Breaking News

ಶಾಂತಿನಗರ ಮಹಾವಿಷ್ಣು ದೇವಸ್ಥಾನದ ಸ್ಥಳದಲ್ಲಿ ಅಂದು ದಿಢೀರನೇ ನಿಂತಿತ್ತು ರಾಮರಥ! 30 ವರ್ಷಗಳ ಹಿಂದಿನ ಘಟನೆ ಅಯೋಧ್ಯೆಯ ಭೂಮಿ ಪೂಜೆಯಂದು ಮತ್ತೆ ನೆನಪಾಗುತ್ತಿದೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಪುತ್ತೂರು-ಉಪ್ಪಿನಂಗಡಿ ರಸ್ತೆಯ ಕೋಡಿಂಬಾಡಿ ಮತ್ತು 34ನೇ ನೆಕ್ಕಿಲಾಡಿ ಗ್ರಾಮದ ಮಧ್ಯದಲ್ಲಿರುವ ಶಾಂತಿನಗರದ ಶ್ರೀ ಮಹಾವಿಷ್ಣು ಕ್ಷೇತ್ರಕ್ಕೂ ಅಯೋಧ್ಯೆಯ ಶ್ರೀ ರಾಮನಿಗೂ ಯಾವುದಾದರೂ ಕಾಲದಲ್ಲಿ ಏನಾದರೂ ನಂಟಿತ್ತೋ ಗೊತ್ತಿಲ್ಲ. ಆದರೆ ಈಗ ಶಾಂತಿನಗರದಲ್ಲಿ ದೇವಸ್ಥಾನವಿರುವ ಶಾಂತಿನಗರ-ಕರ್ವೇಲು ರಸ್ತೆಯ ಮುಂದೆ ಸರಿ ಸುಮಾರು ಮೂವತ್ತು ವರ್ಷಗಳ ಹಿಂದೆ ಹಾದು ಹೋಗುತ್ತಿದ್ದ ರಾಮರಥ ಏಕಾಏಕಿ ಒಂದಿಂಚೂ ಅಲ್ಲಾಡದೆ ನಿಂತದ್ದು ಮಾತ್ರ ನಿಜ! ಅದೂ ಹೆಚ್ಚೂ ಕಮ್ಮಿ ಮೂರು ಗಂಟೆಗಳ ಕಾಲ! ಇಂದಿಗೂ ಈ ಘಟನೆ ಒಂದು ಪವಾಡವಾಗಿಯೇ ಬಣ್ಣಿಸಲ್ಪಡುತ್ತಿದೆ. ಅಂದು ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮಚಂದ್ರನ ಜನ್ಮಭೂಮಿಯ ಹೋರಾಟದ ಅಂಗವಾಗಿ ದೇಶಾದ್ಯಂತ ನಡೆಸಲಾಗಿದ್ದ ರಾಮರಥ ಯಾತ್ರೆ ಶಾಂತಿನಗರದಲ್ಲಿಯೂ ನಡೆಯುತ್ತಿದ್ದಾಗ ನಡೆದಿದ್ದ ಈ ಘಟನೆ ಇದೀಗ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿ ಭೂಮಿ ಪೂಜೆ ನಡೆಯುವ ಸಂದರ್ಭದಲ್ಲಿ ಮತ್ತೆ ಮುನ್ನಲೆಗೆ ಬಂದಿದೆ.

