿ ಪ್ರಶ್ನಿಸಿದಾಗ ಆಡಿಟ್ ಆಗಬೇಕೆಂಬ ಮಾಹಿತಿ ನೀಡಿ ತಪ್ಪಿಸಿಕೊಳ್ಳುತ್ತಿದ್ದಾರೆ. ಬಿಜೆಪಿ ಸರಕಾರದ ಭ್ರಷ್ಟತೆಯ ಕುರಿತು ಯಾವುದೇ ವಿರೋಧ ಪಕ್ಷ ಮಾತನಾಡುತ್ತಿಲ್ಲ. ಯಾಕೆಂದರೆ ಅವರ ಬಾಯಿ ಮುಚ್ಚಿಸುವ ಶಕ್ತಿ ಬಿಜೆಪಿ ಸರಕಾರಕ್ಕಿದೆ. ಆದರೆ ಎಸ್ಡಿಪಿಐ ಮಾತ್ರ ಸುಮ್ಮನೆ ಇರುವುದಿಲ್ಲ. ನಮಗೆ ಯಾವ ಭಯವೂ ಇಲ್ಲ ಎಂದ ಅವರು ಬಿಜೆಪಿ ಎಲ್ಲಿಯ ತನಕ ಲೆಕ್ಕ ಕೊಡುವುದಿಲ್ಲೋ ಅಲ್ಲಿಯ ತನಕ ನಮ್ಮ ಪ್ರತಿಭಟನೆ ನಿಲ್ಲುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಹಗರಣ ಬಯಲಿಗೆಳೆಯಲು ಎಸ್ಡಿಪಿಐ ಒಂದು ಅಂಕುಶ ಸಾಕು
ಎಸ್ಡಿಪಿಐ ರಾಜ್ಯ ಉಪಾಧ್ಯಕ್ಷ ನ್ಯಾಯವಾದಿ ಅಬ್ದುಲ್ ಮಜೀದ್ಖಾನ್ ಅವರು ಮಾತನಾಡಿ ರಾಜ್ಯ ಸರಕಾರ ಕೊರೋನಾದಲ್ಲೂ ದರೋಡೆ ಮಾಡುವ ಹೀನ ಕೃತ್ಯಕ್ಕೆ ಕೈ ಹಾಕಿದೆ. ಸರಕಾರವು ಖಾಸಗಿ ಆಸ್ಪತ್ರೆ ಜೊತೆ ಸೇರಿಕೊಂಡು ಹಣ ದೋಚುವ ಕೆಲಸ ಮಡುತ್ತಿದೆ. ಕೋವಿಡ್ ನಿರ್ವಹಣೆಗೆಂದು ಪಿ.ಎಮ್. ನಿಧಿಗೆ ಹಣ ಕೊಟ್ಟರೆ ಅದನ್ನು ಆಪರೇಷನ್ ಕಮಲಕ್ಕೆ ಬಳಸುತ್ತಿದ್ದಾರೆ. ಸಾಂಕ್ರಾಮಿಕ ರೋಗದಲ್ಲಿ ಡೆಂಗ್ಯೂ, ನ್ಯೂಮೊನಿಯ, ಮಲೇರಿಯ ದಂತಹ ಸಂದರ್ಭದಲ್ಲೂ ರೋಗಿಗೆ ಆಸ್ಪತ್ರೆಯಲ್ಲಿ ಕೊರೋನಾ ಪರೀಕ್ಷೆ ನಡೆಸುವ ಮೂಲಕ ಒಟ್ಟು ಹಣ ಮಾಡುವ ಉದ್ದೇಶವನ್ನು ಸರಕಾರ ಇಟ್ಟು ಕೊಂಡಿದೆ. ಇಂತಹ ಹಗರಣಗಳನ್ನು ಬಯಲಿಗೆಳೆಯಲು ನಮ್ಮ ಪಕ್ಷದಲ್ಲಿರುವ ಧ್ವನಿಗಳ ಸಂಖ್ಯೆ ಕಡಿಮೆ ಇರಬಹುದು. ಆದರೆ ಆನೆಯನ್ನು ಪಲಗಿಸಲು ಒಂದು ಅಂಕುಶನ ಸಾಕು. ಅದೇ ರೀತಿ ಎಸ್.ಡಿ.ಪಿ.ಐ ಒಂದು ಅಂಕುಶದ ರೀತಿಯಲ್ಲಿ ಕೆಲಸ ಮಾಡಲಿದೆ ಎಂದು ಹೇಳಿದರು.
