Breaking News

ಇಂದು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ

Puttur_Advt_NewsUnder_1
Puttur_Advt_NewsUnder_1
  • ಸೂಕ್ಷ್ಮ ಪ್ರದೇಶಗಳಲ್ಲಿ ಕಟ್ಟೆಚ್ಚರ, ಸೆಕ್ಷನ್ 144 ಜಾರಿ
  • ಫೇಸ್‌ಬುಕ್, ವಾಟ್ಸ್‌ಅಪ್ ಮೇಲೆ ಪೊಲೀಸ್ ಕಣ್ಗಾವಲು
  • ಜಿಲ್ಲೆಯಲ್ಲಿ ಗುರುವಾರ ಬೆಳಿಗ್ಗೆ 9ರತನಕ ಮದ್ಯ ಮಾರಾಟ ನಿಷೇಧ

ಪುತ್ತೂರು: ಉತ್ತರಪ್ರದೇಶದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಆ.೫ರಂದು ಪ್ರಧಾನಿ ನರೇಂದ್ರ ಮೋದಿಯವರಿಂದ ಭೂಮಿ ಪೂಜೆ ನಡೆಯಲಿದ್ದು ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಕಟ್ಟೆಚ್ಚರ ವಹಿಸಲಾಗಿದ್ದು ಸೂಕ್ಷ್ಮ ಪ್ರದೇಶಗಳಲ್ಲಿ ಸಿಆರ್‌ಪಿಸಿ ಸೆಕ್ಷನ್ ೧೪೪ ಜಾರಿ ಮಾಡಲಾಗಿದೆ. ಫೇಸ್‌ಬುಕ್, ವಾಟ್ಸ್‌ಅಪ್ ಮೇಲೆ ಕಣ್ಣಿಡಲಾಗಿದ್ದು ಮದ್ಯ ಮಾರಾಟ ನಿಷೇಧಿಸಲಾಗಿದೆ.

