ನಗರಸಭೆ ವ್ಯಾಪ್ತಿಯಲ್ಲೇ ಶೌಚಕ್ಕೆ ಬಯಲೇ ಗತಿ ! ಸರಕಾರದ ಸೌಲಭ್ಯದಿಂದ ವಂಚಿತರಾದ ಪಂಜಳದ ಮೂರು ಕುಟುಂಬ

Puttur_Advt_NewsUnder_1
Puttur_Advt_NewsUnder_1
  • ತಿಂಗಳೊಳಗೆ ಪ್ರತಿಭಟನೆ – ದ.ಸಂ.ಸ ಎಚ್ಚರಿಕೆ

ಪುತ್ತೂರು: ರಾಜ್ಯವನ್ನು ಬಯಲು ಬಹಿರ್ದೆಸೆ ಮುಕ್ತಗೊಳಿಸುವ ಕೆಲಸ ಇನ್ನೂ ಆಗಿಲ್ಲ. ಅದೆಷ್ಟೋ ಕುಟುಂಬಗಳು ಶೌಚಕ್ಕೆ ಇನ್ನೂ ಬಯಲನ್ನೇ ನೆಚ್ಚಿಕೊಂಡಿವೆ. ಇದಕ್ಕೆ ತಾನೆನು ಕಡಿಮೆ ಇಲ್ಲವೆಂದು ಪುತ್ತೂರು ನಗರಸಭೆ ವ್ಯಾಪ್ತಿಯಲ್ಲೇ ಬೆಳಿಗ್ಗೆ ಚೊಂಬು ಹಿಡಿದು ಬಯಲು ಬಹಿರ್ದೆಸೆಗೆ ಹೋಗುತ್ತಿದ್ದಾರೆ ಎಂದರೆ ಅಚ್ಚರಿ ಮೂಡುವುದು. ಆದರೆ ಇದು ಸತ್ಯ. ಇಲ್ಲಿ ಜನರ ಅರಿವಿನ ಕೊರತೆಗಿಂತ ಇಲಾಖಾಧಿಕಾರಿಗಳ ಮುತುವರ್ಜಿ ಅಗತ್ಯ. ಪುತ್ತೂರು ನಗರಸಭೆ ವ್ಯಾಪ್ತಿಯಲ್ಲಿ ಅರ್ಜಿ ಹಿಡಿದು ಇಲಾಖೆ ಸುತ್ತಿದರೂ ಸರಕಾರದಿಂದ ಗುಡಿಸಲೇ ಮುಕ್ತವಾಗಿಲ್ಲ. ಶೌಚಾಲಯ ಸೌಲಭ್ಯ ಇನ್ನೂ ಇವರ ಪಾಲಿಗೆ ಲಭಿಸಿಲ್ಲ.

