ಕೊರೋನದಿಂದ ಮುಕ್ತಿ ಕೊಡುವ… ವರವ ಕೊಡೆ ವರಮಹಾಲಕ್ಷ್ಮೀ – ಇದು ಮಾತೆಯರ ಹಬ್ಬ

Puttur_Advt_NewsUnder_1
Puttur_Advt_NewsUnder_1

@ ಸಿಶೇ ಕಜೆಮಾರ್

ನಂಬಿಕೆ ಮತ್ತು ವಿಶ್ವಾಸ ಈ ಎರಡು ಶಬ್ದಗಳ ಮೇಲೆ ನಮ್ಮ ಬದುಕು ನಿಂತಿದೆ ಎಂದರೆ ತಪ್ಪಾಲಾರದು. ದೇವರ ಮೇಲಿನ ನಂಬಿಕೆ ಮತ್ತು ಹಬ್ಬಗಳ ಆಚರಣೆಯ ಮೇಲಿರುವ ಭಕ್ತಿ ತುಂಬಿದ ವಿಶ್ವಾಸ ನಮ್ಮನ್ನು ಆಧ್ಯಾತ್ಮಿಕತೆಯೆಡೆಗೆ ಕೊಂಡೊಯ್ಯುತ್ತದೆ ಎನ್ನುತ್ತಾರೆ ದಾರ್ಶನಿಕರು. ಯಾವುದೇ ಹಬ್ಬವನ್ನು ಆಚರಿಸುವ ಮುನ್ನ ನಮ್ಮ ಹೃದಯದಲ್ಲಿ ಭಕ್ತಿ ಇರಬೇಕು.ಭಕ್ತಿ ಮತ್ತು ನಂಬಿಕೆ ಇದ್ದಾಗ ಭಗವಂತನ ಅನುಗ್ರಹ ಪ್ರಾಪ್ತಿಯಾಗುತ್ತದೆ. ಹೌದು…ವರ ಮಹಾಲಕ್ಷ್ಮೀ ವೃತ ಪೂಜಾ ಹಬ್ಬವೂ ಮುಖ್ಯವಾಗಿ ಮಾತೆಯರ ಹಬ್ಬವೆಂದೇ ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ಭಕ್ತಿಯಿಂದ ವರಮಹಾಲಕ್ಷ್ಮೀಯ ವೃತವನ್ನು ಯಾರು ಮಾಡುತ್ತಾರೋ ಅವರ ಜೀವನದಲ್ಲಿ ಸುಖ, ಶಾಂತಿ, ಸಂಪತ್ತನ್ನು ಶ್ರೀ ಲಕ್ಷ್ಮೀಯು ಕರುಣಿಸುತ್ತಾಳೆ ಎಂಬ ನಂಬಿಕೆ ಅನಾಧಿ ಕಾಲದಿಂದಲೂ ನಡೆದುಕೊಂಡು ಬಂದಿದೆ. ಅಷ್ಠ ಲಕ್ಷ್ಮೀಯರಲ್ಲಿ ಒರ್ವಳಾದ ಶ್ರೀ ವರಮಹಾಲಕ್ಷ್ಮೀ ದೇವಿಯು ಎಲ್ಲಾ ರೀತಿಯ ವರಗಳಿಗೂ ಸರ್ವಶ್ರೇಷ್ಠಳಾಗಿದ್ದಾಳೆ. ಶುಭ ಶ್ರಾವಣ ಮಾಸದ ಎರಡನೇ ಶುಕ್ರವಾರದಂದು ವರ ಮಹಾಲಕ್ಷ್ಮೀ ಹಬ್ಬವನ್ನು ಆಚರಿಸಲಾಗುತ್ತದೆ. ದಕ್ಷಿಣ ಭಾರತದ ಪ್ರಮುಖವಾದ ಹಬ್ಬಗಳಲ್ಲಿ ವರ ಮಹಾಲಕ್ಷ್ಮೀ ಹಬ್ಬವೂ ಒಂದಾಗಿದೆ. ಸಕಲ ಐಶ್ವರ್‍ಯವನ್ನು ಕರುಣಿಸುವ ಮಹಾಲಕ್ಷ್ಮೀಗೆ ಈ ದಿನ ಮನೆ ಮನೆಯಲ್ಲೂ ಸಂಭ್ರಮದ ಪೂಜೆ ನಡೆಯುತ್ತದೆ.