ಅಯೋಧ್ಯೆ ಸೂಕ್ಷ್ಮ ವಿಚಾರವಾಗಿರುವುದರಿಂದ ಶಾಂತಿ ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ದ.ಕ.ಜಿಲ್ಲೆಯಲ್ಲಿ ಮಂಗಳವಾರ ಸಂಜೆ ೬ರಿಂದ ಗುರುವಾರ ಬೆಳಿಗ್ಗೆ ೯ ಗಂಟೆಯ ತನಕ ಮದ್ಯ ಮಾರಾಟ ನಿಷೇಧಿಸಲಾಗಿದೆ. ಈ ಅವಧಿಯಲ್ಲಿ ಜಿಲ್ಲೆಯ ಎಲ್ಲಾ ಬಾರ್ ಮತ್ತು ರೆಸ್ಟೊರೆಂಟ್, ವೈನ್‌ಶಾಪ್‌ಹಾಗೂ ಸರಕಾರಿ ಮದ್ಯ ಮಳಿಗೆಗಳನ್ನು ಮುಚ್ಚುವಂತೆ ಜಿಲ್ಲಾಧಿಕಾರಿ ರಾಜೇಂದ್ರ ಕೆ.ವಿ. ಆದೇಶಿಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಮಂಗಳೂರು ನಗರದಲ್ಲಿ ಮಂಗಳವಾರ ರಾತ್ರಿಯಿಂದ ಗುರುವಾರ ಬೆಳಿಗ್ಗೆ ೬ ಗಂಟೆಯ ತನಕ ಸಿಆರ್‌ಪಿಸಿ ಸೆಕ್ಷನ್ ೧೪೪ ಜಾರಿ ಮಾಡಲಾಗಿದೆ. ನಿಯಮ ಉಲ್ಲಂಘನೆ ಕಂಡುಬಂದರೆ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ರಾಜ್ಯಾದ್ಯಂತ ಕಟ್ಟೆಚ್ಚರ: ಅಯೋಧ್ಯೆ ವಿವಾದದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಆ.೫ರಂದು ರಾಜ್ಯಾದ್ಯಂತ ಬಿಗಿಬಂದೋಬಸ್ತ್‌ಗೆ ಸೂಚಿಸಲಾಗಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಸೆಕ್ಷನ್ ೧೪೪ ಜಾರಿ ಹಾಗೂ ಡ್ರೋನ್ ಮೂಲಕ ನಿಗಾವಹಿಸುವಂತೆ ಮತ್ತು ದೇವಸ್ಥಾನ, ಪ್ರಾರ್ಥನಾ ಮಂದಿರಗಳಿಗೆ ಬಂದೋಬಸ್ತ್ ಒದಗಿಸಲು ತೀರ್ಮಾನಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆಗೆ ಬೆಂಗಳೂರಿನಲ್ಲಿ ವಿಡಿಯೋ ಸಂವಾದ ನಡೆದ ಬಳಿಕ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ. ಬೆಂಗಳೂರು, ಮೈಸೂರು, ಮಂಗಳೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಕಲ್ಬುರ್ಗಿ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳು ನಿಗಾ ವಹಿಸಬೇಕು. ಅಲ್ಲದೆ ಗಡಿ ಜಿಲ್ಲೆಗಳಾದ ಚಾಮರಾಜನಗರ, ಮಡಿಕೇರಿ, ಬೆಳಗಾವಿ, ಮಂಗಳೂರು ,ಕೋಲಾರ, ಕಲ್ಬುರ್ಗಿ ಜಿಲ್ಲೆಗಳ ಗಡಿ ಚೆಕ್‌ಪೋಸ್ಟ್‌ಗಳಲ್ಲೂ ಸೂಕ್ತ ಬಂದೋಬಸ್ತ್ ಮಾಡಿ, ಅನುಮಾನಾಸ್ಪದ ವ್ಯಕ್ತಿಗಳ ಮೇಲೆ ನಿಗಾವಹಿಸಲಾಗುವುದು ಎಂದಿದ್ದಾರೆ. ರಾಮ ಜನ್ಮಭೂಮಿ ಕುರಿತಂತೆ ಸುಪ್ರೀಂಕೋರ್‍ಟ್ ಆದೇಶ ಪಾಲನೆ ಎಲ್ಲಾ ನಾಗರಿಕರ ಕರ್ತವ್ಯ ಮತ್ತು ಜವಾಬ್ದಾರಿ. ಶಿಲಾನ್ಯಾಸ ಮತ್ತು ಭೂಮಿ ಪೂಜೆ ಬಗ್ಗೆ ವಿವಾದಾತ್ಮಕ ಹೇಳಿಕೆಗಳನ್ನು ನೀಡಬಾರದು. ಅಹಿತಕರ ಘಟನೆಗಳಿಗೆ ಅವಕಾಶ ನೀಡಬಾರದು. ಕೋವಿಡ್ ಇರುವುದರಿಂದ ಮನೆಗಳು, ದೇವಸ್ಥಾನ ಮತ್ತು ಮಂದಿರಗಳಲ್ಲಿ ಮಾತ್ರ ಆಚರಣೆ ಮಾಡಬಹುದಾಗಿದೆ ಎಂದು ಬೊಮ್ಮಾಯಿ ಹೇಳಿದ್ದಾರೆ.

ಫೇಸ್‌ಬುಕ್, ವಾಟ್ಸ್‌ಅಪ್ ಮೇಲೆ ಪೊಲೀಸ್ ಕಣ್ಣು: ಫೇಸ್‌ಬುಕ್ ಮತ್ತು ವಾಟ್ಸ್‌ಅಪ್ ಮೇಲೆ ಕಣ್ಣಿಡಲಾಗುವುದು. ಆಕ್ಷೇಪಾರ್ಹ ಮತ್ತು ಪ್ರಚೋದನಕಾರಿ ಮಾಹಿತಿ ಪ್ರಕಟಿಸಿದರೆ ಅಂತಹವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ಕಾನೂನು ಉಲ್ಲಂಸುವವರ ವಿರುದ್ಧ ಗೂಂಡಾ ಕಾಯ್ದೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

