HomePage_Banner
HomePage_Banner
HomePage_Banner

ಅನ್‌ಲಾಕ್ ಆದರೂ ಸಂಸ್ಥೆಗಳು ಮುಂದೆ ಲಾಕ್ ಆಗಬಾರದು, ಸಿಬ್ಬಂದಿಗಳ ಆರೋಗ್ಯ ಕಾಪಾಡಿ ಕೋವಿಡ್ -19 ಹಿನ್ನೆಲೆ ವರ್ತಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಶಾಸಕ ಸಂಜೀವ ಮಠಂದೂರು

Puttur_Advt_NewsUnder_1
Puttur_Advt_NewsUnder_1
  • ಸಂಸ್ಥೆಯ ಹಿರಿಯ ಸಿಬ್ಬಂದಿಗಳ ಆರೋಗ್ಯದ ಕಾಳಜಿ ವಹಿಸಿ – ಎ.ಸಿ ಡಾ. ಯತೀಶ್ ಉಳ್ಳಾಲ್
  • ಕೋವೀಡ್-19 ಸುರಕ್ಷತಾ ಕ್ರಮವನ್ನು ಸಕಾರಾತ್ಮಕವಾಗಿ ಚಿಂತಿಸಿ – ರಮೇಶ್ ಬಾಬು
  • ತಾಲೂಕಿನಲ್ಲಿ 5 ಮಂದಿ ಕೋವಿಡ್‌ಗೆ ಬಲಿ – ಡಾ. ಅಶೋಕ್ ರೈ
  • ಗ್ರಾಹಕರಿಗೆ ಜಾಗೃತಿ ಮೂಡಿಸಿ – ರೂಪಾ ಶೆಟ್ಟಿ

ಸಭೆಯಲ್ಲಿ ಕೈಗೊಂಡ ನಿರ್ಣಯ….
ಮುಂದಿನ ವಾರದಿಂದ ನಗರಸಭೆ ವಾರ್ಡ್‌ಗಳಲ್ಲಿ ಆಂಟಿಜನ್ ಪರೀಕ್ಷೆ
ಪ್ರಾರಂಭಿಕ ಹಂತದಲ್ಲಿ 10 ಸಾವಿರ ಮಂದಿಗೆ ವಾರ್ಡ್‌ಗಳಲ್ಲಿ ಪರೀಕ್ಷೆ
ಎಲ್ಲಾ ಟೂರಿಸ್ಟ್ ವಾಹನಗಳಿಗೆ ಬೆಳಿಗ್ಗೆ ಸಂಜೆ ಸ್ಯಾನಿಟೈಸ್
ಆರೋಗ್ಯ ದೃಷ್ಟಿಯಿಂದ ಸ್ವಚ್ಚತೆ ಬಗ್ಗೆ ಗಮನ
ಸಂಸ್ಥೆಗಳ ಸಿಬ್ಬಂದಿಗಳಿಗೆ ಶನಿವಾರ ಪರೀಕ್ಷಾ ದಿನ
ಮಾಸ್ಕ್ ಧರಿಸಿದವರಿಗೆ ದಂಡ ಕಡ್ಡಾಯ
ಆರೋಗ್ಯ ಇಲಾಖೆಯೊಂದಿಗೆ ಸಂಘರ್ಷಕ್ಕೆ ಎಡೆಮಾಡಬೇಡಿ

