ಸುರಕ್ಷತೆಯ ಸಾರಲಿ ಈ ಬಾರಿಯ ರಕ್ಷಾ ಬಂಧನ

Puttur_Advt_NewsUnder_1
Puttur_Advt_NewsUnder_1

ಅಣ್ಣ ತಂಗಿಯ ಸಂಬಂಧ ಪವಿತ್ರವಾದುದು. ತಂಗಿಯ ತುಂಟಾಟ, ಕೋಪ, ಮುನಿಸು, ಅಣ್ಣನ ಕೀಟಲೆ, ಮುದ್ದು, ಪ್ರೀತಿ ಎಲ್ಲವೂ ಅಣ್ಣ ತಂಗಿ ಬಾಂಧವ್ಯದ ಸಿಹಿಯನ್ನು ಮತ್ತಷ್ಟ್ಟು ಹೆಚ್ಚಿಸುತ್ತದೆ. ಅದೆಷ್ಟೇ ಕಿತ್ತಾಡಿದರೂ, ರಂಪ ಮಾಡಿದರೂ ಅವೆಲ್ಲವೂ ಕ್ಷಣಿಕ. ಅಣ್ಣ ತಂಗಿ ಸಂಬಂಧವು ರಕ್ಷೆಯಲ್ಲಿ ಬೆಸೆದ ಪವಿತ್ರ ದಾರದಂತೆ, ಬಿಟ್ಟಿರಲಾರದ ಬಂಧ.

ಭಾರತೀಯ ಪರಂಪರೆಯಲ್ಲಿ ಪ್ರತಿಯೊಂದು ಆಚರಣೆಯೂ ತನ್ನದೇ ಆದ ಮಹತ್ವವನ್ನು ಹೊಂದಿದೆ. ಇಂದು ಅಣ್ಣ ತಂಗಿಯರ ಬಾಂಧವ್ಯ ಸಾರುವ ರಾಖಿ ಹಬ್ಬ. ಸಹೋದರ ಸಹೋದರಿಯರು ತೊಡಿಸುವ ರಾಖಿಯು ಬರೀ ದಾರವಲ್ಲ. ರಕ್ಷೆಯ ಸಂಕೇತ. ಈ ಬಾರಿಯ ರಕ್ಷಾ ಬಂಧನ ಸರಳವಾಗಿಯಾದರೂ ಅರ್ಥಪೂರ್ಣವಾಗಿ ನಡೆಯುತ್ತಿದೆ ಎನ್ನುವುದಂತೂ ನಿಜ. ದೂರ ದೂರವಿದ್ದ ಸಹೋದರ ಸಹೋದರಿಯರು ಈ ಸಂದರ್ಭದಲ್ಲಿ ಒಟ್ಟಿಗೆ ಸೇರಿದ್ದಾರೆ. ಹಾಗಾಗಿ ಈ ಬಾರಿಯ ರಕ್ಷಾ ಬಂಧನ ಕಳೆಗಟ್ಟುವುದರಲ್ಲಿ ಸಂದೇಹವಿಲ್ಲ. ಶ್ರಾವಣ ಮಾಸದ ಹುಣ್ಣಿಮೆಯಂದು ರಕ್ಷಾಬಂಧನವನ್ನು ಆಚರಿಸಲಾಗುತ್ತದೆ. ಭ್ರಾತೃತ್ವದ ಸಂಕೇತವಾದ ರಕ್ಷಾ ಬಂಧನ ಭಾರತೀಯ ಹಬ್ಬಹರಿದಿನಗಳಲ್ಲಿ ಮಹತ್ವವಾದ ಸ್ಥಾನವನ್ನು ಪಡೆದುಕೊಂಡಿದೆ. ಈ ಹಬ್ಬಕ್ಕೆ ಹಲವಾರು ಪೌರಾಣಿಕ ಹಾಗೂ ಐತಿಹಾಸಿಕ ಹಿನ್ನಲೆಗಳಿವೆ.

ಪುರಾಣಗಳ ಪ್ರಕಾರ, ಶ್ರೀಕೃಷ್ಣನು ಶಿಶುಪಾಲನನ್ನು ಸಂಹರಿಸಲು ತನ್ನ ಸುದರ್ಶನ ಚಕ್ರವನ್ನು ಪ್ರಯೋಗಿಸುತ್ತಾನೆ. ಆಗ ಕೃಷ್ಣ ಪರಮಾತ್ಮನ ಕೈ ಬೆರಳಿಗೆ ಸಣ್ಣ ಗಾಯವಾಗುತ್ತದೆ. ಆಗ ದ್ರೌಪದಿಯು ತನ್ನ ಸೀರೆಯನ್ನು ಹರಿದು ಕೃಷ್ಣನ ಬೆರಳಿಗೆ ಕಟ್ಟುತ್ತಾಳೆ. ಇದಕ್ಕೆ ಪ್ರತಿಯಾಗಿ ಶ್ರೀಕೃಷ್ಣನು ದ್ರೌಪದಿಯ ವಸ್ತ್ರಾಪಹರಣದ ಸಂದರ್ಭದಲ್ಲಿ ಆಕೆಯ ಮಾನ ರಕ್ಷಣೆಯನ್ನು ಮಾಡುತ್ತಾನೆ. ದ್ರೌಪದಿ ಕಟ್ಟಿದ ಸೀರೆಯ ಸಣ್ಣ ತುಂಡನ್ನು ಕೃಷ್ಣನು ರಕ್ಷೆಯಾಗಿ, ದ್ರೌಪದಿಯನ್ನು ತಂಗಿಯಾಗಿ ಸ್ವೀಕರಿಸುತ್ತಾನೆ. ಈ ರೀತಿಯಾಗಿ ರಕ್ಷಾಬಂಧನ ಹಬ್ಬ ಪ್ರಾರಂಭವಾಯಿತು ಎಂಬ ನಂಬಿಕೆ ಇದೆ. ರಕ್ಷಾಬಂಧನ ಹಬ್ಬಕ್ಕೆ ಸಂಬಂಧಿಸಿದಂತೆ ಹಲವಾರು ಪೌರಾಣಿಕ ಕಥೆಗಳಿವೆ. ಸಹೋದರಿಯರು ತಮ್ಮ ಸಹೋದರರು ಶ್ರೀಕೃಷ್ಣನಂತೆ ರಕ್ಷಣೆ ನೀಡಲಿ ಎಂಬ ಸದುದ್ದೇಶದಿಂದ ರಕ್ಷೆ ಕಟ್ಟುತ್ತಾರೆ.
ರಾಖಿ ಹಬ್ಬಕ್ಕೆ ಹಲವಾರು ಐತಿಹಾಸಿಕ ಹಿನ್ನಲೆಗಳಿವೆ. ಅಲೆಗ್ಸಾಂಡರ್ ಭಾರತದ ಮೇಲೆ ದಂಡೆತ್ತಿ ಬಂದಾಗ ಆತನಿಗೆ ಯಾವುದೇ ಅಪಾಯ ಮಾಡಬೇಡಿ ಎಂದು ಆತನ ಪತ್ನಿ ಪೋರಸ್‌ಗೆ ರಾಖಿಯನ್ನು ಕಳಿಸುತ್ತಾಳೆ. ಹೀಗಾಗಿ ಪೋರಸ್ ಅಲೆಗ್ಸಾಂಡರ್‌ನನ್ನು ಕೊಲ್ಲದೆ ಕಳಿಸುತ್ತಾನೆ. ಅದೇ ರೀತಿ ಚಿತ್ತೂರಿನ ರಾಣಿ ಕರ್ಣಾವತಿಯು ಗುಜರಾತಿನ ಸುಲ್ತಾನರಿಂದ ತಮಗೆ ರಕ್ಷಣೆ ಒದಗಿಸಬೇಕು ಎಂದು ಮೊಘಲ್ ದೊರೆಯಾಗಿದ್ದ ಹುಮಾಯೂನನಿಗೆ ರಾಖಿಯನ್ನು ಕಳಿಸಿದ ಐತಿಹ್ಯವಿದೆ. ಹೀಗಾಗಿ ರಾಖಿಯು ಪವಿತ್ರತೆಯನ್ನು, ಮೌಲ್ಯವನ್ನು ಹೊಂದಿದೆ.
ಈ ಬಾರಿಯ ರಕ್ಷಾಬಂಧನವು ಸ್ವದೇಶಿ ತತ್ವದೊಂದಿಗೆ, ಸುರಕ್ಷತೆಯ ನಿಲುವಿನೊಂದಿಗೆ ಆಚರಣೆಗೊಳ್ಳಲಿ. ಎಲ್ಲಾ ಸಹೋದರ ಸಹೋದರಿಯರಿಗೂ ರಕ್ಷಾಬಂಧನದ ಶುಭಾಶಯಗಳು.

– ಸೌಜನ್ಯ.ಬಿ.ಎಂ.ಕೆಯ್ಯೂರು.
ವಿವೇಕಾನಂದ ಪದವಿ ಕಾಲೇಜು ಪುತ್ತೂರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.