ಪುತ್ತೂರು ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲ ಪ್ರೊ|ಝೇವಿಯರ್ ಡಿ’ಸೋಜ ಸೇವಾ ನಿವೃತ್ತಿ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಸಹಾಯಕ ಪ್ರಾಧ್ಯಾಪಕ ವೃತ್ತಿಯಲ್ಲಿ ೩೭ ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಪುತ್ತೂರು ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲರಾದ ಪ್ರೊ|ಝೇವಿಯರ್ ಡಿ’ಸೋಜರವರು ಜು.೩೧ ರಂದು ಸೇವಾ ನಿವೃತ್ತಿ ಹೊಂದಲಿದ್ದಾರೆ.

೧೯೮೩ರಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ನೇಮಕವಾದ ಬಳಿಕ ಪ್ರೊ|ಝೇವಿಯರ್ ಡಿ’ಸೋಜರವರು ಪ್ರಥಮವಾಗಿ ಮಡಂತ್ಯಾರು ಸೆಕ್ರೇಡ್ ಹಾರ್ಟ್ ಕಾಲೇಜಿನಲ್ಲಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದರು. ಬಳಿಕ ಉತ್ತರ ಕರ್ನಾಟಕದ ಯಲ್ಲಾಪುರ ಸರಕಾರಿ ಪ್ರಥಮ ದರ್ಜೆ ಕಾಲೇಜು, ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜು, ಬೈಂದೂರು ಸರಕಾರಿ ಪ್ರಥಮ ದರ್ಜೆ ಕಾಲೇಜು, ವಿಟ್ಲ ಸರಕಾರಿ ಪ್ರಥಮ ದರ್ಜೆ ಕಾಲೇಜು, ಪುತ್ತೂರು ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಸೇವೆಯನ್ನು ನೀಡಿದ್ದಾರೆ. ಇದರಲ್ಲಿ ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜು, ವಿಟ್ಲ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಪುತ್ತೂರಿನ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿ(ಸ್ಥಾಪಕ ಪ್ರಾಂಶುಪಾಲ)ನಲ್ಲಿ ಪ್ರಾಂಶುಪಾಲರಾಗಿ ೧೨ ವರ್ಷಗಳ ಸೇವೆಯನ್ನು ಸಲ್ಲಿಸಿರುತ್ತಾರೆ.

೧೯೬೦ರಲ್ಲಿ ಬಂಟ್ವಾಳ ತಾಲೂಕಿನ ಕನ್ಯಾನ ಎಂಬಲ್ಲಿ ಜನಿಸಿದ ಪ್ರೊ|ಝೇವಿಯರ್‌ರವರು ಪಿಯುಸಿ ಹಂತದ ಶಿಕ್ಷಣವನ್ನು ಕನ್ಯಾನದ ಕರೋಪಾಡಿ ಶಾಲೆಯಲ್ಲಿ, ಪದವಿ ಶಿಕ್ಷಣವನ್ನು ಪುತ್ತೂರಿನ ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಯಲ್ಲೊಂದಾದ ಸಂತ ಫಿಲೋಮಿನಾ ಕಾಲೇಜಿನಲ್ಲಿ, ರಾಜ್ಯಶಾಸ್ತ್ರ ವಿಭಾಗದ ಸ್ನಾತಕೋತ್ತರ ಪದವಿಯನ್ನು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪೂರೈಸಿದ್ದರು. ಜೊತೆಗೆ ತನ್ನ ವೃತ್ತಿ ಜೀವನದಲ್ಲಿ ೧೫ ವರುಷ ಎನ್‌ಎಸ್‌ಎಸ್ ಅಧಿಕಾರಿಯಾಗಿ, ನ್ಯಾಷನಲ್ ಯೂತ್ ಪ್ರಾಜೆಕ್ಟ್‌ನಲ್ಲಿ, ಜೇಸಿಐನಲ್ಲಿ, ವಿವಿಧ ವಿಭಾಗಗಳಲ್ಲಿ ಸಂಪನ್ಮೂಲ ವ್ಯಕ್ತಿ ಹಾಗೂ ತರಬೇತುದಾರರಾಗಿ, ಮಂಗಳೂರು ವಿಶ್ವವಿದ್ಯಾನಿಲಯದ ರಾಜ್ಯಶಾಸ್ತ್ರ ವಿಭಾಗ ಮತ್ತು ಕೊಂಕಣಿ ವಿಭಾಗದ ನಿರ್ದೇಶಕ ಮಂಡಳಿಯಲ್ಲಿ ಓರ್ವ ಸದಸ್ಯನಾಗಿ ಪ್ರೊ|ಝೇವಿಯರ್‌ರವರು ಕರ್ತವ್ಯ ನಿರ್ವಹಿಸಿರುತ್ತಾರೆ.

