- ಪಟ್ಟಣದ ಒಳ ರಸ್ತೆ ಬಂದ್ ಮಾಡಿ
- ಹಿಂದು ಮುಂದೂ ನೋಡದೆ ಕೇಸ್ ಹಾಕಿ
- ಗ್ರಾಮಾಂತರದಲ್ಲಿ ಕೂಲಿ ಕೆಲಸಕ್ಕೆ ಸಮಸ್ಯೆ ಇಲ್ಲ
- ಗ್ರಾ.ಪಂ ಕಾರ್ಯಪಡೆ ಸಭೆ ನಡೆಸಿ
- ಒಂದೇ ಒಂದು ಕೊರೋನಾ ಪ್ರಕಣ ಇರಬಾರದು
- ಸರಕಾರಿ ಕಾಮಗಾರಿಗೆ ಅನುಮತಿ
- ಡೆಂಗ್ಯೂ ಸಾಂಕ್ರಾಮಿಕ ರೋಗದ ಬಗ್ಗೆ ಎಚ್ಚರವಹಿಸಿ
- ವಾರ್ಡ್ಗಳ ಭೇಟಿ
- ಪೊಲೀಸರಿಗೆ 3 ಶಿಫ್ಟ್ ಡ್ಯೂಟಿ
ಪುತ್ತೂರು: ಒಂದು ವಾರದ ಕಾಲ ಜಿಲ್ಲೆಯಾದ್ಯಂತ ಲಾಕ್ಡೌನ್ ಜಾರಿಗೊಂಡಿರುವ ಕಾರಣ ಅವಿಭಜಿತ ಪುತ್ತೂರು, ಕಡಬ ತಾಲೂಕಿನಲ್ಲಿ ಪರಿಣಾಮಕಾರಿಯಾಗಿ ಲಾಕ್ಡೌನ್ ಅನುಷ್ಠಾನ ಆಗಬೇಕೆಂದು ಶಾಸಕ ಸಂಜೀವ ಮಠಂದೂರು ಅವರು ಅನುಷ್ಠಾನಾಧಿಕಾರಿಗಳು, ಗ್ರಾ.ಪಂ ಆಡಳಿತಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಕೋವಿಡ್-19 ನಿಯಂತ್ರಣ ಕಾಯ್ದು ಕೊಳ್ಳುವ ನಿಟ್ಟಿನಲ್ಲಿ ತಾ.ಪಂ ಸಭಾಂಗಣದಲ್ಲಿ ಜು.15ರಂದು ಅಧಿಕಾರಿಗಳ ಮಟ್ಟದ ಸಭೆ ನಡೆಸಿ ಕಾರ್ಯದ ಕುರಿತು ಮಾಹಿತಿ ಪಡೆದು ಕೊಂಡು ಅಧಿಕಾರಿಗಳು ಲಾಕ್ಡೌನ್ ಕರ್ತವ್ಯದಲ್ಲಿ ಕೆಲವೊಂದು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು. ಲಾಕ್ಡೌನ್ ಸಡೀಲ ಗೊಂಡ ಬಳಿಕ ಅಧಿಕಾರಿಗಳು ಕೂಡಾ ತಮ್ಮ ಅಧಿಕಾರವನ್ನು ಮೊಟಕುಗೊಳಿಸಿದ್ದಾರೆ. ಹಾಗಾಗಿ ಇವತ್ತು ಕೊರೋನಾ ಪ್ರಕರಣ ಹೆಚ್ಚುತ್ತಿದೆ. ಮುಂದೆ ಅನುಷ್ಟಾನಾಧಿಕರಿಗಳು ಗ್ರಾಮಸಭೆಯಿಂದ ಹಿಡಿದು ನಗರಸಭೆಯ ತನಕ ಒಂದು ವಾರದಲ್ಲಿ ಭೌಗೋಳಿಕ ಪ್ರದೇಶಲ್ಲಿ ನಾವೇನು ಮಾಡಬೇಕು ಎಂಬುದನ್ನು ಚಿಂತಿಸಿ. ಮುಂದಿನ ಒಂದು ವಾರದಲ್ಲಿ ಯಾವುದೇ ಅಹಿತಕರ ಘಟನೆಗಳು ಆಗದ ರೀತಿಯಲ್ಲಿ ಜನಸಾಮಾನ್ಯರು ಒಂದೆಡೆ ಮನೆಯಲ್ಲೇ ಇರುವಂತೆ. ಸಾರ್ವಜನಿಕರ ರಸ್ತೆಯಲ್ಲಿ ಓಡಾಡದೆ ಮನೆಯಲ್ಲೇ ಕೂತು ಆರೋಗ್ಯ ಕಾಪಾಡುವ ದೃಷ್ಟಿಯಿಂದ ನಿಮ್ಮ ಕಾರ್ಯವೈಖರಿಗಳನ್ನು ಮಾಡಬೇಕು. ಒಂದು ವಾರದ ಲಾಕ್ಡೌನ್ ನಿಂದ ಜನರಿಗೆ ತೊಂದರೆ ಆಗುವುದಿಲ್ಲ. ಆದರೆ ಅಧಿಕಾರಿಗಳು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದ ಅವರು ಆರಂಭದಲ್ಲಿರುವ ಕಠಿಣ ಪರಿಶ್ರಮ ಈಗಿಲ್ಲ ಯಾಕೆ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದ ಶಾಸಕರು ಒಬ್ಬ ವ್ಯಕ್ತಿಗೆ ಕೊರೋನಾ ದೃಢಪಟ್ಟರೆ ಆತನ ಜೊತೆಯಲ್ಲಿರುವ ಪ್ರಾಥಮಿಕ ಸಂಪರ್ಕಲ್ಲಿರುವವರ ಕುರಿತು ಮಾಹಿತಿ ಕಲೆ ಹಾಕುವ ಜವಾಬ್ದಾರಿ ಕಾರ್ಯಪಡೆಯದ್ದು, ಅವರು ಕೊಟ್ಟ ಮಾಹಿತಿಯನ್ನು ಆರೋಗ್ಯ ಇಲಾಖೆ ಗಮನಿಸಿ, ಸಂಬಂಧಿಸಿದವರಿಗೆ ತಿಳಿಸುವ ಕೆಲಸ ಆಗಬೇಕು. ನಿನ್ನೆಯ ದಿನ ಉಪ್ಪಿನಂಗಡಿಯ ಕೊರೋನಾ ದೃಢ ಪಟ್ಟ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದೊಯ್ದ ಚಾಲಕ ರಸ್ತೆಯಲ್ಲಿ ಓಡಾಡುತ್ತಿದ್ದರೆಂಬ ಆರೋಪ ಕೇಳಿ ಬರುತ್ತಿತ್ತು. ಈ ರೀತಿ ಆಗ ಬಾರದು. ಈ ರೀತಿ ಸಡಿಲತೆ ಬಿಟ್ಟರೆ ಸೋಂಕು ಹರಡುವುದಕ್ಕೆ ನಾವೇ ದಾರಿ ಮಾಡಿದಂತಾಗುತ್ತದೆ ಎಂದರು. ಹಾಗಾಗಿ ಒಂದು ವಾರದ ಲಾಕ್ಡೌನ್ ಯಶಸ್ವಿಯಾಗಬೇಕು. ಲಾಕ್ಡೌನ್ ಮುಗಿದ ಕೂಡಲೆ ಜು. ೨೪ಕ್ಕೆ ಮತ್ತೆ ನಾವು ಸೇರಬೇಕು. ಇದೊಂದು ಸಾರ್ವಜನಿಕರ ಬದುಕಿನ ಪ್ರಶ್ನೆ. ಒಟ್ಟು ವ್ಯವಸ್ಥೆಯನ್ನು ಗಂಭೀರಾವಾಗಿ ಸ್ವೀಕರಿಸಿ ಎಂದರು.
ಪಟ್ಟಣದ ಒಳ ರಸ್ತೆ ಬಂದ್ ಮಾಡಿ:
ಪೊಲೀಸರಿಗೆ ಮತ್ತು ವೈದ್ಯರಿಗೆ ಬಹುತೇಕ ಮಂದಿಗೆ ಕೊರೋನಾ ದೃಢಪಟ್ಟ ಹಿನ್ನೆಲೆಯಲ್ಲಿ ಪೊಲೀಸರ ಸಂಖ್ಯೆಯೂ ಕಡಿಮೆ ಆಗಿದೆ. ಇಂತಹ ಸಂದರ್ಭದಲ್ಲಿ ಲಾಕ್ಡೌನ್ ಪರಿಣಾಮಕಾರಿಯಾಗಿ ಮಾಡಲು ಪುತ್ತೂರು ನಗರಸಭೆ ವ್ಯಾಪ್ತಿಯ ಬಹುತೇಕ ಒಳ ರಸ್ತೆಗಳನ್ನು ಬಂದ್ ಮಾಡಿ ಮುಖ್ಯ ರಸ್ತೆ ಮಾತ್ರ ಅವಕಾಶ ನೀಡುವಂತೆ ಮಾಡಿ ಎಂದು ಶಾಸಕರು ಅಧಿಕಾರಿಗಳಿಗೆ ಸೂಚಿಸಿದರು.
