ನೆಲ್ಯಾಡಿ: ಸ್ವಯಂ ಪ್ರೇರಿತ ಲಾಕ್‌ಡೌನ್ ವಾಪಸ್ | ಜು.28ರಿಂದ ಸಂಜೆಯ ತನಕವೂ ವ್ಯಾಪಾರ-ವರ್ತಕ ಸಂಘ

Puttur_Advt_NewsUnder_1
Puttur_Advt_NewsUnder_1

ನೆಲ್ಯಾಡಿ: ನೆಲ್ಯಾಡಿ, ಕೌಕ್ರಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲೂ ಕೊರೋನಾ ಸೋಂಕಿನ ಪ್ರಕರಣಗಳು ಕಂಡು ಬಂದಿದ್ದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ನೆಲ್ಯಾಡಿ ಹಾಗೂ ಕೌಕ್ರಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಜು.೨೩ರಿಂದ ಬೆಳಿಗ್ಗೆ ೭ರಿಂದ ಮಧ್ಯಾಹ್ನ ೨ ಗಂಟೆಯ ತನಕ ವ್ಯಾಪಾರ ಸೀಮಿತಗೊಳಿಸಿ ಆ ಬಳಿಕ ಜಾರಿಯಲ್ಲಿದ್ದ ಸ್ವಯಂ ಪ್ರೇರಿತ ಲಾಕ್‌ಡೌನ್ ವಾಪಸ್ ಪಡೆದುಕೊಳ್ಳಲಾಗಿದ್ದು ಜು.೨೮ರಿಂದ ಎಂದಿನಂತೆ ವ್ಯಾಪಾರ-ವ್ಯವಹಾರ ನಡೆಯಲಿದೆ ಎಂದು ನೆಲ್ಯಾಡಿ ವರ್ತಕ ಮತ್ತು ಕೈಗಾರಿಕಾ ಸಂಘ ತಿಳಿಸಿದೆ. ಜು.೩೧ರ ತನಕ ನೆಲ್ಯಾಡಿ ಪೇಟೆಯಲ್ಲಿ ಮಧ್ಯಾಹ್ನ ೨ ಗಂಟೆಯ ಬಳಿಕ ಸ್ವಯಂ ಪ್ರೇರಿತ ಲಾಕ್‌ಡೌನ್‌ಗೆ ಈ ಹಿಂದೆ ನಿರ್ಧರಿಸಲಾಗಿತ್ತು.
ಜಿಲ್ಲೆಯಲ್ಲಿ ಕೊರೋನಾ ಸೋಂಕಿನ ಪ್ರಕರಣಗಳು ಹೆಚ್ಚುತ್ತಿದ್ದ ಹಿನ್ನೆಲೆಯಲ್ಲಿ ಹಾಗೂ ನೆಲ್ಯಾಡಿಯಲ್ಲೂ ೩ ಕೊರೋನಾ ಸೋಂಕಿನ ಪ್ರಕರಣಗಳು ಕಂಡು ಬಂದ ಕಾರಣದಿಂದ ಜು.೨೩ರಿಂದ ೩೧ರ ತನಕ ಬಾರ್, ವೈನ್‌ಶಾಪ್ ಸಹಿತ ನೆಲ್ಯಾಡಿ ಹಾಗೂ ಕೌಕ್ರಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿನ ಅಂಗಡಿ ಮುಂಗಟ್ಟುಗಳನ್ನು ಸ್ವಯಂ ಪ್ರೇರಿತ ಬಂದ್‌ಗೆ ನೆಲ್ಯಾಡಿ ಗ್ರಾಮ ಪಂಚಾಯತ್‌ನಲ್ಲಿ ನಡೆದ ಕೋವಿಡ್ ಕಾರ್ಯಪಡೆ ಸಭೆಯಲ್ಲಿ ನೆಲ್ಯಾಡಿ ವರ್ತಕ ಸಂಘ ಮನವಿ ಮೇರೆಗೆ ನಿರ್ಧಾರ ಕೈಗೊಳ್ಳಲಾಗಿತ್ತು. ಆರಂಭದಲ್ಲಿ ಇದಕ್ಕೆ ವರ್ತಕರಿಂದ ಬೆಂಬಲ ದೊರೆತಿದ್ದರೂ ಬಳಿಕ ವೈನ್‌ಶಾಪ್, ಬಾರ್ ಹಾಗೂ ಇನ್ನಿತರ ಕೆಲ ಅಂಗಡಿ ಮಾಲಕರು ಸ್ವಯಂ ಪ್ರೇರಿತ ಲಾಕ್‌ಡೌನ್ ಆದೇಶ ಪಾಲನೆ ಮಾಡುತ್ತಿರಲಿಲ್ಲ. ಅಲ್ಲದೇ ನೆಲ್ಯಾಡಿ ಸುತ್ತಮುತ್ತಲಿನ ಪೇಟೆಗಳಲ್ಲಿ ಅಂಗಡಿ ಮುಂಗಟ್ಟುಗಳು ತೆರೆದಿರುವುದರಿಂದ ಗ್ರಾಹಕರು ಅಗತ್ಯ ವಸ್ತುಗಳ ಖರೀದಿಗೆ ಅಲ್ಲಿಗೆ ಹೋಗುತ್ತಿದ್ದರು. ಇದರಿಂದ ನೆಲ್ಯಾಡಿ ಪೇಟೆಯಲ್ಲಿರುವ ವ್ಯಾಪಾರಸ್ಥರಿಗೆ ನಷ್ಟ ಸಂಭವಿಸುತ್ತಿರುವ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಸ್ವಯಂ ಪ್ರೇರಿತ ಲಾಕ್‌ಡೌನ್ ಹಿಂಪಡೆಯಲಾಗಿದೆ ಎಂದು ವರ್ತಕ ಸಂಘ ತಿಳಿಸಿದೆ.

ಬಟ್ಟೆ, ಫೂಟ್‌ವೇರ್ ಅಂಗಡಿಯವರಿಗೆ ಆರ್ಥಿಕ ನಷ್ಟ:
ಬೆಳಿಗ್ಗೆ ೭ ಗಂಟೆಯಿಂದ ಮಧ್ಯಾಹ್ನ ೨ ಗಂಟೆಯ ತನಕ ವ್ಯಾಪಾರ ನಡೆಸಿ ಬಳಿಕ ಸ್ವಯಂ ಪ್ರೇರಿತ ಲಾಕ್‌ಡೌನ್ ಮಾಡುತ್ತಿರುವುದರಿಂದ ವ್ಯಾಪಾರದಲ್ಲಿ ನಷ್ಟ ಉಂಟಾಗಿ ದೈನಂದಿನ ಜೀವನ ನಿರ್ವಹಣೆಗೆ ತೊಂದರೆಯಾಗುತ್ತಿದೆ. ಅಲ್ಲದೇ ಕಟ್ಟಡ ಮಾಲಕರಿಗೆ ಮಾಸಿಕ ಬಾಡಿಗೆ ಪಾವತಿಗೂ ಪರದಾಟ ನಡೆಸಬೇಕಾದ ಪರಿಸ್ಥಿತಿ ನಿರ್ಮಾಣಗೊಂಡಿದೆ. ಮುಂದೆ ಬಕ್ರಿದ್ ಸೇರಿ ಇತರೇ ಹಬ್ಬಗಳು ಬರುತ್ತಿದ್ದು ವ್ಯಾಪಾರ-ವ್ಯವಹಾರ ನಡೆಯುವ ಭರವಸೆ ಇದೆ. ಇದೇ ಭರವಸೆ ಇಟ್ಟುಕೊಂಡು ನಾವು ಸಾಲ ಮಾಡಿ ಅಂಗಡಿಗಳಿಗೆ ಸರಕು ದಾಸ್ತಾನು ಮಾಡಿಕೊಂಡಿದ್ದೇವೆ. ರಾಜ್ಯ ಸರಕಾರವೇ ಲಾಕ್‌ಡೌನ್ ರದ್ದುಗೊಳಿಸಿ ಆದೇಶ ನೀಡಿರುವಾಗ ಹಾಗೂ ಪುತ್ತೂರು, ಕಡಬ ತಾಲೂಕು ವ್ಯಾಪ್ತಿಯ ಎಲ್ಲಿಯೂ ಸ್ವಯಂ ಪ್ರೇರಿತ ಲಾಕ್‌ಡೌನ್ ಇಲ್ಲದೇ ಇರುವ ಸಂದರ್ಭದಲ್ಲಿ ನೆಲ್ಯಾಡಿ ಪೇಟೆಯಲ್ಲಿ ಸ್ವಯಂ ಪ್ರೇರಿತ ಲಾಕ್‌ಡೌನ್ ಮಾಡಿರುವುದರಿಂದ ವ್ಯಾಪಾರದಲ್ಲಿ ನಷ್ಟ ಆಗುತ್ತಿದ್ದು ನ್ಯಾಯ ದೊರಕಿಸಿಕೊಡುವಂತೆ ನೆಲ್ಯಾಡಿಯ ಬಟ್ಟೆ, ಫ್ಯಾನ್ಸಿ ಹಾಗೂ ಫೂಟ್‌ವೇರ್ ಅಂಗಡಿಯವರು ಮನವಿ ಮಾಡಿದ್ದರು. ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸ್ವಯಂ ಪ್ರೇರಿತ ಲಾಕ್‌ಡೌನ್ ಹಿಂತೆಗೆದುಕೊಳ್ಳಲು ವರ್ತಕ ಸಂಘ ನಿರ್ಧರಿಸಿದೆ.

ಸ್ವಯಂ ಪ್ರೇರಿತ ಲಾಕ್‌ಡೌನ್ ಶೇ.100ರಷ್ಟು ಯಶಸ್ವಿಯಾಗದ ಕಾರಣ ಜು.27ರಂದು ಈ ಬಗ್ಗೆ ಜಾಗೃತಿಗಾಗಿ ಎಪಿಎಂಸಿ ಸದಸ್ಯ ಬಾಲಕೃಷ್ಣ ಬಾಣಜಾಲು, ಸಮಾನ ಮನಸ್ಕರ ವೇದಿಕೆ ಹಾಗೂ ವರ್ತಕ ಸಂಘದ ಪದಾಧಿಕಾರಿಗಳು ಅಂಗಡಿ ಮಾಲಕರನ್ನು ಭೇಟಿಯಾದ ಸಂದರ್ಭದಲ್ಲಿ ಸತತ ಲಾಕ್‌ಡೌನ್‌ನಿಂದ ವ್ಯಾಪಾರದಲ್ಲಿ ನಷ್ಟ ಆಗುತ್ತಿರುವ ಬಗ್ಗೆ ಅಂಗಡಿ ಮಾಲಕರಿಂದ ಬಂದಿರುವ ಅಹವಾಲುಗಳು ಹಾಗೂ ನೆಲ್ಯಾಡಿ ಸುತ್ತ ಮುತ್ತಲಿನ ಪೇಟೆಗಳು ತೆರೆದಿರುವುದರಿಂದ ಗ್ರಾಹಕರು ಅಲ್ಲಿಗೆ ಹೋಗುವ ಸಾಧ್ಯತೆ ಮತ್ತಿತರರ ಕಾರಣ ನೀಡಿದ್ದಾರೆ. ಮುಂಜಾಗ್ರತಾ ಕ್ರಮ ಪಾಲನೆಯೊಂದಿಗೆ ವ್ಯಾಪಾರ ನಡೆಸುವ ಭರವಸೆಯನ್ನೂ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ವಯಂ ಪ್ರೇರಿತ ಲಾಕ್‌ಡೌನ್ ಹಿಂಪಡೆಯಲಾಗಿದೆ. -ರಫೀಕ್ ಸೀಗಲ್, ಅಧ್ಯಕ್ಷರು, ವರ್ತಕ ಸಂಘ ನೆಲ್ಯಾಡಿ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.