ನಮ್ಮ ಪ್ರತಿಭಟನೆ ಮುಚ್ಚಿಹಾಕಲು ಲಾಕ್ಡೌನ್:
ಪಿಎಫ್ಐ ಜಿಲ್ಲಾಧ್ಯಕ್ಷ ಜಾಬೀರ್ ಅರಿಯಡ್ಕ ಅವರು ಕೊರೋನಾದಲ್ಲಿ ಜನ ಸಾಯುತ್ತಿದ್ದರೂ ಜನಪ್ರತಿನಿಧಿಗಳು ಕಚೇರಿಯಲ್ಲಿ ಕೂತು ಹಣ ಕೊಲ್ಲೆ ಹೊಡೆಯುತ್ತಿದ್ದಾರೆ. ಇದನ್ನು ಜನರ ಮುಂದಿಡಲು ನಾವು ಇವತ್ತು ಸಾಂಕೇತಿಕ ಪ್ರತಿಭಟನೆ ನಡೆಸುತ್ತಿದ್ದೇವೆ. ಹಾಗೆಂದು ಹಗರಣ ನಿಲ್ಲದಿದ್ದರೆ ಕಚೇರಿಗೆ ನುಗ್ಗಿಯೂ ಪ್ರತಿಭಟನೆ ಮಾಡಲು ಸಿದ್ಧರಿದ್ದೇವೆ ಎಂದು ಹೇಳಿದ ಅವರು ಇವತ್ತು ಸರಕಾರ ಒಂದು ವಾರದ ಲಾಕ್ಡೌನ್ ಘೋಷಣೆ ಮಾಡಿರುವುದು ಕೊರೋನಾ ಸೋಂಕು ನಿಯಂತ್ರಣಕ್ಕಾಗಿ ಅಲ್ಲ. ಎಲ್ಲಿ ಸರಕಾರದ ಅವ್ಯವಹಾರ ಜನರಿಗೆ ತಿಳಿಸುವ ಕೆಲಸ ಎಸ್ಡಿಪಿಐ ಯಿಂದ ಆಗುತ್ತಿದೆ ಎಂಬ ಭಯದಿಂದ ನಮ್ಮ ಪ್ರತಿಭಟನೆಯನ್ನು ಹತ್ತಿಕ್ಕಲು ಲಾಕ್ಡೌನ್ ಜಾರಿ ಮಾಡುತ್ತಿದ್ದಾರೆ. ಆದರೆ ನಾವು ಭ್ರಷ್ಟಚಾರದ ವಿರುದ್ಧ ಪ್ರತಿಭಟನೆಯನ್ನು ಲಾಕ್ಡೌನ್ ಉಲ್ಲಂಘಿಸಿಯಾದರೂ ಮಾಡಲು ಸಿದ್ಧರಿದ್ದೇವೆ ಎಂದು ಹೇಳಿದರು.
