ಪುತ್ತೂರು: ಕೋವಿಡ್ 19 ನಿರ್ಮೂಲನೆಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಹರಸಾಹಸ ಪಡುತ್ತಿರುವಂತೆಯೇ ಮತ್ತೊಮ್ಮೆ ಲಾಕ್ಡೌನ್ಗೆ ಮುಂದಾಗಿದೆ. ರಾಜ್ಯದಲ್ಲಿ ಕೊರೊನಾ ಸೋಂಕಿತರ ಪ್ರಮಾಣ ಹೆಚ್ಚುತ್ತಿರುವ ಜಿಲ್ಲೆಗಳಲ್ಲಿ ಆಯಾ ಜಿಲ್ಲಾಡಳಿತವೇ ನಿರ್ಧಾರ ಕೈಗೊಳ್ಳುವಂತೆ ಈಗಾಗಲೇ ಮುಖ್ಯಮಂತ್ರಿ ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಿತಿಮೀರಿ ಕೊರೊನಾ ಸೋಂಕಿತರ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ತಲೆಕೆಡಿಸಿಕೊಂಡಿದೆ. ಮತ್ತೊಮ್ಮೆ ಲಾಕ್ಡೌನ್ಗೆ ಮೊರೆ ಹೋಗುವುದಾ ಎಂಬ ಬಗ್ಗೆ ಸಾರ್ವಜನಿಕರ ಟೀಕೆ ಟಿಪ್ಪಣಿಗಳ ಮಧ್ಯೆ ತೀವ್ರ ಚಿಂತನೆ ಮಾಡಿತ್ತು. ಆದರೂ ಮಗದೊಮ್ಮೆ ಪ್ರಯತ್ನವೆಂಬಂತೆ ಜಿಲ್ಲಾಡಳಿತ ಒಂದು ವಾರಗಳ ಲಾಕ್ಡೌನ್ ಪ್ರಯೋಗಕ್ಕೆ ಮುಂದಾಗಿದೆ. ಜುಲೈ 16 ರಿಂದ 23 ರವರೆಗೆ ಲಾಕ್ಡೌನ್ ಮಾಡಿ ಫಲಿತಾಂಶವನ್ನು ಕಾದು ನೋಡುವ ತಂತ್ರ ಮಾಡಿದೆ. ಒಂದು ವಾರಗಳ ಕಾಲ ಲಾಕ್ಡೌನ್ ಹೇಗಿರಲಿದೆ ಎಂಬ ಸಂಪೂರ್ಣ ಮಾರ್ಗಸೂಚಿಯನ್ನು ಜಿಲ್ಲಾಧಿಕಾರಿ ಸಿಂಧು ಬಿ. ರೂಪೇಶ್ ಪ್ರಕಟಿಸಿದ್ದಾರೆ.
ಲಾಕ್ಡೌನ್ ನಿಯಮಾವಳಿ ಪ್ರಕಾರ ಪ್ರತಿನಿತ್ಯ ಬೆಳಿಗ್ಗೆ 8 ಗಂಟೆಯಿಂದ 11 ಗಂಟೆಯವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ. ಪಡಿತರ ಅಂಗಡಿ, ದಿನಸಿ ಸಾಮಾಗ್ರಿ ಅಂಗಡಿ, ಹಣ್ಣು ತರಕಾರಿ ಅಂಗಡಿಗಳು 11 ಗಂಟೆಯವರೆಗೆ ತರೆದಿರಲಿವೆ. ಉಳಿದಂತೆ ಸರಕಾರ ಸೂಚಿಸಿದ ಅಗತ್ಯ ಮತ್ತು ತುರ್ತು ಸೇವೆಗಳನ್ನು ಹೊರತುಪಡಿಸಿ ಯಾವುದೇ ರೀತಿಯ ವ್ಯವಹಾರ, ಸಂಚಾರವನ್ನು ನಿರ್ಬಂಧಿಸಲಾಗಿದೆ.
ಇನ್ನು ನಾಳೆ ಅಂದರೆ ಜುಲೈ 15ರಂದು ರಾತ್ರಿ 8 ರಿಂದ ಜುಲೈ 23ರ ಬೆಳಗ್ಗೆ 5 ಗಂಟೆವರೆಗೂ ಲಾಕ್ ಡೌನ್ ನಿಯಮ ಜಾರಿಯಲ್ಲಿ ಇರಲಿದೆ. ಬಾರ್, ಮಾಲ್, ವೈನ್ ಶಾಪ್ ಗಳು ಸಂಪೂರ್ಣ ಬಂದ್ ಆಗಿರಲಿವೆ. ಸರಕಾರ ಸೂಚಿಸಿದ ಅಗತ್ಯ ವಿನಾಯಿತಿ ಸೆಂಟರ್ಗಳು ಕಂಟೈನ್ಮೆಂಟ್ ಝೋನ್ ಹೊರತುಪಡಿಸಿ ಕಾರ್ಯನಿರ್ವಹಿಸಲಿವೆ. ಸರಕು ಸಾಗಾಟ ವಾಹನಗಳಿಗೆ ಕಂಟೈನ್ಮೆಂಟ್ ವಲಯ ಹೊರತುಪಡಿಸಿ ಯಾವುದೇ ನಿರ್ಬಂಧಗಳು ಇರುವುದಿಲ್ಲ. ಇನ್ನು ಸರಕಾರ ಸೂಚಿಸಿದ ಅಗತ್ಯ ಸರಕಾರಿ ಕಚೇರಿಗಳು ಮಾತ್ರ ಕಾರ್ಯನಿರ್ವಹಿಸಲಿದ್ದು, ಉಳಿದಂತೆ ಸರಕಾರಿ ಕಚೇರಿಗಳೂ ಬಂದ್ ಆಗಿರಲಿವೆ. ಸಾಧ್ಯವಾದಷ್ಟೂ ಸರಕಾರಿ ಉದ್ಯೋಗಿಗಳು ಮನೆಯಿಂದಲೇ ಕೆಲಸ ನಿರ್ವಹಿಸುವಂತೆ ಸೂಚಿಸಲಾಗಿದೆ. ಸಾರ್ವಜನಿಕವಾಗಿ ಯಾವುದೇ ಖಾಸಗಿ ಸಾರಿಗೆ ಸಂಚಾರವನ್ನು ಸಂಪೂರ್ಣ ನಿರ್ಬಂಧಿಸಲಾಗಿದೆ.