ಕೇಪುಳದಲ್ಲಿ ಶ್ರಮದಾನಕ್ಕೆ ತೆರೆದುಕೊಂಡ ಸಂಡೆ ಲಾಕ್‌ಡೌನ್‌

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕೇಪುಳು ಸಮೀಪದ ಸಪ್ತಗಿರಿ ನಗರದಲ್ಲಿ ಬೆಳಗ್ಗೆ ಎಂಟೂವರೆ ಗಂಟೆ ಆಗಿತ್ತು, ಒಂದಷ್ಟು ಹಿರಿಯರು, ಮದ್ಯವಯಸ್ಕ ವ್ಯಕ್ತಿಗಳು, ಗೃಹಿಣಿಯರು, ಪುಟಾಣಿ ಮಕ್ಕಳ ಮೇಳ ಮೇಳೈಸಿತ್ತದಂತೆ ಭಾಸವಾಗುತ್ತಿದ್ದರೂ. ಎಲ್ಲರೂ ಒಂದು ರೀತಿಯಲ್ಲಿ ಕತ್ತಿ, ಹಾರೆ, ಪಿಕ್ಕಾಸು, ಕೈಯಲ್ಲಿ ಬುಟ್ಟಿ, ತಲೆಯಲ್ಲಿ ಟೊಪ್ಪಿ ಹಾಕಿದ್ದರು. ಆದರೆ ಇವರನ್ನು ವಿಚಾರಿಸಿದಾಗ ಬ್ಯಾಂಕ್ ಅಧಿಕಾರಿ ಇದ್ದರು. ಸ್ಕೂಲ್ ಟೀಚರ್ ಗಳಿದ್ದರು. ಖಾಸಗಿ ಕಂಪನಿಯ ಅಧಿಕಾರಿ ಇದ್ದರು. ಕಾಲೇಜು ಪ್ರಿನ್ಸಿಪಾಲ್, ಕಂಪ್ಯೂಟರ್ ವಿಭಾಗ ಮುಖ್ಯಸ್ಥರು, ವಾಹನ ವಿಮಾ ಅಧಿಕಾರಿ, ಸ್ವ ಉದ್ದಿಮೆಯ ಮಾಲೀಕ, ನಿವೃತ್ತ ಸರಕಾರಿ ನೌಕರರು ಎಂಬುದು ತಿಳಿದು ಬಂತು. ಯಾಕೆಂದರೆ ಇವರ ಪರಿಚಯ ಕೋವಿಡ್ ಸುರಕ್ಷತೆಯ ಮಾಸ್ಕ್ ಅಡಿಗಿಸಿಟ್ಟಿತ್ತು. ಏನೆ ಆಗಲಿ ಶ್ರಮದಾನ ಆರಂಭವಾಗಿಯೇಬಿಟ್ಟಿತು.

“ನಗರಸಭೆ ಸ್ವಚ್ಛ ಮಾಡಬೇಕಿತ್ತು”… ಅಂತ ಯಾರೂ ಆಡಿ ಕೊಳ್ಳಲಿಲ್ಲ, ಅದು ಖಾಸಗೀ ಜಾಗ ಅವರ ಕೆಲಸ ಎಂದು ಹೀಗಳೆಯಲಿಲ್ಲ. ದಾರಿ ಬದಿ ಬಿದ್ದಿದ್ದ ಪ್ಲಾಸ್ಟಿಕ್ ಕ್ಷಣಾರ್ಧದಲ್ಲಿ ಮಾಯಾ. ಯಾರೋ ತಿಂದುಂಡು ಬಿಸಾಕಿದ ಪ್ಲಾಸ್ಟಿಕ್ ಗಳು ಅಲ್ಲಿಂದ ಮುಕ್ತ ವಾದಾಗ ಚರಂಡಿ ಕಿಲಕಿಲ ನಕ್ಕಂತಾಯ್ತು. ಇಂದಿನಿಂದ ನೀರು ಹರಿದು ಹೋಗುವುದಕ್ಕೆ ತೊಂದರೆ ಇಲ್ಲ ಎಂದು ಚರಂಡಿಗೆ ಖುಷಿ. ಬೇಜಾರು ಪಟ್ಟುಕೊಂಡದ್ದು ಸೊಳ್ಳೆಗಳು ಮಾತ್ರ… ತಮ್ಮ ಅಕ್ರಮ ವಸತಿಯನ್ನು ನಿರ್ಮೂಲನ ಮಾಡಿದ್ದಕ್ಕಾಗಿ. ಪುಟ್ಟ ಹುಡುಗಿ ಚಿತ್ತಾರ ಗೊಣಗುತ್ತಿದ್ದಳು ..”ಇನ್ನುಮುಂದೆ ಯಾರಾದರೂ ಕಸ ಹಾಕಿದರೆ ನಗರಸಭೆಗೆ ಹೇಳಬೇಕು ” ಪುಟಾಣಿ ಶಿಫಾ ಕಿಸಕ್ಕನೆ ನಕ್ಕಳು.. “ಅವರು ಬಂದರೆ ತಾನೇ,” ಟೀಚರ್ ಮಗಳು ಅಲೀಶಾ.. ಅವಳಿ ಜವಳಿ ಸೋದರಿಯರಾದ ಪರಿಣಿತ -ಪ್ರತಿಕಾ ಯಾವುದಕ್ಕೂ ಕಿವಿ ಕಿವಿಗೊಡದೆ “ನಮ್ಮ ಊರು ನಮ್ಮ ಕೇರಿ ನಾವೇ ಸ್ವಚ್ಛ ಮಾಡಬೇಕು “ಅಂತ ಶಾಲೆಯಲ್ಲಿ ಹೇಳಿದ್ದನ್ನು ನೆನಪು ಮಾಡಿಕೊಳ್ಳುತ್ತಿದ್ದರು. ಹೂಳು ತುಂಬಿದ ಸಪ್ತಗಿರಿ ನಗರದ ಚರಂಡಿ ಸ್ವಚ್ಛ ವಾಗುತ್ತಿದ್ದಂತೆ ಕಾಂಕ್ರೀಟ್ ರಸ್ತೆಯ ಅಸ್ತಿತ್ವವನ್ನೇ ಮುಚ್ಚಿಹಾಕಿದ ರಾಶಿ ಮಣ್ಣಗುಡ್ಡೆ ಖಾಲಿಯಾಗಿತ್ತು. ನೀರು ರಸ್ತೆಗೆ ಬಾರದಂತೆ ಎರಡು ಬದಿ ಹೊಸ ಚರಂಡಿ ನಿರ್ಮಾಣ ಆಗಿತ್ತು. ಹೊಂಡ ಗುಂಡಿಗಳಿಂದ ತುಂಬಿದ ಮುಖ್ಯ ರಸ್ತೆ ಸಂಪರ್ಕಿಸುವ ಜಾಗ ಈಗ ಸಮತಟ್ಟಾಗಿತ್ತು.
