Breaking News

ಕೋವಿಡ್ ನಿಯಂತ್ರಣಕ್ಕೆ ಸಮುದಾಯದ ಸಹಭಾಗಿತ್ವ : ಇಲಾಖಾಧಿಕಾರಿಗಳ ಸಭೆಯಲ್ಲಿ ಡಿ.ಸಿ ರಾಜೇಂದ್ರ ಕುಮಾರ್

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕೋವಿಡ್ ವಿಚಾರದಲ್ಲಿ ಬಹಳಷ್ಟು ಜನಜಾಗೃತಿ ಮೂಡಿಸುವ ಅವಶ್ಯಕತೆ ಇದೆ. ಕೋವಿಡ್ ಪ್ರಾಥಮಿಕ ಸಂಪರ್ಕಿತರನ್ನು ಮಾನಿಟರಿ ಮಾಡುವ ಅಶ್ಯಕತೆ ಇದೆ. ಇದಕ್ಕೆ ಸಮುದಾಯದ ಸಹಭಾಗಿತ್ವ ಅಗತ್ಯ. ಅದಕ್ಕಾಗಿ ಸ್ಥಳೀಯವಾಗಿ ಜನಪ್ರತಿನಿಧಿಗಳು, ಯುವಜನತೆಯನ್ನು ಸೇರಿಸಿಕೊಂಡು ಸೋಂಕನ್ನು ಹರಡುವುದನ್ನು ಕಡಿಮೆ ಮಾಡಬೇಕಾಗಿದೆ ಎಂದು ಜಿಲ್ಲಾಧಿಕಾರಿ ರಾಜೇಂದ್ರ ಕುಮಾರ್ ಅವರು ತಾಲೂಕು ಮಟ್ಟದ ಇಲಾಖಾಧಿಕಾರಿಗಳಿಗೆ ಸೂಚಿಸಿದರು.

ಕೋವಿಡ್ -೧೯ ಸೋಂಕು ಹರಡುವುದನ್ನು ನಿಯಂತ್ರಿಸುವ ಮತ್ತು ಹೋಮ್ ಐಸೋಲೇಷನ್‌ಲ್ಲಿರುವವರ ಕ್ವಾರಂಟೈನ್ ವಾಚ್ ಹಾಗೂ ಸೋಂಕಿತ ವ್ಯಕ್ತಿ ಪ್ರಾಥಮಿಕ ಸಂಪರ್ಕಿತರ ಮಾನಿಟರಿ ಕುರಿತು ಇಲಾಧಿಕಾರಿಗಳು, ತಾಲೂಕು ಆರೋಗ್ಯ ಇಲಾಖೆಯಿಂದ ಕೈಗೊಂಡ ಕ್ರಮಗಳ ಕುರಿತು ಆ.೫ರಂದು ಇಲ್ಲಿನ ತಾ.ಪಂ ಸಭಾಂಗಣದಲ್ಲಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಯಾವುದೋ ಒಂದು ವಿಚಾರವನ್ನು ಮಂಗಳೂರಿನಿಂದ ಮತ್ತು ಬೆಂಗಳೂರಿನಿಂದ ಮಾನಿಟರ್ ಮಾಡದೆ ಸ್ಥಳೀಯವಾಗಿ ಆರೋಗ್ಯದ ಸಮಸ್ಯೆಗಳನ್ನು ಕಮ್ಯುನಿಟಿ ಸಹಭಾಗಿತ್ವದಲ್ಲಿ ನಾವು ನಿರಂತರವಾಗಿ ಮಾಡುವ ಮೂಲಕ ಸೋಂಕು ಹರಡುವುದನ್ನು ಕಡಿಮೆ ಮಾಡಬಹುದು. ಇದರಿಂದ ಮರಣದ ಪ್ರಮಾಣವೂ ಕಡಿಮೆ ಆಗಲಿದೆ. ಹಾಗಾಗಿ ಸಮುದಾಯದ ಸಹಭಾಗಿತ್ವಕ್ಕೆ ಹೆಚ್ಚಿನ ಒತ್ತು ನೀಡುವಂತೆ ಅವರು ಹೇಳಿದರು.