ಪುತ್ತೂರು: ಲಾಕ್ ಒಪನ್ ಆದರೂ ಕೊರೋನಾದಿಂದ ಮುಕ್ತರಾಗಿಲ್ಲ. ಹಾಗಾಗಿ ಕೊರೋನಾದೊಂದಿಗೆ ಜೀವನ ಮಾಡಲು ನಾವೇನು ಮಾಡಬೇಕು ಎಂಬ ಚಿಂತನೆಗೆ ಸಂಬಂಧಿಸಿ ಅನ್‌ಲಾಕ್ ಆಗಿದೆ. ಮುಂದೆ ಸಂಸ್ಥೆಗಳು ಲಾಕ್ ಆಗಬಾರದು. ಈ ನಿಟ್ಟಿನಲ್ಲಿ ಸಿಬ್ಬಂದಿಗಳ ಆರೋಗ್ಯ ಕಾಪಾಡುವಂತೆ ಶಾಸಕ ಸಂಜೀವ ಮಠಂದೂರು ಅವರು ವರ್ತಕರೊಂದಿಗೆ ಮನವಿ ಮಾಡಿದರು.  ಕೋವಿಡ್ -19ಗೆ ಸಂಬಂಧಿಸಿ ಕೊರೋನಾ ಜಾಗೃತಿ ಸಮಿತಿ ಆಶ್ರಯದಲ್ಲಿ ಇಲ್ಲಿನ ಪುತ್ತೂರು ಕೋ ಓಪರೇಟಿವ್ ಟೌನ್ ಬ್ಯಾಂಕ್‌ನ ಸಭಾಂಗಣದಲ್ಲಿ ಆ.1ರಂದು ಪುತ್ತೂರಿನ ವರ್ತಕರೊಂದಿಗೆ ಸಂವಾದ ನಡೆಸಿದರು. ಉದ್ಯಮಿಗಳು, ಸಂಸ್ಥೆಗಳಲ್ಲಿ ಅನೇಕ ನೌಕರರು ಇದ್ದಾರೆ. ಯುವ ಜನತೆಯ ರೋಗ ನಿರೋಧಕ ಶಕ್ತಿಯಿಂದಾಗಿ ಅವರಲ್ಲಿ ಕೋವಿಡ್ ಲಕ್ಷಣ ಮೇಲ್ನೊಟಕ್ಕೆ ಕಂಡು ಬರುವುದಿಲ್ಲ. ಹೀಗೆ ರೋಗ ಲಕ್ಷಣ ಇಲ್ಲದವರಿಂದ ವಯಸ್ಕರಿಗೆ ಹರಡಿದರೆ ಅದು ಮಾರಣಾಂತಿಕ ಕಾಯಿಲೆ ಆಗುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಸಿಬ್ಬಂದಿಗಳೆಲ್ಲಾ ಆಂಟಿಜನ್ ಪರೀಕ್ಷೆ ಮಾಡಿಸಿಕೊಳ್ಳಬೇಕು ಮತ್ತು ತಮ್ಮ ಸಿಬ್ಬಂದಿಗಳಿಗೆ ರೋಗ ನಿರೋಧಕ ಶಕ್ತಿ ವೃದ್ಧಿಸುವ ಔಷಧಿಗಳನ್ನು ಸಂಸ್ಥೆಯ ವತಿಯಿಂದಲೇ ನೀಡುವ ಕಾರ್ಯ ಮಾಡಬೇಕೆಂದರು.

ಕೊರೋನಾ ನಿಯಂತ್ರಣದ ರಾಯಭಾರಿಗಳಾಗಿ:
ಕೊರೋನಾದ ಕುರಿತು ಪೇಟೆಯಲ್ಲಿ ಮೊದಲು ಜಾಗೃತಿ ಮೂಡಿದರೆ ಹಳ್ಳಿಗಳಲ್ಲಿ ಹರುಡುವುದು ಕಡಿಮೆ ಆಗುತ್ತದೆ. ಜನರ ಯೋಗ ಕ್ಷೇಮ ಕಾಪಡಲು ಪ್ರಯತ್ನ ಪಡುತ್ತಿರುವ ಸರಕಾರದ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕು. ಮಾಸ್ಕ್ ಕೇವಲ ನಾಮಕವಾಸ್ತೆ ಬಳಸಬೇಡಿ. ಮಾಸ್ಕ್ ಧರಿಸುವುದನ್ನು ಮೊದಲು ನಾವು ಪಾಲನೆ ಮಾಡಬೇಕು. ನಾವು ಮೋಡೆಲ್ ಆಗಬೇಕು. ನಮ್ಮಲ್ಲಿಗೆ ಬರುವ ಸಾವಿರಾರು ಮಂದಿ ಗ್ರಾಹಕರಿಗೆ ಕೊರೋನಾದ ಮಾಹಿತಿ ಕೊಡುವ ಮೂಲಕ ಸಮುದಾಯಕ್ಕೆ ಹರಡದಂತೆ ನೂರಕ್ಕೆ ನೂರು ಕೊರೋನಾ ಮುಕ್ತ ವಾತಾವರಣ ಸೃಷ್ಟಿಸಬೇಕು. ಮನೆಯಲ್ಲೇ ಆರೋಗ್ಯ ಕಾಪಾಡುವ ಔಷಧಿ ವೃದ್ಧಿಸುವ ಮೂಲಕ ನಾವು ಕೊರೋನಾ ನಿಯಂತ್ರಣದ ರಾಯಭಾರಿಗಳಾಗಬೇಕೆಂದು ಶಾಸಕರು ಹೇಳಿದರು.

