Breaking News

ಕೊರೋನಾ ಸಾವಿನ ಲೆಕ್ಕಗಳು ಮತ್ತು ಆರೋಗ್ಯದ ಪ್ರಾಶಸ್ತ್ಯತೆಗಳು

Puttur_Advt_NewsUnder_1
Puttur_Advt_NewsUnder_1
  • ಕೊರೋನಾಕ್ಕಿಂತ ಹೆಚ್ಚು ಜಾಗ್ರತೆ ವಹಿಸಬೇಕಾದ ಅಪಾಯಕಾರಿ ಕಾಯಿಲೆಗಳು ನಮ್ಮಲ್ಲಿವೆ

ದೇಶದಲ್ಲಿ ರಸ್ತೆ ಅಪಘಾತದಲ್ಲಿ (1917ರಲ್ಲಿ) 1.5 ಲಕ್ಷ ಜನ ಸಾವನ್ನಪ್ಪಿದ್ದಾರೆ, 4.5 ಲಕ್ಷ ಜನ ಅಪಘಾತದ ತೊಂದರೆಗೊಳಗಾಗಿದ್ದಾರೆ. ಅಂದರೆ ದಿನನಿತ್ಯ 405 ಜನ ಸಾವಿಗೀಡಾಗಿದ್ದಾರೆ. 1200 ಜನರು ಅಪಘಾತದ ತೊಂದರೆಗೊಳಗಾಗಿದ್ದಾರೆ. ರಸ್ತೆಗಳು ಸರಿ ಇದ್ದರೆ, ರಸ್ತೆ ನಿಯಮಗಳನ್ನು (ಕೋವಿಡ್ ನಿಯಮದಂತೆ) ಸರಿಯಾಗಿ ಪಾಲಿಸಿದರೆ ಶೇ.90 ಅಪಘಾತಗಳನ್ನು ತಡೆಯಬಹುದು. ಅಂದರೆ ವರ್ಷಕ್ಕೆ ಲಕ್ಷಕ್ಕೂ ಮಿಕ್ಕಿ ಜನರ (ಯುವಕರ) ಜೀವ ಉಳಿಸಬಹುದಾಗಿದೆ. ಹೃದಯ ಸಂಬಂಧಿ ಕಾಯಿಲೆಯಲ್ಲಿ (1916ರಲ್ಲಿ) ಭಾರತದಲ್ಲಿ 25 ಲಕ್ಷ ಜನರು ಸಾವನ್ನಪ್ಪಿದ್ದಾರೆ. ಅದು ಜಾಸ್ತಿ ಆಗುತ್ತಾ ಹೋಗುತ್ತಿದೆ. ಡಯಾಬಿಟೀಸ್, ರಕ್ತದೊತ್ತಡದಿಂದ (1916ರಲ್ಲಿ) 16 ಲಕ್ಷ ಜನ ನೇರವಾಗಿ ಸಾವನ್ನಪ್ಪಿದ್ದಾರೆ. ಆಹಾರ ಪದ್ದತಿ ಸರಿಯಾಗಿದ್ದಲ್ಲಿ ಸರಿಯಾದ ಚಿಕಿತ್ಸೆ, ಮಾರ್ಗದರ್ಶನ ಇದ್ದಿದ್ದರೆ ಈ ಮೇಲಿನ ಎರಡೂ ಕಾಯಿಲೆಗಳ ಸಾವಿನ ಪ್ರಮಾಣದ ಅರ್ಧದಷ್ಟನ್ನು ತಡೆ ಹಿಡಿಯಬಹುದು ಎಂದು ಆರೋಗ್ಯ ಸಂಸ್ಥೆ ಹೇಳಿದೆ.
ಕ್ಯಾನ್ಸರ್‌ನಿಂದ ಸಾಯುವವರ ಸಂಖ್ಯೆಯೂ ಜಾಸ್ತಿಯಾಗುತ್ತಿದೆ. ದಿನಕ್ಕೆ (1918ರಲ್ಲಿ) 1300 ಜನ ಅಂದರೆ ವರ್ಷಕ್ಕೆ 6 ಲಕ್ಷ ಜನ ಕ್ಯಾನ್ಸರ್‌ನಿಂದ ಸಾವನ್ನಪ್ಪಿದ್ದಾರೆ. ಈ ಮೇಲಿನ ಹೆಚ್ಚಿನ ಕ್ಯಾನ್ಸರ್‌ಗಳು ಬೇಗನೆ ಗುರುತಿಸಲ್ಪಟ್ಟಿದ್ದರೆ ಗುಣವಾಗುತ್ತಿತ್ತು. ತಡವಾಗಿ ಬೆಳಕಿಗೆ ಬಂದಿರುವುದು ಮತ್ತು ಸರಿಯಾದ ಚಿಕಿತ್ಸೆ ಇಲ್ಲದಿರುವುದು ಸಾವಿಗೆ ಕಾರಣ ಎಂದು ಹೇಳಲಾಗುತ್ತಿದೆ.
