ಚಿಕಿತ್ಸೆಗಾಗಿ ನೆಲ್ಯಾಡಿಯ ಗರ್ಭಿಣಿ ಆಸ್ಪತ್ರೆಗಳಿಗೆ ಅಲೆದಾಟ ಪ್ರಕರಣ | ತನಿಖೆ ನಡೆಸಿ ವರದಿ ಸಲ್ಲಿಸಲು ಡಿಸಿಗೆ ಸಚಿವ ಕೋಟ ಆದೇಶ

Puttur_Advt_NewsUnder_1
Puttur_Advt_NewsUnder_1
  • ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ
  • ಅಮಾನತು ಮಾಡಲೂ ಹಿಂಜರಿಯುವುದಿಲ್ಲ
  • ಮಹಿಳೆಗೆ ಕೂಡಲೇ ಚಿಕಿತ್ಸೆ

ಮಂಗಳೂರು: ನೆಲ್ಯಾಡಿಯ ಗರ್ಭಿಣಿಯೊಬ್ಬರು ಚಿಕಿತ್ಸೆಗಾಗಿ ದಿನಪೂರ್ತಿ ಸರಕಾರಿ ಆಸ್ಪತ್ರೆಗಳಿಗೆ ಅಲೆದಾಡಿದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಕೂಡಲೇ ಘಟನೆಯ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಜಿಲ್ಲಾಧಿಕಾರಿಗೆ ಆದೇಶಿಸಿದ್ದಾರೆ.

ಸಕಾಲಕ್ಕೆ ಮಹಿಳೆಗೆ ಚಿಕಿತ್ಸೆ ನೀಡಲು ವಿಳಂಬಿಸಿದ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು. ಅಗತ್ಯ ಬಿದ್ದರೆ ಅಂತಹವರನ್ನು ಸೇವೆಯಿಂದ ಅಮಾನತು ಮಾಡಲೂ ಹಿಂಜರಿಯುವುದಿಲ್ಲ ಎಂದು ಎಚ್ಚರಿಸಿದ ಸಚಿವರು. ನೆಲ್ಯಾಡಿಯ ಮಹಿಳೆಗೆ ಕೂಡಲೇ ಅಗತ್ಯ ಚಿಕಿತ್ಸೆ ನೀಡಲು ಆದೇಶಿಸಿದ್ದಾರೆ.

ನಗರದ ವೆನ್ಲಾಕ್ ಆಸ್ಪತ್ರೆಗೆ ಸೋಮವಾರ ಭೇಟಿ ನೀಡಿದ ಅವರು, ಗರ್ಭಿಣಿಯರಿಗೆ ಖಾಸಗಿ ಆಸ್ಪತ್ರೆಗಳು ಚಿಕಿತ್ಸೆ ನೀಡಲು ಸತಾಯಿಸಿದರೂ ಅಂತಹವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ವ್ಯವಸ್ಥಿತವಾಗಿ ಹೆರಿಗೆ ಮಾಡಿಸಲು ಆಯಾ ಆಸ್ಪತ್ರೆಗಳು ಸೂಕ್ತ ಸಿದ್ಧತೆ ಮಾಡಿಕೊಳ್ಳಬೇಕು. ಇದರಲ್ಲಿ ವಿಳಂಬ ಸಹಿಸಲು ಸಾಧ್ಯವಿಲ್ಲ.ಕೋವಿಡ್ ಸೋಂಕಿತರೆಂಬ ಕಾರಣಕ್ಕೆ ಯಾವುದೇ ಕಾರಣಕ್ಕೂ ಖಾಸಗಿ ಆಸ್ಪತ್ರೆಗಳಲ್ಲಿ ಗರ್ಭಿಣಿಯರಿಗೆ ಚಿಕಿತ್ಸೆ ನೀಡದೆ ಬೇರೆಡೆಗೆ ಕಳುಹಿಸುವಂತಿಲ್ಲ. ಹೆರಿಗೆ ವಿಚಾರದಲ್ಲಿ ಖಾಸಗಿ ಆಸ್ಪತ್ರೆಗಳು ಸತಾಯಿಸದೆ ಹೆರಿಗೆ ಮಾಡಿಸಲು ಕ್ರಮ ಕೈಗೊಳ್ಳಬೇಕು ಎಂದು ಸಚಿವರು ಸೂಚಿಸಿದ್ದಾರೆ.

