ತುಳುವರ ವರ್ಷದ ಹಬ್ಬಕ್ಕೆ ಮುನ್ನುಡಿ… ಇಂದು ಆಟಿದ ಅಮಾವಾಸ್ಯೆ

Puttur_Advt_NewsUnder_1
Puttur_Advt_NewsUnder_1

@ ಸಿಶೇ ಕಜೆಮಾರ್

ರಶುರಾಮನ ಸೃಷ್ಟಿಯ ತುಳುನಾಡು ದೈವ ದೇವರುಗಳ ನೆಲೆಬೀಡು ಎಂದೇ ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ತುಳುವರಿಗೆ ಪ್ರತಿಯೊಂದು ತಿಂಗಳು ಕೂಡ ವಿಶೇಷವೇ. ಈಗ ಚಾಲ್ತಿಯಲ್ಲಿರುವ ಆಟಿ ತಿಂಗಳು ಕೂಡ ತುಳುವರಿಗೆ ಒಂದು ರೀತಿಯಲ್ಲಿ ಪವಿತ್ರ ತಿಂಗಳು ಯಾಕೆಂದರೆ ತುಳುನಾಡಿನ ಮೊದಲ ಹಬ್ಬ ಶುರುವಾಗುವುದೇ ಆಟಿ ಅಮಾವಾಸ್ಯೆಯ ದಿನ. ಆಟಿ ತಿಂಗಳಿಗೆ ತುಳುನಾಡಿನಲ್ಲಿ ತನ್ನದೇ ಆದ ವಿಶೇಷತೆ ಇದೆ. ಆಟಿ ಕಷ್ಟದ ತಿಂಗಳು ಆದರೂ ಇಷ್ಟದ ತಿಂಗಳು ಆಗಿದೆ.

ಹಿಂದಿನ ಕಾಲದಲ್ಲಿ ಮನೆಯಲ್ಲಿ ದಾಸ್ತಾನು ಇಟ್ಟಿದ್ದ ಸಾಮಾಗ್ರಿಗಳು ಆಟಿ ತಿಂಗಳಿಗೆ ಮುಗಿದು ಬಿಟ್ಟು ಆಹಾರದ ಕೊರತೆ ಎದುರಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ತುಳುನಾಡಿನ ಜನ ಆಟಿಯಲ್ಲಿ ಪ್ರಕೃತಿಯ ಮೊರೆ ಹೋಗಿ ಅಲ್ಲಿ ಸಿಗುವಂತಹ ಸಸ್ಯ ಚಿಗುರು,ಗಡ್ಡೆ ಗೆಣಸು, ಅಣಬೆ ಇತ್ಯಾದಿ ಫಲವಸ್ತುಗಳನ್ನು ಉಪಯೋಗಿಸಿ ಬಗೆಬಗೆಯ ತಿನಿಸುಗಳನ್ನು ತಯಾರಿಸಿ ಸೇವಿಸುವುದು ಸಂಪ್ರದಾಯವಾಗಿದೆ. ಆಟಿ ತಿಂಗಳಲ್ಲಿ ಪ್ರಕೃತಿಯಲ್ಲಿ ದೊರೆಯುವ ಫಲವಸ್ತುಗಳಲ್ಲಿ ಔಷಧೀಯ ಗುಣಗಳಿವೆ ಎನ್ನುವ ನಂಬಿಕೆಯೂ ಇದೆ. ಆಟಿ ತಿಂಗಳಿಗಾಗಿಯೇ ತಯಾರಿಸಿದ ಹಪ್ಪಳ, ಸಾಂತಣಿ, ಹಲಸಿನ ಬೀಜ, ಉಪ್ಪು ನೀರಿನಲ್ಲಿ ಹಾಕಿಟ್ಟ ಮಾವಿನಕಾಯಿ, ಉಪ್ಪಡಚ್ಚಿಲ್,ನೀರು ಕುಕ್ಕು ಇತ್ಯಾದಿಗಳ ತಿನಿಸುಗಳನ್ನು ತಯಾರಿಸಲಾಗುತ್ತದೆ. ಆಟಿ ತಿಂಗಳಲ್ಲಿ ಮನೆಯ ಹೆಂಗಸರು ತಿನಿಸುಗಳನ್ನು ಮಾಡುವುದರಲ್ಲೇ ಬ್ಯುಸಿಯಾಗಿರುತ್ತಾರೆ. ಅರಿಶಿನ ಎಲೆಯ ತಿಂಡಿ, ಹಪ್ಪಳ, ಕಡ್ಲೆ ಬೇಳೆ ಪಾಯಸ,ಎಳೆ ಬಿದಿರಿನ ಪಲ್ಯ, ಸುರುಳಿ,ಮುಟ್ಟಲಾಬು ಇತ್ಯಾದಿ ಅಣಬೆಗಳ ಗಸಿ, ತಜಂಕ ಪಲ್ಯ, ಮೋಡೆ, ಹಲಸಿನ ಎಲೆಯ ಕಡುಬು, ಹಲಸಿನ ಕಡುಬು, ಪತ್ರೊಡೆ, ಕೆಸುವಿನ ಚಟ್ನಿ, ತಿಮರೆದ ಚಟ್ನಿ, ಮಾವಿನಕಾಯಿ ಚಟ್ನಿ, ಹುರುಳಿಸಾರು, ಸೌತೆ ಪದೆಂಗಿ ಗಸಿ, ತಜಂಕ್ ವಡೆ, ತೇವು ಪದ್‌ಪೆ ಗಸಿ ಇತ್ಯಾದಿ ತಿನಿಸಿಗಳನ್ನು ಆಟಿ ತಿಂಗಳಲ್ಲಿ ಮಾತ್ರ ನೋಡಬಹುದು, ತಿನ್ನಬಹುದಾಗಿದೆ.