ಮೆಲುಕು; 90ರ ದಶಕದಲ್ಲಿ ದೇಶಾದ್ಯಂತ ಅಯೋಧ್ಯೆ ರಾಮರಥ ಅಭಿಯಾನ ನಡೆದದ್ದು ಗೊತ್ತೇ ಇರುವ ಸಂಗತಿ. ಅಂದಿನ ಅಭಿಯಾನದ ಭಾಗವಾಗಿ ಪುತ್ತೂರು ತಾಲೂಕಿನ 34ನೇ ನೆಕ್ಕಿಲಾಡಿ ಗ್ರಾಮದಲ್ಲಿರುವ ಶಾಂತಿನಗರಕ್ಕೂ ರಾಮರಥ ಬಂದಿತ್ತು. ಉಪ್ಪಿನಂಗಡಿಯಿಂದ ಸಾಗಿ ಬಂದ ರಾಮರಥವನ್ನು 34ನೇ ನೆಕ್ಕಿಲಾಡಿ ಗ್ರಾಮದ ಗಡಿಭಾಗದಲ್ಲಿ(ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ೭೫ರಲ್ಲಿರುವ ಉಪ್ಪಿನಂಗಡಿಯ ಕುಮಾರಧಾರ ಸೇತುವೆಯ ಪ್ರಾರಂಭದಲ್ಲಿ ಪುತ್ತೂರು-ಉಪ್ಪಿನಂಗಡಿ ರಸ್ತೆ ಸೇರುವ ಜಾಗ) ಅಂದು ಕೋಡಿಂಬಾಡಿ ಮಂಡಲ ಪಂಚಾಯತ್ ಪ್ರಧಾನರಾಗಿದ್ದ ಕೆ. ಬಾಲಕೃಷ್ಣ ಬೋರ್ಕರ್‌ರವರ ನೇತೃತ್ವದಲ್ಲಿ ಸ್ವಾಗತಿಸಲಾಗಿತ್ತು. ಆ ವೇಳೆ ಗ್ರಾಮದ ಹಿರಿಯ ಅರ್ಚಕರಾಗಿದ್ದ ಮಹಾಬಲ ಐತಾಳ್, ಆರೆಸ್ಸೆಸ್ ಪ್ರಮುಖರಾಗಿದ್ದ ಭಾಸ್ಕರ ಆಚಾರ್ಯ, ಉಮೇಶ್ ಶೆಣೈ, ಇಂದಾಜೆ ಶಾಂತಾರಾಮ ನಾಯಕ್, ಗುರುಗಳಾಗಿದ್ದ ಶೀನಪ್ಪ ಮಾಷ್ಟ್ರು ಸೇರಿದಂತೆ ಸುಮಾರು ಐನೂರಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು. ನೆಕ್ಕಿಲಾಡಿಯಿಂದ ಪುತ್ತೂರು ರಸ್ತೆಯಲ್ಲಿ ಹೊರಟು ಆದರ್ಶನಗರ, ನೆಕ್ಕಿಲಾಡಿ ಶಾಲೆ, ಬೇರಿಕೆ, ಶಾಂತಿನಗರ ತಲುಪಿದ್ದ ರಥಕ್ಕೆ ಶಾಂತಿನಗರ ಮೈದಾನದಲ್ಲಿರುವ ಸತ್ಯನಾರಾಯಣ ಪೂಜೆ ಕಟ್ಟೆ ಬಳಿ ಪೂಜೆ ಸಲ್ಲಿಸಲಾಗಿತ್ತು. ಆ ಬಳಿಕ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 47(ಈಗ 75) ಅನ್ನು ಸಂಪರ್ಕಿಸುವ ಕರುವೇಲು ಮಾರ್ಗದಲ್ಲಿ ಮುಂದುವರಿಯುವ ಹೊತ್ತಲ್ಲೇ ಈ ಅಚ್ಚರಿಯ ಘಟನೆ ನಡೆದಿತ್ತು. ಆಗಿನ್ನೂ ಶಾಂತಿನಗರ-ಕರ್ವೇಲು ರಸ್ತೆ ಡಾಂಬರು ಭಾಗ್ಯ ಕಂಡಿರಲಿಲ್ಲ. ಶಾಂತಿನಗರ ಮೈದಾನದ ಪೂಜಾ ಕಟ್ಟೆಯ ಬಳಿಯಿಂದ ಹೊರಟಿದ್ದ ರಾಮರಥ ಸುಮಾರ ೧೦೦ ಮೀಟರ್ ತಲುಪುವಷ್ಟರಲ್ಲೇ ಅಚಾನಕ್ಕಾಗಿ ನಿಂತಿತ್ತು! ರಥದ ವಾಹನ ಚಲಾಯಿಸುತ್ತಿದ್ದ ಡ್ರೈವರ್ ಎಷ್ಟೇ ಪ್ರಯತ್ನಿಸಿದರೂ ಒಂದಿಂಚೂ ಮುಂದಕ್ಕೆ ಚಲಿಸಲಿಲ್ಲ. ಮೆರವಣಿಗೆಯಲ್ಲಿ ಹೊರಟವರು ಎಷ್ಟೇ ಬಲ ಪ್ರಯೋಗಿಸಿ ದೂಡಿದರೂ ರಥ ಒಂಚೂರೂ ಅಲುಗಾಡಲಿಲ್ಲ. ಹಾಗೆಂದು ಗಾಡಿಯ ಚಕ್ರವೇನೂ ರಸ್ತೆದಲ್ಲಿ ಹೂತು ಹೋಗಿರಲಿಲ್ಲ. ಆದರೂ ರಥ ಮುಂದಕ್ಕೆ ಚಲಿಸದ್ದು ಎಲ್ಲರ ಅಚ್ಚರಿಗೆ ಕಾರಣವಾಗಿತ್ತು. ತಾಂತ್ರಿಕ ದೋಷವಿರಬಹುದೆಂದು ಮೆಕ್ಯಾನಿಕ್‌ಗಳನ್ನು ಕರೆಸಿ ನೋಡಿದರೂ ಸಮಸ್ಯೆ ಏನೆಂದು ಅವರಿಗೂ ತಿಳಿಯಲಿಲ್ಲ. ಹೀಗೆ ಗಂಟೆಗಟ್ಟಲೆ ಸಮಯ ವ್ಯರ್ಥವಾಗುತ್ತಿದ್ದಾಗ ಅರ್ಚಕ ಮಹಾಬಲ ಐತಾಳರು `ಇಲ್ಲಿ ಆಸುಪಾಸಿನಲ್ಲಿ ಯಾವುದಾದರೂ ದೇವಸ್ಥಾನ, ದೈವಸ್ಥಾನ, ಗುಡಿ ಏನಾದರೂ ಉಂಟಾ?’ ಎಂದು ಕೇಳಿದ್ದರು. ಅದಕ್ಕೆ ಬಾಲಕೃಷ್ಣ ಬೋರ್ಕರ್, `ಇಲ್ಲೇ ಎಡಗಡೆಗೆ ಹಿಂದೆ ದೇವಸ್ಥಾನವೋ, ದೈವಸ್ಥಾನ ಇತ್ತೋ ಏನೋ ಗೊತ್ತಿಲ್ಲ. ಆದರೆ ಅದರ ಅವಶೇಷಗಳಿವೆ. ನೋಡುವುದಿದ್ದರೆ ನೋಡೋಣ’ ಎಂದರು. ಮಹಾಬಲ ಐತಾಳರೂ ಸರಿ ಎಂದವರೇ ಬೋರ್ಕರ್ ಜೊತೆ ದೇವಸ್ಥಾನದ ಅವಶೇಷ ಇದ್ದ ಜಾಗಕ್ಕೆ ಹೋದರು. ಸುಮಾರು ಒಂದೂವರೆ ಎಕರೆ ವಿಸ್ತಾರದಲ್ಲಿನ ಆ ಸರ್ಕಾರಿ ಜಾಗದ ಎಡಗಡೆ ಕಲ್ಪಣೆ(ತುಳುನಾಡಿನಲ್ಲಿ ಮನೆ ಕಟ್ಟಲು ಉಪಯೋಗಿಸುವ ಕೆಂಪು ಕಲ್ಲನ್ನು ಭೂಮಿಯಿಂದ ವ್ಯವಸ್ಥಿತವಾಗಿ ಕೆತ್ತಿ ಬೇರ್ಪಡಿಸಿ ತೆಗೆಯುವ ಜಾಗಕ್ಕೆ ಕಲ್ಪಣೆ ಎನ್ನುತ್ತಾರೆ.) ಇತ್ತು. ಅಬಕಾರಿ ಇಲಾಖೆಯಲ್ಲಿ ಇನ್ಸ್‌ಪೆಕ್ಟರ್ ಆಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದ ದಿ. ಶಂಕರ ಮುಖಾರಿಯವರ ಮನೆಯ ಮುಂದೆಯೇ ಇದ್ದ ಆ ಜಾಗದಲ್ಲಿದ್ದ ಕಲ್ಪಣೆಯ ಬಲ ಭಾಗದಲ್ಲೇ ಪಾಳು ಬಿದ್ದ ದೇವಸ್ಥಾನದ ಕುರುಹು ಮತ್ತು ವಿಷ್ಣುವಿನ ಭಗ್ನಗೊಂಡಿದ್ದ ಮೂರ್ತಿ ಇದ್ದದ್ದು ಕಂಡು ಬಂದಿತ್ತು. ಇಡೀ ಊರಲ್ಲಿ ಆ ಜಾಗವನ್ನು ಯಾರೂ ಗಂಭೀರವಾಗಿ ಪರಿಗಣಿಸಿರಲಿಲ್ಲ. ಅಲ್ಲಿ ಯಾವ ಪೂಜೆಯೂ ನಡೆಯುತ್ತಿರಲಿಲ್ಲ. ಆ ಜಾಗವನ್ನು ಪರಿಶೀಲಿಸಿದ ಐತಾಳರು `ಇಲ್ಲಿ ಸಣ್ಣದಾಗಿ ಹಣ್ಣು ಕಾಯಿ ನೈವೇದ್ಯ ಮಾಡಿ ಪ್ರಾರ್ಥಿಸೋಣ’ ಎಂದರು. ತಕ್ಷಣವೇ ಬೋರ್ಕರ್ ಅಗತ್ಯ ವ್ಯವಸ್ಥೆ ಮಾಡಿಸಿದರು. ಮಹಾಬಲ ಐತಾಳರು ಹಣ್ಣುಕಾಯಿ ನೈವೇದ್ಯ ಮಾಡಿ, `ಈ ಜಾಗದಲ್ಲಿರುವ ದೈವೀಶಕ್ತಿ ಯಾವುದೆಂದು ನಮಗೆ ಗೊತ್ತಿಲ್ಲ. ಆದರೆ ಮುಂದಿನ ದಿನಗಳಲ್ಲಿ ಊರವರೆಲ್ಲ ಒಂದಾಗಿ ಅಷ್ಟಮಂಗಲ ಇಟ್ಟು, ಅದರಲ್ಲಿ ಕಂಡು ಬಂದಂತೆ ಮುಂದುವರಿಯುತ್ತೇವೆ. ಈ ಸ್ಥಳದಲ್ಲಿ ದೇವತಾರಾಧನೆಗೆ ಯಾವುದೇ ಚ್ಯುತಿಯಾಗದಂತೆ ನೋಡಿಕೊಳ್ಳುತ್ತೇವೆ. ಈಗ ರಾಮರಥ ಮುಂದುವರಿಯಲು ಅನುವು ಮಾಡಿಕೊಡಬೇಕು’ ಎಂದು ದೇವರಲ್ಲಿ ಪ್ರಾರ್ಥಿಸಿದರು. ಆಶ್ಚರ್ಯ ಅಂದರೆ ಅಷ್ಟರವರೆಗೆ ಸುಮಾರು ೩ ಗಂಟೆಗಳ ಕಾಲ ಆ ಸ್ಥಳದಲ್ಲೇ ಚಂಡಿ ಹಿಡಿದು ಕೂತಿದ್ದ ರಾಮರಥ ಪ್ರಾರ್ಥನೆ ಮುಗಿದೊಡನೆ ಮುಂದಕ್ಕೆ ಚಲಿಸಿತ್ತು! ರಾಮನೇ ಇಲ್ಲಿ ವಿಷ್ಣುವಿನ ಸಾನ್ನಿಧ್ಯವನ್ನು ತೋರಿಸಿಕೊಟ್ಟನೋ, ಇಲ್ಲಾ ವಿಷ್ಣುವೇ ರಾಮನಲ್ಲಿ ಹಠ ಹಿಡಿದಿದ್ದನೋ! ಅಂತೂ ಇಂಥದ್ದೊಂದು ಘಟನೆ ಶಾಂತಿನಗರದಲ್ಲಿ ನಡೆದದ್ದು ನಿಜ. ಆ ಘಟನೆಯೇ ಈ ಸ್ಥಳದ ಬಗ್ಗೆ ಊರಿನ ಜನರಲ್ಲಿ ಭಕ್ತಿ ಹುಟ್ಟಲು ಕಾರಣವಾಯ್ತು. ಆ ಸ್ಥಳದಲ್ಲಿ ಅಷ್ಟಮಂಗಲ ಪ್ರಶ್ನೆಯನ್ನು ಇಡುವುದೆಂದೂ ತೀರ್ಮಾನವಾಯಿತು. ಹಿಂದೆ ಯಾವುದೋ ಕಾರಣಕ್ಕೆ ನಶಿಸಲ್ಪಟ್ಟ ಅಲ್ಲಿದ್ದ ದೇವಸ್ಥಾನದಲ್ಲಿ ಮಹಾವಿಷ್ಣುವಿನ ಆರಾಧನೆಯಾಗುತ್ತಿತ್ತು ಎಂದು ಅಷ್ಟಮಂಗಲದಲ್ಲಿ ಕಂಡು ಬಂತು ಕೂಡ. ಹಾಗಾಗಿ ಅಲ್ಲಿ ಮಹಾವಿಷ್ಣು ದೇವಸ್ಥಾನ ನಿರ್ಮಾಣಕ್ಕೆ ಸಂಕಲ್ಪ ಮಾಡಲಾಯಿತು. ಬಳಿಕ ಬಾಲಾಲಯದಲ್ಲಿಟ್ಟಿದ್ದ ಭಗ್ನಗೊಂಡಿದ್ದ ವಿಷ್ಣುವಿನ ವಿಗ್ರಹದ ಮುಂದೆ ಪ್ರತಿ ತಿಂಗಳು ಸಂಕ್ರಮಣದಂದು ಭಜನೆ ನಡೆಯುತ್ತಿತ್ತು. ಸಂಕಲ್ಪವೇನೋ ಮಾಡಿಯಾಗಿತ್ತು. ಆದರೆ ಅಲ್ಲಿ ದೇವಸ್ಥಾನ ನಿರ್ಮಾಣ ಕಾರ್ಯ ಸುಲಭವಿರಲಿಲ್ಲ. ಕಾರಣ ಆ ದಿನಗಳಲ್ಲಿ ಹಲವಾರು ಎತ್ತರ ತಗ್ಗುಗಳಿಂದ ಕೂಡಿದ್ದ ಈ ಜಾಗವನ್ನು ಸಮತಟ್ಟು ಮಾಡುವ ಕಾರ್ಯವೇ ಬಹಳ ಸವಾಲಿನದಾಗಿತ್ತು. ಪ್ರಾರಂಭದಲ್ಲಿ ಕೋಡಿಂಬಾಡಿ, ಬೆಳ್ಳಿಪ್ಪಾಡಿ, ನೆಕ್ಕಿಲಾಡಿ ಗ್ರಾಮಸ್ಥರಿಂದ ನಿರಂತರವಾಗಿ ಶ್ರಮದಾನ ಕಾರ್ಯಗಳು ನಡೆದವು. ಶಾಂತಿನಗರವೆಂಬ ಪುಟ್ಟ ಊರಲ್ಲಿ ಈ ಮೂರೂ ಗ್ರಾಮಗಳ ಗಡಿಗಳು ಸಂಧಿಸುತ್ತವಾದ್ದರಿಂದ ಈ ಎಲ್ಲಾ ಗ್ರಾಮಗಳ ನಾಗರಿಕರೂ ಶ್ರದ್ಧೆಯಿಂದ ದೇವತಾ ಕಾರ್ಯದಲ್ಲಿ ಪಾಲ್ಗೊಂಡರು. ಜೊತೆಗೆ ಯಾವುದೇ ಕಾರ್ಯಕ್ಕೂ ಎಷ್ಟೊತ್ತಿಗೂ ಸನ್ನದ್ಧವಾಗಿರುತ್ತಿದ್ದ ಯುವಕರ ತಂಡ ಮಳೆಗಾಳಿಯೆನ್ನದೆ, ರಾತ್ರಿ ಹಗಲೆನ್ನದೆ ಖುಷಿಯಿಂದ ಶ್ರಮದಾನ ನಡೆಸಿತು. ರಾತಿ ವೇಳೆ ಗ್ಯಾಸ್ ಲೈಟ್, ಚಾರ್ಜರ್ ಲೈಟ್‌ಗಳನ್ನೆಲ್ಲಾ ಇಟ್ಟು ಹಾರೆ, ಪಿಕ್ಕಾಸು, ಬುಟ್ಟಿ ಹಿಡಿದುಕೊಂಡು ನೆಲ ಸಮತಟ್ಟು ಮಾಡಿದ್ದರು. ಅಗೆದಷ್ಟೂ ಬೆಟ್ಟ ಎಂಬಂತೆ ಎಷ್ಟೇ ಶ್ರಮದಾನ ನಡೆಸಿದರೂ ಗಟ್ಟಿ ನೆಲ ಹೊಂದಿದ್ದ ಆ ಜಾಗ ಬೇಗನೆ ಸಮತಟ್ಟು ಆಗುವ ಲಕ್ಷಣಗಳಿರಲಿಲ್ಲ. ನಂತರ ಬುಲ್ಡೋಜರ್ ತರಿಸಿ ಆ ಜಾಗವನ್ನು ಸಮತಟ್ಟು ಮಾಡಿಸಲಾಯಿತು. ಈ ನಡುವೆ ನಾಗನಕಟ್ಟೆ, ಮಹಾವಿಷ್ಣುವಿನ ಗರ್ಭಗುಡಿ, ಗಣಪತಿ ಗುಡಿ, ಮಂಟಪ, ಬಾವಿ ನಿರ್ಮಾಣ, ಒಳಾಂಗಣ, ಸುತ್ತಂಬಲ ನಿರ್ಮಾಣ ಕಾರ್ಯ, ರಕ್ತೇಶ್ವರಿ ಗುಡಿಗಳೆಲ್ಲವೂ ಒಂದೊಂದಾಗಿ ನೆರವೇರಿದವು. ಪ್ರಾರಂಭದ ಕೆಲ ವರ್ಷಗಳಲ್ಲಿ ಹಣಕಾಸಿನ ಸಮಸ್ಯೆಯಿಂದಾಗಿ ನಿಧಾನಗತಿಯಲ್ಲಿ ಸಾಗುತ್ತಿದ್ದ ಕೆಲಸ ಕಾರ್ಯಗಳು ಊರ, ಪರವೂರ ಗಣ್ಯರು, ದಾನಿಗಳು ಕೈ ಜೋಡಿಸಿದ ಬಳಿಕ ಬಹಳ ವೇಗ ಪಡೆಯಿತು.