ಅಧಿಕಾರಿಗಳ ದೈನಂದಿನ ಕೆಲಸ ನಿರಂತರ:
ಸ್ಥಳೀಯವಾಗಿ ಗ್ರಾಮಗಳಲ್ಲಿ ಬೂತ್ ಮಟ್ಟ ಮತ್ತು ನಗರ ಪ್ರದೇಶದಲ್ಲಿ ವಾರ್ಡ್ ಮಟ್ಟದಲ್ಲಿ ಪ್ರಥಮ ಹಂತದಲ್ಲಿ ಶಿಕ್ಷಕರನ್ನು ಬಳಸಿಕೊಳ್ಳಬೇಕು. ಇದರ ಜೊತೆ ಯುವ ಜನತೆ, ಆಸಕ್ತರನ್ನು ಸೇರಿಸಿಕೊಂಡು ಕಾರ್ಯಪಡೆ ರಚಿಸಿ, ಅವರಿಗೆ ಸರಿಯಾದ ಪ್ರಮಾಣದಲ್ಲಿ ತರಬೇತಿ ಕೊಡಬೇಕು. ಕಂಟೈನ್‌ಮೆಂಟ್ ಜೋನ್ ಇದ್ದರೆ ಆ ಭಾಗದಲ್ಲಿ ಅಗತ್ಯ ವಸ್ತುಗಳ ಪೂರೈಕೆ, ಆರೋಗ್ಯದ ಕಾಳಜಿ ಕುರಿತು ಗಮನಿಸುವ ಕಾರ್ಯ ನಡೆಸಬೇಕು. ಒಟ್ಟು ಸರ್ವಿಸ್ ಹ್ಯಾಂಡಲ್ ಮಾಡಲು ಆಶಾ, ಅಂಗನವಾಡಿ ಕಾರ್ಯಕರ್ತೆಯರನ್ನು ಮತ್ತು ಶಿಕ್ಷಕರಿಗೆ ಜವಾಬ್ದಾರಿ ವಹಿಸಬೇಕು. ಈ ರೀತಿಯಲ್ಲಿ ಚಟುವಟಿಕೆಗಳು ನಡೆದಾಗ ಅಧಿಕಾರಿಗಳಿಗೆ ತಮ್ಮ ದೈನಂದಿನ ಕೆಲಸ ಮಾಡಲು ಅನುಕೂಲ ಆಗುತ್ತದೆ ಒತ್ತಡವೂ ಕಡಿಮೆ ಆಗುತ್ತದೆ ಎಂದು ಡಿ.ಸಿ ರಾಜೇಂದ್ರ ಕುಮಾರ್ ಹೇಳಿದರು.

ಖಾಸಗಿ ಆಸ್ಪತ್ರೆಯ ವೈದ್ಯರ ಸೇವೆ ಪಡೆದು ಕೊಳ್ಳಿ:
ಕೆಲವೊಂದು ಖಾಸಗಿ ಆಸ್ಪತ್ರೆಯಿಂದ ಬಂದ ಮಾಹಿತಿ ಆಧಾರಕ್ಕೆ ಸಂಬಂಧಿಸಿ ಒಂದೆ ಎಂಟ್ರಿ ಮತ್ತು ಎಕ್ಸಿಟ್ ಮತ್ತು ಆಸ್ಪತ್ರೆಯಲ್ಲಿರುವ ಇತರ ರೋಗಿಗಳಿಗೆ ಕೋವಿಡ್ ಹರಡುವ ಸಾಧ್ಯತೆ ಹಿನ್ನೆಲೆಯಲ್ಲಿ ಅಲ್ಲಿನ ಆಸ್ಪತ್ರೆಗಳ ವೈದ್ಯರು ಜನರಲ್ ಸರಕಾರಿ ಆಸ್ಪತ್ರೆಗೆ ಬಂದು ಸೇವೆ ನೀಡುವಂತಹ ಕೆಲಸ ಮಾಡಬೇಕು. ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್ ಕೇಸ್ ದಾಖಲು ಮಾಡುವಂತೆ ಒತ್ತಡ ಹಾಕಬೇಡಿ. ನಮಗೆ ಜೀವ ಉಳಿಯಬೇಕು. ಜನರಿಗೆ ತೊಂದರೆ ಹೆಚ್ಚಿನ ಹೊರೆ ಆಗಬಾರದು ಎಂದ ಡಿ.ಸಿ ರಾಜೇಂದ್ರ ಕುಮಾರ್ ಅವರು ಸರಕಾರಿ ಆಸ್ಪತ್ರೆಯಲ್ಲಿ ಖಾಸಗಿ ವೈದ್ಯರ ಸೇವೆ ಪಡೆಯುವ ಮೂಲಕ ಯಾರಿಗೂ ತೊಂದರೆ ಆಗಬಾರದು ಎಂದು ಹೇಳಿದರು.

