ಕೌಕ್ರಾಡಿ: ಮುಂದುವರಿದ ಕಾಡಾನೆ ಪುಂಡಾಟ ಗದ್ದೆ, ತೋಟಕ್ಕೆ ದಾಳಿ-ಅಪಾರ ಪ್ರಮಾಣದ ಕೃಷಿ ಹಾನಿ

Puttur_Advt_NewsUnder_1
Puttur_Advt_NewsUnder_1

ನೆಲ್ಯಾಡಿ: ಕೌಕ್ರಾಡಿ ಗ್ರಾಮದಲ್ಲಿ ಕಾಡಾನೆ ಪುಂಡಾಟ ಮುಂದುವರಿದಿದ್ದು ಕಳೆದ ರಾತ್ರಿ ಬಾಣಜಾಲು ಪರಿಸರದ ಗದ್ದೆ, ತೋಟಗಳಿಗೆ ನುಗ್ಗಿ ಅಪಾರ ಪ್ರಮಾಣದ ಕೃಷಿ ಹಾನಿಗೊಳಿಸಿದೆ.

ವಾರದ ಹಿಂದೆ ಕೌಕ್ರಾಡಿ ಗ್ರಾಮದ ಪೆರಿಯಶಾಂತಿ, ಮಣ್ಣಗುಂಡಿ ಪರಿಸರದ ಹಲವರ ತೋಟದೊಳಗೆ ನುಗ್ಗಿ ಪುಂಡಾಟ ನಡೆಸಿ ಅಪಾರ ಪ್ರಮಾಣದಲ್ಲಿ ಕೃಷಿ ಹಾನಿಗೊಳಿಸಿದ ಕಾಡಾನೆ ಇದೀಗ ಅದೇ ಪರಿಸರದ ಬಾಣಜಾಲು ವ್ಯಾಪ್ತಿಯಲ್ಲಿ ಗದ್ದೆ, ತೋಟಗಳಿಗೆ ನುಗ್ಗಿ ನೇಜಿ ಹಾಗೂ ಇತರೇ ಕೃಷಿ ಹಾನಿಗೊಳಿಸಿದೆ. ಕಳೆದ ಒಂದು ವಾರದಿಂದ ರಾತ್ರಿ ವೇಳೆ ಗದ್ದೆ, ತೋಟಗಳಿಗೆ ಕಾಡಾನೆಯೊಂದು ನುಗ್ಗಿ ಕೃಷಿ ಹಾನಿಗೊಳಿಸುತ್ತಿದೆ ಎಂದು ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ. ಕೌಕ್ರಾಡಿ ಗ್ರಾಮದ ಬಾಣಜಾಲು ನಿವಾಸಿ, ಪುತ್ತೂರು ಎಪಿಎಂಸಿ ಸದಸ್ಯರೂ ಆದ ಬಾಲಕೃಷ್ಣ ಬಾಣಜಾಲು, ಸ್ಥಳೀಯರಾದ ಅಣ್ಣಿಪೂಜಾರಿ ಬಾಣಜಾಲು, ಸಂಕಪ್ಪ ಪೂಜಾರಿ ಬಾಣಜಾಲು, ಹೊನ್ನಪ್ಪ ಗೌಡರವರ ಗದ್ದೆಗಳಿಗೆ ಕಾಡಾನೆ ದಾಳಿ ನಡೆಸಿ ನಾಟಿ ಮಾಡಲಾದ ನೇಜಿ ಹಾನಿಗೊಳಿಸಿದೆ. ಬಾಣಜಾಲು ನಿವಾಸಿ ಗೋಪಾಲಕೃಷ್ಣ ಎಂಬವರ ತೋಟಕ್ಕೆ ನುಗ್ಗಿದ್ದು ಬಾಳೆ ಹಾಗೂ ಅಡಿಕೆ ಗಿಡ ಹಾನಿಗೊಳಿಸಿದೆ.

ಒಂಟಿ ಸಲಗ:
ಪೆರಿಯಶಾಂತಿ ರಕ್ಷಿತಾರಣ್ಯದ ಒಳಗಡೆಯಿಂದ ಕಾಡಿನ ಅಂಚಿನಲ್ಲಿರುವ ಗ್ರಾಮಸ್ಥರ ತೋಟ, ಗದ್ದೆಗಳಿಗೆ ಕಾಡಾನೆ ಪದೇ ಪದೇ ನುಗ್ಗಿ ಕೃಷಿ ಹಾನಿಗೊಳಿಸುತ್ತಿದೆ. ಕಳೆದ ಒಂದು ವಾರದಿಂದ ಒಂಟಿ ಸಲಗವೊಂದು ಈ ಪ್ರದೇಶದ ನಿವಾಸಿಗಳ ತೋಟ, ಗದ್ದೆಗಳಿಗೆ ದಾಳಿ ನಡೆಸುತ್ತಿದೆ. ನಸುಕಿನ ವೇಳೆ ಈ ಪರಿಸರದ ರಾಷ್ಟ್ರೀಯ ಹೆದ್ದಾರಿಯಲ್ಲಿಯೂ ಆನೆ ಕಾಣಿಸಿಕೊಳ್ಳುತ್ತಿದೆ ಎಂದು ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ. ಆನೆಯ ಉಪಟಳದ ಬಗ್ಗೆ ಅರಣ್ಯ ಇಲಾಖೆ ಸಿಬ್ಬಂದಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜವಾಗಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.