HomePage_Banner
HomePage_Banner
HomePage_Banner

ಸಾಂಪ್ರದಾಯಿಕ ಶೈಲಿಯಲಿ ಗದ್ದೆ ನಾಟಿಯ ಸಂಭ್ರಮ

Puttur_Advt_NewsUnder_1
Puttur_Advt_NewsUnder_1

ಉಪ್ಪಿನಂಗಡಿ: ಕಂಬಳ ಕೋಣಗಳ ಯಜಮಾನ, ಉಪ್ಪಿನಂಗಡಿ ವಿಜಯ- ವಿಕ್ರಮ ಜೋಡುಕರೆ ಕಂಬಳ ಸಮಿತಿಯ ಪ್ರಧಾನ ಕಾರ್ಯದರ್ಶಿ ಬೆಳ್ಳಿಪ್ಪಾಡಿ ಕೈಪದ ಕೇಶವ ಭಂಡಾರಿಯವರ ಐದು ಮುಡಿ ಗದ್ದೆಯಲ್ಲಿ ಶುಕ್ರವಾರ ಸಾಂಪ್ರದಾಯಿಕ ಶೈಲಿಯಲ್ಲಿ ಗದ್ದೆ ನಾಟಿ ನಡೆಯಿತು.

ಅವರ ಕಂಬಳ ಕೋಣಗಳಾದ ಕುದ್ರಾಡಿ ಚಿನ್ನು ಮತ್ತು ಪುಟ್ಟ ಎಂಬ ಹೆಸರಿನ ಕೋಣಗಳು ನೇಗಿಲು ಹೊತ್ತು ಕೋಣ ನಿಯಂತ್ರಕರ ಉರಳ ಧ್ವನಿಗೆ ಕಿವಿಗೊಟ್ಟು ಗದ್ದೆಯಲ್ಲಿ ಮುಂದಕ್ಕೆ ಗಾಂಭೀರ್ಯದಿಂದ ಹೆಜ್ಜೆಯಿಟ್ಟಿರೆ ಬಾಬು ಮತ್ತು ಗಣಪ ಕೋಣಗಳು ಜೊತೆಯಾಗಿ ಅದರ ಹಿಂದೆ ಹೆಜ್ಜೆಯಿಟ್ಟು ಗದ್ದೆ ಉಳುಮೆಯ ಕಾಯಕ ಮಾಡಿದವು. ಒಂದು ಜೋಡಿ ಕೋಣಗಳನ್ನು ಕಂಬಳದ ಓಟಗಾರ, ಕ್ರೀಡಾರತ್ನ ಪ್ರಶಸ್ತಿ ವಿಜೇತ ಕೊಳಕೆ ಇರ್ವತ್ತೂರು ಆನಂದ ನಿಯಂತ್ರಿಸುತ್ತಿದ್ದರೆ, ಮತ್ತೊಂದು ಜೋಡಿ ಕೋಣಗಳನ್ನು ಕೇಶವ ಭಂಡಾರಿ ಅವರ ಸಹೋದರ ಪೋಸ್ಟ್‌ಮಾಸ್ಟರ್ ಆಗಿರುವ ಶಿವಯ್ಯ ಭಂಡಾರಿ ನಿಯಂತ್ರಿಸುತ್ತಿದ್ದರು. ದೂರದ ಪಟ್ಟಣದಲ್ಲಿ ಐಟಿ- ಬಿಟಿ ಸಂಸ್ಥೆಗಳಲ್ಲಿ ಉದ್ಯೋಗದಲ್ಲಿದ್ದ ಕೇಶವ ಭಂಡಾರಿ ಹಾಗೂ ಅವರ ಸಹೋದರರ ಮಕ್ಕಳು ಕೊರೋನಾ ಲಾಕ್‌ಡೌನ್‌ನಿಂದಾಗಿ ಊರಿಗೆ ಬಂದಿದ್ದು, ಅವರು ಕೂಡಾ ಗದ್ದೆಗಿಳಿದು ಬೇಸಾಯ ಕಾರ್ಯದಲ್ಲಿ ತೊಡಗಿಸಿಕೊಂಡರು. ಇದಲ್ಲದೆ, ಮಣ್ಣಿನ ಸೆಳೆತಕ್ಕೆ ಮಾರುಹೋಗಿ ಊರಿನ ಕೆಲ ಯುವಕರು, ಮಕ್ಕಳು ಗದ್ದೆ ಬೇಸಾಯದ ಸಂದರ್ಭ ಇಲ್ಲಿ ಒಗ್ಗೂಡಿ ದುಡಿದು ಬೇಸಾಯದ ಖುಷಿ ಅನುಭವಿಸಿದರು.

