ಪುತ್ತೂರು: ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ವಂ|ಡಾ|ಪೀಟರ್ ಪಾವ್ಲ್ ಸಲ್ದಾನ್ಹಾರವರ ಆದೇಶದಂತೆ ಪುತ್ತೂರು ನಗರದ ಹೃದಯಭಾಗದಲ್ಲಿರುವ ಸುಮಾರು 190 ವರ್ಷಗಳ ಇತಿಹಾಸವಿರುವ ಮಾಯಿದೆ ದೇವುಸ್ ಚರ್ಚ್ಗೆ 27ನೇ ನೂತನ ಪ್ರಧಾನ ಧರ್ಮಗುರುಗಳಾಗಿ ಅಮ್ಮೆಂಬಳ್ ಚರ್ಚ್ನಲ್ಲಿ ಧರ್ಮಗುರು ಸೇವೆ ನೀಡುತ್ತಿದ್ದ ವಂ|ಜೆರೋಮ್ ಲಾರೆನ್ಸ್ ಮಸ್ಕರೇನ್ಹಸ್ರವರು ವರ್ಗಾವಣೆಗೊಂಡು ಜು.31 ರಂದು ಸಂಜೆ ಆಗಮಿಸಿದ್ದಾರೆ.
ಕಳೆದ ಆರು ವರ್ಷಗಳಿಂದ ಚರ್ಚ್ನಲ್ಲಿ ಪ್ರಧಾನ ಧರ್ಮಗುರುಗಳಾಗಿ ಸೇವೆ ಸಲ್ಲಿಸಿದ್ದ ವಂ|ಆಲ್ಫ್ರೆಡ್ ಜಾನ್ ಪಿಂಟೋರವರು ಬಿಷಪ್ರವರ ಆದೇಶದಂತೆ ಮಂಗಳೂರಿನ ರೊಜಾರಿಯೋ ಕೆಥೆದ್ರಲ್ ಚರ್ಚ್ಗೆ ಪ್ರಧಾನ ಧರ್ಮಗುರುಗಳಾಗಿ ಹಾಗೂ ರೆಕ್ಟರ್ ಆಗಿ ಆ.1 ರಂದು ವರ್ಗಾವಣೆಗೊಳ್ಳಲಿದ್ದಾರೆ. ವಂ|ಆಲ್ಫ್ರೆಡ್ರವರು 1983ರಲ್ಲಿ ಮಾಯಿದೆ ದೇವುಸ್ ಚರ್ಚ್ನಲ್ಲಿ ಸಹಾಯಕ ಧರ್ಮಗುರುಗಳಾಗಿ ಎರಡು ವರ್ಷ ಸೇವೆ ನೀಡಿರುವುದು ವಿಶೇಷತೆಯಾಗಿದೆ.
ಅಭೂತಪೂರ್ವ ಸ್ವಾಗತ:
ಸಂಜೆ ಐದು ಗಂಟೆಗೆ ಅಮ್ಮೆಂಬಳ್ ಚರ್ಚ್ನಿಂದ ಆಗಮಿಸಿದ ಧರ್ಮಗುರು ವಂ|ಲಾರೆನ್ಸ್ ಮಸ್ಕರೇನ್ಹಸ್ರವರನ್ನು ಚರ್ಚ್ನ ನಿರ್ಗಮಿತ ಪ್ರಧಾನ ಧರ್ಮಗುರು ವಂ|ಆಲ್ಫ್ರೆಡ್ ಜಾನ್ ಪಿಂಟೋ, ಸಹಾಯಕ ಧರ್ಮಗುರು ವಂ|ಲ್ಯಾರಿ ಪಿಂಟೋ, ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಮೌರಿಸ್ ಮಸ್ಕರೇನ್ಹಸ್, ಕಾರ್ಯದರ್ಶಿ ಫೆಬಿಯನ್ ಗೋವಿಯಸ್, ಆರ್ಥಿಕ ಸಮಿತಿಯ ಸದಸ್ಯರಾದ ಜೆ.ಪಿ ರೊಡ್ರಿಗಸ್, ವಿ.ಜೆ ಫೆರ್ನಾಂಡೀಸ್, ಪ್ರೊ|ಝೇವಿಯರ್ ಡಿ’ಸೋಜ, ಜೆರೋಮಿಯಸ್ ಪಾಸ್, ವಿನ್ಸೆಂಟ್ ತಾವ್ರೋ, ಓಸ್ವಾಲ್ಡ್ ಲೋಬೋ, ವಿವಿಧ ಸಮಿತಿಗಳ ಸಂಚಾಲಕ ಲ್ಯಾನ್ಸಿ ಮಸ್ಕರೇನ್ಹಸ್, ಫಿಲೋಮಿನಾ ಕಾಲೇಜು ಕ್ಯಾಂಪಸ್ಸಿನಲ್ಲಿನ ಧರ್ಮಗುರುಗಳಾದ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವಂ|ವಿಜಯ್ ಲೋಬೋ, ಫಿಲೋಮಿನಾ ಪದವಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ವಂ|ಆಂಟನಿ ಪ್ರಕಾಶ್ ಮೊಂತೇರೋ, ಹಾಸ್ಟೆಲ್ ವಾರ್ಡನ್ ವಂ|ಸುನಿಲ್ ಜಾರ್ಜ್ ಡಿ’ಸೋಜ, ಫಿಲೋಮಿನಾ ಕಾಲೇಜಿನ ಪ್ರಾಂಶುಪಾಲ ಪ್ರೊ|ಲಿಯೋ ನೊರೋನ್ಹಾ, ಚರ್ಚ್ನ 19 ವಾಳೆಯ ಗುರಿಕಾರರು ಹಾಗೂ ಪ್ರತಿನಿಧಿಗಳು, ಧರ್ಮಭಗಿನಿಯರು, ವಿವಿಧ ಸಂಘ-ಸಂಸ್ಥೆಗಳ ಅಧ್ಯಕ್ಷರು ಹಾಗೂ ಮುಖ್ಯಸ್ಥರು ಮತ್ತು ಭಕ್ತ ಸಮೂಹ ಹೂಗುಚ್ಛಗಳನ್ನು ನೀಡುವ ಮೂಲಕ ಅಭೂತಪೂರ್ವ ಸ್ವಾಗತ ಕೋರಲಾಯಿತು.
ವಂ|ಲಾರೆನ್ಸ್ ಮಸ್ಕರೇನ್ಹಸ್ರವರ ಪರಿಚಯ:
ನೂತನ ಪ್ರಧಾನ ಧರ್ಮಗುರು ವಂ|ಲಾರೆನ್ಸ್ ಮಸ್ಕರೇನ್ಹಸ್ರವರು ಸಂಪಿಗೆ ನಿವಾಸಿ ಸಿಲ್ವೆಸ್ತರ್ ಮಸ್ಕರೇನ್ಹಸ್ ಹಾಗೂ ಬೆನೆಡಿಕ್ಟ ಪಿಂಟೋರವರ ಪುತ್ರರಾಗಿ1969, ಮೇ 11ರಂದು ಜನಿಸಿದರು.1997, ಏಪ್ರಿಲ್ 17ರಂದು ಅಂದಿನ ಧರ್ಮಾಧ್ಯಕ್ಷ ವಂ|ಡಾ|ಅಲೋಶಿಯಸ್ ಪಾವ್ಲ್ ಡಿ’ಸೋಜರವರಿಂದ ಧರ್ಮಗುರು ದೀಕ್ಷೆಯನ್ನು ವಂ|ಲಾರೆನ್ಸ್ ಮಸ್ಕರೇನ್ಹಸ್ರವರು ಪಡೆದಿರುತ್ತಾರೆ. ಬಳಿಕ ಸಹಾಯಕ ಧರ್ಮಗುರುಗಳಾಗಿ ಕಾಸ್ಸಿಯಾ ಚರ್ಚ್(1997-99), ಮೂಡುಬೆಳ್ಳೆ ಚರ್ಚ್(1999-2001, ಬೆಳ್ಮಣ್ ಚರ್ಚ್(2001-2002), ಪ್ರಧಾನ ಧರ್ಮಗುಗಳಾಗಿ ಅಲ್ಲಿಪಾದೆ ಚರ್ಚ್(2002-10), ಮಡಂತ್ಯಾರು ಸೆಕ್ರೇಡ್ ಹಾರ್ಟ್ ಚರ್ಚ್(2010-17), ಅಮ್ಮೆಂಬಳ್ ಸಂತ ತೋಮಸ್ ಚರ್ಚ್(2017-20)ರಲ್ಲಿ ಧಾರ್ಮಿಕ ಸೇವೆಯನ್ನು ನೀಡಿ ಇದೀಗ ಪುತ್ತೂರು ಮಾಯಿದೆ ದೇವುಸ್ ಚರ್ಚ್ಗೆ ಆಗಮಿಸಿರುತ್ತಾರೆ.
