Breaking News

ಕೋವಿಡ್ -19: ಪುತ್ತೂರು ನಗರಸಭೆಯ ವಿಶೇಷ ಕಾಳಜಿ | ಹೋಮ್ ಐಸೋಲೇಷನ್‌ನಲ್ಲಿರುವವರಿಗೆ ಆರೋಗ್ಯ ಸೇವೆ, ಸಲಹೆ

Puttur_Advt_NewsUnder_1
Puttur_Advt_NewsUnder_1
  • ವೈದ್ಯರಿಂದ ಗೂಗಲ್ ಮೀಟ್‌ನಲ್ಲಿ ಆಪ್ತ ಸಮಾಲೋಚನೆ

ಪುತ್ತೂರು: ಪುತ್ತೂರು ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸೋಂಕಿತರ ಸಂಪರ್ಕದಲ್ಲಿದ್ದು ದೈಹಿಕವಾಗಿ ಸದೃಢರಾಗಿರುವ ವ್ಯಕ್ತಿಗಳಿಗೆ `ಮನೆಯಲ್ಲಿಯೇ ಚಿಕಿತ್ಸೆ’ (ಐಸೋಲೇಷನ್) ಪಡೆಯುವ ವ್ಯವಸ್ಥೆ ಜಾರಿಯಲ್ಲಿದ್ದು, ಈ ವ್ಯವಸ್ಥೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರಿಗೆ ಆರೋಗ್ಯ ವಿಚಾರಿಸಿ, ಮಾನಸಿಕ ಸ್ಥೈರ್ಯ ಹೆಚ್ಚಿಸಲು ಪುತ್ತೂರು ನಗರಸಭೆ ವಿಶೇಷ ಕಾಳಜಿ ವಹಿಸಿದ್ದು, ನಗರಸಭೆ ಪೌರಾಯುಕ್ತೆ ರೂಪಾ ಶೆಟ್ಟಿಯವರ ನೇತೃತ್ವದಲ್ಲಿ ಪ್ರತಿ ದಿನ ನುರಿತ ವೈದ್ಯರ ಆಪ್ತಸಮಾಲೋಚಕರ ತಂಡ ಗೂಗಲ್ ಮೀಟ್‌ನಲ್ಲಿ ನೇರ ನೇರ ಸಲಹೆ ಮತ್ತು ಮಾಹಿತಿ ಪಡೆಯುವ ಕಾರ್ಯಾರಂಭ ಮಾಡಿದೆ. ದ.ಕ. ಜಿಲ್ಲೆಯಲ್ಲಿ ಈ ರೀತಿಯ ಕಾರ್ಯಕ್ರಮ ಮಾದರಿಯಾಗಲಿದೆ.

ಪುತ್ತೂರು ನಗರಸಭೆಯ ಕಚೇರಿಯಲ್ಲಿ ಪ್ರತ್ಯೇಕ ಕೊಠಡಿಯಲ್ಲಿ ಗೂಗಲ್ ಮೀಟ್‌ನಲ್ಲಿ ಹೋಮ್ ಐಸೋಲೇಷನ್‌ನಲ್ಲಿರುವವರನ್ನು ಸಂಪರ್ಕಿಸುವ ಟೆಲಿ ಮಾನಿಟ ರಿಂಗ್ ಸೆಂಟರ್ ಸ್ಥಾಪಿಸಲಾಗಿದ್ದು, ನಗರಸಭೆ ಪೌರಾಯುಕ್ತೆ ರೂಪಾ ಶೆಟ್ಟಿಯವರ ನೊಡೇಲ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಈ ತಂಡದಲ್ಲಿ ಪುತ್ತೂರು ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರುಗಳನ್ನು ಆಪ್ತ ಸಮಾಲೋಚಕರನ್ನು ನೇಮಿಸಲಾಗಿದೆ. ಕೊರೋನಾ ಸೋಂಕಿನಿಂದಾಗಿ ಹೋಮ್ ಐಸೋಲೇಷನ್ ನಲ್ಲಿರುವವರಿಗೆ ಧೈರ್ಯ ತುಂಬುವುದರೊಂದಿಗೆ ಆರೋಗ್ಯ ವಿಚಾರಿಸುವ ಹೊಣೆಗಾರಿಕೆ ಗೂಗಲ್ ಮಾನಿಟರಿಂಗ್ ಸೆಂಟರಿದ್ದಾಗಿದೆ.

ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೋವಿಡ್-೧೯ ಮಾರ್ಗಸೂಚಿ ಬದಲಿಸಿ, ಪರಿಸ್ಥಿತಿ ಗಂಭೀರವಾಗಿರುವವರನ್ನು ಮಾತ್ರ ಕೋವಿಡ್ ಆಸ್ಪತ್ರೆ ಯಲ್ಲಿ, ವೆಂಟಿಲೇಟರ್ ಅವಶ್ಯಕತೆ ಇಲ್ಲದವರಿಗೆ ಕೋವಿಡ್ ಕೇರ್ ಸೆಂಟರ್‌ನಲ್ಲಿ, ವೈದ್ಯರ ಉಪಸ್ಥಿತಿ ಬೇಡದೆ ನಿಗದಿತ ಸಮಯದಲ್ಲಿ ಔಷಧಿ ಸೇವಿಸುವ ದೈಹಿಕವಾಗಿ ಸದೃಢವಾಗಿರುವ ಸೋಂಕಿತರನ್ನು ಅವರ ಮನೆಯಲ್ಲೇ ಚಿಕಿತ್ಸೆ ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಈ ನಿಟ್ಟಿನಲ್ಲಿ ಮನೆಯಲ್ಲಿಯೇ ಇದ್ದು ಚಿಕಿತ್ಸೆ ಪಡೆದು ಕೊಳ್ಳುತ್ತಿರುವವರ ಆರೋಗ್ಯ ವಿಚಾರಣೆಗಾಗಿ ಟೆಲಿಮಾನಿಟರಿಂಗ್ ಮತ್ತು ಆಶಾ ಕಾರ್ಯಕರ್ತರು, ಎ.ಎನ್.ಎಮ್‌ಗಳು ಮನೆ ಮನೆಗೆ ಭೇಟಿ ವಿಚಾರಿಸುವ ಕೆಲಸ ಮಾಡುತ್ತಿದ್ದರೂ ವೈದ್ಯರು ಅವರೊಂದಿಗೆ ನೇರ ಮುಖತಃ ಸಂಪರ್ಕದಲ್ಲಿದ್ದು ಆರೋಗ್ಯ ವಿಚಾರಣೆ ಮಾಡಬೇಕೆಂದು ಪುತ್ತೂರು ನಗರಸಭೆ ಗೂಗಲ್ ಮೀಟ್ ಮೂಲಕ ಹೊಸ ಮಾದರಿಯಲ್ಲಿ ಗೂಗಲ್ ಮಾನಿಟರಿಂಗ್ ಸೆಂಟರ್ ಕಾರ್ಯಾರಂಭ ಮಾಡಿದ್ದು, ಹೋಮ್ ಐಸೋಲೇಷನ್‌ನಲ್ಲಿರುವ ಸೋಂಕಿತರೊಂದಿಗೆ ಕರೆ ಮಾಡಿ ಅವರೊಂದಿಗೆ ಗೂಗಲ್ ಆನ್‌ಲೈನ್ ಸಂಪರ್ಕ ಪಡೆದು ಅವರೊಂದಿಗೆ ಮುಖತಃ ಮಾತನಾಡುವ ಮತ್ತು ನಿರಂತರ ಒಡನಾಟ ಇಟ್ಟುಕೊಂಡು ಕಾಲ ಕಾಲಕ್ಕೆ ಅಗತ್ಯ ಸಲಹೆ, ಸೂಚನೆ ನೀಡಲಾಗುತ್ತಿದೆ.