ಅಂತೂ ದಶಕದ ಹಿಂದೆ ಶಾಂತಿನಗರದ ಮಹಾವಿಷ್ಣುವಿಗೆ ಸುಂದರ, ಅಚ್ಚುಕಟ್ಟಾದ ಮಂದಿರ ನಿರ್ಮಾಣವಾಯಿತು. ಮುಂದಿನ ವರ್ಷ ಇಲ್ಲಿ ಬ್ರಹ್ಮಕಲಶೋತ್ಸವವೂ ನಡೆಯಲಿದೆ. ಈ ಜಾಗದಲ್ಲಿ ವಿಷ್ಣುವಿನ ಸಾನ್ನಿಧ್ಯವನ್ನು ತೋರಿಸಿಕೊಟ್ಟಿದ್ದ ಶ್ರೀರಾಮನಿಗೆ ಭವ್ಯಮಂದಿರ ನಿರ್ಮಿಸಲು ಇದೀಗ ಅಯೋಧ್ಯೆಯಲ್ಲಿ ಭೂಮಿಪೂಜೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ಇವನ್ನೆಲ್ಲಾ ಭಕ್ತರು ನೆನಪಿಸಿಕೊಳ್ಳುತ್ತಿದ್ದಾರೆ.

ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ಸಿದ್ಧತೆ : ಶಾಂತಿನಗರ ಶ್ರೀ ಮಹಾವಿಷ್ಣು ದೇವಸ್ಥಾನದ ಬ್ರಹ್ಮಕಲಶೋತ್ಸವ ಕಳೆದ 11 ವರ್ಷಗಳ ಹಿಂದೆ ನಡೆದಿತ್ತು. ಕೋಡಿಂಬಾಡಿ, ಬೆಳ್ಳಿಪ್ಪಾಡಿ ಮತ್ತು ನೆಕ್ಕಿಲಾಡಿ ಗ್ರಾಮಗಳ ತ್ರಿವೇಣಿ ಸಂಗಮ ಸ್ಥಳ ಎಂದೇ ಕರೆಸಿಕೊಳ್ಳುತ್ತಿರುವ ಶಾಂತಿನಗರದಲ್ಲಿ ಇದೀಗ ಮತ್ತೆ ಬ್ರಹ್ಮಕಲಶೋತ್ಸವಕ್ಕೆ ಸಿದ್ಧತೆ ನಡೆಯುತ್ತಿದೆ. ಮಹಾವಿಷ್ಣು ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಧನ್ಯಕುಮಾರ್ ರೈ ಬಿಳಿಯೂರುಗುತ್ತು ಮತ್ತು ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾಗಿದ್ದ ಕೋಡಿಂಬಾಡಿ ರೈ ಎಸ್ಟೇಟ್ ಮಾಲಕ ಅಶೋಕ್ ಕುಮಾರ್ ರೈಯವರ ಮುಂದಾಳತ್ವದಲ್ಲಿ ಬ್ರಹ್ಮಕಲಶೋತ್ಸವ ಜರಗಿತ್ತು. ಇದೀಗ ಉಪ್ಪಿನಂಗಡಿ ನಟ್ಟಿಬೈಲು ವೇದಶಂಕರದಲ್ಲಿರುವ ಶ್ರೀರಾಮ ಶಾಲೆಯ ಸಂಚಾಲಕರಾಗಿರುವ ಉಪ್ಪಿನಂಗಡಿಯ ಕೈಲಾರ್ ಮೆಡಿಕಲ್ಸ್‌ನ ಮಾಲಕ ಯು.ಜಿ.ರಾಧಾ ಶಾಂತಿನಗರರವರು ದೇವಸ್ಥಾನದ ಆಡಳಿತ ಮೊಕ್ತೇಸರರಾಗಿದ್ದಾರೆ. ಇವರ ನೇತೃತ್ವದಲ್ಲಿ ಇದೀಗ ದೇವಸ್ಥಾನದ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವಕ್ಕೆ ತಯಾರಿ ನಡೆಯುತ್ತಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.