ಲೇಡಿಗೋಷನ್ ಆಸ್ಪತ್ರೆಯಲ್ಲಿ ಕೋವಿಡ್ ಶಂಕಿತರಿಗೆ ಚಿಕಿತ್ಸೆ ನೀಡಲು ಪ್ರತ್ಯೇಕ ವಾರ್ಡುಗಳ ನಿರ್ಮಾಣಕ್ಕೆ ತುರ್ತು ಕ್ರಮ ಕೈಗೊಳ್ಳಬೇಕು. ಇದರಿಂದ ಅಂತಹ ರೋಗಿಗಳಿಗೆ ಲೇಡಿಗೋಷನ್‌ನಲ್ಲಿಯೇ ಚಿಕಿತ್ಸೆ ನೀಡಬಹುದಾಗಿದೆ ಎಂದು ಸಚಿವರು ಹೇಳಿದರು.ವೆನ್ಲಾಕ್‌ನಲ್ಲಿ ವೈದ್ಯರು ಪರಸ್ಪರ ಹೊಂದಾಣಿಕೆಯಿಂದ ಕರ್ತವ್ಯ ನಿರ್ವಹಿಸಬೇಕು. ರೋಗಿಗಳಿಗೆ ಸಕಾಲಕ್ಕೆ ಊಟೋಪಚಾರ ಸರಬರಾಜು ಮಾಡಬೇಕು. ಉಪಹಾರದಲ್ಲಿ ದಿನನಿತ್ಯ ಬದಲಾವಣೆ ತಂದು, ಅಗತ್ಯವಿರುವವರಿಗೆ ಹೆಚ್ಚುವರಿ ಉಪಹಾರ ಒದಗಿಸಬೇಕು ಎಂದ ಸಚಿವರು, ವೆನ್ಲಾಕ್ ಆಸ್ಪತ್ರೆಗೆ ಸಾರ್ವಜನಿಕ ಸಂಪರ್ಕಾಧಿಕಾರಿಯನ್ನು ನೇಮಿಸಿ, ಯಾವುದೇ ರೋಗಿಗಳು ಬಂದರೂ ಅವರಿಗೆ ಸೂಕ್ತ ಚಿಕಿತ್ಸೆ ದೊರಕಿಸಲು ಕ್ರಮ ಕೈಗೊಳ್ಳಬೇಕು.ವೆನ್ಲಾಕ್‌ನಲ್ಲಿ ಐಸಿಯು ಕೊಠಡಿಗಳ ವಿಸ್ತರಣೆ ಹಾಗೂ ಹೆಚ್ಚುವರಿ ವೆಂಟಿಲೇಟರ್‌ಗಳನ್ನು ಅಳವಡಿಸಲು ಕೂಡಲೇ ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ತಿಳಿಸಿದರು.ಹೆಚ್ಚುವರಿ ಪಿಪಿಇ ಕಿಟ್, ಎನ್-೯೫ ಮಾಸ್ಕ್‌ಗಳನ್ನು ಬೇಡಿಕೆಯಷ್ಟು ಒದಗಿಸಲಾಗುವುದು. ಇನ್ನಷ್ಟು ವೈದ್ಯರು, ಪ್ರಯೋಗಶಾಲಾ ತಂತ್ರಜ್ಞರು, ಡಿ ಗ್ರೂಪ್ ಸಿಬ್ಬಂದಿಗಳ ನೇಮಕ, ಆಂಬುಲೆನ್ಸ್‌ಗಳ ಖರೀದಿ ಸೇರಿದಂತೆ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ಒದಗಿಸಲು ಸರಕಾರ ಅನುಮೋದನೆ ನೀಡಲಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.ವೆನ್ಲಾಕ್ ಆಸ್ಪತ್ರೆಯಲ್ಲಿ ಗೊಂದಲವಾಗದಂತೆ ಸಮನ್ವಯದಿಂದ ಕರ್ತವ್ಯ ನಿರ್ವಹಿಸಬೇಕು. ಲೋಪವೆಸಗುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಸೂಚಿಸಿದರು.ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ವೆನ್ಲಾಕ್ ಹಾಗೂ ಲೇಡಿಗೋಷನ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬರುವವರಿಗೆ ಯಾವುದೇ ತೊಂದರೆಯಾಗದಂತೆ ಮೇಲ್ವಿಚಾರಣೆ ನಡೆಸಲು ತಿಳಿಸಿದರು.

