ಉಪ್ಪಿನಂಗಡಿ ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿ, ತಾ| ಸರಕಾರಿ ನೌಕರರ ಸಂಘದ ಅಧ್ಯಕ್ಷ ಮೌರಿಸ್ ಮಸ್ಕರೇನ್ಹಸ್ ಸೇವಾ ನಿವೃತ್ತಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಆರೋಗ್ಯ ಇಲಾಖೆಯಲ್ಲಿ ಸುಮಾರು 32 ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಉಪ್ಪಿನಂಗಡಿ ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿ, ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಪುತ್ತೂರು ತಾಲೂಕು ಶಾಖೆಯ ಅಧ್ಯಕ್ಷ ಮೌರಿಸ್ ಮಸ್ಕರೇನ್ಹಸ್‌ರವರು ಜು.31 ರಂದು ಸೇವಾ ನಿವೃತ್ತಿ ಹೊಂದಿದ್ದಾರೆ.

೧೯೮೮, ಮಾರ್ಚ್ ೨ರಂದು ಸರಕಾರದಿಂದ ನೇಮಕವಾಗಿ ಆರೋಗ್ಯ ಇಲಾಖೆ ಮಂಗಳೂರು ಇಲ್ಲಿ ಸೇವೆಗೆ ತೊಡಗಿಸಿಕೊಂಡ ಮೌರಿಸ್ ಮಸ್ಕರೇನ್ಹಸ್‌ರವರು ಬಳಿಕ ಉಪ್ಪಿನಂಗಡಿ ಪ್ರಾಥಮಿಕ(ಅಂದು ಪ್ರಾಥಮಿಕ ಆರೋಗ್ಯ ಕೇಂದ್ರವಾಗಿತ್ತು, ಇಂದು ಮೇಲ್ದರ್ಜೆಗೇರಿ ಸಮುದಾಯ ಆರೋಗ್ಯ ಕೇಂದ್ರವಾಗಿದೆ) ಆರೋಗ್ಯ ಕೇಂದ್ರ, ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸಿ ಇದೀಗ ಮತ್ತೇ ಉಪ್ಪಿನಂಗಡಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸೇವೆ ಸಲ್ಲಿಸುವ ಮೂಲಕ ಅಲ್ಲೇ ನಿವೃತ್ತಿ ಹೊಂದಿರುತ್ತಾರೆ. ೧೯೬೦, ಮಾರ್ಚ್ ೨೨ರಂದು ಬಂಟ್ವಾಳ ತಾಲೂಕಿನ ಬರಿಮಾರು ಗ್ರಾಮದ ಪಾಪೆತ್ತಿಮಾರು ಹಿಲಾರಿ ಮಸ್ಕರೇನ್ಹಸ್ ಹಾಗೂ ಮರಿಯಾ ಬೆಂಝಿನ ಮೋನಿಸ್ ದಂಪತಿಗಳ ಪುತ್ರನಾಗಿ ಜನಿಸಿದ ಮೌರಿಸ್ ಮಸ್ಕರೇನ್ಹಸ್‌ರವರು ತಮ್ಮ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಬರಿಮಾರು ಸರಕಾರಿ ಶಾಲೆ, ಪುತ್ತೂರಿನ ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಯಲ್ಲೊಂದಾದ ಮಾಯಿದೆ ದೇವುಸ್ ಶಾಲೆ ಹಾಗೂ ಕೊಂಬೆಟ್ಟು ಜ್ಯೂನಿಯರ್ ಕಾಲೇಜ್‌ನಲ್ಲಿ ಪೂರೈಸಿರುತ್ತಾರೆ.

