ನಿಡ್ಪಳ್ಳಿ: ಇತ್ತೀಚೆಗೆ ಕಾಂಕ್ರೀಟ್ ಕಾಮಗಾರಿ ಪೂರೈಸಿದ ಇರ್ದೆ ಗ್ರಾಮದ ಕುಂಞಮೂಲೆಯಿಂದ ಘಾಟಿ ಕೇರಳ ಸಂಪರ್ಕಿಸುವ ರಸ್ತೆಗೆ ಕಾಂಕ್ರೀಟ್ ಹಾಕಿದ ದಿವಸವೇ ಅದರ ಮೇಲೆ ವಾಹನ ಚಲಾಯಿಸಿ ಹಾನಿಗೊಳಿಸಿದ ಘಟನೆ ನಡೆದಿದೆ.
ಸುಮಾರು ಇಪ್ಪತ್ತೈದು ವರ್ಷಗಳಿಂದ ಅಭಿವೃದ್ಧಿ ಕಾಣದೆ ನೆನೆಗುದಿಗೆ ಬಿದ್ದಿದ್ದ ಈ ರಸ್ತೆಯನ್ನು ಅಭಿವೃದ್ಧಿ ಗೊಳಿಸಲು ಶಾಸಕ ಸಂಜೀವ ಮಠಂದೂರು ಅವರ ಅನುದಾನದ ಹತ್ತು ಲಕ್ಷ ರೂಪಾಯಿ ವೆಚ್ಚದಲ್ಲಿ ಕಾಂಕ್ರೀಟ್ ಕಾಮಗಾರಿ ಕೈಗೊಂಡು ಕೆಲಸ ಪೂರೈಸಲಾಗಿತ್ತು. ಈ ರೀತಿಯಲ್ಲಿ ಹಾನಿ ಮಾಡುವುದಾದರೆ ಅಭಿವೃದ್ಧಿ ಮಾಡುವ ಅಗತ್ಯವಿದೆಯೇ ಎಂಬ ಭಾವನೆ ಮೂಡುತ್ತದೆ.

ಕಿಡಿಗೇಡಿಗಳ ಕೃತ್ಯ ಶಂಕೆ: ಆರೋಪ – ನೆನೆಗುದಿಗೆ ಬಿದ್ದಿದ್ದ ಈ ರಸ್ತೆಯನ್ನು ಅಭಿವೃದ್ಧಿ ಗೊಳಿಸಿದನ್ನು ಸಹಿಸದ ಯಾರೋ ಅಸಂತುಷ್ಟ ಕಿಡಿಗೇಡಿಗಳು ಉದ್ದೇಶ ಪೂರ್ವಕವಾಗಿ ಈ ಕೃತ್ಯ ಎಸಗಿದ್ದಾರೆಂದು ಈ ವಾರ್ಡ್ ನ ಪಂಚಾಯತ್ ಮಾಜಿ ಸದಸ್ಯರಾದ ಪದ್ಮಾವತಿ.ಡಿ ಹಾಗೂ ರಕ್ಷಣ್ ರೈ ಅರೋಪಿಸಿದ್ದು ಇದು ನಮ್ಮ ಹೆಸರಿಗೆ ಮಸಿ ಬಳಿಯಲು ಉದ್ದೇಶ ಪೂರ್ವಕವಾಗಿ ಮಾಡಲಾಗಿದೆ ಎಂದು ಅರೋಪಿಸಿದ್ದಾರೆ. ಈ ರಸ್ತೆಯನ್ನು ಕೆಲವು ದಿನಕ್ಕೆ ಬೇಲಿ ಮತ್ತು ಮಣ್ಣು ಹಾಕಿ ಬಂದ್ ಮಾಡಿ ಇದರಲ್ಲಿ ಸಂಚರಿಸುವ ಸಾರ್ವಜನಿಕರಿಗೆ ಸಂಚರಿಸಲು ಪರ್ಯಾಯ ರಸ್ತೆ ವ್ಯವಸ್ಥೆ ಇದ್ದರೂ ಇದನ್ನು ಹಾಳು ಮಾಡುವ ಕೆಟ್ಟ ಉದ್ದೇಶದಿಂದ ದ್ವಿಚಕ್ರ ವಾಹನ ಮತ್ತು ನಡೆದುಕೊಂಡು ಹೋಗಿದ್ದು ಇದನ್ನು ಇರ್ದೆ ಬಿ.ಜೆ.ಪಿ ಗ್ರಾಮ ಸಮಿತಿ ಮತ್ತು ಸಮಸ್ತ ಗ್ರಾಮಸ್ಥರು ತೀವ್ರವಾಗಿ ಖಂಡಿಸಿದ್ದು ಈ ಪಾಪ ಕೃತ್ಯ ಎಸಗಿದವರಿಗೆ ಸೂಕ್ತ ಶಿಕ್ಷೆಯಾಗುವಂತೆ ಅಧಿಕಾರಿಗಳು ಕ್ರಮ ಕೈಗೊಳ್ಳ ಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸಂಪ್ಯ ಠಾಣೆಗೆ ದೂರು ನೀಡಲಾಗಿದ್ದು ಸೂಕ್ತ ತನಿಖೆ ನಡೆಸಲು ಒತ್ತಾಯಿಸಿದ್ದಾರೆ.