ಊರಿಗೆ ಬಂದಂತಹ ಮಾರಿಯನ್ನು ಅಂದರೆ ರೋಗವನ್ನು ಓಡಿಸುವ ಸಲುವಾಗಿ ದೇವರ ಪ್ರತಿನಿಧಿಯಾಗಿ ಆಟಿ ಕಳೆಂಜ ಆಟಿ ತಿಂಗಳಲ್ಲಿ ಉರಿಗೆ ಬರುತ್ತಾನೆ. ವೇಷಧಾರಿಯು ಸೊಂಟಕ್ಕೆ ತೆಂಗಿನ ತಿರಿ, ಕಾಲಿಗೆ ಗಗ್ಗರ, ಕೈಗೆ ಮೈಗೆ ಬಣ್ಣ, ಗಡ್ಡ ಮತ್ತು ಮೀಸೆ, ಅಡಿಕೆ ಹಾಳೆಯಿಂದ ಮಾಡಿದ ಟೊಪ್ಪಿ ಇವುಗಳನ್ನು ಧರಿಸಿರುತ್ತಾರೆ. ಕೈಯಲ್ಲಿ ತಾಳೆಗರಿಯ ತತ್ರ ಅಂದರೆ ಛತ್ರಿ ಇರುತ್ತದೆ. ಈ ಛತ್ರಿಯನ್ನು ತಿರುಗಿಸುತ್ತಾ ಕುಣಿಯುತ್ತಾನೆ. ಮನುಷ್ಯನಿಗಾಗಲಿ, ಪ್ರಾಣಿ ಪಶುಗಳಿಗಾಗಲಿ ಬಂದ ಮಾರಿಯನ್ನು ಅಥವಾ ರೋಗವನ್ನು ಓಡಿಸುವುದು ಆಟಿಕಳೆಂಜನ ಕಾರ್ಯ ಎಂಬುದಾಗಿ ಪಾಡ್ದನದಿಂದ ತಿಳಿದು ಬರುತ್ತದೆ.