ಸರಕಾರಿ ಸಮುದಾಯ ಭವನದ ರೂವಾರಿ:
ಎನ್‌ಜಿಒ ಸಮುದಾಯ ಭವನ ಎಂದು ಗುರುತಿಸಲ್ಪಟ್ಟ ಸರಕಾರಿ ನೌಕರರ ಸಂಘದ ಸ್ವಂತ ಕಟ್ಟಡಕ್ಕೆ ಮೂರು ವರ್ಷದ ಹಿಂದೆ ಹೊಸ ರೂಪ ಕೊಟ್ಟವರು ಮೌರಿಸ್ ಮಸ್ಕರೇನ್ಹಸ್‌ರವರು. ಸಂಘಕ್ಕೆ ಸುಸಜ್ಜಿತ ಕಟ್ಟಡ ಬೇಕು ಎನ್ನುವ ಕನಸಿನೊಂದಿಗೆ ಹೆಜ್ಜೆ ಇಟ್ಟವರು ಮೌರಿಸ್ ಮಸ್ಕರೇನ್ಹಸ್‌ರವರು. ಇದಕ್ಕೆ ಪೂರಕವಾಗಿ ಸಂಘದ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರ ಕೂಡುವಿಕೆಯಿಂದ ಪ್ರತಿಯೊಂದು ಇಲಾಖೆಗಳ ಹಾಗೂ ಸಹೃದಯಿ ದಾನಿಗಳ ನೆರವಿನಿಂದ ಸುಮಾರು ರೂ.೩ ಕೋಟಿ ವೆಚ್ಚದಲ್ಲಿ ಭವ್ಯವಾದ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಸಮುದಾಯ ಭವನದ ನಿರ್ಮಾಣದ ರೂವಾರಿಯಾಗಿ ಗುರುತಿಸಿಕೊಂಡಿದ್ದಾರೆ ಮೌರಿಸ್ ಮಸ್ಕರೇನ್ಹಸ್‌ರವರು. ಪ್ರಥಮ ಹಂತದ ಕಟ್ಟಡದ ಕಾಮಗಾರಿಯಲ್ಲಿ ವಾಣಿಜ್ಯ ಸಂಕೀರ್ಣ, ಸರಕಾರಿ ನೌಕರರಿಗೆ ಅತಿಥಿ ಗೃಹ ಹಾಗೂ ಸಂಘದ ಕಛೇರಿ, ದ್ವಿತೀಯ ಹಂತದ ಕಾಮಗಾರಿಯಲ್ಲಿ ಸುಮಾರು ೩೦೦ ಆಸನಗಳುಳ್ಳ ಸುಸಜ್ಜಿತ ಮೇರಿ ದೇವಾಸಿಯ ಸಭಾಂಗಣ ಹಾಗೂ ಶ್ರೀಮತಿ ಮತ್ತು ಶ್ರೀ ನಂದಕುಮಾರ್ ಸಭಾ ವೇದಿಕೆಯು ಈಗಾಗಲೇ ಲೋಕಾರ್ಪಣೆಗೊಂಡಿದೆ. ಮೌರಿಸ್ ಮಸ್ಕರೇನ್ಹಸ್‌ರವರು ೧೯೯೬-೯೭ರಲ್ಲಿ ಕರ್ನಾಟಕ ಸರಕಾರಿ ವಾಹನ ಚಾಲಕರ ಸಂಘದ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಗುರುಭವನದ ಬಳಿ `ಸಾರಥಿ ಭವನ’ ಕಟ್ಟಡವನ್ನು ಕೂಡ ನಿರ್ಮಿಸಿರುವುದು ಮೌರಿಸ್‌ರವರ ನಾಯಕತ್ವಕ್ಕೆ ಹಿಡಿದ ಕನ್ನಡಿಯಾಗಿದೆ.

ಮಾಯಿದೆ ದೇವುಸ್ ಚರ್ಚ್‌ನ ಪ್ರಸ್ತುತ ಉಪಾಧ್ಯಕ್ಷರು:
ಮೌರಿಸ್ ಮಸ್ಕರೇನ್ಹಸ್‌ರವರು ಸರಕಾರಿ ನೌಕರರ ಸಂಘದ ಉಪಾಧ್ಯಕ್ಷರಾಗಿ, ಕಾರ್ಯದರ್ಶಿಯಾಗಿ, ರಾಜ್ಯ ಪರಿಷತ್ ಸದಸ್ಯರಾಗಿ ಸೇವೆ ಸಲ್ಲಿಸಿ ಇದೀಗ ಎರಡನೇ ಅವಧಿಗೆ ಅಧ್ಯಕ್ಷರಾಗಿ ಸಂಘವನ್ನು ಮುನ್ನೆಡೆಸುತ್ತಿದ್ದಾರೆ. ಮೌರಿಸ್ ಮಸ್ಕರೇನ್ಹಸ್‌ರವರು ಪ್ರಸ್ತುತ ನಗರದ ಹೃದಯಭಾಗದಲ್ಲಿರುವ ೧೯೦ ವರ್ಷ ಇತಿಹಾಸವಿರುವ ಮಾಯಿದೆ ದೇವುಸ್ ಚರ್ಚ್‌ನಲ್ಲಿ ೨೦೨೦ರಿಂದ ಚರ್ಚ್‌ನ ಪಾಲನಾ ಮಂಡಳಿಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಉಪಾಧ್ಯಕ್ಷ ಅವಧಿಯಲ್ಲಿ ಚರ್ಚ್‌ನಲ್ಲಿ ಆರು ವರ್ಷ ಪ್ರಧಾನ ಧರ್ಮಗುರುಗಳಾಗಿ ಸೇವೆ ಸಲ್ಲಿಸಿದ್ದ ವಂ|ಆಲ್ಪ್ರೆಡ್ ಪಿಂಟೋರವರಿಗೆ ಬೀಳ್ಕೊಡುಗೆ ಮತ್ತು ನೂತನ ಪ್ರಧಾನ ಧರ್ಮಗುರು ವಂ|ಲಾರೆನ್ಸ್ ಮಸ್ಕರೇನ್ಹಸ್‌ರವರಿಗೆ ಸ್ವಾಗತಿಸುವ ಕಾರ್ಯ ಇತ್ತೀಚೆಗೆ ಯಶಸ್ವಿಯಾಗಿ ನಡೆದಿದೆ.