ಸಂಸ್ಥೆಯ ಹಿರಿಯ ಸಿಬ್ಬಂದಿಗಳ ಆರೋಗ್ಯದ ಕಾಳಜಿ ವಹಿಸಿ:
ಸಹಾಯಕ ಕಮೀಷನರ್ ಡಾ. ಯತೀಶ್ ಉಳ್ಳಾಲ್ ಅವರು ಮಾತನಾಡಿ ಕೋವಿಡ್ ಸೂಕ್ತ ಮಾಹಿತಿಗಾಗಿ ಆರೋಗ್ಯ ಸೇತು ಆಪ್ ಬಳಸಿಕೊಳ್ಳಿ. ಯಾಕೆಂದರೆ ಕೋವಿಡ್ ಎಷ್ಟು ಸಮಯ ಇದೆ ಎಂಬುದು ಗೊತ್ತಿಲ್ಲ ಹಾಗಾಗಿ ಮಾಸ್ಕ್ ಇಲ್ಲದವರೊಂದಿಗೆ ವ್ಯವಹರಿಸಬೇಡಿ. 60 ವರ್ಷಕ್ಕಿಂತ ಮೇಲ್ಪಟ್ಟ ಸಿಬ್ಬಂದಿಗಳಿದ್ದರೆ ಅವರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ. ಸಂಶಯ ಇದ್ದರೆ ತಾಲೂಕು ಆರೋಗ್ಯಾಧಿಕಾರಿ, ತಹಶೀಲ್ದಾರ್ ಅಥವಾ ನನಗೆ ಕಾಲ್ ಮಾಡಿ ಎಂದ ಅವರು ಈಗಾಗಲೇ ಕೆಲವರಿಗೆ ವಿದೇಶದಿಂದ ಬಂದವರ ಮೇಲೆ ಸಂಶಯ ಇರುವುದು ಸಹಜ. ಆದರೆ ವಿದೇಶದಿಂದ ಬಂದವರಿಗೆ 7 ದಿನಗಳ ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗುತ್ತಿದೆ. 5ನೇ ದಿನ ಅವರಿಗೆ ಕೋವಿಡ್ ಪರೀಕ್ಷೆ ನಡೆಸಲಾಗುತ್ತದೆ. ಈ ವೇಳೆ ಅವರಿಗೆ ಪಾಸಿಟಿವ್ ಬಂದರೆ ಅವರಿಗೆ ಚಿಕಿತ್ಸೆ ಆರಂಭಗೊಳ್ಳುತ್ತದೆ. ವಿದೇಶದಿಂದ ಬಂದವರಲ್ಲಿ ೬೦ ವರ್ಷಕ್ಕಿಂತ ಮೇಲ್ಪಟ್ಟವರಿಗೆ, ಹೆರಿಗೆ, ಬಾಣಂತಿ ಅಥವಾ ಸಣ್ಣ ಮಕ್ಕಳಿಗೆ ಒಂದು ದಿನದ ಬಳಿಕ ಮನೆಯಲ್ಲಿ ಹೋಮ್ ಐಸೊಲೇಷನ್ ಆಗುವಂತೆ ಸೂಚನೆ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಕೋವೀಡ್-19 ಸುರಕ್ಷತಾ ಕ್ರಮವನ್ನು ಸಕಾರಾತ್ಮಕವಾಗಿ ಚಿಂತಿಸಿ:
ತಹಶೀಲ್ದಾರ್ ರಮೇಶ್ ಬಾಬು ಅವರು ಮಾತನಾಡಿ ಪುತ್ತೂರಿನಲ್ಲಿ ಈಗಾಗಲೇ ರ್‍ಯಾಪಿಡ್ ಆಂಟಿಜನ್ ಪರೀಕ್ಷೆ ಮಾಡಿಸುತ್ತಿದ್ದು, ಈಗಾಗಲೇ ೬೮೫ ಮಂದಿಗೆ ಪರೀಕ್ಷೆ ಮಾಡಲಾಗಿದೆ. ಇದರಲ್ಲಿ ಶೇ.೨.೮ರಷ್ಟು ಕೊರೋನಾ ಹರಡಿರುವುದು ಕಂಡು ಬಂದಿದೆ. ಒಂದು ವೇಳೆ ಇದು ಶೇ.೧೦ ಆಗಿದ್ದರೆ ಸಮುದಾಯಕ್ಕೆ ಹರಡಿರುವುದು ಖಚಿತವಾಗುತ್ತದೆ. ಆದರೆ ನಮ್ಮಲ್ಲಿ ಇನ್ನೂ ಸಮುದಾಯಕ್ಕೆ ಕೊರೋನಾ ಹರಡಿಲ್ಲ. ಈ ಪರೀಕ್ಷೆಗೊಳಪಟ್ಟ ವ್ಯಕ್ತಿಯ ಮುಂದೆ ನಡೆಯುತ್ತದೆ. ಕೊರೋನಾ ಸೋಂಕಿತನಾಗಿದ್ದು ಎ ವಿಭಾಗದಲ್ಲಿ ಗುರುತಿಸಿದರೆ ಆತನಿಗೆ ಹೋಮ್ ಐಸೋಲೇಷನ್ ಅಥವಾ ಕೋವಿಡ್ ಕೇರೆ ಸೆಂಟರ್‌ನಲ್ಲಿ ವ್ಯವಸ್ಥೆ ಕಲ್ಪಿಸಲಾಗುವುದು. ಕೋವಿಡ್ ಕೇರ್ ಸೆಂಟರ್‌ನಲ್ಲಿ ಸರಕಾರದ ಲೀಸ್ಟ್‌ನಲ್ಲಿ ಏನಿದೆಯೋ ಅದನ್ನು ಕೊಡಲಾಗುತ್ತಿದೆ. ಒಂದು ಕೊಠಡಿಯಲ್ಲಿ 2 ಮಂದಿ ಉಳಿದು ಕೊಳ್ಳಲು ವ್ಯವಸ್ಥೆ. ಒಳ್ಳೆಯ ರೀತಿ ಪೌಷ್ಠಿಕ ಆಹಾರ. ೩ ಶಿಫ್ಟ್‌ನಲ್ಲಿ ವೈದ್ಯರು ಕರ್ತವ್ಯ ನಿರ್ವಹಿಸುತ್ತಾರೆ. ಒಟ್ಟು ಇಲಾಖೆಯಿಂದ ನಡೆಯುತ್ತಿರುವ ಸುರಕ್ಷತಾ ಕ್ರಮವನ್ನು ಸಕಾರಾತ್ಮಕವಾಗಿ ಚಿಂತಿಸಿ, ನಕಾರಾತ್ಮಕ ಚಿಂತನೆ ಬೇಡ ಎಂದು ಹೇಳಿದರು.