ಆಟಿದ ಅಮಾವಾಸ್ಯೆ….ಹೌದು ತುಳುನಾಡಿನಲ್ಲಿ ವರ್ಷದ ಮೊದಲ ಹಬ್ಬ ಆರಂಭವಾಗುವುದೇ ಆಟಿಯ ಅಮಾವಾಸ್ಯೆಯಂದು ಆಗಿದೆ. ಈ ದಿನವೇ ಆಟಿದ ಅಗೇಲು ಕೊಡುವ ಕ್ರಮ ತುಳುನಾಡಿನಲ್ಲಿ ನಡೆಯುತ್ತದೆ. ತುಳುವರು ದೈವರಾಧಕರು. ಮನೆಯ ದೈವಗಳಿಗೆ ಈ ದಿನ ವಿಶೇಷವಾದ ಅಗೇಲು ಬಡಿಸುವ ಕ್ರಮ ಮಾಡುತ್ತಾರೆ. ಇದಲ್ಲದೆ ನಮ್ಮನ್ನಗಲಿದ ಮನೆಯ ಸದಸ್ಯರಿಗೆ ಅಂದರೆ ಪ್ರೇತಗಳಿಗೆ ಬಡಿಸುವ ಕ್ರಮವೂ ನಡೆಯುತ್ತದೆ.ತುಳುವರದ್ದು ಕೂಡು ಕುಟುಂಬ ಪದ್ಧತಿ. ಹಾಗಿದ್ದ ಮೇಲೆ ಸಾವು ಇಲ್ಲದ ಮನೆಯನ್ನು ಹುಡುಕುವುದು ಕಷ್ಟ. ಮನುಷ್ಯನ ಆತ್ಮವನ್ನು ತುಳುವರು ಪ್ರೇತ, ಕುಲೆ ಎಂದು ನಂಬುತ್ತಾರೆ. ಮನೆಯಲ್ಲಿ ಮರಣ ಹೊಂದಿದವರಿಗೆ ಆಟಿ ಅಮಾವಾಸ್ಯೆ ದಿನ ವಿಶೇಷ ಅಗೇಲು ಬಡಿಸುವ ಕ್ರಮ ತುಳುನಾಡಿನಲ್ಲಿ ನಡೆಯುತ್ತದೆ. ಇನ್ನು ಆಟಿ ಅಮಾವಾಸ್ಯೆ ದಿನ ಹಾಲೆ ಮರದ ರಸ ಅಂದರೆ `ಆಟಿದ ಮರ್ದ್’ ಕುಡಿಯುವ ಕ್ರಮ ತುಳುನಾಡಿನಲ್ಲಿ ಪ್ರಚಲಿತವಾಗಿದೆ. ಹಾಲೆ ಮರ ಅಂದರೆ `ಡೆವಿಲ್ ಟ್ರೀ’ ಇದರ ತೊಗಟೆಯ ರಸವನ್ನು ಈ ದಿನ ಕುಡಿಯುತ್ತಾರೆ. ಬೆಳಗ್ಗಿನ ಜಾವ ಹಾಲೆ ಮರದ ತೊಗಟೆಯನ್ನು ಚೂಪು ಕಲ್ಲಿನಲ್ಲಿ ಜಜ್ಜಿ ತರಲಾಗುತ್ತದೆ. ಹೀಗೆ ತಂದ ತೊಗಟೆಯಿಂದ ರಸ ತೆಗೆದು ಅದನ್ನು ಸೋಸಿ ಕುಡಿಯುತ್ತಾರೆ. ಈ ರಸದಲ್ಲಿ ವಿಶೇಷವಾದ ಔಷಧೀಯ ಗುಣವಿದೆ ಎಂದು ನಂಬಲಾಗಿದೆ. ವೈಜ್ಷಾನಿಕವಾಗಿಯೂ ಸಾಬೀತು ಆಗಿದೆ. ಆಟಿ ಅಮಾವಾಸೆ ದಿನ ಸಾವಿರದೊಂದು ಬಗೆಯ ಔಷಧಿಗಳು ಈ ರಸದಲ್ಲಿ ಕೂಡಿಕೊಂಡಿರುತ್ತವೆ ಎಂಬುದು ತುಳುವರ ನಂಬಿಕೆ. ಸಸ್ಯ ಸಂಬಂಧಿ ಔಷಧಿಗಳನ್ನು ತೆಗೆದುಕೊಳ್ಳುವಾಗ ಜಾಗೃತೆ ಇರಲಿ, ಬಳ್ಳವರಿಂದ ತಿಳಿದುಕೊಂಡು ಔಷಧಿ ಸೇವನೆ ಮಾಡುವುದು ಒಳಿತು.

ದೇಶಕ್ಕಂಟಿದ ಕೊರೋನ ಮಹಾಮಾರಿಯನ್ನು ಕೂಡ ನಮ್ಮ ತುಳುನಾಡಿನ ಆರ್ಯುವೇದ ಔಷಧಿಯಿಂದ ಗುಣಪಡಿಸಬಹುದು ಎಂಬುದು ಈಗಾಗಲೇ ಸಾಬೀತು ಆಗಿದೆ. ತುಳುವರು ಬಳಸಿಕೊಂಡು ಬಂದಿರುವ ಸಸ್ಯ ಸಂಬಂಧಿ ಔಷಧಿಗಳು ಇಂದಿಗೂ ರೋಗ ನಿರೋಧಕ ಶಕ್ತಿಯನ್ನು ತುಂಬಿಕೊಂಡಿವೆ. ಹಿಂದಿನ ಕಾಲದಲ್ಲಿ ಪುಲ ಮರ್ದ್ ಎಂದು ಪಂಡಿತ ಪಾಮರರು ನೀಡುತ್ತಿದ್ದ ಔಷಧಿಗಳಿಗೆ ಅದರದೇ ಆದ ಗುಣವಿದೆ. ಇಂದಿನ ಕಾಲಘಟ್ಟದಲ್ಲಿ ನಾವು ಮತ್ತೆ ನಮ್ಮ ಪುರಾತನ ಔಷಧಕ್ಕೆ ಮಾರುಹೋಗಿದ್ದೇವೆ. ಆಟಿ ಅಮಾವಾಸ್ಯೆಯ ದಿನ ನಾವೆಲ್ಲರೂ ಆಟಿದ ಮರ್ದ್ ರೋಗ ನಿರೋಧಕ ಶಕ್ತಿಯನ್ನು ಹೊಂದಿರುವ ಹಾಲೆ ಮರದ ಕಷಾಯ ಕುಡಿಯುವ ಮೂಲಕ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳೋಣ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.