ನಗರಸಭೆ ವ್ಯಾಪ್ತಿಯ ಪಂಜಳದಲ್ಲಿ ಪರಿಶಿಷ್ಟ ಜಾತಿಯವರ ಮೂರು ಮನೆಗಳಿಗೆ ಇನ್ನೂ ಸರಿಕಟ್ಟಾದ ಮನೆಯ ವ್ಯವಸ್ಥೆ ಲಭಿಸಿಲ್ಲ. ಸರಕಾರದ ಹಲವು ಯೋಜನೆಗಳಿದ್ದರೂ ಪರಿಸರದ ಭಾಗಿ, ರಜು ಮತ್ತು ಅನಂತ ಎಂಬ ಮೂರು ಮನೆಗಳಿಗೆ ಯೋಜನೆ ಮರಿಚಿಕೆಯಾಗಿದೆ. ೬೦ ವರ್ಷಗಳಿಂದ ವಿದ್ಯುತ್ ದೀಪ ನೋಡಿಲ್ಲ. ಇದರ ಜೊತೆ ಸರಕಾರದ ಉಚಿತ ಶೌಚಾಲಯ ಯೋಜನೆಯೂ ಲಭಿಸಿಲ್ಲ. ಇವತ್ತಿಗೂ ಕೂಡಾ ಈ ಮೂರು ಮನೆಯವರು ಬಹಿರ್ದೆಸೆಗೆ ಬಯಲನ್ನು ಅವಲಂಭಿಸಿದ್ದಾರೆ. ಪಂಜಲ ನಿವಾಸಿ ಭಾಗಿ ಎಂಬವರ ಪತಿ ಮೋನಪ್ಪ ಮುಡೋಡಿ ಅವರು ನಿಧನರಾಗಿದ್ದು ಅವರ ಇಬ್ಬರು ಪುತ್ರಿಯರು ಮನೆಯಲ್ಲೇ ಇದ್ದಾರೆ. ಇವರಿಗೆ ಸರಕಾರದಿಂದ ಸಿಗುವ ಯಾವುದೇ ಮೂಲಭೂತ ಸೌಕರ್ಯಗಳು ಮಂಜೂರಾಗಿಲ್ಲ. ಆರ್ಯಪು ಗ್ರಾಮದ ಸರ್ವೆ ನಂಬ್ರ ೫೨೫/೨ ರಲ್ಲಿ ಎನ್‌ಸಿಆರ್‌ಎಸ್‌ಆರ್ ೭೧೩/೧೯೯೧-೯೨ರಲ್ಲಿ ಸ್ಥಳ ಮಂಜೂರಾಗಿದ್ದರೂ ಕಳೆದ ೬೦ ವರ್ಷಗಳಿಂದ ಈ ಕುಟುಂಬಕ್ಕೆ ಸರಕಾರದ ಸೌಲಭ್ಯ ವಂಚಿತವಾಗಿದೆ ಎಂಬ ಆರೋಪ ಕೇಳಿ ಬರುತ್ತಿದೆ.

ತಿಂಗಳೊಳಗೆ ಪ್ರತಿಭಟನೆ:
ಪರಿಶಿಷ್ಟ ಜಾತಿಯ ಕುಟುಂಬಕ್ಕೆ ಆಗುವ ಅನ್ಯಾಯದ ವಿರುದ್ಧ ಹೋರಾಡುವ ಕುರಿತು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ಆನಂದ ಬೆಳ್ಳಾರೆ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಮನೆ ಬೀಳುವ ಸ್ಥಿತಿಯಲ್ಲಿದೆ. ಮಳೆಯಿಂದ ತಮ್ಮನ್ನು ತಾವು ರಕ್ಷಿಸಿ ಕೊಳ್ಳಲು ತರ್ಪಾಲು ಹೊದಿಸಿದ್ದಾರೆ. ನಮಗೆ ಮನೆ, ವಿದ್ಯುತ್, ಶೌಚಾಲಯ ಒದಗಿಸಿಕೊಡಿ ಎಂದು ಹಲವು ಭಾರಿ ನಗರಸಭೆಗೆ ಮನವಿ ಮಾಡಿದ್ದಾರೆ. ಕಳೆದ ೧೫ ವರ್ಷಗಳಿಂದ ವಾರ್ಡ್‌ನ ಸದಸ್ಯರಲ್ಲಿ, ಜನಪ್ರತಿನಿಧಿಗಳಲ್ಲಿ, ಅಧಿಕಾರಿಗಳಲ್ಲಿ ಮನವಿ ಮಾಡಿ ಆಗಿದೆ. ಇವರ ಅರ್ಜಿಯನ್ನು ನಗರಸಭೆ ತಿರಸ್ಕರಿಸಿದೆ. ಒಂದು ಕಡೆ ನಗರಸಭೆ ಮತ್ತು ಆರ್ಯಾಪು ಗ್ರಾಮದ ಗಡಿಯಲ್ಲಿ ಇರುವ ಹಿನ್ನೆಲೆಯಲ್ಲಿ ಆರಂಭದಲ್ಲಿ ಗ್ರಾ.