ತಾಲೂಕಿನಲ್ಲಿ 5 ಮಂದಿ ಕೋವಿಡ್‌ಗೆ ಬಲಿ
ತಾಲೂಕು ಆರೋಗ್ಯಾಧಿಕಾರಿ ಡಾ. ಅಶೋಕ್ ರೈ ಮಾಹಿತಿ ನೀಡಿ, ಪುತ್ತೂರು ಮತ್ತು ಕಡಬ ತಾಲೂಕುಗಳಲ್ಲಿ ಇಲ್ಲಿಯವರೆಗೆ 275 ಕೊರೋನಾ ಪ್ರಕರಣಗಳು ದೃಢಪಟ್ಟಿದ್ದು 169 ಪ್ರಕರಣಗಳು ಸಕ್ರಿಯವಾಗಿದೆ. 107 ಕೊರೋನಾ ಪೀಡಿತರು ಗುಣಮುಖರಾಗಿದ್ದಾರೆ. 5ಮಂದಿ ಕೊರೋನಾಕ್ಕೆ ಬಲಿಯಾಗಿದ್ದಾರೆ. ತಾಲೂಕಿನಲ್ಲಿ 6 ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಹೈ ರಿಸ್ಕ್ ಏರಿಯ ಗುರುತಿಸಲಾಗಿದ್ದು, ಅಲ್ಲಿ ಪ್ರಥಮವಾಗಿ ರ್‍ಯಾಪಿಡ್ ಆಂಟಿಜನ್ ಪರೀಕ್ಷೆ ನಡೆಸಲಾಗುತ್ತಿದೆ ಎಂದರು.

ಗ್ರಾಹಕರಿಗೆ ಜಾಗೃತಿ ಮೂಡಿಸಿ:
ಪೌರಾಯುಕ್ತೆ ರೂಪಾ ಟಿ. ಶೆಟ್ಟಿ ಅವರು ಮಾತನಾಡಿ ವರ್ತಕ ಸಮುದಾಯದವರು ಗ್ರಾಹಕರಿಗೆ ಮಾಸ್ಕ್ ಧರಿಸುವಂತೆ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದರು.


ಸಂವಾದಲ್ಲಿ ವರ್ತಕರಿಂದ ಸಲಹೆಗಳು:
ಉದ್ಯಮಿ ವಾಮನ್ ಪೈ ಅವರು ಮಾತನಾಡಿ ಕೊರೋನಾದ ಬಗ್ಗೆ ಭಯದ ವಾತಾವರಣವಿದೆ ಅದನ್ನು ದೂರಗೊಳಿಸಿ ಎಂದರು. ಮುಳಿಯ ಜ್ಯುವೆಲ್ಲರ್‍ಸ್‌ನ ಸ್ವರ್ಣೋದ್ಯಮಿ ಕೃಷ್ಣ ನಾರಾಯಣ ಮುಳಿಯ ಅವರು ಮಾತನಾಡಿ ಸಂಸ್ಥೆಯ ಸೀಲ್‌ಡೌನ್ ೪೬ ಗಂಟಯ ಬದಲು ೩೬ ಗಂಟೆ ಮಾಡಬೇಕು. ಶನಿವಾರ ಮಾತ್ರ ಸಂಸ್ಥೆಯ ಸಿಬ್ಬಂದಿಗಳಿಗೆ ಆಂಟಿಜನ್ ಪರೀಕ್ಷೆ ಮಾಡಿಸಿ. ಪರೀಕ್ಷೆಯಲ್ಲಿ ಕೋವಿಡ್ ದೃಢಗೊಂಡರು. ಸೀಲ್‌ಡೌನ್ ಸಮಯ ವಾರದ ರಜೆಯಲ್ಲಿ ಮುಗಿಯುತ್ತದೆ. ಇದರ ಜೊತೆಗೆ ಪತ್ರಿಕೆಯಲ್ಲಿ ಸೀಲ್‌ಡೌನ್ ಕುರಿತು ವರದಿ ಬರುವಾಗ ಸಂಸ್ಥೆಯ ಹೆಸರು ಉಲ್ಲೇಖ ಆಗದಿದ್ದರೂ ಪರಿಸರದ ಹೆಸರನ್ನು ಉಲ್ಲೇಖ ಮಾಡುವುದರಿಂದ ಇಂತಹದ್ದೇ ಸಂಸ್ಥೆ ಎಂದು ಪ್ರಚಾರಗೊಂಡು ಗ್ರಾಹಕರು ಭಯಪಡುವ ಸಂಭವ ಇದೆ. ಆದ್ದರಿಂದ ಪತ್ರಿಕೆಯಲ್ಲಿ ಹೆಚ್ಚಿನ ವಿವರಣೆ ಕೊಡಬಾರದು. ಮಾಸ್ಕ್ ಧರಿಸದವರಿಗೆ ದಂಡ ವಿಧಿಸುವ ಕುರಿತು ಪತ್ರಿಕೆಯಲ್ಲಿ ಹೆಚ್ಚು ಪ್ರಚಾರ ನೀಡಬೇಕೆಂದರು.