ಕಾರ್ಯಕರ್ತೆಯರಿಗೆ ಸುರಕ್ಷತಾ ಪರಿಕಗಳನ್ನು ನೀಡಿ:
ಮನೆ ಮನೆ ಭೇಟಿ ನೀಡುವ ಆಶಾ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಕಾರ್ಯಕರ್ತೆಯರು ಈಗಾಗಲೇ ಪಲ್ಸ್ ಆಕ್ಸಿ ಮೀಟರ್, ಥರ್ಮಲ್ ಸ್ಕ್ಯಾನಿಂಗ್ ಸೊತ್ತುಗಳನ್ನು ವಿತರಣೆ ಮಾಡಲಾಗಿದೆ. ಇದರ ಜೊತೆ ಅವರಿಗೆ ಮಾಸ್ಕ್, ಸ್ಯಾನಿಟೈಸರ್‌ಗಳ ವಿತರಣೆ ಮಾಡಿರುವ ಕುರಿತು ಆರೋಗ್ಯಾಧಿಕಾರಿ ಮತ್ತು ಸಿಡಿಪಿಒ ಅವರನ್ನು ಪ್ರಶ್ನಿಸಿದ ಜಿಲ್ಲಾಧಿಕಾರಿಯವರು ಕೊರೋನಾ ವಾರಿಯರ್ಸ್‌ಗಳ ರಕ್ಷಣೆ ಮುಖ್ಯವಾದದ್ದು. ಅವರಿಗೆ ಏನೇನು ಇಲಾಖೆಯಿಂದ ಕೊಡಬೇಕೋ ಅದನ್ನು ತಕ್ಷಣ ಕೊಡಿಸಬೇಕು ಮತ್ತು ಅವರಿಗೆ ಈ ಸೌಲಭ್ಯ ಮುಟ್ಟಿದೆಯೋ ಎಂಬ ಕುರಿತು ಕಡ್ಡಾಯವಾಗಿ ಖಾತ್ರಿ ಪಡಿಸಿಕೊಳ್ಳಬೇಕು. ಅವರು ಮನೆ ಮನೆ ಸಂಪರ್ಕ ಮಾಡಿದ ವೇಳೆ ಯಾವ ರೀತಿಯ ಪ್ರಶ್ನೆಗಳನ್ನು ಮನೆಯವರಲ್ಲಿ ಕೇಳುತ್ತಾರೆ ಮತ್ತು ಯಾವ ರೀತಿ ಮನೆಯವರೊಂದಿಗೆ ಮಾತನಾಡಬೇಕೆಂಬ ಕುರಿತು ತರಬೇತಿ ನೀಡಬೇಕು. ಒಟ್ಟಿನಲ್ಲಿ ಮನೆ ಮನೆ ಸಂಪರ್ಕದಲ್ಲಿ ಆರೋಗ್ಯದ ವಿಚಾರಣೆ ವೇಳೆ ಆ ಮನೆಯವರ ವಿಶ್ವಾಸ ಗಳಿಸುವ ಕೆಲಸ ಆಗಬೇಕೆಂದು ಹೇಳಿದರು. ಆರೋಗ್ಯಾಧಿಕಾರಿ ಡಾ. ಅಶೋಕ್ ರೈ ಅವರು ಮಾತನಾಡಿ ನಮ್ಮಲ್ಲಿ ೨೫೧ ಮಂದಿ ಆಶಾ ಕಾರ್ಯಕರ್ತರಿದ್ದಾರೆ ಎಂದರು. ಸಿಡಿಪಿಒ ಶ್ರೀಲತಾ ಅವರು ಮಾತನಾಡಿ ನಮ್ಮಲ್ಲಿ ೩೭೦ ಅಂಗನವಾಡಿಗಳಿವೆ ಎಂದರು. ಜಿಲ್ಲಾಧಿಕಾರಿಯವರು ಮಾತನಾಡಿ ಮುಂದೆ ಬೂತ್‌ಲೆವಲ್‌ನಲ್ಲಿ ಶಿಕ್ಷಕರು ಕೆಲಸ ಮಾಡಲಿರುವುದರಿಂದ ದಿನವೊಂದಕ್ಕೆ ೨೦ ಮನೆ ಕವರ್ ಮಾಡುವಂತೆ ಸೂಚಿಸಿದರು.

