ಕೇವಲ ಹಿಂದೂಗಳಿಗೆ ಮಾತ್ರವಲ್ಲ ಸಮಸ್ತ ಸಮುದಾಯದವರಿಗೂ ಶ್ರೀರಾಮ ಮಂದಿರ ನಿರ್ಮಾಣದಿಂದ ಒಳಿತಾಗಲಿದೆ

Puttur_Advt_NewsUnder_1
Puttur_Advt_NewsUnder_1

🚩ಹಕ್ಕಿಯೂ ಹಾರಲು ಬಿಡುವುದಿಲ್ಲ ಎಂದಿದ್ದ ಜಾಗದಲ್ಲಿ ನಮ್ಮವರು ಭಗವಾಧ್ವಜ ಹಾರಿಸಿದರು

🚩ಕೇವಲ ಹಿಂದೂಗಳಿಗೆ ಮಾತ್ರವಲ್ಲ ಸಮಸ್ತ ಸಮುದಾಯದವರಿಗೂ
🚩ಶ್ರೀರಾಮ ಮಂದಿರ ನಿರ್ಮಾಣದಿಂದ ಒಳಿತಾಗಲಿದೆ

🛕ರಾಜೀವ ಗಾಂಧಿ ನೇತೃತ್ವದಲ್ಲಿ ರಾಮ ಮಂದಿರಕ್ಕೆ ಶಿಲಾನ್ಯಾಸ ನಡೆದಿದೆ: ಈಗ ಭೂಮಿ ಪೂಜೆ ನಡೆಯುತ್ತಿದೆ
🛕ಅಯೋಧ್ಯೆ ಹೋರಾಟದ ಕುರಿತು ಡಾ. ಪ್ರಭಾಕರ ಭಟ್ ಕಲ್ಲಡ್ಕ

ಪುತ್ತೂರು: ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದ ಮುಲಾಯಂ ಸಿಂಗ್ ಯಾದವ್‌ರವರು ಅಯೋಧ್ಯೆಯ ಕರ ಸೇವೆಯ ಸಮಯದಲ್ಲಿ ಒಂದು ಹಕ್ಕಿಯನ್ನೂ ಅಲ್ಲಿ ಹಾರಲು ಬಿಡುವುದಿಲ್ಲ ಎಂದು ಹೇಳಿದ್ದರು, ಆದರೆ ನಮ್ಮವರು ಭಗವಾಧ್ವಜವನ್ನೇ ಹಾರಿಸಿದರು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಮುಖಂಡ ಡಾ. ಪ್ರಭಾಕರ ಭಟ್ ಕಲ್ಲಡ್ಕರವರು ಹೇಳಿದ್ದಾರೆ. ಆಯೋಧ್ಯೆಯಲ್ಲಿ ಮರ್ಯಾದಾ ಪುರುಷೋತ್ತಮ ಪ್ರಭು ಶ್ರೀರಾಮನ ಭವ್ಯವಾದ ಮಂದಿರ ನಿರ್ಮಾಣಕ್ಕಾಗಿ ಅಂದು ಮನೆ ಮನೆಗಳಿಂದ ಸಂಗ್ರಹಿಸಲಾಗಿದ್ದ ಇಟ್ಟಿಗೆ ಮತ್ತು ಹಣ ರಾಮ ಮಂದಿರಕ್ಕೆ ಬಳಕೆಯಾಗಲಿದೆ, ಇದರಲ್ಲಿ ಒಂದು ಪೈಸೆಯೂ ಆಚೆ ಈಚೆ ಆಗುವುದಿಲ್ಲ ಎಂದು ತಿಳಿಸಿದ ಡಾ. ಪ್ರಭಾಕರ ಭಟ್‌ರವರು ಅಂದಿನ ಪ್ರಧಾನ ಮಂತ್ರಿ ರಾಜೀವ ಗಾಂಧಿಯವರ ನೇತೃತ್ವದಲ್ಲಿ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರಕ್ಕೆ ಶಿಲಾನ್ಯಾಸ ನಡೆದಿದೆ. ಆಗಸ್ಟ್ ೫ರಂದು ಭೂಮಿ ಪೂಜೆ ಜರಗಲಿದ್ದು ಪ್ರತೀ ಮನೆಗಳಲ್ಲೂ ಸಂಭ್ರಮ ಆಚರಣೆ ನಡೆಯಲಿದೆ ಎಂದು ತಿಳಿಸಿದ್ದಾರೆ.