ವಿಟ್ಲ: ಇಲ್ಲಿಗೆ ಸಮೀಪದ ಒಕ್ಕೆತ್ತೂರು ನಿವಾಸಿ 73ವರ್ಷದ ವೃದ್ಧರೋರ್ವರು ಕೊರೋನ ಸೋಂಕಿಗೆ ಒಳಗಾಗಿ ಮಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮೂರು ತಿಂಗಳ ಹಿಂದೆ ವಿದೇಶದಿಂದ ಆಗಮಿಸಿದ್ದ ಒಕ್ಕೆತ್ತೂರು ನಿವಾಸಿ ಯುವಕನಲ್ಲಿ ಆರಂಭದಲ್ಲಿ ಕೊರೋನ ಪಾಸಿಟಿವ್ ಪತ್ತೆಯಾಗಿತ್ತು. ಆ ಬಳಿಕ ಅವರ ಮನೆ ಸೀಲ್ ಡೌನ್ ಮಾಡಿ, ಮನೆ ಮಂದಿ ಹಾಗೂ ಮನೆಯ ಸಂಪರ್ಕ ಹೊಂದಿದವರ ಗಂಟಲ ದ್ರವವನ್ನು ಕೊರೋನ ಟೆಸ್ಟ್ ಗೆ ಕಳುಹಿಸಿ ಕೊಡಲಾಗಿತ್ತು. ಬಳಿಕದ ದಿನಗಳಲ್ಲಿ ಯುವಕನ ಸಹೋದರ, ಹಾಗೂ ಪತ್ನಿಯಲ್ಲಿ ಹಾಗೂ ಇನ್ನೋರ್ವ ಮಹಿಳೆಯಲ್ಲಿ ಕೊರೋನ ಪಾಸಿಟಿವ್ ಪತ್ತೆಯಾಗಿತ್ತು.
ಆ ಬಳಿಕದ ದಿನಗಳಲ್ಲಿ ಯುವಕನ ತಂದೆ, ಸಹೋದರಿ ಹಾಗೂ ಅತ್ತಿಗೆಯ ವರದಿ ಬಂದಿದ್ದು, ಅವರಿಗೆ ಸೋಂಕು ತಗುಲಿರುವುದು ದೃಡಪಟ್ಟಿತ್ತು. ಸೋಂಕಿತರೆಲ್ಲರನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗಿತ್ತು. ಈ ಮಧ್ಯೆ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವಕನ ತಂದೆ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಮೃತರು ಹಿಂದಿನಿಂದಲೂ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ತಿಳಿದು ಬಂದಿದೆ. ತರಬೇತಿ ಪಡೆದ ಪಿ ಎಫ್ ಐ ಕಾರ್ಯಕರ್ತರು ಸ್ಥಳೀಯ ಮಸೀದಿಯಲ್ಲಿ ಅಂತ್ಯಸಂಸ್ಕಾರ ನೆರವೇರಿಸಿದರು. ವಿಟ್ಲ ಕಂದಾಯ ಅಧಿಕಾರಿಗಳು, ಪೊಲೀಸ್ ಇಲಾಖೆ ಅಧಿಕಾರಿಗಳು ಮುಂಜಾಗ್ರತಾ ಕ್ರಮ ಕೈಗೊಂಡರು.