ಕ್ರಿಶ್ಚಿಯನ್ ಯೂನಿಯನ್‌ನ ಸ್ಥಾಪಕರು:
ಮಾಯಿದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಸಮಿತಿಯ ಸದಸ್ಯರೂ, ಇಂಡಿಯನ್ ಸರ್ವಿಸ್ ಕ್ರಿಶ್ಚಿಯನ್ ಅಸೋಸಿಯೇಶನ್ ಟ್ರಸ್ಟ್ ಮಂಗಳೂರು ಇದರ ಅಧ್ಯಕ್ಷರೂ ಆಗಿರುವ ಮೌರಿಸ್ ಮಸ್ಕರೇನ್ಹಸ್‌ರವರು ಹದಿನೈದು ವರ್ಷಗಳ ಹಿಂದೆ ಪುತ್ತೂರು ಕ್ರಿಶ್ಚಿಯನ್ ಯೂನಿಯನ್‌ನ ಸ್ಥಾಪನೆ ಮಾಡುವಲ್ಲಿ ಐವರು ಸದಸ್ಯರಲ್ಲಿ ಓರ್ವರಾಗಿ ಬಹಳಷ್ಟು ಶ್ರಮಿಸಿದ್ದರು. ಬಳಿಕ ಕ್ರಿಶ್ಚಿಯನ್ ಯೂನಿಯನ್‌ನಲ್ಲಿ ಮೂರು ವರ್ಷಗಳ ಕಾಲ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ಸಂತ ವಿಕ್ಟರ್‍ಸ್ ಆಡಳಿತ ಮಂಡಳಿಯ ಸದಸ್ಯರಾಗಿ, ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಗಳ ಪದನಿಮಿತ್ತ ಸದಸ್ಯರಾಗಿಯೂ ಮೌರಿಸ್‌ರವರು ಕಾರ್ಯ ನಿರ್ವಹಿಸಿದ್ದಾರೆ.

ಪ್ರಸ್ತುತ ಮೌರಿಸ್ ಮಸ್ಕರೇನ್ಹಸ್‌ರವರು ಪತ್ನಿ ಕುಂಬ್ರ ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ಶಿಕ್ಷಕಿ ವೃತ್ತಿ ಮಾಡುತ್ತಿರುವ ಜ್ಯುಲಿಯಾನಾ ಮೋರಸ್, ಪುತ್ರಿ ಮಂಗಳೂರಿನ ಶ್ರೀದೇವಿ ಫಾರ್ಮೆಸಿ ಕಾಲೇಜ್‌ನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿರುವ ಮನೀಷಾ, ಪುತ್ರ ಮಂಗಳೂರಿನ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜ್‌ನಲ್ಲಿ ದ್ವಿತೀಯ ವರ್ಷದ ಎಂಬಿಎ ವ್ಯಾಸಂಗ ಮಾಡುತ್ತಿರುವ ಮೇಗಸ್‌ರವರೊಂದಿಗೆ ಸಾಮೆತ್ತಡ್ಕದಲ್ಲಿ ವಾಸ್ತವ್ಯ ಹೊಂದಿದ್ದಾರೆ.

ಕೋವಿಡ್ ನಿಮಿತ್ತ ಡಿಸೆಂಂಬರ್‌ವರೆಗೆ ಸೇವೆ ಕಂಟಿನ್ಯೂ..
ಜುಲೈ ೩೧ ರಂದು ನಿವೃತ್ತರಾದ ಉಪ್ಪಿನಂಗಡಿ ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿ ಮೌರಿಸ್ ಮಸ್ಕರೇನ್ಹಸ್‌ರವರು ಸರಕಾರದ ನಿಬಂಧನೆಯೊಂದಿಗೆ ಆರೋಗ್ಯ ಇಲಾಖೆಯು ಕೋವಿಡ್ ಪ್ರಯುಕ್ತ ೨೦೨೦, ಡಿಸೆಂಬರ್ ೩೧ರ ವರೆಗೆ ಕರ್ತವ್ಯ ಮುಂದುವರೆಸಬೇಕು ಎನ್ನುವ ನಿಯಮದೊಂದಿಗೆ ಮೌರಿಸ್ ಮಸ್ಕರೇನ್ಹಸ್‌ರವರು ನಿವೃತ್ತಿಯಾದರೂ, ಇದೇ ಡಿಸೆಂಬರ್‌ರವರೆಗೆ ಕರ್ತವ್ಯ ಮುಂದುವರೆಸಬೇಕು ಎನ್ನುವ ಆದೇಶದೊಂದಿಗೆ ಡಿಸೆಂಬರ್‌ವರೆಗೆ ಕರ್ತವ್ಯವನ್ನು ಮುಂದುವರೆಸಲಿದ್ದೇನೆ ಎಂದು ಮೌರಿಸ್ ಮಸ್ಕರೇನ್ಹಸ್‌ರವರು `ಸುದ್ದಿ’ಗೆ ಪ್ರತಿಕ್ರಿಯಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.