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಧ್ಯಕ್ಷೇತ್ರಿಯ ಕಾರ್‍ಯಕಾರಿಣಿಯ ಸ ದಸ್ಯರೂ, ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರೂ, ಕಲ್ಲಡ್ಕ ಶ್ರೀರಾಮ ವಿದ್ಯಾ ಕೇಂದ್ರದ ಮುಖ್ಯಸ್ಥರೂ ಆಗಿರುವ ಡಾ. ಪ್ರಭಾಕರ ಭಟ್‌ರರವರು ಆ.೪ರಂದು ಕಲ್ಲಡ್ಕದ ಶ್ರೀರಾಮ ವಿದ್ಯಾಕೇಂದ್ರದಲ್ಲಿನ ತಮ್ಮ ಕಛೇರಿಯಲ್ಲಿ `ಸುದ್ದಿ ಬಿಡುಗಡೆ’ ಪತ್ರಿಕೆ ಮತ್ತು `ಸುದ್ದಿ ಯೂ ಟ್ಯೂಬ್’ ಚಾನೆಲ್‌ಗೆ ವಿಶೇಷ ಸಂದರ್ಶನ ನೀಡಿದರು. ಅಯೋಧ್ಯೆಯ ಶ್ರೀರಾಮ ಜನ್ಮ ಭೂಮಿಯ ಹಿನ್ನೆಲೆ, ಹೋರಾಟ, ಬಲಿದಾನ, ಕಾನೂನು ಪ್ರಕ್ರಿಯೆ, ಮಂದಿರದ ಶಿಲಾನ್ಯಾಸ, ಭೂಮಿ ಪೂಜೆ ಮುಂತಾದ ವಿಚಾರಗಳ ಕುರಿತು `ಸುದ್ದಿ’ಗೆ ಸುದೀರ್ಘ ಸಂದರ್ಶನ ನೀಡಿದ ಡಾ. ಪ್ರಭಾಕರ ಭಟ್‌ರವರು ಕೇವಲ ಹಿಂದೂಗಳಿಗೆ ಮಾತ್ರವಲ್ಲ ಸಮಸ್ತ ಸಮುದಾಯದವರಿಗೂ ಶ್ರೀರಾಮ ಮಂದಿರ ನಿರ್ಮಾಣದಿಂದ ಒಳಿತಾಗಲಿದೆ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದರು.

ಅಯೋಧ್ಯೆಯ ಕರಸೇವೆಯ ವೇಳೆ ದ.ಕ. ಜಿಲ್ಲೆಯ ನಾಯಕತ್ವ ವಹಿಸಿದ್ದ ಪ್ರಮುಖರಲ್ಲಿ ಓರ್ವರಾದ ಹಿಂದೂ ಸಂಘಟನೆಗಳ ಫೈರ್ ಬ್ರಾಂಡ್ ನಾಯಕ ಡಾ. ಪ್ರಭಾಕರ ಭಟ್‌ರವರು `ಸುದ್ದಿ’ಗೆ ನೀಡಿದ ಸಂದರ್ಶನ ಆಯ್ದ ಭಾಗಗಳನ್ನು ಪ್ರಕಟಿಸಲಾಗಿದೆ.

ಪ್ರಭಾಕರ ಭಟ್‌ರವರು ಹೇಳಿದ್ದು: ದೇಶಕ್ಕೆ ಮಾತ್ರವಲ್ಲ ಇಡೀ ಜಗತ್ತಿಗೇ ಶ್ರೀರಾಮ ಮರ್ಯಾದಾ ಪುರುಷೋತ್ತಮ. ಇಂತಹ ಶ್ರೀರಾಮ ಹುಟ್ಟಿದ ಮತ್ತು ರಾಮ ರಾಜ್ಯ ನಡೆಸಿದ ಅಯೋಧ್ಯೆಯಲ್ಲಿ ಭವ್ಯವಾದ ಸುಂದರ ದೇವಸ್ಥಾನ ಇತ್ತು. ನೂರಾರು ವರುಷಗಳ ಇತಿಹಾಸ ಇರುವ ಇಂತಹ ಮಂದಿರವನ್ನು ಅತ್ಯಾಚಾರಿ, ಅನಾಗರಿಕ, ವಿದೇಶಿ ದಾಳಿಕೋರ ಬಾಬರ್ ಎಂಬಾತ ಪುಡಿ ಮಾಡಿದ. ಇದರ ವಿರುದ್ಧದ ಹೋರಾಟದಲ್ಲಿ ೩ ಲಕ್ಷಕ್ಕೂ ಅಧಿಕ ಹಿಂದುಗಳ ಬಲಿದಾನ ಆಯಿತು. ಆದರೂ ದೇವಳ ನಾಶವಾಯಿತು. ಆ ಜಾಗದಲ್ಲಿ ಬಾಬರ್ ಗುಂಬರ ಕಟ್ಟಿದ. ಇದು ಹಿಂದೂಗಳಿಗೆ ನೋವು ತಂದ ವಿಚಾರವಾಗಿದೆ. ಈ ಅಪಮಾನದ ವಿರುದ್ಧ ಆರ್‌ಎಸ್‌ಎಸ್‌ನ ಹಿರಿಯ ನಾಯಕರಾದ ಬಾಳಾ ಸಾಹೇಬ್ ದೇವರಸ್‌ರವರ ನೇತೃತ್ವದಲ್ಲಿ ಆಂದೋಲನ ಪ್ರಾರಂಭವಾಯಿತು. ವಿಶ್ವಹಿಂದೂ ಪರಿಷದ್ ಮತ್ತು ರಾಮ ಭಕ್ತರ ಮುಂದಾಳತ್ವದಲ್ಲಿ ಇಡೀ ದೇಶದಲ್ಲಿ ಹೋರಾಟ ಆರಂಭಗೊಂಡಿತು. ದೇಶದ ಅಲ್ಲಲ್ಲಿ ರಾಮ ಮಂದಿರ, ರಾಮ ಭಜನಾ ಮಂದಿರ ಇದೆ, ಆದರೆ, ಶ್ರೀರಾಮ ಹುಟ್ಟಿದ, ರಾಮರಾಜ್ಯ ನಡೆದ ಅಯೋಧ್ಯೆಯಲ್ಲಿ ರಾಮ ಮಂದಿರ ಇಲ್ಲ, ಹಾಗಾಗಿ ಎಲ್ಲಿ ಪ್ರಭು ಶ್ರೀರಾಮ ಹುಟ್ಟಿ ರಾಮರಾಜ್ಯ ನಡೆಸಿದನೋ ಅದೇ ಸ್ಥಳದಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಆಗಬೇಕು ಎಂಬ ಸಂಕಲ್ಪದೊಂದಿಗೆ ದೇಶಾದ್ಯಂತ ರಾಮ ಜಾನಕಿ ರಥ ಯಾತ್ರೆ ನಡೆಯಿತು. ನಮ್ಮ ಜಿಲ್ಲೆಗೂ ೨ ಬಾರಿ ರಥ ಬಂದಿದೆ. ಗ್ರಾಮ ಗ್ರಾಮಕ್ಕೂ ತೆರಳಿ ರಾಮನ ಕಥೆ ವಿವರಿಸಿ ಜನಜಾಗೃತಿ ಮೂಡಿಸಲಾಯಿತು. ನಂತರ ಶ್ರೀರಾಮ ಮಂದಿರದ ನಕ್ಷೆ ಹಿಡಿದುಕೊಂಡು ರಾಮ ಶಿಲಾ ಪೂಜನಾ ಕಾರ್ಯಕ್ರಮ ನಡೆಸಲಾಯಿತು. ರಾಮ ಜಾನಕಿ ರಥ ಪ್ರತೀ ಗ್ರಾಮಕ್ಕೆ ಹೋಗಿತ್ತು. ಆದರೆ ರಾಮ ಶಿಲಾ ಪೂಜಾನಾ ಕಾರ್ಯಕ್ರಮವನ್ನು ಪ್ರತೀ ಮನೆ ಮನೆಯಲ್ಲಿಯೂ ನಡೆಸಲಾಯಿತು. ಮನೆ ಮನೆಯಿಂದ ಇಟ್ಟಿಗೆ, ಹಣ ಸಂಗ್ರಹಿಸಲಾಯಿತು. ಮೇಲ್ವರ್ಗ, ಕೆಳವರ್ಗ ಎಂಬ ಬೇಧ ಭಾವ ಇಲ್ಲದೆ ಒಗ್ಗಟ್ಟಿನಿಂದ ಈ ಕಾರ್ಯಕ್ರಮ ಜರಗಿತು. ಇದು ಭಾರೀ ಜನಜಾಗೃತಿ ಉಂಟು ಮಾಡಿತು. ನಂತರದ ದಿನಗಳಲ್ಲಿ ಅಯೋಧ್ಯೆಯಲ್ಲಿ ಇರುವ ಕರ ಸೇವೆ ನಡೆಸಲು ನಿರ್ಧರಿಸಲಾಯಿತು. ಅಯೋಧ್ಯೆ ಇರುವ ಉತ್ತರ ಪ್ರದೇಶದಲ್ಲಿ ಆಗಿನ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್‌ರವರು ಕರ ಸೇವೆಗೆ ಅವಕಾಶ ನೀಡಲಿಲ್ಲ. ಅದು ಬಾಬರಿ ಮಸೀದಿ ಅಲ್ಲ, ಅದು ಬಾಬರ್ ಕಟ್ಟಡ ಮಾತ್ರ ಆಗಿತ್ತು. ಈ ಕಟ್ಟಡವನ್ನು ರಕ್ಷಿಸಲು ಮುಲಾಯಂ ಸಿಂಗ್ ಮುಂದಾಗಿದ್ದರು. ಹಾಗಾಗಿ ಕರ ಸೇವೆ ತಡೆಯಲು ಅವರು ಯೋಜನೆ ರೂಪಿಸಿದ್ದರು. ಈ ವಿಶ್ವಹಿಂದೂ ಪರಿಷದ್, ಆರ್‌ಎಸ್‌ಎಸ್‌ನವರನ್ನು ನಂಬಲಾಗದು ಅವರು ಎಷ್ಟೇ ಬಂದೋಬಸ್ತ್ ಮಾಡಿದರೂ ಕರ ಸೇವೆ ನಡೆಸಿಯಾರು ಎಂದು ತಿಳಿದಿದ್ದ ಮುಲಾಯಂ ಸಿಂಗ್ ಯಾದವ್‌ರವರು