ವಿಜಯೋತ್ಸವ, ಪ್ರತಿಭಟನೆಗೆ ಅನುಮತಿ ಇಲ್ಲ: ರಾಮ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಯಾವುದೇ ಮೆರವಣಿಗೆ, ವಿಜಯೋತ್ಸವ, ಪ್ರತಿಭಟನೆಗೆ ಪೊಲೀಸ್ ಇಲಾಖೆ ಅನುಮತಿ ನೀಡಿರುವುದಿಲ್ಲ. ಕೋಮು ಸೂಕ್ಷ್ಮ ಜಿಲ್ಲೆಗಳಲ್ಲಿ ತೀವ್ರ ನಿಗಾ ಇಡಬೇಕು. ಕೋಮು ಸೌಹಾರ್ಧತೆಗೆ ಧಕ್ಕೆ ತರುವವರು ಕಂಡುಬಂದರೆ ಮುನ್ನೆಚ್ಚರಿಕೆ ಕ್ರಮವಾಗಿ ವಶಕ್ಕೆ ಪಡೆಯಬೇಕು ಹಾಗೂ ಯಾವುದೇ ದೇವಸ್ಥಾನ, ಮಸೀದಿಗಳಲ್ಲಿ ಬಾವುಟ ಕಟ್ಟುವಂತಿಲ್ಲ. ಜನನಿಬಿಡ ಪ್ರದೇಶಗಳು, ಮಾಲ್, ದೇವಸ್ಥಾನ, ಬಸ್ ನಿಲ್ದಾಣಗಳಲ್ಲಿ ಹೆಚ್ಚಿನ ಭದ್ರತೆ ಒದಗಿಸಬೇಕೆಂದು ಸೂಚನೆ ನೀಡಲಾಗಿದೆ.

ಪ್ರಧಾನಿ ನರೇಂದ್ರ ಮೋದಿಯವರಿಂದ ಶಿಲಾನ್ಯಾಸ
ಆ.೫ರಂದು ಬೆಳಿಗ್ಗೆ ೯.೩೦ಕ್ಕೆ ವಿಶೇಷ ವಿಮಾನದ ಮೂಲಕ ಲಖನೌಗೆ ಆಗಮಿಸಲಿರುವ ಪ್ರಧಾನಿ ನರೇಂದ್ರಮೋದಿಯವರು ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಅಯೋಧ್ಯೆಗೆ ತೆರಳಲಿದ್ದಾರೆ. ೧೧.೩೦ಕ್ಕೆ ಅಯೋಧ್ಯೆ ತಲುಪಲಿದ್ದು ಅಲ್ಲಿನ ಹನುಮಗಡಿ ದೇವಾಲಯದಲ್ಲಿ ಮೊದಲು ಪೂಜೆ ಸಲ್ಲಿಸಲಿದ್ದಾರೆ. ಮಧ್ಯಾಹ್ನ ೧೨.೪೦ಕ್ಕೆ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಲಿದ್ದಾರೆ. ಮಧ್ಯಾಹ್ನ ೨ ಗಂಟೆ ಸುಮಾರಿಗೆ ಅಯೋಧ್ಯೆಯಿಂದ ಲಖನೌಗೆ ಹೆಲಿಕಾಪ್ಟರ್ ಮೂಲಕ ಹಿಂತಿರುಗಲಿದ್ದಾರೆ. ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಈ ಶಿಲಾನ್ಯಾಸ ಕಾರ್ಯಕ್ರಮಕ್ಕೆ ೧೭೫ ಗಣ್ಯ ಅತಿಥಿಗಳಿಗೆ ಆಹ್ವಾನ ನೀಡಿದೆ ಎಂದು ವರದಿಯಾಗಿದೆ.

About The Author

Related posts

1 Comment

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.