ಪುತ್ತೂರಿಗೆ ಲ್ಯಾಬ್ ಟೆಕ್ನೀಷಿಯನ್, ಡಾಟಾ ಎಂಟ್ರಿ:
ಪ್ರಾಥಮಿಕ ಸಂಪರ್ಕಿತರೆಂದು ಆಯ್ದ ಭಾಗಗಳಲ್ಲಿ ಮಾತ್ರ ಮನೆ ಸರ್ವೇ ಸಾಲದು ಎಲ್ಲಾ ಮನೆಗಳ ಸರ್ವೆ ಕಾರ್ಯ ನಡೆಯಬೇಕು. ಇದರ ಜೊತೆಗೆ ವಯಸ್ಸಾದವರಿಗೆಲ್ಲಾ ಪರೀಕ್ಷೆ ಕಡ್ಡಾಯ ಮಾಡಿ ಈ ಕುರಿತು ಅವರ ಮನೆಯಲ್ಲಿ ಮನವರಿಕೆ ಮಾಡಿಸಿ. ಜೊತೆಗೆ ರ್‍ಯಾಪಿಡ್ ಪರೀಕ್ಷೆಗಳನ್ನು ಮಾಡಿಸಬೇಕು. ಅದಕ್ಕಾಗಿ ಪುತ್ತೂರು ಆಸ್ಪತ್ರೆಗೆ ೨ ಲ್ಯಾಬ್ ಟೆಕ್ನೀಷಿಯನ್ ಮತ್ತು ಡಾಟಾ ಎಂಟ್ರಿ ವ್ಯವಸ್ಥೆ ಕಲ್ಪಿಸಲಾಗುವುದು ಎಂದ ಜಿಲ್ಲಾಧಿಕಾರಿಯವರು ಕೆಮ್ಮು, ಶೀತ, ಜ್ವರ(ಇಎಲ್‌ಐ) ಮತ್ತು ಶ್ವಾಸಕೋಶ ಸಂಬಂಧಿತ (ಸಾರಿ) ಪ್ರಕರಣಗಳನ್ನು ದಾಖಲಿಸಿಕೊಳ್ಳಬೇಕೆಂದು ಹೇಳಿದರು.

ಆಯುಷ್ಮಾನ್ ಯೋಜನೆಯಲ್ಲೇ ಬಿಲ್ ಪಾವತಿ:
ಖಾಸಗಿ ಆಸ್ಪತ್ರೆಗಳಲ್ಲಿ ಬಿಲ್ ಜಾಸ್ತಿ ಹಾಕುತ್ತಾರೆಂಬ ಆರೋಪ ಕೇಳಿ ಬರುತ್ತಿತ್ತು. ಈ ಕುರಿತು ಪುತ್ತೂರಿನಲ್ಲಿ ಯಾವುದೇ ದೂರುಗಳು ಬಂದಿಲ್ಲವಾದರೂ ಕೋವಿಡ್ ರೋಗಿಯ ಬಿಲ್ ಪಾವತಿಗಳು ಆಯುಷ್ಮಾನ್ ಯೋಜನೆಯಲ್ಲಿ ನಡೆಯಬೇಕು. ಆಸ್ಪತ್ರೆಗಳಲ್ಲಿ ಬಿಡುಗಡೆ ಹೊಂದಿದ ಕೋವಿಡ್ ರೋಗಿಯ ಬಿಲ್ ಪ್ರತಿಯನ್ನು ಜಿಲ್ಲಾಧಿಕಾರಿ ಕಚೇರಿಗೂ ಕಳಿಸಿಕೊಡಬೇಕು. ಜಾಸ್ತಿ ಬಿಲ್ ಆಗಿದ್ದರೆ ಅದನ್ನು ಕಂಟ್ರೋಲ್ ಮಾಡುವ ವ್ಯವಸ್ಥೆ ಆಗಬೇಕಾಗಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.