ನಮ್ಮ ಭಾಗದಲ್ಲಿ ಕಡಿಮೆಯಾಗಿದ್ದರೂ ಉತ್ತರ ಭಾರತದಲ್ಲಿ ಹೆಚ್ಚಾಗಿದ್ದು ದೇಶದಲ್ಲಿ ಪ್ರತೀ ವರ್ಷ 8 ಲಕ್ಷಕ್ಕೂ ಹೆಚ್ಚು ಜನ ಸಾಂಕ್ರಾಮಿಕ (ಆರೋಗ್ಯ) ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಅವುಗಳಲ್ಲಿ ಟಿ.ಬಿ. ಯಿಂದ 4.5 ಲಕ್ಷ ಜನ ಸಾವನ್ನಪ್ಪಿದ್ದಾರೆ. ನಮ್ಮಲ್ಲಿರುವ ಮಲೇರಿಯಾ, ಡೆಂಗ್ಯೂ ಕಾಯಿಲೆಯು ದೇಶದಲ್ಲಿ ವರ್ಷಕ್ಕೆ 6ರಿಂದ 15 ಸಾವಿರ ಜನರನ್ನು ಬಲಿ ಪಡೆಯುತ್ತದೆ. ಈ ಮೇಲಿನ ಎಲ್ಲಾಾ ಕಾಯಿಲೆಗಳು ಸಾಂಕ್ರಾಮಿಕವಾದ್ದರಿಂದ ಅದನ್ನು ಪೂರ್ಣವಾಗಿ ತಡೆದು ಗುಣಪಡಿಸಲು ಸಾಧ್ಯವಿದೆ.
ದೇಶದಲ್ಲಿ ಹೆರಿಗೆಯಾಗುವಾಗ ಪ್ರತೀ ದಿನ ಸಾವಿರಕ್ಕೂ ಮಿಕ್ಕಿ (ವರ್ಷಕ್ಕೆ 6 ಲಕ್ಷ) ಮಕ್ಕಳಿಗೆ ಸರಿಯಾದ ಚಿಕಿತ್ಸೆ ಸಿಗದೆ ಸಾವನ್ನಪ್ಪುತ್ತಾರೆ. ಹೆರಿಗೆಯಾಗಿ 5 ವರ್ಷದೊಳಗಿನ ಸುಮಾರು 8 ಲಕ್ಷ ಮಕ್ಕಳೂ ಪ್ರತೀ ವರ್ಷ ಸಾವನ್ನಪ್ಪುತ್ತಾರೆ. ಆಹಾರ, ಶುದ್ಧ ನೀರಿನ ಕೊರತೆ, ಸಾಂಕ್ರಾಮಿಕ ಖಾಯಿಲೆ ಸರಿಯಾದ ಚಿಕಿತ್ಸೆ ಇಲ್ಲದಿರುವುದು ಅದಕ್ಕೆ ಕಾರಣ ಎಂದು ಹೇಳಲಾಗಿದೆ. ಹಸಿವೆಯಿಂದ ಸಾಯುವವರ ಸಮಸ್ಯೆ ನಮ್ಮಲ್ಲಿ ಇಲ್ಲವಾದರೂ ಉತ್ತರ ಭಾರತದಲ್ಲಿ ಬಹಳಷ್ಟು ಜನರು ಹಸಿವೆಯಿಂದ ಸಾವುಗೀಡಾಗುತ್ತಿದ್ದಾರೆ ಎನ್ನಲಾಗುತ್ತಿದೆ.
ಮಾನಸಿಕ ಖಿನ್ನತೆಯಿಂದ 1916ರಲ್ಲಿ 2 ಲಕ್ಷದ 30 ಸಾವಿರ ಜನ ಆತ್ಮಹತ್ಯೆಗೆ ಒಳಗಾಗಿದ್ದಾರೆ. ಅವುಗಳನ್ನು ಸರಿಯಾದ ಚಿಕಿತ್ಸೆ ಮತ್ತು ಪರಿಹಾರದಿಂದ ತಡೆಯಬಹುದು ಎಂದು ಹೇಳಲಾಗುತ್ತದೆ.