ಸುಗ್ಗಿ ಮತ್ತು ಏನೇಲ್ ಹೀಗೆ ವರ್ಷಕ್ಕೆ ಎರಡು ಬೆಳೆ ಇವರು ತೆಗೆಯುತ್ತಿದ್ದು, ಕಂಬಳದ ಋತು ಮುಗಿದ ಬಳಿಕ ಹಟ್ಟಿಯಲ್ಲಿ ತಿಂದುಂಡು ಕೊಬ್ಬುವ ತಮ್ಮ ಕೋಣಗಳಿಗೆ ಉಳುಮೆಯ ಮೂಲಕ ವ್ಯಾಯಾಮ ನೀಡುತ್ತಾರೆ. ಆದ್ದರಿಂದ ಇಲ್ಲಿ ಸಾಂಪ್ರಾದಾಯಿಕವಾಗಿಯೇ ಬೇಸಾಯ ಮಾಡಲಾಗುತ್ತದೆ. ಕಂಬಳದ ಕರೆಯಲ್ಲಿ ಓಡಿ ಹಲವು ಪ್ರಶಸ್ತಿಗಳನ್ನು ಪಡೆದ ಈ ಕೋಣಗಳು ಗದ್ದೆಯಲ್ಲಿ ನಿಧಾನಕ್ಕೆ ಹೆಜ್ಜೆ ಇಟ್ಟು ಉಳುಮೆ ಕೆಲಸದಲ್ಲೂ ಸೈ ಎನಿಸಿಕೊಂಡಿವೆ. ಭತ್ತದ ಬೇಸಾಯ ಅವನತಿಯತ್ತ ಹೊಂದುತ್ತಿರುವ ಈ ಕಾಲದಲ್ಲಿ ಇಲ್ಲಿ ಸಾಂಪ್ರದಾಯಿಕ ಪದ್ಧತಿಯಲ್ಲಿಯೇ ಕೃಷಿ ಮಾಡುವುದರ ಮೂಲಕ ಯುವಜನಾಂಗವನ್ನು ಕೃಷಿ ಹಾಗೂ ಕಂಬಳ ಕ್ಷೇತ್ರದತ್ತ ಆಕರ್ಷಿಸುವ ಕೆಲಸವಾಗುತ್ತಿದೆಯಲ್ಲದೆ, ಕೆಸರ ತುಳಿದು ಹಸಿರ ಬೆಳೆದು ಅನ್ನ ಬೆಳೆಯುವ ಕಾರ್ಯವೂ ನಡೆಯುತ್ತಿದೆ.