ಸಮೃದ್ಧಿ, ಭಾಗ್ಯ ಸಂಪತ್ತನ್ನು ದಯಪಾಲಿಸುವ ಭಾಗ್ಯದಾತೆಗೆ ಎಲ್ಲೆಲ್ಲೂ ಪೂಜೆ, ಪುನಸ್ಕಾರದ ಸಡಗರ. ಕೊರೋನ ಮಹಾಮಾರಿಯ ಈ ಸಂಕಷ್ಟದ ಸಂದರ್ಭದಲ್ಲಿ ನಾವೆಲ್ಲರೂ ಪ್ರಾರ್ಥನೆ ಮಾಡಬೇಕಾಗಿದೆ. ದೇಶಕ್ಕಂಟಿದ ಕೊರೋನ ರೋಗವನ್ನು ಹೋಗಲಾಡಿಸು, ಸಮಸ್ತ ಜನತೆಗೆ ಸುಖ,ಶಾಂತಿ,ಆರೋಗ್ಯವನ್ನು ದಯಪಾಲಿಸು ಎಂದು ಬೇಡಿಕೊಳ್ಳುವ…

ಆಚರಣೆ ಹೀಗೆ ನಡೆಯುತ್ತೆ…
ಈ ಹಬ್ಬದ ವಿಶೇಷತೆಯೇ ವೃತ ಕೈಗೊಳ್ಳುವುದು. ಮಾತೆಯರು ಈ ದಿನ ಸಂಜೆಯವರೇಗೆ ಉಪವಾಸ ಇರುತ್ತಾರೆ. ಮನೆಯನ್ನು ತಳಿರು ತೋರಣಗಳಿಂದ ಅಲಂಕಾರ ಮಾಡುವ ಮೂಲಕ ಲಕ್ಷ್ಮೀಯನ್ನು ಭಕ್ತಿಯಿಂದ ಸ್ವಾಗತ ಮಾಡಲಾಗುತ್ತದೆ. ರಂಗೋಲಿ, ಹಸಿರು ತಳಿರು ತೋರಣ, ೫ ರೀತಿಯ ಹಣ್ಣುಗಳು, ೧೬ ಜಾತಿಯ ಪತ್ರೆಗಳು ಹಾಗೂ ಲಕ್ಷ್ಮೀಗೆ ಪ್ರಿಯವಾಗುವ ಕಮಲದ ಪುಷ್ಪ, ಸೇವಂತಿಗೆ, ಮಲ್ಲಿಗೆಯನ್ನು ಅರ್ಪಿಸೋದು ಇಲ್ಲಿ ಮುಖ್ಯ. ವೃತ ಮಾಡುವವರು ಮೊದಲಿಗೆ ಸಂಕಲ್ಪ ಮಾಡಿ ದೇವಿಯನ್ನು ಕಲಶ ಮತ್ತು ವಿಗ್ರಹಗಳಲ್ಲಿ ಅವಾಹನೆ ಮಾಡಿ ಪೂಜಿಸುವರು. ಕಲಶದಲ್ಲಿ ಅಕ್ಕಿ ತುಂಬಿಸಿ, ಖರ್ಜೂರ, ಗೋಡಂಬಿ, ದ್ರಾಕ್ಷಿ, ಬಾದಾಮಿ, ಕಲ್ಲುಸಕ್ಕರೆ ಮತ್ತು ಕೆಲವು ಹಣ್ಣುಹಂಪಗಳನ್ನು ಇರಿಸಲಾಗುವುದು. ಈ ಕಲಶಕ್ಕೆ ಲಕ್ಷ್ಮೀ ಕಲಶ ಎನ್ನುತ್ತಾರೆ. ಹೀಗೆ ತಯಾರಿಸಿದ ಕಲಶದ ಮೇಲೆ ಚಿನ್ನ ಅಥವಾ ಬೆಳ್ಳಿಯಿಂದ ತಯಾರಿಸಿದ ದೇವಿಯ ಮುಖವಾಡವನ್ನು ಇಡಲಾಗುತ್ತದೆ. ಒಂದು ವೇಳೆ ಇದಿಲ್ಲದಿದ್ದರೆ ತೆಂಗಿನಕಾಯಿಗೆ ಅರಿಶಿನದಿಂದ ಮೂಗು, ಕಣ್ಣು,ಕಿವಿ ಮಾಡಿ ಒಡವೆಗಳನ್ನು ಏರಿಸಿ, ಸೀರೆ ಉಡಿಸಿ ಅಲಂಕಾರ ಮಾಡುತ್ತಾರೆ.