ಕಟ್ಟಡ ಕಾರ್ಮಿಕರ ಸಂಘದ ಗೌರವಾಧ್ಯಕ್ಷ ಲೋಕೇಶ್ ಹೆಗ್ಡೆ ಅವರು ಮಾತನಾಡಿ ಕೋವಿಡ್ ಕೇರ್ ಸೆಂಟರ್‌ನಲ್ಲಿ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ ಎಂಬ ಆರೋಪ ಕಟ್ಟಡ ಕಾರ್ಮಿಕರಲ್ಲಿ ಭಯ ಉಂಟಾಗಿದೆ ಎಂದರು. ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಪ್ರಧಾನ ಕಾರ್ಯದರ್ಸಿ ಅಬ್ದುಲ್ ರಫೀಕ್ ಅವರು ಮಾತನಾಡಿ ಪೇಟೆಯಲ್ಲಿ ಅನೇಕ ವಾಹನಗಳು ಓಡಾಟ ನಡೆಸುತ್ತಿವೆ. ಅನೇಕ ಪ್ರಯಾಣಿಕರು ಇದರಲ್ಲಿ ಓಡಾಟ ಮಾಡುತ್ತಾರೆ. ಯಾವ ವಾಹನದಲ್ಲಿ ಕೋವಿಡ್ ಸೋಂಕಿತ ಹೋಗಿದ್ದಾನೆ ಎಂಬುದು ಯಾರಿಗೂ ಗೊತ್ತಾಗುವುದಿಲ್ಲ. ಹಾಗಾಗಿ ವಾಹನಗಳಿಗೆ ಸ್ಯಾನಿಟೈಸ್ ಮಾಡುವುದು ಅಗತ್ಯ ಎಂದರು.

ವರ್ತಕರ ಸಂಘದ ಮಾಜಿ ಅಧ್ಯಕ್ಷ ಪದ್ಮನಾಭ ಶೆಟ್ಟಿಯವರು ಮಾತನಾಡಿ ಮಾಸ್ಕ್ ಕಡ್ಡಾಯ ಗೊಳಿಸಬೇಕು. ಶೇ. ೨೫ ಮಂದಿ ವರ್ತಕರೇ ಮಾಸ್ಕ್‌ನ್ನು ಕೊರಳಿಗೆ ಮಾತ್ರೆ ನೇತಾಡಿಸುತ್ತಾರೆ ಹೊರತು ಸರಿಯಾಗಿ ಧರಿಸುವುದಿಲ್ಲ ಎಂದು ಗಮನ ಸೆಳೆದರು. ವರ್ತಕರ ಸಂಘದ ಮ್ಯಾನೇಜರ್ ಉಲ್ಲಾಸ್ ಪೈ ಅವರು ಮಾತನಾಡಿ ತಿಂಗಳ ಪ್ರಥಮ ವಾರದಲ್ಲಿ ಬ್ಯಾಂಕ್‌ನಲ್ಲಿ ಗ್ರಾಹಕರ ಸಂಖ್ಯೆ ಅಧಿಕವಾಗುತ್ತದೆ. ಇಲ್ಲಿ ಗುಂಪು ಸೇರುವುದನ್ನು ನಿಯಂತ್ರಿಸಬೇಕೆಂದರು.

ರೋಟರಿ ಕ್ಲಬ್ ಪುತ್ತೂರು ಸಿಟಿ ಇದರ ಅಧ್ಯಕ್ಷ ಕೃಷ್ಣಮೋಹನ್ ಅವರು ಮಾತನಾಡಿ ಕೋವಿಡ್ ರ್‍ಯಾಪಿಡ್ ಆಂಟಿಜನ್ ಪರೀಕ್ಷೆಯನ್ನು ನಾವು ಮೊದಲು ಮಾಡಿಸಿಕೊಳ್ಳಬೇಕು ಮತ್ತು ಸಿಬ್ಬಂದಿಗಳಿಗೆ ಮಾಡಿಸಲು ಸೂಚಿಸಬೇಕು. ಜೊತೆಗೆ ರಕ್ತದಾನ ಮಾದರಿಯಲ್ಲಿ ಇದನ್ನು ಆದಷ್ಟು ಪ್ರಚಾರಗೊಳಿಸಿ ಸ್ವಯಂ ಪ್ರೇರಿತವಾಗಿ ಪರೀಕ್ಷೆ ಮಾಡಿಸಿಕೊಳ್ಳಲು ಬರುವಂತೆ ಮಾಡಬೇಕೆಂದರು.