ಕೋವಿಡ್ ನಡುವೆ ಇತರ ಸಾಂಕ್ರಾಮಿಕ ರೋಗಗಳ ನಿರ್ಲಕ್ಷ್ಯ ಬೇಡ:
ಕೋವಿಡ್ ನೋಡುತ್ತಾ ಬೇರೆ ಕೇಸ್ ಮಿಸ್ ಆಗಬಾರದು. ಕೋವಿಡ್ ನಡುವೆ ಡೆಂಗ್ಯೂ ಇದೆ. ಒಟ್ಟು ಡೆಂಗ್ಯೂ, ಇಲಿಜ್ವರ, ಕಾಮಲೆ ಜ್ವರ, ಮಲೇರಿಯ ಜಾಸ್ತಿ ಆಗದಂತೆ ನೋಡಿಕೊಳ್ಳಬೇಕು. ಅಗತ್ಯದ ಸ್ಥಳಗಳಲ್ಲಿ ಫಾಗಿಂಗ್ ಮಾಡಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು.

ಕೋವಿಡ್ ಕೇರ್ ಸೆಂಟರ್‌ಗೆ ಸೌಲಭ್ಯ ಒದಗಿಸಿ:
ಕೋವಿಡ್ ಕೇರ್ ಸೆಂಟರ್‌ನಲ್ಲಿ ಸೋಂಕಿತರಿದ್ದರೆ ಅಲ್ಲಿ ಅವರಿಗೆ ಮನರಂಜನೆಗಾಗಿ ಟಿ.ವಿ ಹಾಕಿಸಿ, ಪತ್ರಿಕೆ, ಮ್ಯಾಗ್ಸೀನ್ ತರಿಸಿ ಕೊಡಿ. ಅವರಿಗೆ ಬಿಸಿ ನೀರಿನ ವ್ಯವಸ್ಥೆ ಮಾಡಿ ಕೊಡಿ ಎಂದು ಜಿಲ್ಲಾಧಿಕಾರಿ ಹೇಳಿದರು.

ಮಾಸ್ಕ್ ಧರಿಸದಿದ್ದರೆ ಅಂಗಡಿ ಬಂದ್ ಮಾಡಿಸಿ:
ಕೋವಿಡ್ ಸೋಂಕು ಹರಡದಂತೆ ಮಾಸ್ಕ್ ಮತ್ತು ಸಾಮಾಜಿಕ ಅಂತರ ಕಾಯ್ದು ಕೊಳ್ಳುವುದು ಅಗತ್ಯ. ಆದರೆ ಮಾಸ್ಕ್ ಧರಿಸಿದೆ ಅಂಗಡಿಯವರು ವ್ಯವಹರಿಸಿದರೆ ಆ ಅಂಗಡಿ ಬಂದ್ ಮಾಡಿಸಿ. ಅದೇ ರೀತಿ ಮಾಸ್ಕ್ ಧರಿಸದೆ ಬಂದ ಗ್ರಾಹಕರೊಂದಿಗೆ ವ್ಯವಹರಿಸದಂತೆ ಸೂಚನೆ ನೀಡಿ ಎಂದು ಜಿಲ್ಲಾಧಿಕಾರಿ ಸೂಚಿಸಿದರು. ಒಟ್ಟಿನಲ್ಲಿ ಕೋವಿಡ್ ನಿಯಂತ್ರಣದಲ್ಲಿ ಮಳೆಗಾಲದ ಪ್ರಾಕೃತಿಕ ವಿಕೋಪಕವಾದಗ ಸ್ಪಂಧನೆ ನೀಡಬೇಕು. ಮನೆ ಬಿದ್ದು ಹೋದರೆ ತಕ್ಷಣ ಪರಿಹಾರದ ವ್ಯವಸ್ಥೆ ಆಗಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.

ಸಹಾಯಕ ಕಮೀಷನರ್ ಡಾ. ಯತೀಶ್ ಉಳ್ಳಾಲ್, ತಹಶೀಲ್ದಾರ್ ರಮೇಶ್ ಬಾಬು ಟಿ, ತಾ.ಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ಪೌರಾಯುಕ್ತೆ ರೂಪಾ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ತಾಲೂಕು ಆರೋಗ್ಯ ಇಲಾಖೆಯ ಅಧಿಕಾರಿ ಅಶೋಕ್ ರೈ, ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಅಶಾ ಪುತ್ತೂರಾಯ ಸೇರಿದಂತೆ ಗ್ರಾ.ಪಂ ಆಡಳಿತಾಧಿಕಾರಿಯಾಗಿರುವ ತಾಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.