ಹಿಂದು ಮುಂದೂ ನೋಡದೆ ಕೇಸ್ ಹಾಕಿ
ಲಾಕ್ಡೌನ್ ಸಂದರ್ಭ ಉಲ್ಲಂಘನೆ ಮಾಡಿದ್ದೇ ಆದರೆ ಯಾವುದೇ ವ್ಯಕ್ತಿಯಾಗಲಿ, ಯಾರೆ ಆಗಲಿ ಹಿಂದು ಮುಂದೂ ನೋಡದೆ ಶಿಸ್ತು ಬದ್ಧವಾಗಿ ಕೇಸ್ ಹಾಕಿ. ಲಾಕ್ಡೌನ ಉಲ್ಲಂಘನೆ ಅಥವಾ ವಾಹನಗಳನ್ನು ಸೀಸ್ ಮಾಡುವ ಕೆಲಸವನ್ನೂ ಮಾಡಿ ಎಂದು ಶಾಸಕರು ಪೊಲೀಸರಿಗೆ ಸೂಚಿಸಿದರು.
ಗ್ರಾಮಾಂತರದಲ್ಲಿ ಕೂಲಿ ಕೆಲಸಕ್ಕೆ ಸಮಸ್ಯೆ ಇಲ್ಲ:
ಗ್ರಾಮಾಂತರ ಭಾಗದಲ್ಲಿ ಕೂಲಿ ಕಾರ್ಮಿಕರು, ತೋಟದ ಕೆಲಸ ಮಾಡುವವರಿಗೆ ಯಾವುದೇ ಸಮಸ್ಯೆ ಇರುವುದಿಲ್ಲ. ಸಾಮಾಜಿಕ ಅಂತರ ಕಾಯ್ದು ಕೊಂಡು ಮಾಸ್ಕ್ ಧರಿಸಿ ಕೆಲಸ ಮಾಡಲು ಅವಕಾಶ ನೀಡಿ. ಮಾಸ್ಕ್ ಧರಿಸಿ ಜೀವನ ಮಾಡುವುದನ್ನು ಕಲಿಸಿ ಎಂದು ಶಾಸಕರು ಅಧಿಕಾರಿಗಳಿಗೆ ಸೂಚಿಸಿದರು.
ಗ್ರಾ.ಪಂ ಕಾರ್ಯಪಡೆ ಸಭೆ ನಡೆಸಿ:
ಸಾರ್ವಜನಿಕ ಕಳಕಲಿಯ ದೃಷ್ಟಿಯಿಂದ ಒಬ್ಬ ಅಧಿಕಾರಿ ಹೇಳಿ ಮಾಡುವುದಕ್ಕಿಂತ ಹೇಳದೆ ಮಾಡುವ ಪ್ರವೃತ್ತಿ ಬೆಳೆಸಿಕೊಳ್ಳಿ. ಪ್ರತಿ ದಿನ ಬೆಳಿಗ್ಗೆ ಮತ್ತು ಸಂಜೆ ನಿಮ್ಮ ವ್ಯಾಪ್ತಿಯ ವರದಿಯನ್ನು ಮೇಲಾಧಿಕಾರಿಗಳಿಗೆ ಕೊಡಿ. ಲಾಕ್ಡೌನ್ ಆರಂಭದ ದಿನವೇ ತಮ್ಮ ಪಂಚಾಯತ್ಗನಲ್ಲಿ ಕಾರ್ಯಪಡೆ ಸಭೆ ನಡೆಸಿ ದಿನದ ೨೪ ಗಂಟೆ ಕಾರ್ಯಪಡೆ ಪಂಚಾಯತ್ ವ್ಯಾಪ್ತಿಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಏನೇನು ಮಾಡಬೇಕು ಅದನ್ನು ಮಾಡಿಕೊಳ್ಳಬೇಕು. ನಿಮ್ಮನ್ನು ಮೊನಿಟರ್ ಮಾಡುವ ಕೆಲಸ ಮೇಲಾಧಿಕಾರಿಗಳು ಮಾಡಬೇಕು ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.