ನಿವೃತ್ತ ಪೊಲೀಸ್ ಅಧಿಕಾರಿ ನಮ್ಮ ತಂಡದ ಹಿರಿತಲೆ ಕಾಯಕಯೋಗಿ ಅಲ್ವಿನ್ ಡಿ ಮಸ್ಕರೇನಸ್ ಅವರ ಅಂಗಿ ಪೂರ್ಣ ಬೆವರಿನಿಂದ ಒದ್ದೆಯಾಗಿತ್ತು. ಮುಖದಲ್ಲಿ ಉತ್ಸಾಹ. ಮೊನ್ನೆ ಸಂಡೆ ಬೇರೆ ಊರಲ್ಲಿ ಲಾಕ್ ನಲ್ಲಿ ಸಿಲುಕಿಕೊಂಡಿದ್ದ ಬ್ಯಾಂಕ್ ಆಫೀಸರ್ ಮಹಾಬಲ ರವರ ಕೈಯಲ್ಲಿದ್ದ ಹಾರೆಗೆ ಸುಸ್ತಾಗಿದ್ದರೂ ಮಹಾಬಲರವರ ಮಂದಹಾಸ ಹಾಗೆಯೇ ಇತ್ತು. “ಡಬಲ್ ಕೆಲಸ ಇವತ್ತು ನನ್ನದು” ಎಂಬ ಹಟ ಅವರಿಗೆ ಇನ್ನು ವಾಹನ ವಿಮಾಧಿಕಾರಿ ಜಯರಾಮ ಗೌಡರಿಗಂತೂ ಅವರದೇ ಹಾರೆ ಆಗಬೇಕು ಕೆಲಸಕ್ಕೆ. ಅವರು ಒಂದು ರೀತಿ ಉಸ್ತುವಾರಿ ಸಚಿವರು ಇದ್ದಂತೆ ನಮ್ಮ ತಂಡಕ್ಕೆ. “ಹರೀಶಣ್ಣ ನೀರು ತರಲಿಕ್ಕೆ ಹೋದರು” ಎಂದು ಕಂಪ್ಯೂಟರ್ ವಿಭಾಗದ ಮುಖ್ಯಸ್ಥರಾದ ರೋಹಿತ್ ಆಚೆ ನೋಡಿ ಹೇಳಿದರು, ರೋಹಿತರ ದಂತು ಪಕ್ಕಾ ಇಂಜಿನಿಯರಿಂಗ್ ವರ್ಕ್ ಪಕ್ಕ ಅಂದರೆ ಪಕ್ಕ. “ಭಟ್ರೆ ನೀರು ಮಾತ್ರ ಸಾಕು ಚಾ ಈಗ ಬೇಡ” ಎಂದು ನಾನು ಕೂಗು ಹಾಕಿದಾಗ ಪುರುಷೋತ್ತಮ ಇನ್ನೂ ಜೋರಾಗಿ ಹೇಳಿದರು.. “ಇನ್ನು ತಿಂಡಿ ಅಂತು ಬೇಡವೇ ಬೇಡ ” ನಮ್ಮ ತುಳಸಿ ಕೆಟರರ್ಸ್ ಮಾಲೀಕ, ಈ ಶ್ರಮದಾನಕ್ಕೆ ಬೀಜಬಿತ್ತಿ ದವರಲ್ಲಿ ಒಬ್ಬರಾದ ಹರೀಶ ಬಟ್ಟರಿ ಗಂತೂ ನಮ್ಮ ಕೂಗು ಅರ್ಥ ಆಗದೆ ಇರುತ್ತದೆಯೇ ? ಕೆಲಸದಲ್ಲಿದ್ದ ಮಡದಿಮಣಿ ಸುಗಂಧಿ ಅವರೊಂದಿಗೆ ಚಹಾ ತಿಂಡಿಯೊಂದಿಗೆ ಹಾಜರಾದಾಗ ಉತ್ಸಾಹದ ಶ್ರಮದಾನದ ನಡುವೆ ತುಸು ಬಿಡುವು. ಎಡೆಬಿಡದೆ ದುಡಿದ ಆಲ್ವಿನ್ ರವರು ಅಲ್ಲಿ ತುಸು ಒರಾಗಿ ಕುಳಿತಾಗ ಗಾಳಿ ಹಾಕಿ ಏನೋ ಕೊಂಕಣಿಯಲ್ಲಿ ಹೇಳಿ ಬೆವರು ಒರೆಸಿದ ಅವರ ಸತಿ ಶಿರೋಮಣಿ ಸೆಲಿನಾ ಟೀಚರ್ ಅವರದ್ದಂತೂ ಮಾತು ಎಷ್ಟು ಸ್ಪೀಡೋ ಅಷ್ಟೇ ಸ್ಪೀಡು ಕೆಲಸ ಕೂಡ. ಕಳೆದ ಸಂಡೇ ಲೇಟಾಗಿ, ಇಂದು ಬೇಗ ಬಂದ ಗೀತಾ ಮೇಡಂ ಅವರದ್ದು ಒಂದೇ ಹಟ ’ಮೊನ್ನೆ ಇದ್ದ ಆ ಸಣ್ಣ ಹಾರೆ ಎಲ್ಲಿ ನನಗೆ ಅದೇ ಬೇಕು’ … ಪಾಪ ಅಲೀಶಾ ಓಡಿಹೋಗಿ ಅದೇ ಹಾರೆ ತಂದ ಬಳಿಕ ಅವರದ್ದು ನಾನ್ ಸ್ಟಾಪ್ ವರ್ಕ್.