ಪಂಗೆ ಮನವಿ ನೀಡಿದಾಗ ನಗರಸಭೆ ವ್ಯಾಪ್ತಿ ಎಂದು ಅರ್ಜಿ ಸ್ವೀಕರಿಸಿಲ್ಲ. ನಗರಸಭೆಯಲ್ಲಿ ಅರ್ಜಿ ಸ್ವೀಕರಿಸಿದರೂ ನಾಳೆ ಬನ್ನಿ ಎಂದು ದಿನ ದೂಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಚಿಮಿಣಿ ಬೆಳಕಿನಲ್ಲಿ ಓದು:
ಭಾಗಿ ಎಂಬವರ ಮೊಮ್ಮಗ ದೀಪದ ಬೆಳಕಿನಲ್ಲಿ ಓದಿ ಎಸ್‌ಎಸ್‌ಎಲ್‌ಸಿಯಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಇದೀಗ ಪ್ರಥಮ ಪಿಯುಸಿ ಓದುತ್ತಿದ್ದು, ಇವತ್ತಿಗೂ ಮನೆಯಲ್ಲಿ ಚಿಮಿಣಿ ಬೆಳಕಿನಲ್ಲೇ ಇವರ ಓದು ನಡೆಯುತ್ತಿದೆ. ಪ್ರಸ್ತುತ ಸೀಮೆ ಎಣ್ಣೆ ಸಿಗದ ಹಿನ್ನೆಲೆಯಲ್ಲಿ ಅವರು ಡಿಸೇಲ್ ತಂದು ದೀಪದ ಬೆಳಕನ್ನು ಬೆಳಗಿಸುತ್ತಿದ್ದಾರೆ. ಒಟ್ಟಿನಲ್ಲಿ ಈ ಕುಟುಂಬಗಳ ಮನವಿಯನ್ನು ಜಿಲ್ಲಾಧಿಕಾರಿಗಳಿಗೆ, ಸೂಪರಿಡೆಂಟ್ ಆಫ್ ಪೊಲೀಸ್ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಮಂಗಳೂರು, ಸಹಾಯಕ ಕಮೀಷನರ್ ಪುತ್ತೂರು, ತಹಸೀಲ್ದಾರ್ ಪುತ್ತೂರು ಇವರಿಗೆ ಸಲ್ಲಿಸಲಿದ್ದು, ಸೌಲಭ್ಯ ವಂಚಿತರಾದ ಭಾಗಿ, ರಾಜು ಮತ್ತು ಅನಂತ ಅವರಿಗೆ ನೂತನವಾಗಿ ಶೌಚಾಲಯ, ಹೊಸ ಮನೆ ಕಟ್ಟಲು ನಗರ ಪಂಚಾಯತ್ ವ್ಯಾಪ್ತಿಯಲ್ಲಿ ಅನುದಾನ ಒದಗಿಸಿ ಕೊಡಬೇಕು ಮತ್ತು ತಕ್ಷಣ ಮನೆಗೆ ವಿದ್ಯುತ್ ಸಂಪರ್ಕ ಒದಗಿಸಬೇಕು. ನಮ್ಮ ಬೇಡಿಕೆಗಳು ಮುಂದಿನ ಒಂದು ತಿಂಗಳಲ್ಲಿ ಈಡೇರದಿದ್ದರೆ ನಗರಸಭೆಗೆ ಮುತ್ತಿಗೆ ಹಾಕಿ ಧರಣಿ ಪ್ರತಿಭಟನೆ ಮಾಡುತ್ತೇವೆ ಎಂದು ಆನಂದ ಬೆಳ್ಳಾರೆ ಎಚ್ಚರಿಕೆ ನೀಡಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಸಂತ್ರಸ್ತೆ ಭಾಗಿ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.