ಪ್ರೊ|ಝೇವಿಯರ್‌ರವರು ಪ್ರಸ್ತುತ ಮಾಯಿದೆ ದೇವುಸ್ ಚರ್ಚ್‌ನ ಆರ್ಥಿಕ ಸಮಿತಿಯ ಸದಸ್ಯರಾಗಿ, ಅಂತರ್ರಾಷ್ಟ್ರೀಯ ಸಂಸ್ಥೆ ಕೆಟೇನಿಯನ್ ಅಸೋಸಿಯೇಶನ್ ಪುತ್ತೂರು ಸರ್ಕಲ್ ೩೮೦ ಇದರ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದು, ಮಂಗಳೂರು ವಿಶ್ವವಿದ್ಯಾನಿಲಯದ ರಾಜ್ಯಶಾಸ್ತ್ರ ಪ್ರಾಧ್ಯಾಪಕರ ಅಸೋಸಿಯೇಶನ್‌ನಲ್ಲಿ ಮಾಜಿ ಅಧ್ಯಕ್ಷರಾಗಿ, ಸ್ಥಾಪಕ ಸದಸ್ಯರಾಗಿ, ರಾಜ್ಯಮಟ್ಟದ ರಾಜ್ಯಶಾಸ್ತ್ರ ಪ್ರಾಧ್ಯಾಪಕರ ಅಸೋಸಿಯೇಶನ್ ಇದರ ಸ್ಥಾಪಕ ಸದಸ್ಯರಾಗಿ, ಪುತ್ತೂರಿನ ವೈಎಂಸಿಎ ಘಟಕದ ಸ್ಥಾಪಕ ಸದಸ್ಯರೂ, ಮಾಜಿ ಅಧ್ಯಕ್ಷರೂ, ಮಾಜಿ ಕಾರ್ಯದರ್ಶಿಯಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.

೧೯೮೬ರಲ್ಲಿ ಅಂತರ್ರಾಷ್ಟ್ರೀಯ ಸೇವಾ ಸಂಸ್ಥೆ ಎನಿಸಿದ ರೋಟರಿ ಸಂಸ್ಥೆಯಲ್ಲಿ ಯಲ್ಲಾಪುರ ಎಂಬಲ್ಲಿನ ರೋಟರಿ ಸಂಸ್ಥೆಯಲ್ಲಿ ಪಾದಾರ್ಪಣೆ ಮಾಡಿದ್ದರು. ೧೯೮೮ರಲ್ಲಿ ಬೆಸ್ಟ್ ಕ್ಲಬ್ ಕಾರ್ಯದರ್ಶಿ ಹಾಗೂ ಬೆಸ್ಟ್ ಕಾರ್ಯದರ್ಶಿ ಎಂಬ ಅವಾರ್ಡ್ ವಿನ್ನರ್ ಆಗಿಯೂ ಪ್ರೊ|ಝೇವಿಯರ್‌ರವರು ಗುರುತಿಸಿದ್ದರು. ಬಳಿಕ ೨೦೦೯-೧೦ರಲ್ಲಿ ಪುತ್ತೂರು ರೋಟರಿ ಕ್ಲಬ್‌ಗೆ ಸೇರ್ಪಡೆಗೊಂಡು ಕ್ಲಬ್‌ನ ಬುಲೆಟಿನ್ ಎಡಿಟರ್, ವಿವಿಧ ಸೇವಾ ಕ್ಲಬ್‌ಗಳಲ್ಲಿ ನಿರ್ದೇಶಕರಾಗಿ, ಸಹ ಕಾರ್ಯದರ್ಶಿಯಾಗಿ, ಕಾರ್ಯದರ್ಶಿಯಾಗಿ, ಉಪಾಧ್ಯಕ್ಷರಾಗಿಯೂ ಸೇವೆ ನೀಡಿರುತ್ತಾರೆ. ಪ್ರಸ್ತುತ ರೋಟರಿ ಕ್ಲಬ್ ಪುತ್ತೂರು ಇದರ ಅಧ್ಯಕ್ಷರಾಗಿದ್ದಾರೆ.

ನಿವೃತ್ತ ಪ್ರೊ|ಝೇವಿಯರ್ ಡಿ’ಸೋಜರವರು ಪ್ರಸ್ತುತ ಕೆಮ್ಮಿಂಜೆಯಲ್ಲಿ ನೆಲೆಸಿದ್ದು, ಪತ್ನಿ ಬಿಆರ್‌ಸಿ ಪುತ್ತೂರು ಇಲ್ಲಿ ಕ್ಷೇತ್ರ ಸಮನ್ವಯ ಸಂಪನ್ಮೂಲ ಶಿಕ್ಷಕಿಯಾಗಿ ಸೇವೆ ನೀಡುತ್ತಿರುವ ತನುಜಾ, ಅಬುದಾಬಿಯಲ್ಲಿ ಸಿವಿಲ್ ಇಂಜಿನಿಯರ್ ಆಗಿರುವ ಅಭಿಲಾಷ್ ಜೋಯೆಲ್ ಡಿ’ಸೋಜ, ಮಂಗಳೂರಿನ ಸರೋಶ್ ಇನ್ಸ್ಟಿಟ್ಯೂಟ್ ಆಫ್ ಹೊಟೇಲ್ ಅಡ್ಮಿನಿಸ್ಟ್ರೇಶನ್‌ನಲ್ಲಿ ಬಿಎಚ್‌ಎಂಎಸ್ ಪದವಿ ಪಡೆದಿರುವ ಅಖಿಲ್ ರೋಯ್ ಡಿ’ಸೋಜರವರನ್ನು ಹೊಂದಿರುತ್ತಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.