ದಾರಗಳಿಗೆ ಪೂಜೆ ನಡೆಯುತ್ತದೆ…
ವರ ಮಹಾಲಕ್ಷ್ಮೀ ಪೂಜೆಯಲ್ಲಿ ಮುಖ್ಯವಾಗಿ ದಾರಗಳಿಗೆ ಪೂಜೆಯನ್ನು ಸಲ್ಲಿಸುತ್ತಾರೆ.ಇಂತಹ ದಾರಗಳನ್ನು `ದೋರ’ ಎಂದು ಕರೆಯುತ್ತಾರೆ. ಹೊಸತಾಗಿ ತಯಾರಿಸಿದ ೧೨ ದಾರಗಳಿಗೆ ೧೩ ಗಂಟುಗಳನ್ನು ಹಾಕಿ, ಅರಿಶಿನ ಹಚ್ಚಿ ದೇವಿಯ ಪಕ್ಕದಲ್ಲಿ ಇಟ್ಟು ಆರಾಧಿಸಲಾಗುತ್ತದೆ. ಈ ದಾರಗಳಿಗೆ ಅರಿಶಿನ, ಕುಂಕುಮ, ಹೂವು ಪತ್ರೆಗಳಿಂದ ಪೂಜಿಸಿ, ನೈವೇದ್ಯ ಮಾಡಲಾಗುತ್ತದೆ. ದ್ವಾದಶ ನಾಮಾವಳಿ ಎಂದು ಹನ್ನೆರಡು ಹೆಸರುಗಳನ್ನು ಉಚ್ಛರಿಸಲಾಗುತ್ತದೆ. ಅವುಗಳೆಂದರೆ ರಮೆ, ಸರ್ವಮಂಗಳೆ, ಕಮಲವಾಸಿನೆ, ಮನ್ಮಥಜನನಿ, ವಿಷ್ಣುವಲ್ಲಭೆ, ಕ್ಷೀರಾಭಿಕನ್ಯಕೆ, ಲೋಕಮಾತೆ, ಭಾರ್ಗವಿ, ಪದ್ಮಹಸ್ತೆ, ಪುಷ್ಪೆ ತುಷ್ಪೆ ಮತ್ತು ವರಲಕ್ಷ್ಮೀ. ಆ ಬಳಿಕ ಸಜ್ಜಪ್ಪವನ್ನು ಅರ್ಪಿಸಲಾಗುತ್ತದೆ. ದೇವಿಯ ಮೂರ್ತಿಗೂ ಇದೇ ರೀತಿಯ ಪೂಜೆ ನಡೆಯುತ್ತದೆ. ಅರಿಶಿನ, ಕುಂಕುಮ, ಹೂವುಪತ್ರೆ ಮತ್ತು ಅಕ್ಷತೆಯಿಂದ ಪೂಜೆಯನ್ನು ಸಲ್ಲಿಸಿದ ಬಳಿಕ ಸ್ತ್ರೀಯರು ಆ ದಾರಗಳಿಗೆ ಹೂವನ್ನು ಕಟ್ಟಿ, ಅಲ್ಲಿರುವ ಹಿರಿಯರಿಂದ ಕಂಕಣದಂತೆ ಬಲ ಕೈಗೆ ಕಟ್ಟಿಸಿಕೊಳ್ಳುವರು.ಹೀಗೆ ಕಟ್ಟಿಸಿಕೊಂಡ ನಂತರ ಹಿರಿಯರಿಗೆ ನಮಸ್ಕರಿಸಿ ದಾನವನ್ನು ನೀಡುವ ಪದ್ಧತಿಯೂ ಇದೆ. ಒಟ್ಟಿನಲ್ಲಿ ವರಮಹಾಲಕ್ಷ್ಮೀ ವೃತ ಪೂಜೆ ಮಾತೆಯರು ಮಾಡುವ ಪೂಜೆಯಾಗಿದೆ. ಮದುವೆ ಆಗದವರಿಗೆ ಒಳ್ಳೆಯ ವರ ಸಿಗಲಿ, ಗೃಹಿಣಿಯರಿಗೆ ಭಾಗ್ಯವೃದ್ಧಿಯಾಗಲಿ ಎಂಬುದೇ ನಮ್ಮೆಲ್ಲರ ಹಾರೈಕೆ.