ಮುಳಿಯ ಜ್ಯುವೆಲ್ಲರ್‍ಸ್‌ನ ಸ್ವರ್ಣೋದ್ಯಮಿ ಮುಳಿಯ ಕೇಶವ ಪ್ರಸಾದ್ ಅವರು ಮಾತನಾಡಿ ನಮ್ಮ ಸಂಸ್ಥೇಯಲ್ಲಿ ಶೇ.೧೦೦ ಮಂದಿ ಸಿಬ್ಬಂದಿಗಳು ಆರೋಗ್ಯ ಸೇತು ಆಪ್ ಬಳಸುತ್ತಿದ್ದಾರೆ. ಈ ನಡುವೆ ಟ್ರಾಪಿಕ್ ರೂಲ್ಸ್ ಮಾಡುವಂತೆ ಕೋವಿಡ್‌ಗೂ ವಾರ್ಡನ್ಸ್ ನೇಮಕ ಮಾಡಿ ಅವರಿಂದ ಮಾಸ್ಕ್ ಧರಿಸುವ ಮತ್ತು ಗುಂಪು ಸೇರುತ್ತಿರುವ ಜನರ ಬಗ್ಗೆ ಕ್ರಮ ಕೈಗೊಳ್ಳುವ ಟೀಮ್ ರಚನೆ ಆಗಬೇಕು. ತಾಲೂಕಿಗೆ ಎಂಟ್ರಿ ಆಗುವ ಕಡೆ ಬ್ಯಾರಿಕೇಡ್ ಅಳವಡಿಸಿ ವಾಹನದಲ್ಲಿರುವವರಲ್ಲಿ ಸಾಮಾಜಿಕ ಅಂತರ ಮತ್ತು ಮಾಸ್ಕ್ ಧರಿಸಿರುವ ಕುರಿತು ತಪಾಸಣೆ ನಡೆಸುವ ಕೆಲಸ ಆಗಬೇಕೆಂದರು.

ವರ್ತಕ ಸಂಘದ ಸದಾನಂದ ಅವರು ಮಾತನಾಡಿ ರ್‍ಯಾಪಿಡ್ ಆಂಟಿಜನ್ ಪರೀಕ್ಷೆ ಸಮುದಾಯ ಎಲ್ಲರಿಗೂ ಮಾಡಬೇಕು. ನಾವಂತು ಸಿದ್ದರಿದ್ದೇವೆ ಎಂದರು. ಧ್ವನಿಗೂಡಿಸಿದ ಕೇಶವ ಪ್ರಸಾದ್ ಮುಳಿಯ ಅವರು 10ಸಾವಿರ ಪರೀಕ್ಷೆಗೆ ವ್ಯವಸ್ಥೆ ಮಾಡಿದರೆ ವರ್ತಕರೆಲ್ಲರೂ ಸಹಕಾರ ನೀಡಲಿದ್ದಾರೆ ಎಂದರು. ಇಂಜಿನಿಯರ್ ಸಂತೋಷ್ ಶೆಟ್ಟಿ ಧ್ವನಿಗೂಡಿಸಿದರು. ವೇಣುಗೋಪಾಲ್ ಕೂಡಾ ಅಭಿಪ್ರಾಯ ವ್ಯಕ್ತಪಡಿಸಿದರು.

ವೇದಿಕೆಯಲ್ಲಿ ಪುತ್ತೂರು ತಾಲೂಕು ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಉಪಸ್ಥಿತರಿದ್ದರು. ಸಭೆಯಲ್ಲಿ ಪುತ್ತೂರು ನಗರಸಭಾ ಸದಸ್ಯರಾದ ಪಿ.ಜಿ. ಜಗನ್ನಿವಾಸ್ ರಾವ್, ಕೆ. ಜೀವಂಧರ ಜೈನ್, ಗೌರಿ ಬನ್ನೂರು, ಮೋಹಿನಿ ವಿಶ್ವನಾಥ ಪ್ರಮುಖರಾದ ಯುವರಾಜ ಪೆರಿಯತ್ತೋಡಿ, ಪುರುಷೋತ್ತಮ ಮುಂಗ್ಲಿಮನೆ, ಆಸ್ಕರ್ ಆನಂದ್, ಚಂದ್ರಶೇಖರ್ ರಾವ್ ಬಪ್ಪಳಿಗೆ, ರಾಜೇಶ್ ಬನ್ನೂರು, ವಿಶ್ವಾಸ್ ಶೆಣೈ ಮತ್ತಿತರರು ಉಪಸ್ಥಿತರಿದ್ದರು.