ಕೊರೋನಾದಿಂದ (ಮಾರ್ಚ್‌ನಿಂದ) ಇಲ್ಲಿಯವರೆಗೆ ಜಿಲ್ಲೆಯಲ್ಲಿ 123, ರಾಜ್ಯದಲ್ಲಿ 1796, ದೇಶದಲ್ಲಿ 32063 ಸಾವುಗಳಾಗಿವೆ. ನಮ್ಮ ದೇಶದಲ್ಲಿ ಅದನ್ನು ತಡೆಯಲಿಕ್ಕಾಗಿ ಲಾಕ್‌ಡೌನ್ ಕೂಡಾ ಆಗಿದೆ. ಎಲ್ಲಾ ವ್ಯವಹಾರವನ್ನು ಎಷ್ಟೋ ಬಾರಿ ಸ್ವಯಂಪ್ರೇರಿತವಾಗಿ ಸ್ಥಗಿತಗೊಳಿಸಿದ್ದೇವೆ, ಅದರಿಂದಾಗಿ ಲಕ್ಷಾಂತರ ಕೋಟಿ ವ್ಯವಹಾರ ನಷ್ಟವಾಗಿದೆ. ಉದ್ಯೋಗ, ಹಣ ಕಳೆದುಕೊಂಡಿದ್ದೇವೆ. ಆರೋಗ್ಯದ ರಕ್ಷಣೆಗಾಗಿ, ಜೀವದ ಉಳಿವಿಗಾಗಿ ಈ ಕ್ರಮ ಸರಿಯೆಂದು ಎಲ್ಲರೂ ಒಪ್ಪುತ್ತಿದ್ದಾರೆ. ಆದರೆ ಕೊರೋನಾ ಮಾತ್ರ ಕಾಯಿಲೆಯಲ್ಲ ಅದಕ್ಕಿಂತ ಗಂಭೀರ ಕಾಯಿಲೆ ಆರೋಗ್ಯ ಸಮಸ್ಯೆಗಳು ನಮ್ಮಲ್ಲಿವೆ. ಕೊರೋನಾದ ಗುಂಗಿನಲ್ಲಿ ಉಳಿದವುಗಳನ್ನು ಮರೆತರೆ, ಅವುಗಳಿಗೆ ಸರಿಯಾದ ವ್ಯವಸ್ಥೆ ಮಾಡದಿದ್ದರೆ ಏನಾಗಬಹುದು ಎಂಬುದಕ್ಕಾಗಿ ಈ ಲೇಖನ. ಕೊರೋನಾ ನಮ್ಮಲ್ಲಿ ಮೂಡಿಸಿದ ಆರೋಗ್ಯದ ಜಾಗೃತಿಯನ್ನು, ಎಚ್ಚರಿಕೆಯನ್ನು ನಮ್ಮಲ್ಲಿರುವ ಆರೋಗ್ಯದ ಇತರ ಸಮಸ್ಯೆಗಳ ಕಡೆ ಹರಿಸಿದರೆ, ಕೊರೋನಾಕ್ಕೆ ತೊಡಗಿಸಿಕೊಂಡ ಕ್ರಮಗಳ ಸಾವಿರಕ್ಕೆ ಒಂದು ಅಂಶವನ್ನು ತೊಡಗಿಸಿದರೆ ಇತರ ಹೆಚ್ಚಿನ ಕಾಯಿಲೆಗಳ ಹುಟ್ಟಡಗಿಸಬಹುದು. ಶೇ.90ರಷ್ಟು ಕಾಯಿಲೆಯನ್ನು, ಸಾವುಗಳನ್ನು ತಡೆಗಟ್ಟಬಹುದು. ಸಾವು (ಮರಣ) ಕೊರೋನಾದಿಂದಾಗಲಿ ಅಥವಾ ಯಾವುದೇ ಕಾಯಿಲೆಯಿಂದಾಗಿ ಅದರೂ ಅದು ಅಪಾರ ನೋವು ಮತ್ತು ನಷ್ಟ ಉಂಟು ಮಾಡುತ್ತದೆ ಎಂದು ತಿಳಿಸಲು ಇಚ್ಛಿಸುತ್ತೇವೆ. ಆ ನಿಟ್ಟಿನಲ್ಲಿ ನಮ್ಮ ಆರೋಗ್ಯ ಕೇಂದ್ರಗಳು ಜನರಿಗೆ ಬರಬಹುದಾದ ಎಲ್ಲಾ ಕಾಯಿಲೆಗಳನ್ನು ಪರಿಹರಿಸುವ, ಗುಣಪಡಿಸುವ ಕೇಂದ್ರಗಳಾಗಿ ಪರಿವರ್ತನೆಗೊಳ್ಳಲಿ. ಅಲ್ಲಿ ಯಾವುದೇ ಕೊರತೆ ಇಲ್ಲದಂತಾಗಲಿ ಎಂದು ಆಶಿಸುತ್ತೇವೆ. ಕೊರೋನಾ ನಿಯಂತ್ರಿಸಲು ಮಾಡಿಕೊಂಡ ಜಾಗೃತಿ, ಶ್ರಮ, ಅನುಭವ ಮತ್ತು ವೆಚ್ಚ ಅದಕ್ಕೆ ಸಹಾಯಕವಾಗಲಿ, ಜನರ ನಿರಂತರ ಆರೋಗ್ಯ ಕಾಯುವ ಕೆಲಸವಾಗಲಿ ಎಂದು ಹಾರೈಸುತ್ತೇವೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.