ಇದೊಂದು ಶ್ರೇಷ್ಠ ವೃತವಾಗಿದೆ…
ಈ ಹಬ್ಬದ ಹಿಂದೆಯೂ ಒಂದು ಕಥೆ ಇದೆ. ಒಂದು ದಿನ ಪಾರ್ವತಿಯು ಪರಮೇಶ್ವರನಲ್ಲಿ ಕೇಳುತ್ತಾಳೆ. ಪ್ರಪಂಚದಲ್ಲಿ ಸಕಲ ಸುಖಗಳನ್ನು ಕೊಟ್ಟು ಭಕ್ತರ ಕಷ್ಠವನ್ನು ಪರಿಹರಿಸಿ ಸೌಭಾಗ್ಯ ಸಂತೋಷವನ್ನು ಉಂಟುಮಾಡುವ ವೃತ ಯಾವುದು? ಅಂತಹ ವೃತ ಇದ್ದರೆ ನನಗೆ ಹೇಳು ಎನ್ನುತ್ತಾಳೆ. ಆಗ ಪರಮೇಶ್ವರ ತನ್ನ ಪತ್ನಿ ಪಾರ್ವತಿಗೆ ಅಂತಹ ವೃತವೊಂದಿದೆ ಅದುವೇ ` ವರ ಮಹಾಲಕ್ಷ್ಮೀ ವೃತ’ ಈ ವೃತವನ್ನು ಯಾರು ಭಕ್ತಿಯಿಂದ ಮಾಡುತ್ತಾರೋ ಅವರಿಗೆ ಎಲ್ಲವೂ ಒಳ್ಳೆಯದಾಗುತ್ತದೆ ಎನ್ನುತ್ತಾನೆ. ಇದಕ್ಕೆ ಸಂಬಂಧಿಸಿದಂತೆ ಕುಂಡಿನನಗರದಲ್ಲಿದ್ದ ಚಾರುಮತಿ ಎಂಬ ಸ್ತ್ರೀಯ ಕಥೆ ಹೇಳುತ್ತಾನೆ. ಚಾರುಮತಿಯು ವರ ಮಹಾಲಕ್ಷ್ಮೀ ವೃತ ಮಾಡುವ ಮೂಲಕ ಸುಖ, ಸಂಪತ್ತನ್ನು ಪಡೆಯುವ ಬಗೆಯನ್ನು ಪರಮೇಶ್ವರ ವಿವರಿಸುತ್ತಾನೆ. ಮಹಾಲಕ್ಷ್ಮೀ ಅಧಿದೇವತೆಯಾಗಿರುವ ವರ ಮಹಾಲಕ್ಷ್ಮೀ ವೃತವನ್ನು ಭೂಲೋಕದಲ್ಲಿ ಯಾರು ಭಕ್ತಿಯಿಂದ ಆಚರಿಸುತ್ತಾರೋ ಅಂಥವರಿಗೆ ಅಖಂಡವಾದ ಐಶ್ವರ್ಯ, ವರಲಕ್ಷ್ಮೀಯ ಪ್ರಸಾದದಿಂದ ಭೋಗಭಾಗ್ಯಗಳು ಪ್ರಾಪ್ತಿಯಾಗುತ್ತದೆ ಎನ್ನುತ್ತಾನೆ. ಆದ್ದರಿಂದಲೇ ಈ ವೃತ ಅತ್ಯಂತ ಶ್ರೇಷ್ಠ ವೃತವಾಗಿದೆ. ದೀರ್ಘ ಮಾಂಗಲ್ಯ ಭಾಗ್ಯವನ್ನು ಮತ್ತು ಕುಟುಂಬಕ್ಕಾಗಿ ಸುಖ, ಸಮೃದ್ಧಿ, ಸಂಪತ್ತನ್ನು ಕೋರುವ ಸುಮಂಗಲೆಯರು ಪುರೋಹಿತರ ಅಗತ್ಯವಿಲ್ಲದೆ ಮಾಡಬಹುದಾದ ವೃತ ಇದಾಗಿದೆ.ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸಂಪತ್ತಿನ ಅಧಿಪತಿಯಾದ ಶುಕ್ರ ಗ್ರಹದ ವಾರದಲ್ಲಿಯೇ ಈ ವೃತಾಚರಣೆ ನಡೆಯುತ್ತಿರುವುದು ಅತ್ಯಂತ ಶ್ರೇಷ್ಠವಾಗಿದೆ. ಈ ವೃತವನ್ನು ಮದುವೆಯಾದವರು ಮಾಡಬಹುದು, ಮದುವೆಯಾಗದವರು ಮಾಡಬಹುದಾಗಿದೆ. ಒಟ್ಟಿನಲ್ಲಿ ಮಾತೆಯರೆಲ್ಲರೂ ಒಟ್ಟು ಸೇರಿ ಸಂಭ್ರಮಿಸುವ ಹಬ್ಬ ಇದಾಗಿದೆ. ಆದ್ದರಿಂದಲೇ ಇದು `ಮಾತೆಯರ ಹಬ್ಬವಾಗಿದೆ.’