ಲಕ್ಷಣ ರಹಿತರಿಗೆ ಮನೆಯಲ್ಲೇ ಚಿಕಿತ್ಸೆಗೆ ಸೂಚನೆ:
ರೋಗಲಕ್ಷಣಗಳಿಲ್ಲದ ಕೊರೋನಾ ಸೋಂಕಿತರಿಗೆ ಮನೆಯಲ್ಲಿಯೇ ಚಿಕಿತ್ಸೆ ಪಡೆಯಲು ರಾಜ್ಯ ಸರಕಾರ ಅವಕಾಶ ನೀಡಿರುವುದರಿಂದ ಅಂತಹವರಿಗೆ ತ್ವರಿತವಾಗಿ ಅನುಮತಿ ನೀಡಲು ಸಚಿವರು ಸೂಚಿಸಿದರು. ಸಭೆಯಲ್ಲಿ ವೆನ್ಲಾಕ್ ಅಧೀಕ್ಷಕ ಡಾ.ಸದಾಶಿವ, ಲೇಡಿಗೋಷನ್ ಅಧೀಕ್ಷಕಿ ಡಾ.ಸವಿತಾ ಮತ್ತಿತರರು ಇದ್ದರು.

ತನಿಖೆ ಆರಂಭ- ಇಂದು ಹೇಳಿಕೆ ನೀಡಲು ಮಹಿಳೆಯ ಪತಿ, ಅಕ್ಕನಿಗೆ ಸೂಚನೆ

ಮಹಿಳೆಗೆ ಚಿಕಿತ್ಸೆ ನೀಡದೆ ಅಲೆದಾಟ ನಡೆಸಿರುವ ಪ್ರಕರಣದ ಕುರಿತು ಜಿಲ್ಲಾ ಉಸ್ತವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರ ಆದೇಶದಂತೆ ಜಿಲ್ಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಉನ್ನತ ಮಟ್ಟದ ತನಿಖೆ ಆರಂಭಗೊಂಡಿದೆ ಎಂದು ವರದಿಯಾಗಿದೆ. ಚಿಕಿತ್ಸೆ ಸಿಗದೇ ತೊಂದರೆಯಾಗಿರುವ ಮಹಿಳೆಯ ಪತಿ ಆನಂದ ಹಾಗೂ ಗೀತಾರವರ ಜೊತೆ ಆಸ್ಪತ್ರೆಗೆ ತೆರಳಿದ್ದ ಅವರ ಅಕ್ಕ ಸುಂದರಿಯವರನ್ನು ಜು.21ರಂದು ಜಿಲ್ಲಾಧಿಕಾರಿ ಕಚೇರಿಗೆ ಬಂದು ತನಿಖಾ ತಂಡದ ಮುಂದೆ ಹಾಜರಾಗಿ ಹೇಳಿಕೆ ನೀಡಲು ತಿಳಿಸಲಾಗಿದೆ ಎಂದು ವರದಿಯಾಗಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.