ಧರ್ಮಗುರು ವಂ|ಆಲ್ಫ್ರೆಡ್ರವರಿಂದ ನಿರ್ಗಮನ ಬಲಿಪೂಜೆ:
ಕಳೆದ ಆರು ವರ್ಷಗಳಿಂದ ಸೇವೆ ಸಲ್ಲಿಸಿ ನಿರ್ಗಮಿಸುತ್ತಿರುವ ವಂ|ಆಲ್ಫ್ರೆಡ್ ಜಾನ್ ಪಿಂಟೋರವರು ಮಾಯಿದೆ ದೇವುಸ್ ಚರ್ಚ್ನಲ್ಲಿ ನಿರ್ಗಮನದ ಬಲಿಪೂಜೆಯನ್ನು ಭಕ್ತರೊಂದಿಗೆ ಆಚರಿಸಿದರು. ನಿರ್ಗಮನದ ಪ್ರಯುಕ್ತ ಮಾತನಾಡಿದ ವಂ|ಆಲ್ಫ್ರೆಡ್ರವರು, ಕಳೆದ ಆರು ವರ್ಷಗಳಿಂದ ಮೇರಿ ಮಾತೆಗೆ ಸಮರ್ಪಿಸಿದ ಈ ಮಾಯಿದೆ ದೇವುಸ್ ಚರ್ಚ್ನಲ್ಲಿ ಸೇವೆಗೈದ ಆತ್ಮತೃಪ್ತಿ ನನಗಿದೆ. ಭಕ್ತರ ಸೇವೆ ಮಾಡುವ ಅವಕಾಶವನ್ನು ದೇವರು ಒದಗಿಸಿದ್ದರಿಂದ ಪುತ್ತೂರು ಚರ್ಚ್ನಲ್ಲಿನ ಒಳ್ಳೆಯ ಹೃದಯವಂತ ಹಾಗೂ ಉತ್ತಮ ಮನಸ್ಸುಳ್ಳ ಭಕ್ತರೊಂದಿಗೆ ಸೇವೆ ಮಾಡುವ ಭಾಗ್ಯ ಒಲಿಯಿತು. ಕಳೆದ ಆರು ವರ್ಷಗಳಲ್ಲಿ ನನ್ನೊಂದಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ನಾನು ಕೃತಜ್ಞನಾಗಿದ್ದೇನೆ. ಮುಂದಿನ ದಿನಗಳಲ್ಲಿ ಈಗಷ್ಟೇ ಆಗಮಿಸಿದ ನೂತನ ಪ್ರಧಾನ ಧರ್ಮಗುರು ವಂ|ಲಾರೆನ್ಸ್ರವರ ಮುಂದಾಳತ್ವದಲ್ಲಿ ಚರ್ಚ್ ಅಭಿವೃದ್ಧಿ ಪಥದಲ್ಲಿ ಸಾಗಲಿ ಎಂಬುದೇ ನನ್ನ ಹಾರೈಕೆಯಾಗಿದೆ ಎಂದರು.
ವಂ|ಆಲ್ಫ್ರೆಡ್ರವರಿಗೆ ಬೀಳ್ಕೊಡುಗೆ:
ದಿವ್ಯ ಬಲಿಪೂಜೆ ಬಳಿಕ ಮಂಗಳೂರಿನ ರೊಜಾರಿಯೋ ಚರ್ಚ್ಗೆ ವರ್ಗಾವಣೆಗೊಂಡು ನಿರ್ಗಮಿಸುತ್ತಿರುವ ವಂ|ಆಲ್ಫ್ರೆಡ್ ಜಾನ್ ಪಿಂಟೋರವರನ್ನು ಬೀಳ್ಕೊಡುವ ಕಾರ್ಯಕ್ರಮವನ್ನು ಚರ್ಚ್ನಲ್ಲಿ ಏರ್ಪಡಿಸಲಾಗಿತ್ತು. ಸಹಾಯಕ ಧರ್ಮಗುರು ವಂ|ಲ್ಯಾರಿ ಪಿಂಟೋ, ಉಪಾಧ್ಯಕ್ಷ ಮೌರಿಸ್ ಮಸ್ಕರೇನ್ಹಸ್ರವರ ಸಹಿತ ಧರ್ಮಗುರುಗಳು ಹಾಗೂ ಭಕ್ತ ಸಮೂಹ ವಂ|ಆಲ್ಫ್ರೆಡ್ರವರಿಗೆ ಹೂಹಾರಗಳನ್ನು ನೀಡಿ ಅಭಿನಂದಿಸಲಾಯಿತು. ಬಳಿಕ ಮಾತನಾಡಿದ ಪಾಲನಾ ಮಂಡಳಿಯ ಉಪಾಧ್ಯಕ್ಷ ಮೌರಿಸ್ ಮೌಸ್ಕರೇನ್ಹಸ್ರವರು, ಶಿಕ್ಷಣ ಶಿಲ್ಫಿ ಮೊ|ಆಂಟನಿ ಪತ್ರಾವೋರವರ ದೂರದೃಷ್ಟಿತ್ವದ ಕನಸಿನ ಫಲವಾಗಿ ಅಂದು ಪುತ್ತೂರಿನಲ್ಲಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ಶಿಕ್ಷಣದ ಕ್ರಾಂತಿಯಾಗಿದ್ದರಿಂದಲೇ ಇಂದಿಗೂ ಫಾ|ಪತ್ರಾವೋರವರ ಹೆಸರು ಅಮರವಾಗಿಯೇ ಉಳಿದಿದೆ. ಪತ್ರಾವೋರವರ ಕನಸಿನ ಫಲವಾಗಿ ಇಂದು ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ಕೆ.ಜಿ ಕ್ಲಾಸಿನಿಂದ ಹಿಡಿದು ಪಿ.ಜಿ ಕ್ಲಾಸಿನ ವರೆಗೆ ಶಿಕ್ಷಣದ ವ್ಯವಸ್ಥೆಗಳಿವೆ ಎಂದ ಅವರು ನಿರ್ಗಮಿತ ಧರ್ಮಗುರು ವಂ|ಆಲ್ಫ್ರೆಡ್ರವರು ಕಳೆದ ಆರು ವರ್ಷಗಳಿಂದ ಚರ್ಚ್ ಅಭಿವೃದ್ಧಿಯಲ್ಲಿ ಕೈಜೋಡಿಸಿದ್ದಾರೆ. ತನ್ನ ಹಸನ್ಮುಖಿ ಸೇವೆಯೊಂದಿಗೆ ಎಲ್ಲರ ಪ್ರೀತಿಗೆ ಪಾತ್ರರಾಗಿ ಇದೀಗ ಮುಂದಿನ ಸೇವೆಗೆ ಬಿಷಪರ ಆದೇಶದಂತೆ ತೆರಳುವವರಿದ್ದು, ಅವರಿಗೆ ಅವರ ಮುಂದಿನ ಧಾರ್ಮಿಕ ಸೇವೆಗೆ ಭಗವಂತನು ಹರಸಲಿ ಎಂದು ಚರ್ಚ್ನ ಭಕ್ತರ ಪರವಾಗಿ ಹಾರೈಸುತ್ತೇನೆ ಎಂದರು. ಈ ಸಂದರ್ಭದಲ್ಲಿ ಚರ್ಚ್ ಹಾಗೂ ಚರ್ಚ್ ಪಾಲನಾ ಮಂಡಳಿ ವತಿಯಿಂದ ನಿರ್ಗಮಿತ ವಂ|ಆಲ್ಫ್ರೆಡ್ರವರಿಗೆ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಬೀಳ್ಕೊಡುಗೆ ಸನ್ಮಾನ ಮಾಡಲಾಯಿತು.
ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ಮೌರಿಸ್ ಮಸ್ಕರೇನ್ಹಸ್ ಸ್ವಾಗತಿಸಿ, ಕಾರ್ಯದರ್ಶಿ ಫೆಬಿಯನ್ ಗೋವಿಯಸ್ ವಂದಿಸಿದರು. ಸಂತ ಫಿಲೋಮಿನಾ ಕಾಲೇಜಿನ ಹಿಂದಿ ವಿಭಾಗದ ಉಪನ್ಯಾಸಕಿ ಡಾ|ಡಿಂಪಲ್ ಜೆನಿಫರ್ ಫೆರ್ನಾಂಡೀಸ್ ಕಾರ್ಯಕ್ರಮ ನಿರೂಪಿಸಿದರು. ಮಂಜೊಟ್ಟಿ ಚರ್ಚ್ನ ಧರ್ಮಗುರು ವಂ|ಪ್ರವೀಣ್ ಡಿ’ಸೋಜ, ನೂತನ ಧರ್ಮಗುರು ವಂ|ಲಾರೆನ್ಸ್ ಮಸ್ಕರೇನ್ಹಸ್ರವರು ಪುತ್ತೂರಿಗೆ ಆಗಮಿಸುವ ಸಂದರ್ಭ ಅಮ್ಮೆಂಬಳ್ ಚರ್ಚ್ನ ಪ್ರಧಾನ ಧರ್ಮಗುರು ಮೈಕಲ್ ಡಿ’ಸಿಲ್ವ, ಪಾಲನಾ ಮಂಡಳಿಯ ಉಪಾಧ್ಯಕ್ಷ ಫೆಲಿಕ್ಸ್ ಡಿ’ಸೋಜ ಸಹಿತ ಹಲವು ಧರ್ಮಗುರುಗಳು, ಧರ್ಮಭಗಿನಿಯರು, ಭಕ್ತ ಸಮೂಹ ಉಪಸ್ಥಿತರಿದ್ದರು.
ಒಳ್ಳೆಯ ವಿಶ್ವಾಸದ ಸಮುದಾಯ ಕಟ್ಟೋಣ…
ಅಮ್ಮೆಂಬಳ್ ಚರ್ಚ್ನಿಂದ ಪುತ್ತೂರು ಚರ್ಚ್ಗೆ ನನಗೆ ಬರಲು ಇಷ್ಟವಿರದಿದ್ದರೂ, ಬಿಷಪರ ಆದೇಶಕ್ಕೆ ವಿಧೇಯರಾಗಿ ನಾನಿಂದು ಆಗಮಿಸಿ ಅಧಿಕಾರ ಸ್ವೀಕರಿಸಿದ್ದೇನೆ. ಮಂಗಳೂರು ಡಯೋಸಿಸ್ನಲ್ಲಿಯೇ ಅತ್ಯಂತ ಹೆಚ್ಚು ಶಿಕ್ಷಣ ಸಂಸ್ಥೆ ಇರುವ ಚರ್ಚ್ ಮಾಯಿದೆ ದೇವುಸ್ ಚರ್ಚ್ ಆಗಿದೆ. ಇಲ್ಲಿನ ಚರ್ಚ್ ಆಡಳಿತ ಮಂಡಳಿ, ಪಾಲನಾ ಮಂಡಳಿ, ಧರ್ಮಗುರುಗಳು, ಭಕ್ತ ಸಮೂಹದ ಜೊತೆಗೆ ಅನ್ಯ ಧರ್ಮದ ಜನರೊಂದಿಗೆ ಹೊಂದಾಣಿಕೆಯ ಕರ್ತವ್ಯವನ್ನು ನಿಭಾಯಿಸುವ ಗುರುತರ ಹೊಣೆಗಾರಿಕೆ ಇದೆ. ದೇವಮಾತೆ ಮರಿಯಮ್ಮರವರ ಆಶೀರ್ವಾದದೊಂದಿಗೆ, ಎಲ್ಲರ ಸಹಕಾರದೊಂದಿಗೆ ಎಲ್ಲರೂ ಒಳ್ಳೆಯ ಹೃದಯ ಮತ್ತು ಒಳ್ಳೆಯ ಮನಸ್ಸಿನಿಂದ ಕೆಲಸ ಮಾಡಿದಾಗ ಮಾಡಿದ ಕೆಲಸವು ತೃಪ್ತಿ ನೀಡಬಲ್ಲುದು ಎಂಬ ನಂಬಿಕೆ ನನ್ನದಾಗಿದೆ. ಆದ್ದರಿಂದಲೇ ನಾನಿಂದು ಮುಕ್ತ ಮನಸ್ಸಿನಿಂದ ಇಲ್ಲಿಗೆ ಆಗಮಿಸಿದ್ದು, ಪ್ರತಿಯೋರ್ವರ ಸಹಕಾರದಿಂದ ಒಳ್ಳೆಯ ವಿಶ್ವಾಸದ ಸಮುದಾಯ ಕಟ್ಟಲು ಸಹಕರಿಸುತ್ತೀರಿ ಎನ್ನುವ ಆಶಾಭಾವನೆಯೂ ಇದೆ. ಇಲ್ಲಿಂದ ವರ್ಗಾವಣೆಗೊಳ್ಳುತ್ತಿರುವ ವಂ|ಆಲ್ಫ್ರೆಡ್ರವರ ಮುಂದಿನ ಧಾರ್ಮಿಕ ಜೀವನವು ಯಶಸ್ವಿಯಾಗಲಿ ಎಂಬುದಾಗಿ ಹಾರೈಸುತ್ತೇನೆ.
-ವಂ|ಜೆರೋಮ್ ಲಾರೆನ್ಸ್ ಮಸ್ಕರೇನ್ಹಸ್, ನೂತನ ಪ್ರ.ಧರ್ಮಗುರುಗಳು, ಮಾಯಿದೆ ದೇವುಸ್ ಚರ್ಚ್
ಹಸ್ತಾಂತರ..
ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ವಂ|ಡಾ|ಪೀಟರ್ ಪಾವ್ಲ್ ಸಲ್ದಾನ್ಹಾರವರ ಅಧಿಕೃತ ಪ್ರತಿನಿಧಿಯಾಗಿ ಹಿರಿಯ ಧರ್ಮಗುರು, ಮರೀಲ್ ಸೆಕ್ರೇಡ್ ಹಾರ್ಟ್ ಚರ್ಚ್ನ ಧರ್ಮಗುರು ವಂ|ವಲೇರಿಯನ್ ಫ್ರ್ಯಾಂಕ್ರವರು ನಿರ್ಗಮಿತ ಪ್ರಧಾನ ಧರ್ಮಗುರು ವಂ|ಆಲ್ಫ್ರೆಡ್ ಜಾನ್ ಪಿಂಟೋರವರಿಂದ ನೂತನ ಧರ್ಮಗುರು ವಂ|ಲಾರೆನ್ಸ್ ಮಸ್ಕರೇನ್ಹಸ್ರವರಿಗೆ ಅಧಿಕಾರ ಹಸ್ತಾಂತರದ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿ ನೂತನ ಪ್ರಧಾನ ಧರ್ಮಗುರುಗಳಿಗೆ ಯಶಸ್ಸನ್ನು ಹಾರೈಸಿರುತ್ತಾರೆ.