ಇನ್ನು ಗಮ್ಮತ್ತು ಅಂದರೆ ನಮ್ಮ ಕೋರ್ಟ್ ಉದ್ಯೋಗಿ ಅನಿತಾ ಮೇಡಂ ಮತ್ತು ಅವರ ಗಂಡ ಪುರುಷೋತ್ತಮರದ್ದು. ಕೆಲಸ ಮಾಡಿ ಮಾಡಿ ಬಿಳಿ ಬಿಳಿ ಪುರುಷೋತ್ತಮರು ಕೆಂಪು ಕೆಂಪಾಗಿದ್ದರು. ನಾನು ಮೊಬೈಲಲ್ಲಿ ಫೋಟೋ ತೆಗಿತಾ ಇದ್ದೀನೋ ವಿಡಿಯೋ ಮಾಡ್ತಾ ಇದ್ದೇನೆಯೊ ಅದು ಅವರಿಗೆ ವಿಷಯವೇ ಅಲ್ಲ, ಒಟ್ಟಿಗೆ ಬುಟ್ಟಿ ಕೈಕೈ ಹಿಡಿದುಕೊಂಡು ಮಣ್ಣು ಸಾಗಿಸುವುದೇ ಅವರ ಕೆಲಸ. ಅವರಿಗೆ ಅದೇ ಸಂಭ್ರಮ. ನಮ್ಮ ತಂಡದ “ಆದರ್ಶ ದಂಪತಿ” ಜೋಡಿ ಎಂದು ಜಯರಾಮ ಮತ್ತು ಗೀತಾ ದಂಪತಿಗಳು ಕೈಗೆ ಕೈ ಹಿಡಕೊಂಡು ನಕ್ಕಿದ್ದೇ ನಕ್ಕಿದ್ದು.
“ನೋಡಿ ನನಗೆ ನಿಮ್ಮ ಹಾಗೆ ಕೆಲಸ ಮಾಡುವುದಕ್ಕೆ ಆಗುವುದಿಲ್ಲ ನಿಮ್ಮ ಜೊತೆಗೆ ಬಂದು ನಿಂತಿರುತ್ತೆ” ಎಂದು ಹೇಳಿದ ನಮ್ಮ ರಿಟಾಯರ್ಡ್ ಹೆಡ್ಮಾಸ್ಟ್ರು ವಿಶ್ವನಾಥರಿಗೆ ಏನನ್ನಿಸಿತೋ ಏನೋ. ನಮ್ಮೊಂದಿಗೆ ಕೆಲಸ ನೋಡುತ್ತಾ ನಿಂತಿದ್ದವರು.. ’ಅಲ್ಲ , ಎಷ್ಟು ಚೆಂದ ಲೆವೆಲ್ ಮಾಡಿದ್ದೀರಿ ಮಾರಾಯರೇ ,ಇನ್ನು ದರ್ಮಕ್ಕೆ ಓಡಾಡುವವ ಈ ಬೈಕಿನವರ ಸ್ಪೀಡ್ ಕಂಟ್ರೋಲ್ ಮಾಡುವುದು ಹೇಗೆ ?. ಎಲ್ಲರೂ ಒಮ್ಮೆ ತಲೆಯೆತ್ತಿ ಅವರನ್ನು ನೋಡಿದರು .ನಮ್ಮ ಸ್ಟ್ರಾಂಗ್ ಮ್ಯಾನ್ ಮಹಾಬಲರು “ಹೌದಲ್ಲ..” ಎಂದದಷ್ಟೇ ..ಮೇಷ್ಟ್ರು ಅಲ್ಲಿಂದ ಮಾಯ. ಅರ್ಧ ಗಂಟೆ ಕಳೆಯಿತು ನೋಡಿ ..ಕೈಯಲ್ಲಿ ೨ ಬೋರ್ಡ್ ಹಿಡಿದುಕೊಂಡು ಮತ್ತೆ ಹಾಜರು. “ನಿಧಾನವಾಗಿ ಚಲಿಸಿ”… ಸೈಕಲಲ್ಲಿ ಬಂದ ನಮ್ಮ ಪುಟ್ಟ ಹುಡುಗ ಶಾಮಿಲ ಬೋರ್ಡ್ ನೋಡಿ ಸಡನ್ ಬ್ರೇಕ್ ಹಾಕಿದ. ಎಲ್ಲರಿಗೂ ಫುಲ್ ಖುಷಿ . ಮಧ್ಯದಲ್ಲಿ ಬಂದ ತೇಜಸ್ ಮತ್ತು ವೈಭವ “ಪಪ್ಪ ಕೆಲಸ ಮಾಡ್ತಾರೋ ಇಲ್ಲವೋ” ಎಂದು ನನ್ನನ್ನು ನೋಡಿ ಮನೆಗೆ ರಿಪೋರ್ಟ್ ಕೊಡಲಿಕ್ಕೆ ವಾಪಸ್ ಓಡಿದರು.
