ಇಡೀ ಕುಟುಂಬವನ್ನು ಕಳೆದುಕೊಂಡ ನೋವಿನ ನಡುವೆಯೂ ಸಾಧನೆ ಮಾಡಿದ ಪ್ರಕೃತಿ…!

Puttur_Advt_NewsUnder_1
Puttur_Advt_NewsUnder_1

@ಯೂಸುಫ್ ರೆಂಜಲಾಡಿ

  • ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.92 ಅಂಕಗಳೊಂದಿಗೆ ತೇರ್ಗಡೆ
  • ವರ್ಷದ ಹಿಂದೆ ಮಡ್ಯಂಗಲ ಕಾರು ಕೆರೆಗೆ ಬಿದ್ದು ಕುಟುಂಬವನ್ನು ಕಳೆದುಕೊಂಡಿದ್ದ ವಿದ್ಯಾರ್ಥಿನಿ

ಪುತ್ತೂರು: ಕಳೆದ ವರ್ಷ ಸೆಪ್ಟೆಂಬರ್ 2ರಂದು ಅರಿಯಡ್ಕ ಗ್ರಾ.ಪಂ ವ್ಯಾಪ್ತಿಯ ಕೌಡಿಚ್ಚಾರು ಸಮೀಪದ ಮಡ್ಯಂಗಲ ಎಂಬಲ್ಲಿ ಕಾರು ಕೆರೆಗೆ ಬಿದ್ದು ಇಡೀ ಕುಟುಂಬವನ್ನು ಕಳೆದುಕೊಂಡಿದ್ದ ಮಡಿಕೇರಿ ಸುಂಠಿಕೊಪ್ಪದ ವಿದ್ಯಾರ್ಥಿನಿ ಪ್ರಕೃತಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದಲ್ಲಿ ಶೇ.92 ಅಂಕಗಳನ್ನು ಪಡೆಯುವ ಮೂಲಕ ನೋವಿನ ನಡುವೆಯೂ ಸಾಧನೆ ಮಾಡಿ ಸುದ್ದಿಯಾಗಿದ್ದಾರೆ.

ಮೂಡಬಿದಿರೆ ಎಕ್ಸಲೆಂಟ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಪ್ರಕೃತಿಯನ್ನು ನೋಡಲೆಂದು ಮಡಿಕೇರಿ ಸುಂಠಿಕೊಪ್ಪದಿಂದ ತಂದೆ ನಿಡ್ಯಮಲೆ ಅಶೋಕ್, ತಾಯಿ ಹೇಮಲತಾ, ಸಹೋದರ ಕಿರಣ್ ಹಾಗೂ ಸಹೋದರಿ ವರ್ಷ ಅವರು ಕಾರಿನಲ್ಲಿ ತೆರಳುತ್ತಿರುವ ವೇಳೆ ಕೌಡಿಚ್ಚಾರು ಮಡ್ಯಂಗಲದಲ್ಲಿ ರಸ್ತೆ ಬದಿಯ ಕೆರೆಗೆ ಕಾರು ಬಿದ್ದು ನಾಲ್ವರೂ ಮೃತಪಟ್ಟಿದ್ದರು. ಕುಟುಂಬದ ಎಲ್ಲರನ್ನು ಕಳೆದುಕೊಂಡಿದ್ದ ಪ್ರಕೃತಿಯವರು ತನ್ನ ನೋವಿನ ನಡುವೆಯೂ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಸಾಧನೆ ಮಾಡಿದ್ದು ಅವರ ಸಾಧನೆಗೆ ಊರವರು ಮತ್ತು ಕಾಲೇಜಿನವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಆಘಾತಕ್ಕೆ ಒಳಗಾಗಿದ್ದ ಪ್ರಕೃತಿ:
ತನ್ನ ತಂದೆ, ತಾಯಿ ಸಹೋದರ ಸಹೋದರಿಯನ್ನು ಕಳೆದುಕೊಂಡಿದ್ದ ಪ್ರಕೃತಿ ಪ್ರಾರಂಭದಲ್ಲಿ ಕೆಲವು ತಿಂಗಳು ಕಾಲ ಮಾನಸಿಕವಾಗಿ ಕುಗ್ಗಿ ಹೋಗಿದ್ದರು, ಕುಟುಂಬದ ಅಗಲಿಕೆಯ ನೋವು ಅವರನ್ನು ವಿಪರೀತವಾಗಿ ಕಾಡುತ್ತಿತ್ತು ಎಂದು ಪ್ರಕೃತಿ ಅವರ ತಾಯಿಯ ಗೆಳತಿಯಾಗಿದ್ದ ಮಡಿಕೇರಿಯ ಬಿಆರ್‌ಪಿ ಮಂಜುಳಾ ಅವರು ತಿಳಿಸಿದ್ದಾರೆ. ನಾವು ಪ್ರಕೃತಿ ಅವರಿಗೆ ಮಾನಸಿಕ ಸ್ಥೈರ್ಯ ನೀಡುವ ಪ್ರಯತ್ನ ಮಾಡಿದ್ದೇವೆ. ಜೀವನದಲ್ಲಿ ಸಾಧನೆ ಮಾಡಬೇಕೆಂದು ಪ್ರೇರೇಪಣೆ ನೀಡುತ್ತಿದ್ದೇವೆ ಎಂದಿರುವ ಮಂಜುಳಾ ಅವರು ಕಾಲೇಜಿನ ಆಡಳಿತದವರ ಸಹಕಾರ, ಸಹ ವಿದ್ಯಾರ್ಥಿಗಳ ಪ್ರೋತ್ಸಾಹವೂ ಪ್ರಕೃತಿಗೆ ದೊರಕಿದೆ, ಸಾಧನೆಯ ಮೂಲಕ ಪ್ರಕೃತಿ ಎಲ್ಲರಿಗೆ ಮಾದರಿಯಾಗಿದ್ದಾರೆ ಎಂದು ತಿಳಿಸಿದ್ದಾರೆ.