ಒಂದೇ ಒಂದು ಕೊರೋನಾ ಪ್ರಕಣ ಇರಬಾರದು:
ಒಂದು ವಾರದ ಲಾಕ್ಡೌನ್ನಲ್ಲಿ ಒಂದೇ ಒಂದು ಕೊರೋನಾ ಪ್ರಕಣ ಬರುವುದಿಲ್ಲ ಎಂದು ಖಾತ್ರಿ ಪಡಿಸುವ ಕೆಲಸ ಮಾಡಬೇಕು. ಅದಕ್ಕೆ ಏನು ಮಾಡಬೇಕೋ ಅದನ್ನು ಮಾಡಿ. ಕಂಟೈನ್ಮೆಂಟ್ ಝೋನ್, ಸೀಲ್ಡೌನ್ ಆಗಿರುವ ಸ್ಥಳ, ಹೋಮ್ ಕ್ವಾರಂಟೈನ್ನಲ್ಲಿರುವವರ ಕಡೆ ಗಮನ ಕೊಡಬೇಕು. ಅವರನ್ನು ಟ್ರೇಸ್ ಮಾಡುವ ಕೆಲಸ ಮಾಡಬೇಕು ಎಂದು ಶಾಸಕರು ಹೇಳಿದರು.
ಸರಕಾರಿ ಕಾಮಗಾರಿಗೆ ಅನುಮತಿ:
ಸರಕಾರಿ ಅಂತದಲ್ಲಿ ನಡೆಯುವ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಕಡಿಮೆ ಸಂಖ್ಯೆಯ ಕಾರ್ಮಿಕರನ್ನು ಹಾಕಿ ಕೆಲಸ ಮಾಡಲು ಅವಕಾಶವಿದೆ. ಅವರ ಸಾಮಾಗ್ರಿಗಳ ಸಾಗಾಟ ವೇಳೆ ಪೊಲೀಸರು ತೊಂದರೆ ಕೊಡಬೇಡಿ. ಅವರು ಅಗತ್ಯ ದಾಖಲೆ ತೋರಿಸಿದರೆ ಬಿಡಿ. ಅದೇ ರೀತಿ ಮದುವೆ, ಉತ್ತರಕ್ರಿಯೆ ಕಾರ್ಯಗಳಿಗೆ ಅಗತ್ಯಕ್ಕಿಂತ ಹೆಚ್ಚಿನ ಜನ ಹೋಗುವುದಕ್ಕೆ ಅವಕಾಶ ಮಾಡಿ ಕೊಡಬೇಡಿ ಎಂದು ಶಾಸಕರು ಪೊಲೀಸ್ ಇಲಾಖೆಗೆ ಸೂಚಿಸಿದರು.
ಡೆಂಗ್ಯೂ ಸಾಂಕ್ರಾಮಿಕ ರೋಗದ ಬಗ್ಗೆ ಎಚ್ಚರವಹಿಸಿ:
ಕೊರೋನಾ ನಡುವೆ ಡೆಂಗ್ಯೂಕೂಡ ಬಾದಿಸುತ್ತಿದೆ. ಈ ಕುರಿತು ಆರೋಗ್ಯ ಇಲಾಖೆ ಎಚ್ಚೆತ್ತು ಕೊಳ್ಳಬೇಕು. ಗ್ರಾ.ಪಂ ವ್ಯಾಪ್ತಿಯಲ್ಲಿ ಫಾಗಿಂಗ್ ಮಾಡುವ ನಿಟ್ಟಿನಲ್ಲಿ ಪ್ರತಿ ಗ್ರಾ.ಪಂನಲ್ಲೂ ಫಾಗಿಂಗ್ ಮೆಷಿನ್ ಖರಿಸುವಂತೆ ಜಿ.ಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಸೂಚಿಸಿದರು. ಧ್ವನಿಗೂಡಿಸಿದ ಶಾಸಕರು ತೋಟದಲ್ಲಿ ಹಾಳೆಯ ಮೇಲೆ ಶೇಖರಣೆ ಆಗುವ ಮಳೆ ನೀರು, ಕೊಳಚೆ ನಿಮೂರ್ಲನೆ ಮಾಡುವ ಮೂಲಕ ಸಾಂಕ್ರಾಮಿಕ ರೋಗ ತಡೆಯುವ ಪ್ರಕ್ರಿಯೆ ಆಗಬೇಕು. ಜೊತೆಗೆ ಪ್ರಾಕೃತಿಕ ವಿಕೋಪ ಸಂದರ್ಭ ಅಪಾಯಕಾರಿ ಹಂತದಲ್ಲಿರುವ ಆವರಣಗೋಡೆ, ಶಾಲೆಯ ಕಟ್ಟಡಗಳು, ಮನೆಗಳನ್ನು ಗುರುತಿಸಿ ತಕ್ಷಣ ಮುಂಜಾಗರುಕತೆ ಕ್ರಮ ಕೈಗೊಳ್ಳಬೇಕೆಂದು ಗ್ರಾ.ಪಂ ಆಡಳಿತಾಧಿಕಾರಿಗಳಿಗೆ ಸೂಚಿಸಿದರು.