ಮುಂದಿನ ವಾರದಿಂದ ನಗರಸಭೆ ವಾರ್ಡ್‌ನಲ್ಲಿ ರ್‍ಯಾಪಿಡ್ ಟೆಸ್ಟ್ ಮುಂದಿನ ವಾರದಿಂದ ನಗರಸಭೆ 31 ವಾರ್ಡ್‌ಗಳಿಗೆ ಹೊಂದಿಕೊಂಡಂತೆ ೫ ವಾರ್ಡ್‌ಗಳ ಕ್ಲಸ್ಟರ್ ರಚಿಸಿ ರ್‍ಯಾಪಿಟ್ ಆಂಟಿಜನ್ ಟೆಸ್ಟ್ ನಡೆಸಲಾಗುವುದು. ನಗರಸಭಾ ವ್ಯಾಪ್ತಿಯಲ್ಲಿ ಮಾಸ್ಕ್ ಧರಿಸದೆ ಸಾರ್ವಜನಿಕವಾಗಿ ಓಡಾಡುವವರ ವಿರುದ್ಧ ದಂಡ ವಸೂಲಿಯನ್ನು ಹೆಚ್ಚಿಸುವುದು. ಪ್ರಾದೇಶಿಕ ಸಾರಿಗೆ ಇಲಾಖೆಯ ಮೂಲಕ ಎಲ್ಲಾ ಟೂರಿಸ್ಟ್ ವಾಹನಗಳಿಗೆ ಬೆಳಿಗ್ಗೆ ಸಂಜೆ ಸ್ಯಾನಿಟೈಸ್ ಮಾಡುವುದು ಕಡ್ಡಾಯಗೊಳಿಸುವುದು. ಸಂಸ್ಥೆ, ಮಳಿಗೆ, ಮಾಲ್‌ಗಳ ಸಿಬ್ಬಂದಿಗಳಿಗೆ ಶನಿವಾರ ದಿನ ಮಾತ್ರ ರ್‍ಯಾಪಿಡ್ ಪರೀಕ್ಷೆ ನಡೆಸುವುದು ಎಂಬ ಕುರಿತು ಸಭೆಯಲ್ಲಿ ಅಂತಿಮ ನಿರ್ಣಯ ಕೈಗೊಳ್ಳಲಾಯಿತು.

ಪುತ್ತೂರಿನಲ್ಲಿ ಮಾಸ್ ಪರೀಕ್ಷೆ ಆರಂಭಿಸಲಾಗಿದೆ. ಮುಂದೆ ಹೆಚ್ಚಿನ ಪರೀಕ್ಷೆಗೆ ಬೇಡಿಕೆ ಬರುತ್ತದೆ. ಹಾಗಾಗಿ ೧೨೫ ಬೆಡ್‌ನ ಕೋವಿಡ್ ಕೇರ್ ಸಿದ್ದತೆ ಮಾಡಲಾಗಿದೆ. ಪಾಸಿಟಿವ್ ಬಂದವರು ೧೭ ದಿನಗಳ ಕಾಲ ಕ್ವಾರಂಟೈನ್ ಆಗಬೇಕು ಅಥವಾ ಅವರು ಬಯಸಿದ್ದಲ್ಲಿ ಹೋಮ್ ಐಸೋಲೇಷನ್ ಆಗಬಹುದು. ರೋಗದ ಲಕ್ಷಣವಿದ್ದರೆ ಮಾತ್ರ ಅವನ್ನು ಕೋವಿಡ್ ಆಸ್ಪತ್ರೆಗೆ ಕಳುಹಿಸಲಾಗುತ್ತದೆ. ಕೋವಿಡ್ ಕೇರ್ ಸೆಂಟರ್‌ನಲ್ಲಿ ಯಾವುದೇ ರೋಗಿಗೂ ತೊಂದರೆ ಆಗದಂತೆ ಎಲ್ಲರಿಗೂ ಸಮಾನವಾಗಿ ಆರೋಗ್ಯ ಸೇವೆ ನೀಡಲಾಗುತ್ತದೆ.  -ಡಾ. ಯತೀಶ್ ಉಳ್ಳಾಲ್, ಸಹಾಯಕ ಕಮೀಷನರ್ ಪುತ್ತೂರು

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.