ಇಡೀ ರಾಜ್ಯದಲ್ಲಿ ಪೊಲೀಸರನ್ನು, ಮಿಲಿಟರಿಯನ್ನು ನಿಯೋಜಿಸಿದ್ದರು. ನದಿಗಳನ್ನು ದಾಟಿ ಬಂದಾರು ಎಂದು ನದಿಗಳಲ್ಲಿ ದೊಡ್ಡ ದೊಡ್ಡ ಮೊಸಳಗೆಳನ್ನು ಹಾಕಿದ್ದರು. ರಸ್ತೆ ಮತ್ತು ರೈಲು ಸಂಪರ್ಕ ಕಡಿತಗೊಳಿಸಿದ್ದರು. ಆದರೆ, ನಾವು ಪ್ರತಿಯೊಂದಕ್ಕೂ ಸಿದ್ಧರಾಗಿದ್ದೆವು, ಬಂದೇ ಬರ್‍ತೇವೆ, ಕರ ಸೇವೆ ಮಾಡಿಯೇ ಮಾಡುತ್ತೇವೆ ಎಂದು ಕರ ಸೇವಕರು ಹೇಳಿದ್ದರು. ಕರ ಸೇವೆ ಮಾಡುವುದು ಬಿಡಿ ಆ ಕಟ್ಟಡದ ಮೇಲೆ ಒಂದು ಹಕ್ಕಿ ಹಾರಲೂ ಬಿಡಲಾಡರೆನು ಎಂದು ಮುಲಾಯಂ ಸಿಂಗ್ ಯಾದವ್ ಹೇಳಿದ್ದರು. ನಾವು ದಕ್ಷಿಣ ಕನ್ನಡ ಜಿಲ್ಲೆಯಿಂದ ೧೧೦೦ ಕರ ಸೇವಕರು ತೆರಳಿದ್ದೆವು. ಬಿಜೆಪಿ ಬೆಂಬಲಿತರಾಗಿದ್ದರೂ ವಿ.ಪಿ.ಸಿಂಗ್ ನೇತೃತ್ವದ ಕೇಂದ್ರ ಸರಕಾರ ಮತ್ತು ಉತ್ತರ ಪ್ರದೇಶದ ಕಾಂಗ್ರೆಸ್ ಸರಕಾರ ಮುಸ್ಲಿಮರ ಪರ ಇತ್ತು. ಹಾಗಾಗಿ ನಾವು ಕರ ಸೇವಕರು ತೆರಳಿದಾಗ ಅಲ್ಲಲ್ಲಿ ಬಂಧಿಸಲು ವ್ಯವಸ್ಥೆ ಮಾಡಿದ್ದರು. ಗುಂಡು ಹಾರಿಸಿ ಕೊಲ್ಲಲೂ ಸಿದ್ಧತೆ ನಡೆಸಿದ್ದರು. ಹಾಗಾಗಿ ನಾವೂ ಯೋಜನೆ ರೂಪಿಸಿದೆವು. ಯಾರೂ ಕೂಡ ಕೇಸರಿ ಬಟ್ಟೆ ಧರಿಸ ಬಾರದು, ಒಂದೇ ರೀತಿಯ ಚೀಲ ಇಟ್ಟುಕೊಳ್ಳಬಾರದು, ಪರಸ್ಪರ ಮಾತನಾಡಿಕೊಂಡಿರಬಾರದು ಎಂದು ನಿರ್ಧರಿಸಿದೆವು. ಬಂಧನಕ್ಕೊಳಗಾದವರು ಜೈಲಿನಿಂದ ತಪ್ಪಿಸಿಕೊಳ್ಳುವುದು ಹೇಗೆ, ತಪ್ಪಿಸಿಕೊಂಡು ಅಯೋಧ್ಯೆ ಸೇರುವುದು ಹೇಗೆ ಎಂಬ ಯೋಜನೆ ಹಾಕಿದೆವು. ವಿಟ್ಲದ ಕೂಡೂರು ಕೃಷ್ಣ ಭಟ್, ಅವರ ಮಗ, ಜಯಶ್ಯಾಮ್ ಪುಣಚ, ಏರ್ಯ ಲಕ್ಷ್ಮಿ ನಾರಾಯಣ ಆಳ್ವ, ಆರ್‌ಎಸ್‌ಎಸ್ ನಾಯಕ ಡಾ. ಮಾಧವ ಭಂಡಾರಿ ಮಂಗಳೂರು ಮತ್ತು ನಾನು ಬೆಂಗಳೂರಿಗೆ ಒಂದೇ ಕಾರಿನಲ್ಲಿ ತೆರಳಿದೆವು. ಪೊಲೀಸರು ತಡೆದಾಗ ಡಾ. ಮಾಧವ ಭಂಡಾರಿಯವರು ಮಾತ್ರ ಮಾತನಾಡಬೇಕು ಎಂದು ನಿರ್ಣಯ ಮಾಡಿದೆವು. ಪೊಲೀಸರು ನಿಲ್ಲಿಸಿದಾಗ ನಾವು ಪ್ರಯಾಗಕ್ಕೆ ಹೋಗುತ್ತಿರುವವರು ಎಂದು ಹೇಳಿದೆವು. ನೀವು ಪ್ರಯಾಗಕ್ಕಾ, ಅಯೋಧ್ಯಗೆಯಾ ಎಂದು ಪೊಲೀಸರು ಕೇಳಿದರು. ನನ್ನ ತೊಡೆಯಲ್ಲಿ ಮಡಿಕೆ ಒಂದು ಇಟ್ಟುಕೊಂಡಿದ್ದೆ. ಅದಕ್ಕೆ ಬಟ್ಟೆ ಸುತ್ತಿದ್ದೆವು. ಹಿರಿಯರ ಎಲುಬು, ಬೂದಿ ಇದೆ. ಇದನ್ನು ಸಂಪ್ರದಾಯ ಪ್ರಕಾರ ಪುಣ್ಯಸ್ಥಳದಲ್ಲಿ ಬಿಡಬೇಕು ಎಂದಾಗ ಹೌದಾ ಎಂದು ಪೊಲೀಸರು ನನ್ನಲ್ಲಿ ಕೇಳಿದರು. ನಾನು ಹೌದು ಎಂದೆ. ಇದು ನಮ್ಮ ಪ್ರಯಾಣಕ್ಕೆ ಭಾರೀ ಗೆಲುವು ಕೊಟ್ಟಿತು. ಹಲವಾರು ಸ್ಥಳಗಳಲ್ಲಿ ಇದೇ ಉತ್ತರ ನೀಡಿದೆವು, ಅಯೋಧ್ಯೆಗೆ ತೆರಳಲು ನೂರು ಕಿಲೋ ಮೀಟರ್ ಇರುವಾಗ ಪ್ರಯಾಣಕ್ಕೆ ತಡೆ ಒಡ್ಡಲಾಯಿತು. ಯಾವ ವಾಹನವೂ ಇಲ್ಲದಾಯಿತು. ನಾನು ಮತ್ತು ಕಡಬ ಹೊಸ್ಮಠದ ಡಾ.ಸುರೇಶ್ ನದಿ ದಾಟಿ ಆಕಡೆ ತೆರಳಿದೆವು. ಸರಕಾರ ಮಾತ್ರ ನಮ್ಮ ವಿರುದ್ಧ ಇತ್ತು. ಆದರೆ, ಅಲ್ಲಿನ ಜನರು ನಮ್ಮ ಪರವಾಗಿದ್ದರು. ಎಲ್ಲಾ ಸವಾಲುಗಳನ್ನು ಎದುರಿಸಿ ಮುಂದೆ ಸಾಗಿದೆವು. ಜೈ ಶ್ರೀರಾಮ್ ಎನ್ನುತ್ತಾ ನೂರಾರು ಕರ ಸೇವಕರು ಒಟ್ಟು ಸೇರಿದೆವು. ಪೊಲೀಸರು ಲಾಠೀಚಾರ್ಜ್ ಮಾಡಿದರು. ಸಿಕ್ಕಾಪಟ್ಟೆ ಹೊಡೆದರು. ನಾವು ಶ್ರೀರಾಮ್, ಜೈರಾಮ್, ಜೈ ಜೈ ರಾಮ್ ಎಂದು ಘೋಷಣೆ ಕೂಗಿದೆವು. ಪೊಲೀಸರು ಹೊಡೆಯುತ್ತಾ ಇರುವಾಗ ನಾವು ಜೈ ಶ್ರೀರಾಮ್ ಘೋಷಣೆ ಕೂಗುತ್ತಾ ಪೊಲೀಸರೊಂದಿಗೆ ಮುಂದೆ ಮುಂದೆ ಸಾಗಿದೆವು. ಅಲ್ಲಿ ಡಿ.ಸಿ. ಆಗಿದ್ದ ಶ್ರೀ ವಾಸ್ತವ್ ಎಂಬವರು ನಮ್ಮ ಪರವಾಗಿದ್ದರು ಎಂಬುದು ನಮ್ಮ ಭಾವನೆಯಾಗಿತ್ತು. ಸಾವಿರಾರು ಮಂದಿ ಒಂದಾಗಿ ಗೇಟ್ ಮುರಿದು ಮುನ್ನುಗ್ಗಿದೆವು. ಯಾವ ಜಾಗದಲ್ಲಿ ಹಕ್ಕಿಯನ್ನು ಹಾರಲೂ ಬಿಡುವುದಿಲ್ಲ ಎಂದು ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ ಹೇಳಿದ್ದರೋ ಅದೇ ಸ್ಥಳದಲ್ಲಿ ನಮ್ಮವರು ಭಗವಾಧ್ವಜ ಹಾರಿಸಿದ್ದರು. ಪೊಲೀಸರು ಗುಂಡು ಹಾರಿಸಿದ್ದರು. ಫೈರಿಂಗ್‌ನಿಂದಾಗಿ ಹಿರಿಯರು, ಸನ್ಯಾಸಿಗಳು, ತರುಣರು ಬಲಿಯಾಗಿದ್ದರು. ನಂತರ ನಾವು ಮೂವತ್ತು ಮಂದಿ ಸಂಘದ ಪ್ರಾಂತ ಪ್ರಮುಖರು ಒಟ್ಟು ಸೇರಿಸಿ ಚರ್ಚೆ ನಡೆಸಿದೆವು. ಈ ರೀತಿ ಗುಂಡು ಹಾರಿಸಿ ಬಲಿ ತೆಗೆದುಕೊಂಡಾಗಲು ನಾವು ಭಜನೆ ಹೇಳುತ್ತಾ ಸುಮ್ಮನಿರುವುದಾ ಎಂದು ಮಾತನಾಡಿಕೊಂಡೆವು. ಅಲ್ಲಿ ವಿನಯ್ ಕಟಿಯಾರ್ ಎಂಬವರು ಇದ್ರು. ಆಗ ಅವರು ಬಜರಂಗದಳದ ರಾಷ್ಟ್ರೀಯ ಸಂಚಾಲಕರಾಗಿದ್ದರು. ಆ ಬಳಿಕ ಅವರು ಸಂಸದರಾದರು. ಅವರು ಆಗ ಮಾತನಾಡಿ ಇಲ್ಲಿ ಬಲಿದಾನ ಆಗುತ್ತಿದೆ. ಇದು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಆಗಿದೆ, ಭಾರತ ಮಾತೆ ಇನ್ನಷ್ಟು ರಕ್ತ ತರ್ಪಣ, ಬಲಿದಾನ ಬಯಸುತ್ತಿದ್ದಾಳೆ ಎಂದರು. ವಿಶ್ವಹಿಂದೂ ಪರಿಷತ್ತಿನ ಮುಖಂಡ ಓಂಕಾರ ಭಾವೆಯವರು ಹೋರಾಟದ ನಿರ್ಣಯ ಆಗಿದೆ ಎಂದು ತಿಳಿಸಿದರು. ಎರಡು ಗುಂಪಿನ ಮೂಲಕ ಹೋರಾಟ ಆರಂಭವಾಯಿತು. ಉಮಾಭಾರತಿಯವರ ನೇತೃತ್ವದ ಒಂದು ತಂಡ, ಇನ್ನೊಂದು ನಮ್ಮ ತಂಡ ಹೋರಾಟಕ್ಕೆ ಅಣಿಯಾಯಿತು. ಭಾರೀ ಪ್ರಮಾಣದ ಪೊಲೀಸರು ನಮ್ಮನ್ನು ತಡೆಯುವ ಪ್ರಯತ್ನ ನಡೆಸಿದರು.

ಆಗ ಅಲ್ಲಿ ಹಲವಾರು ಮಂದಿ ಕರ್ನಾಟಕದವರು ಕಂಡರು. ಯಾರೂ ಹಿಂದೆ ಸರಿಯಬೇಡಿ, ಬಲಿದಾನಕ್ಕೆ ಸಿದ್ಧರಾಗೋಣ ಎಂದೆ. ನಮ್ಮವರು ಅದಕ್ಕೆ ಒಪ್ಪಿದರು. ಆ ವೇಳೆಗೆ ಉಮಾಭಾರತಿಯವರ ನೇತೃತ್ವದಲ್ಲಿದ್ದ ತಂಡದ ಹಲವರನ್ನು ಪೊಲೀಸರು ಬಲಿ ತೆಗೆದುಕೊಂಡಿದ್ದರು. ಓಂಕಾರ ಭಾವೆಯವರು ಹೋರಾಟ ನಿಲ್ಲಿಸಲು ಸೂಚಿಸಿದರು. ಬಳಿಕ ಹೋರಾಟದ ಹಾದಿ ಬದಲಾಯಿತು. ಅಲ್ಲಿ ಚುನಾವಣೆ ನಡೆದು ಮುಖ್ಯಮಂತ್ರಿ ಮುಲಾಯಂ ಸಿಂಗ್ ಸರಕಾರ ಸೋತಿತ್ತು. ಬಿಜೆಪಿಯ ಕಲ್ಯಾಣ್ ಸಿಂಗ್ ಸರಕಾರ ಅಧಿಕಾರಕ್ಕೆ ಬಂದಿತ್ತು. ೧೯೯೨ರ ಡಿಸೆಂಬರ್ ೬ ಇತಿಹಾಸದಲ್ಲಿ ಚಿನ್ನದ ದಿನ ಎಂದು ಬರೆಯಬೇಕಾದ್ದು. ರಾಮ ಭಕ್ತರ, ಕರ ಸೇವಕರ ಮೇಲೆ ಗುಂಡು ಹಾರಿಸುವುದಿಲ್ಲ ಎಂದು ಕಲ್ಯಾಣ್ ಸಿಂಗ್ ಸರಕಾರ ಹೇಳಿತು. ಕರ ಸೇವೆಯ ವೇದಿಕೆಯಲ್ಲಿ ಅಶೋಘ್ ಸಿಂಘಾಲ್, ಅಡ್ವಾಣಿಯವರು, ಮುರಳಿ ಮನೋಹರ ಜೋಷಿಯವರು, ಉಮಾಭಾರತಿ, ಸಂಘದ ಹಿರಿಯರು ಎಲ್ಲರೂ ನಮ್ಮದು ಹಿಂಸಾತ್ಮಕ ಕಾರ್ಯಕ್ರಮವಲ್ಲ, ನಮ್ಮದು ಅಹಿಂಸಾತ್ಮಕ ಹೋರಾಟ ಎಂದರು. ಆದರೆ, ಉದ್ವಿಗ್ನಗೊಂಡಿದ್ದ ಜನರು ಮುಂದೆ ನುಗ್ಗಿದ್ರು. ಗೇಟ್ ಮುರಿದು ಸುಣ್ಣ, ಬೆಲ್ಲದಿಂದ ಕಟ್ಟಿದ್ದ ಕಟ್ಟಡವನ್ನು ಉರುಳಿಸಿದರು. ೩ ಗುಂಬರhಗಳನ್ನು ಹೊಡೆದುರುಳಿಸಿದರು. ೪೬೪ ವರ್ಷದ ಅಪಮಾನಿತ ಕಟ್ಟಡ ಪುಡಿಯಾದ ಸಂತಸದಲ್ಲಿದ್ದೆವು. ಪ್ರಾಂತ ಪ್ರಮುಖರೆಲ್ಲ ಸೇರಿ ಸಭೆ ನಡೆಸಿದ ವೇಳೆ ಸಂಘದ ಹಿರಿಯರಾದ ಹೋ.ವೇ. ಶೇಷಾದ್ರಿಯವರು ಖುಷಿಯಾಯ್ತ ಎಂದು ಕೇಳಿದರು. ಎಲ್ಲರೂ ಖುಷಿ ಆಯಿತು ಎಂದರು. ಆದರೆ, ಹೂ.ವೇ.ಶೇಷಾದ್ರಿಯವರು ಇಂದು ಮಧ್ಯ ರಾತ್ರಿ ೧೨ ಗಂಟೆ ವೇಳೆಗೆ ಕಲ್ಯಾಣ್ ಸಿಂಗ್ ಸರಕಾರ ಕೊನೆಯಾಗುತ್ತದೆ. ಬಳಿಕ ರಾಷ್ಟ್ರಪತಿ ಆಡಳಿತ ಜಾರಿಯಾಗುತ್ತದೆ.ರಾಷ್ಟ್ರಪತಿ ಆಡಳಿತ ಜಾರಿಯಾದರೆ ಭವ್ಯವಾದ ಬಾಬರಿ ಮಸೀದಿ ನಿರ್ಮಾಣ ಆಗ್ತದೆ ಎಂದರು. ಹಾಗಾಗಿ ತಾತ್ಕಾಲಿಕ ರಾಮ ಮಂದಿರ ನಿರ್ಮಾಣ ಆಗಬೇಕು ಎಂದು ಅವರು ಸಲಹೆ ನೀಡಿದರು. ಪೇಜಾವರ ಶ್ರೀಯಂತವರು ಅಲ್ಲಿ ಇದ್ದರು. ಆಗ ರಾಮ ಮೂರ್ತಿಯ ಪ್ರತಿಷ್ಠಾಪನೆ ಮಾಡಲಾಯಿತು. ಇದುವೇ ಮೊನ್ನೆಯ ತೀರ್ಪಿಗೆ ಕಾರಣವಾಯಿತು. ಬುದ್ಧಿ ಜೀವಿಗಳು, ಕಾಂಗ್ರೆಸ್, ಕಮ್ಯುನಿಸ್ಟ್‌ನವರು ಬಾಬ್ರಿ ಮಸೀದಿ ಕೆಡವಿದವರು ಎಂದು ನಮ್ಮನ್ನು ಹೇಳಿದರು. ಪಾರ್ಲಿಮೆಂಟ್‌ನಲ್ಲಿಯೂ ಚರ್ಚೆಯಾಯಿತು. ತಾಕತ್ತಿದ್ದರೆ ರಾಮ ಮಂದಿರ ಕಟ್ಟಿ ಎಂದರು. ಸುದೀರ್ಘ ಕಾನೂನು ಹೋರಾಟ ನಡೆಯಿತು. ೧೦ ವರ್ಷದ ಹಿಂದೆ ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿತು. ರಾಮ ಅಲ್ಲಿ ಹುಟ್ಟಿದ್ದ ಎಂಬುದಕ್ಕೆ ಸಾಕ್ಷಿ ಏನು, ರಾಮ ಕೌಶಲ್ಯ, ದಶರಥನಿಗೆ ಹುಟ್ಟಿದ ಎಂದು ವಿ.ಎ, ಪಿಡಿಓ ಬರೆದು ಕೊಟ್ಟಿದ್ದಾರ ಎಂದು ಕೆಲವರು ಹೇಳಿದರು. ಕೆಲವರು ಆ ಜಾಗ ಯಾರಿಗೂ ಬೇಡ ಅಲ್ಲಿ ಕಕ್ಕುಸು ಕಟ್ಟಿ ಎಂದರು. ವಿಚಾರಣೆ ಪೂರ್ಣಗೊಳಿಸಿದ್ದ ಅಲಹಾಬಾದ್ ಹೈಕೋರ್ಟ್‌ನ ಓರ್ವರು ಮುಸ್ಲಿಂ ಜಡ್ಜ್ ಸೇರಿದಂತೆ ಮೂವರು ಜಡ್ಜ್‌ಗಳು ಇದುವೇ ರಾಮ ಜನ್ಮಭೂಮಿ ಎಂದು ತೀರ್ಪು ನೀಡಿದರು. ಬಳಿಕ ಅವರು ಸುಪ್ರೀಂ ಕೋರ್ಟ್‌ಗೆ ಹೋದರು. ನಾವೂ ಸುಪ್ರೀಂ ಕೋರ್ಟ್‌ಗೆ ಹೋದೆವು. ಜಾಗವನ್ನು