ಎರಡು ಭಾನುವಾರಗಳ ಲಾಕ್ಡೌನ್ ಪುತ್ತೂರಿನ ಕೇಪುಳದಲ್ಲಿ ಇರುವ ಸಪ್ತಗಿರಿ ಬಡಾವಣೆಯಲ್ಲಿ ಸಾರ್ಥಕ್ಯಕಂಡಿದ್ದು ಹೀಗೆ . ಪ್ರತಿನಿತ್ಯ ನೂರಾರು ಜನ ಓಡಾಡುವ ರಸ್ತೆ ಪ್ರಧಾನ ರಸ್ತೆ ಸೇರುವಲ್ಲಿ ಹೊಂಡ ಗುಂಡಿಗಳಿಂದ ತೊಂದರೆ ಕೊಡುತ್ತಿತ್ತು .ಅಕ್ಕಪಕ್ಕದ ಕಸ ಮುಳ್ಳು ಗಂಟೆ ಹೇಸಿಗೆ ತರಿಸುವಂತಿತ್ತು. ಈಗ ಎಲ್ಲವೂ ನಿರ್ಮಲ ಸ್ವಚ್ಛ ಪುತ್ತೂರಿಗೆ ನಮ್ಮ ಕೊಡುಗೆ ’…ನಮ್ಮ ಬಡಾವಣೆ ನಮ್ಮ ಹೊಣೆ ’ಎಂಬ ಆಶಯವನ್ನು ಇಲ್ಲಿಯ ಸಮಾನಮನಸ್ಕ ನಿವಾಸಿಗಳು ಕೂಡಿ – ಮಾಡಿ ತೋರಿಸಿದರು. ಈ ಯೋಚನೆಯನ್ನು ಯೋಜನೆಯನ್ನಾಗಿಸಿ ಕಾರ್ಯರೂಪಕ್ಕೆ ತರುವಲ್ಲಿ ಮುಂಚೂಣಿಯಲ್ಲಿ ನಿಂತವರು ಹರೀಶ್ ಭಟ್ ಮತ್ತು ಜಯರಾಮ ಗೌಡರು. ಇದರಲ್ಲಿ ಪಾಲ್ಗೊಂಡ ಪುಟಾಣಿಗಳಿಂದ ನಿವೃತ್ತ ರವರೆಗೆಎಲ್ಲರೂ ಸಮಭಾಗಿಗಳು ನಮ್ಮ ಮುಂದಿನ ಯೋಜನೆ ರಸ್ತೆಯುದ್ದಕ್ಕೂ ಗಿಡನೆಡುವುದು. ಗಿಡದ ನೆರಳಲ್ಲಿ ಕುಳಿತು ಸುಂದರ ನಾಳೆಗಳನ್ನು ನೋಡುವುದು. ನಮ್ಮೊಂದಿಗೆ ಮಕ್ಕಳಿದ್ದಾರೆ.
ಲೇಖನ: ಸುಬ್ಬಪ್ಪ ಕೈಕಂಬ, ಪುತ್ತೂರು

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.