ಇದು ಮಾತೆಯರ ಹಬ್ಬ
ನಮಸ್ತೇ ಮಹಾಮಾಯೆ…ಶ್ರೀ ಪೀಠೆ ಸುರಪೂಜಿತೆ| ಶಂಖಚಕ್ರಗದಾಹಸ್ತೇ ಮಹಾಲಕ್ಷ್ಮೀ ನಮೋಸ್ತುತೇ|| ಹೇ ಮಹಾಮಾಯೆ…ಶ್ರೀ ಪೀಠದಲ್ಲಿ ದೇವತೆಗಳಿಂದಲೂ ಪೂಜಿತಳಾದವಳೇ, ಶಂಖ ಚಕ್ರ ಗದೆಗಳನ್ನು ಕೈಗಳಲ್ಲಿ ಧರಿಸಿದವಳೇ, ಹೇ ಮಹಾಲಕ್ಷ್ಮೀಯೇ ಎಂದು ಮಾತೆಯರು ಭಕ್ತಿಯಿಂದ ಹಾಡಿ ಹೊಗಳುತ್ತಾ ಪೂಜೆ, ವೃತಗಳನ್ನು ಮಾಡುತ್ತಾರೆ. ಶ್ರೀ ಮಹಾವಿಷ್ಣುವಿನ ಪತ್ನಿಯಾದ ವರ ಮಹಾಲಕ್ಷ್ಮೀ ದೇವಿಯನ್ನು ಯಾರು ಭಕ್ತಿಯಿಂದ ಪೂಜಿಸುತ್ತಾರೋ ಅವರಿಗೆ ಐಶ್ವರ್‍ಯಭಾಗ್ಯ, ಆರೋಗ್ಯ ಭಾಗ್ಯ ಲಭಿಸುತ್ತದೆ ಎನ್ನುವ ನಂಬಿಕೆ ಇದೆ. ಇದಲ್ಲದೆ ಮುತೈದೆಯರು ತಮ್ಮ ಮನೆಯಲ್ಲಿ ಸುಖ, ಶಾಂತಿ ಸಂಪತ್ತನ್ನು ಕರುಣಿಸಲು ಶ್ರೀ ದೇವಿಯನ್ನು ಪೂಜೆ ಮಾಡಿದರೆ, ಮದುವೆಯಾಗದ ಹುಡುಗಿಯರು ನನಗೆ ಒಳ್ಳೆಯ ಗಂಡ (ವರ)ನನ್ನು ದಯಪಾಲಿಸುವ ತಾಯೇ ಎಂದು ಕೈ ಮುಗಿಯುತ್ತಾರೆ. ಆಂಧ್ರಪ್ರದೇಶ, ತಮಿಳುನಾಡು, ಕರ್ನಾಟಕ ಮತ್ತು ಮಹಾರಾಷ್ಟ್ರಗಳಲ್ಲಿ ಈ ಹಬ್ಬವನ್ನು ಮಾತೆಯರು ಭಕ್ತಿಯಿಂದ ಆಚರಣೆ ಮಾಡುತ್ತಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.