ಅಪ್ಪ, ಅಮ್ಮನ ಆಸೆ ಪೂರೈಸುವೆ-ಪ್ರಕೃತಿ
ನೋವಿನ ನಡುವೆಯೂ ಸಾಧನೆ ಮಾಡಿರುವ ಪ್ರಕೃತಿ ಅವರನ್ನು `ಸುದ್ದಿ’ ಸಂಪರ್ಕಿಸಿದಾಗ ನಮ್ಮ ಅಪ್ಪ, ಅಮ್ಮನ ಆಸೆ ನಾನು ಅತ್ಯುತ್ತಮ ಅಂಕ ಪಡೆದು ಭವಿಷ್ಯದಲ್ಲಿ ಏನಾದರೂ ಸಾಧನೆ ಮಾಡಬೇಕೆಂಬುದಾಗಿತ್ತು, ಅದನ್ನು ಈಡೇರಿಸುವ ಉದ್ದೇಶಕ್ಕೆ ಪ್ರಯತ್ನ ಪಟ್ಟು ಓದಿದ್ದೇನೆ, ಉತ್ತಮ ಅಂಕ ಬಂದಿರುವುದು ಖುಷಿಯಾಗಿದೆ. ಅಪ್ಪ, ಅಮ್ಮ, ಸಹೋದರ, ಸಹೋದರಿ ಅಗಲಿದ್ದರೂ ಕೂಡಾ ನನ್ನ ಜೊತೆಯೇ ಇದ್ದಾರೆಂದು ಭಾವಿಸಿಕೊಂಡು ನಾನು ಜೀವನದಲ್ಲಿ ಮುಂದೆ ಹೋಗುತ್ತಿದ್ದೇನೆ ಎಂದು ತಿಳಿಸಿದ್ದಾರೆ. ನಾನು ಉತ್ತಮ ಅಂಕದ ಸಾಧನೆ ಮಾಡಲು ನನ್ನ ಕಾಲೇಜಿನ ಆಡಳಿತ ಮಂಡಳಿ, ಉಪನ್ಯಾಸಕರು, ಉತ್ತಮ ಸಪೋರ್ಟ್ ಮಾಡಿದ್ದಾರೆ, ಸಹಪಾಠಿಗಳ ಸಹಕಾರ ಸಿಕ್ಕಿದೆ. ಎಲ್ಲರ ಪ್ರೋತ್ಸಾಹ ಆತ್ಮಸ್ಥೈರ್ಯ, ವಿಶ್ವಾಸಭರಿತ ಉಪದೇಶಗಳು ನನ್ನನ್ನು ಸಾಮಾನ್ಯ ಸ್ಥಿತಿಗೆ ತಲುಪುವಂತೆ ಮಾಡಿದೆ, ಮುಂದಕ್ಕೆ ಐಎಎಸ್ ಆಫೀಸರ್ ಆಗುವ ಗುರಿ ಹೊಂದಿದ್ದೇನೆ ಎಂದು ಅವರು ತಿಳಿಸಿದರು. ಮಡಿಕೇರಿಯಲ್ಲಿ ಮಾವನ(ತಾಯಿಯ ಸಹೋದರ) ಮನೆಯಲ್ಲಿ ವಾಸವಾಗಿದ್ದೇನೆ. ನನ್ನ ಅಮ್ಮನ ಗೆಳತಿಯಾಗಿರುವ ಮಂಜುಳಾ ಅವರು ನನಗೆ ಅಮ್ಮನ ಸ್ಥಾನದಲ್ಲಿ ನಿಂತು ನೋಡಿಕೊಳ್ಳುತ್ತಿದ್ದಾರೆ, ಅವರ ಸಪೋರ್ಟ್ ಬಹಳವಾಗಿದೆ ಎಂದಿರುವ ಪ್ರಕೃತಿ ಅವರು ಏನೇ ಕಷ್ಟ ಬಂದರೂ ಅದನ್ನು ಎದುರಿಸಿ ಬದುಕುವ ಛಲವನ್ನು ನಾವು ತೋರಬೇಕು, ಸಮಸ್ಯೆಗಳನ್ನು ಸವಾಲಾಗಿ ಸ್ವೀಕರಿಸಬೇಕು ಎಂಬುವುದನ್ನು ಹೇಳಲು ನಾನು ಇಷ್ಟಪಡುತ್ತೇನೆ ಎಂದು ತಿಳಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.