ವಾರ್ಡ್ಗಳ ಭೇಟಿ:
ನಗರಸಭೆ ಪೌರಾಯುಕ್ತೆ ರೂಪಾ ಶೆಟ್ಟಿಯವರು ಮಾತನಾಡಿ ನಗರಸಭೆ ವ್ಯಾಪ್ತಿಯಲ್ಲಿ ಮೈಕ್ ಮತ್ತು ಜಾಗೃತಿ ಪತ್ರಗಳ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಪ್ರತಿ ವಾರ್ಡ್ಗಳಿಗೆ ಒಂದೊಂದು ದಿನ ಭೇಟಿ ನೀಡಲಾಗುತ್ತಿದೆ. ಮತ್ತು ಕಾಲ್ ಸೆಂಟರ್ ತೆರೆಯಲಾಗಿದೆ. ಹೋಮ್ ಕ್ವಾರಂಟೈನ್ನಲ್ಲಿರುವವರ ಆರೋಗ್ಯ ವಿಚಾರಣೆ ಪ್ರತಿ ದಿನ ಮಾಡಲಾಗುತ್ತಿದೆ. ಪೌರ ಕಾರ್ಮಿಕರನ್ನು ಕೆಲಸ ಕಡೆ ಮತ್ತು ಮನೆಗೆ ನಗರಸಭೆ ವಾಹನದಲ್ಲೇ ತಲುಪಿಸುವ ಕೆಲಸ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಪೊಲೀಸರಿಗೆ 3 ಶಿಫ್ಟ್ ಡ್ಯೂಟಿ:
ಡಿವೈಎಸ್ಪಿ ದಿನಕರ್ ಶೆಟ್ಟಿಯವರು ಮಾತನಾಡಿ ಪುತ್ತೂರು ಉಪವಿಭಾಗಕ್ಕೆ ಸಂಬಂಧಿಸಿ ಒಂದು ಠಾಣೆ ಸೀಲ್ಡೌನ್ ಆಗಿದೆ. ೫ ಕುಟುಂಬಕ್ಕೆ ಸೋಂಕು ತಗಲಿದೆ. ೨೦ ಮಂದಿ ಪೊಲೀಸರು ಹೋಮ್ ಕ್ವಾರಂಟೈನ್ನಲ್ಲಿದ್ದಾರೆ. ಹಾಗಾಗಿ ಮೇಲಾಧಿಕಾರಿಗಳ ಸೂಚನೆಯಂತೆ ಕೊರೋನಾ ಮುನ್ನೆಚ್ಚರಿಕೆಯಿಂದ ಸಿಬ್ಬಂದಿಗಳಿಗೆ ೩ ಶಿಫ್ಟ್ ಮಾಡಲಾಗಿದೆ. ಠಾಣೆಯಲ್ಲಿ ಒಳಗಡೆ ಕೆಲಸ ಮಾಡುವವರಿಗೆ ಸಾರ್ವಜನಿಕ ಸಂಪರ್ಕ ಇರುವುದಿಲ್ಲ. ಹೊರಗಡೆ ಕೆಲಸ ಮಾಡುವವರು ಮಾತ್ರ ಸಾರ್ವಜನಿಕ ಸಂಪರ್ಕದಲ್ಲಿ ಇರುತ್ತಾರೆ. ಜೊತೆಗೆ ಪೊಲೀಸ್ ಸಂಖ್ಯೆಯು ಕಡಿಮೆ ಆಗಿದ್ದರೂ ಹೆಚ್ಚಿನ ರಸ್ತೆಗಳಿಗೆ ಬ್ಯಾರಿಕೇಡ್ ಅಳವಡಿಸಿ, ಲಾಕ್ಡೌನ್ನ್ನು ಪರಿಣಾಮಕಾರಿಯಾಗಿ ಮಾಡುತ್ತೇವೆ ಎಂದು ಹೇಳಿದರು. ಜಿ.ಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ತಾ.ಪಂ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಸ್ಥಾಯಿ ಸಮಿತಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಸಹಾಯಕ ಕಮಿಷನರ್ ಡಾ. ಯತೀಶ್ ಉಳ್ಳಾಲ್, ತಹಸೀಲ್ದಾರ್ ರಮೇಶ್ ಬಾಬು ಟಿ, ತಾ.ಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ವೇದಿಕೆಯಲ್ಲಿಉಪಸ್ಥಿರಿದ್ದರು.