ಕೊರೋನಾ ದಫನ್ನಲ್ಲೂ ದರೋಡೆ:
ಕೊರೋನಾ ದಫನ್ ಕಾರ್ಯದಲ್ಲೂ ಜಿಲ್ಲಾಡಳಿತ ದರೋಡೆ ಮಾಡುತ್ತಿದೆ. ಕೊರೋನಾದಿಂದ ೫ ಮಂದಿ ಮೃತಪಟ್ಟಿರುವ ಕುರಿತು ಜಿಲ್ಲಾಧಿಕಾರಿ ಅಧಿಕೃತ ಹೇಳಿಕೆ ನೀಡಿದರೂ ಮೃತಪಟ್ಟ ೩೭ ಮಂದಿಯನ್ನು ಕೊರೋನಾ ಗೈಡ್ಲೈನ್ ಪ್ರಕಾರ ಪ್ಯಾಕ್ ಮಾಡಿ ದಫನ್ ಮಾಡಿರುವುದು ಯಾಕೆ ಎಂದು ಪ್ರಶ್ನಿಸಿದ ಜಾಬೀರ್ ಅರಿಯಡ್ಕ ಅವರು ಕೊರೋನಾ ದಫನ್ನಲ್ಲೂ ಸರಕಾರ ದರೋಡೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು. ಎಸ್ಡಿಟಿಯು ತಾಲೂಕು ಅಧ್ಯಕ್ಷ ಹಮೀದ್ ಸಾಲ್ಮರ ಸ್ವಾಗತಿಸಿದರು. ಎಸ್ಡಿಪಿಐ ತಾಲೂಕು ಉಪಾಧ್ಯಕ್ಷ ಇಬ್ರಾಹಿಂ ಸಾಗರ್ ವಂದಿಸಿದರು. ನಗರ ಸಮಿತಿ ಅಧ್ಯಕ್ಷ ಬಶೀರ್ ಕಾರ್ಯಕ್ರಮ ನಿರೂಪಿಸಿದರು. ತಾಲೂಕು ಕಾರ್ಯದರ್ಶಿ ಅಶ್ರಫ್ ಬಾವು, ದಲಿತ್ ಸೇವಾ ಸಮಿತಿ ಮುಖಂಡ ರಾಜು ಹೊಸ್ಮಠ ಸೇರಿದಂತೆ ಹಲವಾರು ಮಂದಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ತಾಲೂಕಿನಲ್ಲಿ ಕೋವಿಡ್ನಲ್ಲಿ ಮೃತಪಟ್ಟ ಕುರಿತು ಸಂಶಯ
ಪುತ್ತೂರು ತಾಲೂಕಿನಲ್ಲಿ ಇಬ್ಬರು ಕೊರೋನಾ ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ ಎಂದು ಅವರ ದಫನ ಕಾರ್ಯ ಕೋವಿಡ್ ಸುರಕ್ಷತೆಯಲ್ಲಿ ನಡೆದಿದೆ. ಆದರೆ ಖಾಸಗಿ ಆಸ್ಪತ್ರೆಗಳ ಕೊರೋನಾ ದಂದೆಯಿಂದಾಗಿ ಅವರಿಬ್ಬರು ಕೋವಿಡ್ನಿಂದ ಮೃತಪಟ್ಟಿದ್ದಾರೆ ಎಂಬುದರಲ್ಲಿ ನಮಗೆ ಸಂಶಯವಿದೆ. ಹೆರಿಗೆ ನೋವಿನಿಂದಲೂ ಮೃತಪಡುವ ಸಾಧ್ಯತೆ. ಡೆಂಗ್ಯೂ, ನ್ಯುಮೋನಿಯದಿಂದಲೂ ಮೃತಪಡುವ ಸಾಧ್ಯತೆ ಇದೆ. ಈ ಕುರಿತು ನಾವು ಮುಂದೆ ಮೂಲ ಕಂಡು ಹಿಡಿಯಲಿದ್ದೇವೆ – ಅಬೂಬಕ್ಕರ್ ಸಿದ್ದಿಕ್, ಅಧ್ಯಕ್ಷರು,
ಎಸ್.ಡಿ.ಪಿ.ಐ ಪುತ್ತೂರು ವಿಧಾನಸಭಾ ಕ್ಷೇತ್ರ