ಜು.17ರಂದು ಆರಂಭಗೊಂಡ ಆಪ್ತಸಮಾಲೋಚನೆಯಲ್ಲಿ ಪುತ್ತೂರು ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ.ಸುಲೈಹಾ, ಡಾ. ಸ್ವಾತಿ ಅವರು ಮಾಹಿತಿ, ಸಲಹೆ ನೀಡಿದರು. ನಗರಸಭೆ ಸಿಬ್ಬಂದಿ ಜ್ಯೋಷಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಜಿಲ್ಲಾ ಆರೋಗ್ಯ ಇಲಾಖೆಯಿಂದ ನಗರಸಭೆ ಹೋಮ್ ಐಸೋಲೇಷನ್‌ನಲ್ಲಿರುವ ಪಟ್ಟಿ ಮತ್ತು ಮೊಬೈಲ್ ಸಂಖ್ಯೆಯನ್ನು ನೀಡಲಾಗುತ್ತದೆ. ಆಪ್ತಸಮಾಲೋಚಕ ವೈದ್ಯರು ಅವರಿಗೆ ಕರೆ ಮಾಡಿ ಅವರ ಹೆಸರು, ವಯಸ್ಸು, ಕೇರ್ ಟೇಕರ್, ಪ್ರತ್ಯೇಕ ವಾಶ್ ರೂಮ್, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಬಗ್ಗೆ, ಎನ್-೯೫ ಮಾಸ್ಕ್ ಹೊಂದಿರುವ ಬಗ್ಗೆ ಮಾಹಿತಿ ಕಲೆ ಹಾಕುತ್ತಾರೆ. ಬಳಿಕ ಬಿಪಿ, ಡಯಾಬಿಟಿಸ್, ಥೈರಾಯ್ಡ್, ಕೊಲೆಸ್ಟ್ರಾಲ್, ಟಿಬಿ, ಹೆಚ್‌ಐವಿ, ಕ್ಯಾನ್ಸರ್, ಸ್ಟ್ರೋಕ್, ಕಿಡ್ನಿ, ಲಿವರ್ ಸಮಸ್ಯೆ ಇರುವ ಬಗ್ಗೆ ಖಾತರಿ ಪಡಿಸಿಕೊಳ್ಳಲಾಗುತ್ತದೆ. ಉಸಿರಾಟದ ಸಮಸ್ಯೆ ಆಗುತ್ತಿರುವ ಬಗ್ಗೆ, ಜ್ವರ, ಪಲ್ಸ್ ರೇಟ್, ಎದೆನೋವು, ಬೆವರುವಿಕೆ, ಕಫ ಸಮಸ್ಯೆ, ಸೀನುವುದು, ಮೂಗು ಸೋರುವುದು, ಉಬ್ಬಸ, ಗಂಟಲು ನೋವು ಹಾಗೂ ಇನ್ನಿತರ ಸಮಸ್ಯೆ ಕಾಡುತ್ತಿರುವ ಬಗ್ಗೆ ಸ್ಪಷ್ಟನೆ ಕೇಳುತ್ತಾರೆ. ಇದರ ಜೊತೆಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಕೆಲವೊಂದು ಔಷಧಿಗಳನ್ನು ಸೇವಿಸಲು ಮತ್ತು ಪ್ರತಿ ದಿನ ಪಲ್ಸ್, ಟೆಂಪರೇಚರ್ ಕುರಿತು ದಾಖಲೆ ಮಾಡುವಂತೆ ಸೂಚಿಸುತ್ತಾರೆ. ಒಟ್ಟಿನಲ್ಲಿ ಹೋಮ್ ಐಸೋಲೇಷನ್‌ನಲ್ಲಿರುವವರು ಖಿನ್ನತೆಗೆ ಒಳಗಾಗದಂತೆ ಅವರೊಂದಿಗೆ ಸೌಜನ್ಯವಾಗಿ ಮಾತನಾಡಿ, ಅವರ ಮನಸ್ಸಲ್ಲಿರುವ ದುಗುಡವನ್ನು ಮರೆಮಾಚಿಸುವ ಪ್ರಯತ್ನ ಮಾಡಲಿದ್ದಾರೆರೂಪಾ ಶೆಟ್ಟಿ, ಪೌರಾಯುಕ್ತರು ನಗರಸಭೆ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.