ಮೂರು ತುಂಡು ಮಾಡಲು ಯಾರು ಹೇಳಿದ್ದು ಎಂದು ಅಲಹಾಬಾದ್ ಹೈಕೋರ್ಟ್ ತೀರ್ಪನ್ನು ಸುಪ್ರೀಂಕೋರ್ಟ್ ಪ್ರಶ್ನಿಸಿತು. ಸುಪ್ರೀಂಕೋರ್ಟ್‌ನ ಐವರು ಜಡ್ಜ್‌ಗಳಲ್ಲಿ ಓರ್ವ ಮುಸ್ಲಿಂ ಜಡ್ಜ್ ಇದ್ದರು. ಅವರು ನಮ್ಮ ದಕ್ಷಿಣ ಕನ್ನಡದವರೇ ಆದ ಅಬ್ದುಲ್ ನಝೀರ್‌ರವರು. ಇವರೆಲ್ಲಾ ಏಕ ಕಂಠದಿಂದ ತೀರ್ಪು ನೀಡಿ ಇಡೀ ದೇವಸ್ಥಾನ ಹಿಂದೂಗಳಿಗೆ, ರಾಮನಿಗೆ ಸೇರಿದ್ದು ಎಂದು ತೀರ್ಪು ನೀಡಿದ್ದಾರೆ. ಮುಸ್ಲಿಮರಿಗೆ ಮಸೀದಿ ನಿರ್ಮಾಣಕ್ಕೆ ಪ್ರತ್ಯೇಕ ಜಾಗ ನೀಡುವಂತೆಯೂ ಆದೇಶ ನೀಡಿದ್ದಾರೆ.ರಾಮ ಮಂದಿರದ ಅಂದಿನ ನಕ್ಷೆಗಿಂತ ದೊಡ್ಡ ಮಂದಿರ ಭವ್ಯವಾಗಿ ನಿರ್ಮಾಣ ಆಗಲಿದೆ. ೧೯೮೯ರಲ್ಲಿ ರಾಜೀವ ಗಾಂಧಿಯವರ ಸಂದರ್ಭದಲ್ಲಿ ಶಿಲಾನ್ಯಾಸ ಆಗಿದೆ. ಈಗ ಭೂಮಿ ಪೂಜೆ ನಡೆಯಲಿದೆ. ಹಿಂದು ಸಮಾಜಕ್ಕೆ ಮಾತ್ರ ಅಲ್ಲ, ಸಮಗ್ರ ಮಾನವ ಸಮುದಾಯಕ್ಕೆ ರಾಮ ಮಂದಿರ ನಿರ್ಮಾಣ ಹೆಮ್ಮೆಯ ವಿಚಾರ ಆಗಿದೆ. ಒಳ್ಳೆಯ ಮಗ, ಶಿಷ್ಯ, ಅಣ್ಣ, ಗಂಡ, ರಾಜ, ಒಳ್ಳೆಯ ಶತ್ರವೂ ಆಗಿದ್ದ ಪ್ರಭು ಶ್ರೀರಾಮ ಚಂದ್ರನ ಮಂದಿರದ ನಿರ್ಮಾಣದಿಂದ ದೇಶ ಪರಿವರ್ತನೆಯ ಕಡೆಗೆ ಸಾಗಲಿದೆ. ಭೂಮಿ ಪೂಜೆ ಪ್ರಯುಕ್ತ ಪ್ರತೀ ಮನೆ ಮನೆಯಲ್ಲಿಯೂ ದೀಪ ಹಚ್ಚಿ, ತೋರಣ ಕಟ್ಟಿ, ಭಜನೆ ಮಾಡಿ ಸಂಭ್ರಮ ನಡೆಯಲಿದೆ. ಅಂದು ಸಂಗ್ರಹಿಸಿದ ಇಟ್ಟಿಗೆ, ಹಣ ರಾಮ ಮಂದಿರಕ್ಕೆ ಬಳಕೆಯಾಗಲಿದೆ. ಕರ್ನಾಟಕದಿಂದ ಕೊಂಡು ಹೋಗಲಾದ ಇಟ್ಟಿಗೆಗಳಲ್ಲಿ ಕನ್ನಡದಲ್ಲಿಯೇ ಬರೆಯಲಾಗಿದೆ. ಒಂದು ಪೈಸೆಯೂ ವ್ಯತ್ಯಾಸ ಆಗುವುದಿಲ್ಲ. ಹೋರಾಟದಲ್ಲಿದ್ದವರು ಸ್ವಂತ ಸುಖಕ್ಕಾಗಿ ಹೋರಾಟ ಮಾಡಿದ್ದಲ್ಲ, ಹೆಚ್ಚಿನವರು ಅವಿವಾಹಿತರೇ ಆಗಿದ್ದಾರೆ, ಮೋದಿಯಂತವರು ದೇಶಕ್ಕಾಗಿ ಇರುವವರು. ಇವರಿಗೆ ಹಣ ಯಾಕೆ. ಹಾಗಾಗಿ ಅದರಲ್ಲಿ ಯಾವುದೇ ವ್ಯತ್ಯಾಸ ಆಗದು. ವಿಶ್ವ ಗುರು ಆಗಲಿರುವ ಭಾರತದಲ್ಲಿ ಎಲ್ಲರೂ ಒಂದಾಗಲು ಶ್ರೀ ರಾಮ ಮಂದಿರ ಕಾರಣವಾಗಲಿದೆ.

 

 

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.