ಈ ಸಂದರ್ಭ ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಮಾಜಿ ಸದಸ್ಯ ನಿರಂಜನ್ ರೈ ಮಠಂತಬೆಟ್ಟು, ಐಟಿ- ಬಿಟಿಯಲ್ಲಿ ಉದ್ಯೋಗದಲ್ಲಿರುವ ಸಂದೇಶ್ ಭಂಡಾರಿ, ಪುಷ್ಪರಾಜ್ ಭಂಡಾರಿ, ಅಮೃತ್ ಭಂಡಾರಿ, ಭರತ್‌ರಾಜ್ ಭಂಡಾರಿ, ಕಂಬಳದ ಕೋಣಗಳನ್ನು ಬಿಡುವ ಉಮೇಶ್ ಬಂಟ್ವಾಳ, ಕೃಷಿ ಆಸಕ್ತಿಯ ಶ್ರೀಧರ, ಉಮೇಶ, ಪ್ರಶಾಂಶು ಪಕಳ, ಡೀಕಯ್ಯ, ಕೊಳಕೆ ಇರ್ವತ್ತೂರು ಶೀನ, ರಚನ್, ಡೀಕಯ್ಯ ಸಾಲಿಯಾನ್, ಸಾತ್ವಿಕ್, ಹೊನ್ನಪ್ಪ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

ನಮ್ಮ ಕುಟುಂಬವು ಸುಮಾರು ೨೫೦ ವರ್ಷಗಳಿಂದ ಕೃಷಿ ಕಾಯಕವನ್ನು ನಡೆಸಿಕೊಂಡು ಬರುತ್ತಿದೆ. ಅಜ್ಜನ ಕಾಲದಿಂದಲೂ ಕಂಬಳ ಕೋಣಗಳನ್ನು ಸಾಕಿಕೊಂಡು ಬರಲಾಗುತ್ತಿದೆ. ಗದ್ದೆಯನ್ನು ಉಳಿಸಿಕೊಂಡು ಈಗಲೂ ಸಾಂಪ್ರದಾಯಿಕ ಶೈಲಿಯಿಂದಲೇ ನಾವು ಬೇಸಾಯ ಮಾಡಿಕೊಂಡು ವರ್ಷಕ್ಕೆ ಎರಡು ಬೆಳೆ ತೆಗೆಯುತ್ತೇವೆ. ನಮ್ಮಲ್ಲಿ ಈಗ ಎರಡು ಜೊತೆ ಕೋಣಗಳಿದ್ದು, ಕಂಬಳದಲ್ಲಿ ಹಲವು ಪ್ರಶಸ್ತಿಗಳನ್ನು ಪಡೆದಿವೆ. ಕಂಬಳದ ಋತು ಮುಗಿದ ಬಳಿಕ ಹಟ್ಟಿಯಲ್ಲಿ ತಿಂದುಂಡು ಕೊಬ್ಬುವ ಈ ಕೋಣಗಳಿಗೆ ಉಳುಮೆಯ ಮೂಲಕ ವ್ಯಾಯಾಮ ನೀಡುವ ಕೆಲಸವೂ ಆಗುತ್ತದೆ. ಕೊರೋನಾ ಎಂಬ ಪಿಡುಗು ಬಂದ ಬಳಿಕ ಹೆಚ್ಚಿನವರು ಕೃಷಿಯತ್ತ ಒಲವು ತೋರುತ್ತಿದ್ದಾರೆ. ಕೃಷಿ ಕೆಲಸಕ್ಕೆ ಈಗ ಬೇಕಾದಷ್ಟು ಜನವೂ ಸಿಗುತ್ತದೆ. ಕೊರೋನಾ ಎಂಬ ಮಹಾಮಾರಿ ಹೋದ ಬಳಿಕವೂ ಕೃಷಿಯನ್ನು ಯಾರು ಕಡೆಗಣನೆ ಮಾಡದೇ ಯುವಕರು ಸೇರಿದಂತೆ ಎಲ್ಲರೂ ಕೃಷಿಯತ್ತಲೂ ಒಲವು ತೋರಬೇಕು. ಹಸಿರು ಬೆಳೆಯುವ ಕಾಯಕದಲ್ಲಿ ತೊಡಗಿಸಿಕೊಳ್ಳಬೇಕು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

1 Comment

  1. Rajeev Shetty Perne Bantwal D.K

    Pragathipara krishika Keshava Bhandary made a platform to new generations to take interest in paddy cultivation…

    Reply

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.